varthabharthi


ಬೆಂಗಳೂರು

ಅರಮನೆ ಮೈದಾನದಲ್ಲಿ 'ಜನಸೇವಕ ಸಮಾವೇಶ'

ಬಿಜೆಪಿ ಗೆಲುವಿನ ಓಟ ನಿರಂತರ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ವಾರ್ತಾ ಭಾರತಿ : 13 Jan, 2021

ಬೆಂಗಳೂರು, ಜ. 13: ರಾಜ್ಯದ ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸಾಧಿಸಿದ ಗೆಲುವಿಗೆ ದೇಶದ ಅಭಿವೃದ್ಧಿಯ ನೇತೃತ್ವ ವಹಿಸಿದ ಪ್ರಧಾನಿಯವರ ಕಾರ್ಯಕ್ರಮಗಳು ಮತ್ತು ಸರ್ವರನ್ನು ಜೊತೆಗೊಯ್ಯುವ ಮಹತ್ವದ ಕಾರ್ಯ ಮಾಡುತ್ತಿರುವ ಸಿಎಂ ಯಡಿಯೂರಪ್ಪ ಆಡಳಿತವೇ ಕಾರಣ ಎಂದು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್‍ಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಗೆಲುವಿನ ಪ್ರಮಾಣ ಕುಸಿದಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಇದಕ್ಕಾಗಿ ಪಕ್ಷದ ವತಿಯಿಂದ ಸಿಎಂ, ರಾಜ್ಯಾಧ್ಯಕ್ಷ, ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಅಭಿನಂದಿಸುವೆ ಎಂದರು.

ಬಿಜೆಪಿ ಜನರ ಸೇವೆಗೆ ಬದ್ಧವಾದ ಪಕ್ಷ. ಇತರ ಪಕ್ಷಗಳಂತಲ್ಲ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಧ್ಯೇಯವಾಕ್ಯದೊಂದಿಗೆ ಅದು ಕಾರ್ಯನಿರ್ವಹಿಸುತ್ತದೆ. ಬಿಜೆಪಿ ಮುಂಬರುವ ಜಿ.ಪಂ.ಮತ್ತು ತಾ.ಪಂ.ಚುನಾವಣೆಗಳಲ್ಲೂ ತನ್ನ ಗೆಲುವಿನ ಓಟವನ್ನು ಮುಂದುವರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಗ್ರಾ.ಪಂ.ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಅದರ ಸದುಪಯೋಗ ಆಗಬೇಕು, ದುರುಪಯೋಗ ಆಗದಿರಲಿ. ಯುವಕರು ಮತ್ತು ಮಹಿಳೆಯರು ಮೋರ್ಚಾಗಳನ್ನು ಬಲಪಡಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇತ್ತೀಚೆಗೆ ನಡೆದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದೆ. ಮುಂದಿನ ಚುನಾವಣೆಗಳಲ್ಲೂ ನಾವು ಅಭೂತಪೂರ್ವ ಗೆಲುವು ಸಾಧಿಸಬೇಕು. ವಿಧಾನಸಭಾ ಚುನಾವಣೆಯಲ್ಲೂ 140 ರಿಂದ 150 ಸ್ಥಾನಗಳನ್ನು ಗೆಲ್ಲುವ ಪ್ರತಿಜ್ಞೆ ನಮ್ಮದಾಗಲಿ ಎಂದು ತಿಳಿಸಿದರು.

ಸಾಧನೆ ಮಾತನಾಡಬೇಕು. ಮಾತೇ ಸಾಧನೆ ಆಗಬಾರದು. ಕರ್ನಾಟಕವನ್ನು ಅಭಿವೃದ್ಧಿ ಹೊಂದಿದ ನಾಡಾಗಿ ಪರಿವರ್ತಿಸುವ ನಿರಂತರ ಪ್ರಯತ್ನ ನಮ್ಮದಾಗಲಿ. ಸ್ವಾರ್ಥರಹಿತ ಚಿಂತನೆಯ ಆರೆಸ್ಸೆಸ್ ಕಾರ್ಯಕರ್ತರು ನಮಗೆ ಮಾದರಿ ಆಗಲಿ ಎಂದು ಆಶಿಸಿದರು. ಎಲ್ಲರಿಗೂ ಮನೆ ನಿರ್ಮಿಸಿ ಕೊಡುವುದು ಮತ್ತು ಮೂಲಸೌಕರ್ಯ ಕಲ್ಪಿಸುವ ಆಶಯ ಈಡೇರಲಿದೆ ಎಂದು ಅವರು ತಿಳಿಸಿದರು.

