varthabharthi


ಅಂತಾರಾಷ್ಟ್ರೀಯ

ಕಾಕ್‌ಪಿಟ್ ಧ್ವನಿಮುದ್ರಿಕೆಗಾಗಿ ಶೋಧ ಮುಂದುವರಿಕೆ

ಇಂಡೋನೇಶ್ಯ: ವಿಮಾನದಿಂದ ಚದುರಿದ ಅವಶೇಷಗಳನ್ನು ಕಂಡು ಬೆದರುತ್ತಿರುವ ಮುಳುಗುಗಾರರು

ವಾರ್ತಾ ಭಾರತಿ : 13 Jan, 2021

photo credit: AFP

ಜಕಾರ್ತ (ಇಂಡೋನೇಶ್ಯ), ಜ. 13: ಇತ್ತೀಚೆಗೆ ಪತನಗೊಂಡಿರುವ ಇಂಡೋನೇಶ್ಯದ ಪ್ರಯಾಣಿಕ ವಿಮಾನವೊಂದರ ಕಾಕ್‌ಪಿಟ್ ಧ್ವನಿಮುದ್ರಿಕೆಗಳಿಗಾಗಿ ಮುಳುಗುಗಾರರು ಬುಧವಾರ ರಾಜಧಾನಿ ಜಕಾರ್ತ ಸಮೀಪದ ಸಮುದ್ರದಲ್ಲಿ ಶೋಧ ನಡೆಸಿದರು.

ಹಾರಾಟ ಮಾಹಿತಿ ದಾಖಲೆ (ಫ್ಲೈಟ್ ಡೇಟಾ ರೆಕಾರ್ಡರ್)ಯನ್ನು ಈಗಾಗಲೇ ಹೊರ ತೆಗೆಯಲಾಗಿದೆ.

ಇಂಡೋನೇಶ್ಯದ ಶ್ರೀವಿಜಯ ಏರ್ ವಿಮಾನಯಾನ ಕಂಪೆನಿಗೆ ಸೇರಿದ ಬೋಯಿಂಗ್ 737-500 ವಿಮಾನವು ಶನಿವಾರ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ 3,000 ಮೀಟರ್ ಕೆಳಗೆ ಯಾಕೆ ಕುಸಿಯಿತು ಎನ್ನುವ ಬಗ್ಗೆ ಎರಡು ಕಪ್ಪು ಬಾಕ್ಸ್‌ಗಳು ವಿವರಣೆಯನ್ನು ನೀಡಬಹುದಾಗಿವೆ. ಅಂತಿಮವಾಗಿ, 62 ಮಂದಿಯನ್ನು ಹೊತ್ತಿದ್ದ ವಿಮಾನವು ಜಾವಾ ಸಮುದ್ರಕ್ಕೆ ಅಪ್ಪಳಿಸಿತು.

ಫ್ಲೈಟ್ ಡೇಟಾ ರೆಕಾರ್ಡರನ್ನು ಹೊಂದಿದ ಕಪ್ಪು ಬಾಕ್ಸನ್ನು ಮುಳುಗುಗಾರರು ಸೋಮವಾರ ಜಕಾರ್ತ ಕರಾವಳಿಯ ಸಮುದ್ರದಿಂದ ಹೊರದೆಗೆದಿದ್ದಾರೆ. ಕಾಕ್‌ಪಿಟ್ ಧ್ವನಿಮುದ್ರಿಕೆಯನ್ನು ಒಳಗೊಂಡ ಕಪ್ಪು ಬಾಕ್ಸ್‌ಗಾಗಿ ಶೋಧ ಮುಂದುವರಿದಿದೆ.

ಮಾನವ ಅವಶೇಷಗಳನ್ನು ನೋಡಿ ಬೆದರುತ್ತಿರುವ ಮುಳುಗುಗಾರರು!

