varthabharthi


ನಿಮ್ಮ ಅಂಕಣ

ಪದವಿ ಶಿಕ್ಷಣ: ಖಾಸಗಿ ಕಾಲೇಜ್ ಮಾಫಿಯಾಕ್ಕೆ ಸಹಕಾರಿಯಾಯಿತೇ ಸರಕಾರದ ನಡೆ?

ವಾರ್ತಾ ಭಾರತಿ : 14 Jan, 2021
ಬಿ. ಎನ್. ನಾಗರಾಜ್

ಕಳೆದ ಒಂದು ದಶಕದ ಅವಧಿ ಕರ್ನಾಟಕದ ಉನ್ನತ ಶಿಕ್ಷಣ ಇತಿಹಾಸದಲ್ಲಿ ಅಭಿವೃದ್ಧಿಯ ಪರ್ವವಾಗಿದೆ. ಹೊಸಶಕೆ ಆರಂಭವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕವನ್ನು ಭರಿಸಲಾಗದೆ ಪಿ.ಯು.ಸಿ. ಹಂತದಲ್ಲಿಯೇ ಶಿಕ್ಷಣಕ್ಕೆ ವಿದಾಯ ಹೇಳುತ್ತಿದ್ದ ಕರ್ನಾಟಕದ ಬಡ, ಹಿಂದುಳಿದ ವರ್ಗಗಳ ಗ್ರಾಮೀಣ ವಿದ್ಯಾರ್ಥಿಗಳು ವಿಶೇಷವಾಗಿ ಹೆಣ್ಣುಮಕ್ಕಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸರಕಾರಿ ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.

ಕರ್ನಾಟಕದಲ್ಲಿ ಸರಕಾರಿ ಕಾಲೇಜುಗಳ ಸಂಖ್ಯೆ ಈ ಅವಧಿಯಲ್ಲಿ 430ಕ್ಕೆ ಏರಿದ್ದು ದೇಶದಲ್ಲಿಯೇ ಅತಿ ಹೆಚ್ಚು ಸರಕಾರಿ ಪದವಿ ಕಾಲೇಜುಗಳನ್ನು ಹೊಂದಿದ ರಾಜ್ಯ ಕರ್ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇವಲ ಉಳ್ಳವರ ಸೊತ್ತಾಗಿದ್ದ ಪದವಿ ಅಧ್ಯಯನಕ್ಕೆ ಬಹುಪಾಲು ಬಡ ಮಕ್ಕಳು ಪ್ರವೇಶ ಪಡೆಯಲು ಕಾರಣ ಕಳೆದ ಒಂದು ದಶಕದ ಅವಧಿಯ ಎಲ್ಲ ಸರಕಾರಗಳು, ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಖಾಸಗಿ ಕಾಲೇಜುಗಳಿಗೆ ಪರ್ಯಾಯವಾಗಿ ಸರಕಾರಿ ಪದವಿ ಕಾಲೇಜುಗಳ ಅಭಿವೃದ್ಧಿಗೆ ವಹಿಸಿದ ಕಾಳಜಿ. ಹೊಸ ಕಾಲೇಜುಗಳನ್ನು ಆರಂಭಿಸುವಲ್ಲಿ, ಕಾಲೇಜುಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ, ಬೋಧಕ ಬೋಧಕೇತರ ಸಿಬ್ಬಂದಿಯ ನೇಮಕಾತಿಯಲ್ಲಿ, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ವಹಿಸಿದ ಕಾಳಜಿಯಿಂದ ಖಾಸಗಿ ಕಾಲೇಜುಗಳಿಗಿಂತ ಸರಕಾರಿ ಪದವಿ ಕಾಲೇಜುಗಳಿಗೆ ದೊಡ್ಡ ಪ್ರಮಾಣದಲ್ಲಿ ಪ್ರವೇಶಾತಿ ಸಾಧ್ಯವಾಯಿತು. ಎಲ್ಲಾ ವಿದ್ಯಾರ್ಥಿನಿಯರಿಗೆ ಸಂಪೂರ್ಣ ಶುಲ್ಕ ವಿನಾಯಿತಿ, ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ, ಹಾಸ್ಟೆಲ್ ಸಿಗದ ವಿದ್ಯಾರ್ಥಿಗಳಿಗೆ ವಿಶೇಷ ಧನ ಸಹಾಯಗಳಂತಹ ಯೋಜನೆಗಳಿಂದ ಬಡವರು ಮಾತ್ರವಲ್ಲ ಎಲ್ಲ ವರ್ಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪ್ರವೇಶ ಪಡೆದರು.

ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು, ಅಶ್ವತ್ಥ ನಾರಾಯಣ ಅವರು ಶಿಕ್ಷಣ ಸಚಿವರಾದ ಮೇಲೆ, ಪ್ರದೀಪ್ ಅವರು ಆಯುಕ್ತರಾದ ನಂತರ ಸರಕಾರಿ ಕಾಲೇಜುಗಳ ನಾಗಾಲೋಟಕ್ಕೆ ದೊಡ್ಡ ಬ್ರೇಕ್ ಬಿದ್ದಿದೆ. ಉನ್ನತ ಶಿಕ್ಷಣ ವಲಯದಲ್ಲಿ ಇವರು ಖಾಸಗಿ ಮಾಫಿಯಾಕ್ಕೆ ಬಲಿಯಾದರೇ ಎಂಬ ಸಂಶಯ ಮನೆ ಮಾಡಿದೆ.
 
ಅಡ್ಮಿಶನ್ ಪೋರ್ಟಲ್

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳು 2020-21ನೇ ಸಾಲಿಗೆ ದೊಡ್ಡ ಪ್ರಮಾಣದಲ್ಲಿ ಪಿ.ಯು.ಸಿ. ಪಾಸಾದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದ್ದರು. ಆದರೆ ಅದೇ ವೇಳೆಯಲ್ಲಿ ಹೊಸ ಅಡ್ಮಿಶನ್ ಪೋರ್ಟಲ್ ಅಪ್‌ಲೋಡ್ ಮಾಡುವವರೆಗೂ ಪ್ರವೇಶವನ್ನು ತಡೆಹಿಡಿಯಲಾಯಿತು. ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಭರ್ತಿಯಾಗುವವರೆಗೂ ಈ ಪೋರ್ಟಲ್ ಅಪ್‌ಲೋಡ್ ಆಗಲೇ ಇಲ್ಲ. ವಿಶೇಷವಾಗಿ ಜಿಲ್ಲಾ ಕೇಂದ್ರಗಳಲ್ಲಿ ಮೊದಲ ಆಯ್ಕೆ ಪಟ್ಟಿ ಬಿಡುಗಡೆಯಾಗದ ಕಾರಣ ಆತಂಕದಲ್ಲಿ ಪ್ರತಿಭಾವಂತ ಮಕ್ಕಳೆಲ್ಲ ಖಾಸಗಿ ಕಾಲೇಜಿಗೆ ಪ್ರವೇಶ ಪಡೆದರು. ಬಡ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅನಿವಾರ್ಯವಾಗಿ ಖಾಸಗಿ ಕಾಲೇಜುಗಳ ಭಾರದ ಶುಲ್ಕದ ಹೊರೆಯನ್ನು ಹೊತ್ತು ಪ್ರವೇಶ ಪಡೆದರು. ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗಬೇಕಾಗಿದ್ದ ಪ್ರವೇಶದ ಅನುಪಾತ ನಿರೀಕ್ಷಿತ ಮಟ್ಟವನ್ನು ತಲುಪಲಿಲ್ಲ. ಪ್ರವೇಶಾತಿ ಕೊರತೆಯಿಂದ ನಲುಗುತ್ತಿದ್ದ ಖಾಸಗಿ ಕ್ಯಾಪಿಟೇಶನ್ ಕುಳಗಳ ಮುಖದ ಮೇಲೆ ಎಷ್ಟೋ ವರ್ಷಗಳ ಮೇಲೆ ಮಂದಹಾಸ ಮೂಡಿತು.

ಅತಿಥಿ ಉಪನ್ಯಾಸಕರ ನೇಮಕ
ಕರ್ನಾಟಕದಾದ್ಯಂತ ಸೆಪ್ಟಂಬರ್ 1ರಿಂದ ಪದವಿ ಕಾಲೇಜುಗಳು ಆರಂಭವಾದವು. ಡಿಸೆಂಬರ್ 31 ಈ ಸೆಮಿಸ್ಟರ್‌ನ ಕೊನೆಯ ದಿನ. ಪ್ರತಿ ವರ್ಷ ಕಾಲೇಜು ಆರಂಭವಾದ ತಿಂಗಳಿನಲ್ಲಿಯೇ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತಿತ್ತು. ಆದರೆ ಟರ್ಮ್ ಮುಗಿದರೂ ಇಲ್ಲಿಯವರೆಗೆ ಸರಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ನಡೆದಿಲ್ಲ. ಕರ್ನಾಟಕದ ಸರಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳಲ್ಲಿ ಅರ್ಧದಷ್ಟು ಬೋಧಕ ಹುದ್ದೆಗಳು ಖಾಲಿ ಇದ್ದು ಆ ಜಾಗದಲ್ಲಿ ಅತಿಥಿ ಉಪನ್ಯಾಸಕರ ನೇಮಕವಾಗಿರುತ್ತದೆ. ಸರಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 14,500 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ರತಿ ಕಾಲೇಜಿನಲ್ಲಿ ಅರ್ಧದಷ್ಟು ವಿಷಯಗಳನ್ನು ಬೋಧಿಸುತ್ತಾರೆ. ಇಲ್ಲಿಯವರೆಗೂ ಅವರ ನೇಮಕಾತಿ ನಡೆದಿಲ್ಲ.