ಯೋಜನೆಗಳನ್ನು ಹಳ್ಳಿಗಳಿಗೆ ತಲುಪಿಸಿ: ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಬರಲಿರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಗೆಲ್ಲಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

‘ದೇಶದಲ್ಲೇ ಅತಿಹೆಚ್ಚು ಸದಸ್ಯರನ್ನು, ಅತಿಹೆಚ್ಚು ಸಂಸದರು ಹೊಂದಿರುವ ಪಕ್ಷ ಬಿಜೆಪಿ. ಇದೀಗ ರಾಜ್ಯದ ಗ್ರಾ.ಪಂ.ಗಳಲ್ಲಿ ಬಿಜೆಪಿ ಬೆಂಬಲಿತ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸದಸ್ಯರು ಹಳ್ಳಿಗಳಿಗೆ ಅಭಿವೃದ್ಧಿ ಯೋಜನೆ ತಲುಪಿಸಬೇಕು. ಭ್ರಷ್ಟಾಚಾರ ರಹಿತ ಆಡಳಿತ ನಡೆಸಬೇಕು ಎಂದು ಅವರು ಸಲಹೆ ಮಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಗೋವಿನ ಶಾಪವಿದೆ. ಇಂದಿರಾ ಗಾಂಧಿ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದೆ ಹಸು ಮತ್ತು ಕರುವಿನ ಚಿಹ್ನೆ ಮೇಲೆ. ಗೆದ್ದ ಮೇಲೆ ಅವರು ಗೋವನ್ನು ಮರೆತರು. ರಾಜ್ಯದ ಪ್ರತಿಷ್ಠಿತ ವ್ಯಕ್ತಿಯೊಬ್ಬರು ನಾನು ಗೋ ಮಾಂಸ ತಿನ್ನುತ್ತೇನೆಂದು ಹೇಳುತ್ತಾರೆ. ಹೀಗಾಗಿ, ಕಾಂಗ್ರೆಸ್ ನೆಲ ಕಚ್ಚಿದೆ’ ಎಂದು ಕಟೀಲ್, ವಿಪಕ್ಷ ನಾಯಕ ಸಿದ್ದರಾಮಯ್ಯರ ವಿರುದ್ಧ ಕಿಡಿಕಾಡಿದರು.

ವೇದಿಕೆ ಮೇಲೆ ಕಾಣಿಸಿಕೊಂಡ ಮುನಿರತ್ನ: ಸಿಎಂ ಯಡಿಯೂರಪ್ಪ ಮಾತನಾಡುತ್ತಿದ್ದ ವೇಳೆ ವೇದಿಕೆಗೆ ಬಂದ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಎಲ್ಲರ ಗಮನ ಸೆಳೆದರು. ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಅಜ್ಞಾತ ಸ್ಥಳಕ್ಕೆ ತೆರಳಿದ್ದರು ಎನ್ನಲಾಗಿತ್ತು. ಆದರೆ, ಜನಸೇವಕ ಸಮಾವೇಶದಲ್ಲಿ ಹಾಜರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿದರು.

ಮಾರ್ಗಸೂಚಿ ಉಲ್ಲಂಘನೆ: ಜನಸೇವಕ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಕೊರೋನ ಮಾರ್ಗಸೂಚಿ ಉಲ್ಲಂಘಿಸಿದ್ದು, ಅನೇಕರು ಮಾಸ್ಕ್ ಧರಿಸಿರಲಿಲ್ಲ, ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳದೆ ದೊಡ್ಡಸಂಖ್ಯೆಯಲ್ಲಿ ಜನ ಸೇರಿದ್ದು, ನೂಕುನುಗ್ಗಲು ಉಂಟಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)