ನುಜ್ಜುಗುಜ್ಜಾಗಿರುವ ಮಾನವ ದೇಹದ ಅವಶೇಷಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯು ಮುಳುಗುಗಾರರ ಆತ್ಮಸ್ಥೈರ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಶೋಧ ಕಾರ್ಯಾಚರಣೆಯ ಮುಖ್ಯಸ್ಥ ಆಗಸ್ ಹರ್ಯೋನೊ ಹೇಳಿದ್ದಾರೆ.

‘‘ಅನನುಭವಿ ಮುಳುಗುಗಾರರು ಮಾನವ ದೇಹಗಳ ಅವಶೇಷಗಳನ್ನು ನೋಡಿ ಹೆದರುತ್ತಿದ್ದಾರೆ. ಅದರಲ್ಲೂ ರಾತ್ರಿ ಸಮಯದ ಕಾರ್ಯಾಚರಣೆಯ ವೇಳೆ ಈ ಕಾರ್ಯಾಚರಣೆ ಅತ್ಯಂತ ಸವಾಲಿನದ್ದಾಗಿದೆ’’ ಎಂದು ಅವರು ನುಡಿದರು.

ಆದರೆ, ಸಮಯ ಕಳೆದಂತೆ ಈ ಪರಿಸ್ಥಿತಿಗಳನ್ನು ಎದುರಿಸಲು ಅವರು ಮಾನಸಿಕವಾಗಿ ಬಲಿಷ್ಠರಾಗುತ್ತಾರೆ ಎಂದರು.

ಕಾರ್ಯಾಚರಣೆಯಲ್ಲಿ 3,000ಕ್ಕೂ ಅಧಿಕ ಮಂದಿ

ವಿಮಾನದ ಅವಶೇಷಗಳನ್ನು ಸಮುದ್ರದಿಂದ ಹೊರದೆಗೆಯುವ ಕಾರ್ಯಾಚರಣೆಯಲ್ಲಿ 3,000ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. ಅವರಿಗೆ ಡಝನ್‌ಗಟ್ಟಲೆ ದೋಣಿಗಳು ಸಹಾಯ ಮಾಡುತ್ತಿವೆ. ರಾಜಧಾನಿ ಜಕಾರ್ತದ ಕರಾವಳಿಯಾಚೆಯಿರುವ ಸಣ್ಣ ದ್ವೀಪಗಳ ಮೇಲೆ ಹೆಲಿಕಾಪ್ಟರ್‌ಗಳು ಹಾರಾಡುತ್ತಿವೆ.

ಮುಳುಗುಗಾರರಿಗೆ ಸಹಾಯ ಮಾಡುವುದಕ್ಕಾಗಿ ರಿಮೋಟ್ ಕಂಟ್ರೋಲ್ ಚಾಲಿತ ವಾಹನವೊಂದನ್ನು ನಿಯೋಜಿಸಲಾಗಿದೆ. ಆದರೆ, ಪ್ರಕ್ಷುಬ್ಧ ಸಮುದ್ರ ಮತ್ತು ಮಳೆಯಿಂದಾಗಿ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.

‘‘ಮೃತದೇಹಗಳು ಮತ್ತು ವಿಮಾನದ ಭಾಗಗಳನ್ನು ಪತ್ತೆಹಚ್ಚುವುದು ಸುಲಭವಲ್ಲ. ಯಾಕೆಂದರೆ, ವಿಮಾನ ಮತ್ತು ಮಾನವನ ಅವಶೇಷಗಳು ಸಣ್ಣ ತುಂಡುಗಳಾಗಿದ್ದು ಸಮುದ್ರದಲ್ಲಿ ಸುಲಭವಾಗಿ ಕೊಚ್ಚಿಕೊಂಡು ಹೋಗಬಹುದಾಗಿದೆ’’ ಎಂದು ಶೋಧ ಕಾರ್ಯಾಚರಣೆಯ ಮುಖ್ಯಸ್ಥ ಆಗಸ್ ಹರ್ಯೋನೊ ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)