ಆದರೆ ಖಾಸಗಿ ಕಾಲೇಜುಗಳಲ್ಲಿ ಸೆಪ್ಟಂಬರ್ ತಿಂಗಳಿನಿಂದಲೇ ಅತಿಥಿ ಉಪನ್ಯಾಸಕರ ನೇಮಕಾತಿ ನಡೆದು ಅವರ ಪೂರ್ಣ ವಿಷಯಗಳನ್ನು ಬೋಧಿಸಿ ಮುಗಿಸಿದ್ದಾರೆ. ವಿಶ್ವವಿದ್ಯಾನಿಲಯಗಳು ಒಂದು ತಿಂಗಳ ಮಟ್ಟಿಗೆ ಟರ್ಮ್ ಮುಂದೂಡಿ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸುವ ಅಧಿಸೂಚನೆ ಹೊರಡಿಸಿವೆ. ಜನವರಿ 15ರ ಒಳಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಅರ್ಜಿಗಳನ್ನು ತುಂಬಬೇಕಿದೆ. ಅರ್ಧದಷ್ಟು ವಿಷಯಗಳ ಬೋಧನೆ ನಡೆಯದೆ ಕರ್ನಾಟಕದ ಸುಮಾರು ಮೂರುವರೆ ಲಕ್ಷ ಪದವಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಂಗಾಲಾಗಿದ್ದಾರೆ. ಒಂದು ವೇಳೆ ಫೆಬ್ರವರಿಯಲ್ಲಿ ಪರೀಕ್ಷೆ ನಡೆದೇ ಬಿಟ್ಟರೆ ಮೂರುವರೆ ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕರಾಳ ಪರಿಣಾಮವಾಗುತ್ತದೆ. ಮುಂದೆ ಸರಕಾರಿ ಕಾಲೇಜುಗಳ ಕಡೆಗೆ ವಿದ್ಯಾರ್ಥಿಗಳು ಕಣ್ಣೆತ್ತಿಯೂ ನೋಡದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಮುಂದೇನು?
ಹೀಗಾಗಿ ತಕ್ಷಣ ಅತಿಥಿ ಉಪನ್ಯಾಸಕರನ್ನು ನೇಮಿಸಬೇಕು. ಪರೀಕ್ಷೆಗಳನ್ನು ಕನಿಷ್ಠ ಇನ್ನೂ ಎರಡು ತಿಂಗಳು ಮುಂದೂಡಬೇಕು. ಈ ವರ್ಷದ ಮಟ್ಟಿಗೆ ಎರಡು ಸೆಮಿಸ್ಟರ್‌ಗಳ ಪರೀಕ್ಷೆಯ ಬದಲು ಒಂದೇ ವಾರ್ಷಿಕ ಪರೀಕ್ಷೆಯನ್ನು ನಡೆಸಬೇಕು. ಹಾಗಾದರೆ ಮಾತ್ರ ಸರಕಾರಿ ಕಾಲೇಜುಗಳ ಲಕ್ಷಾಂತರ ಬಡ ಮಕ್ಕಳ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯ. ಇಲ್ಲವಾದರೆ ಸ್ನಾತಕೋತ್ತರ ಹಂತದಲ್ಲೂ ಖಾಸಗಿ ಕಾಲೇಜಿನಲ್ಲಿ ಓದಿದ ಸಿರಿವಂತ ಮಕ್ಕಳೇ ಪ್ರವೇಶ ಪಡೆದು ಸರಕಾರಿ ಕಾಲೇಜಿನ ಮಕ್ಕಳು ಅನಾಥರಾಗುತ್ತಾರೆ.

ಎಲ್.ಎಂ.ಎಸ್. ಎಂಬ ಹೊಸ ಯೋಜನೆ
2020-21ನೇ ಸಾಲಿನಲ್ಲಿ ಸರಕಾರಿ ಪದವಿ ಕಾಲೇಜುಗಳನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಲಿಕಾ ನಿರ್ವಹಣಾ ವ್ಯವಸ್ಥೆಯೆಂಬ ಬಹುಕೋಟಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ಎಲ್ಲ ಕ್ಲಾಸ್‌ರೂಮ್‌ಗಳನ್ನು ಸ್ಮಾರ್ಟ್‌ರೂಂಗಳನ್ನಾಗಿ ಪರಿವರ್ತಿಸಿ ಪಿಪಿಟಿ ಸ್ಟಡಿ ಮಟೇರಿಯಲ್, ವೀಡಿಯೊಗಳ ಮೂಲಕವೇ ಪಾಠ ಮಾಡುವ ವ್ಯವಸ್ಥೆ ಇದು. ಸರಕಾರಿ ಕಾಲೇಜುಗಳ ಎಲ್ಲ ವಿಷಯಗಳ ಬಹುಪಾಲು ಬೋಧಕರನ್ನು ಕಳೆದ ನಾಲ್ಕು ತಿಂಗಳು ಪಿಪಿಟಿ ಸ್ಟಡಿ ಮಟೇರಿಯಲ್ ವೀಡಿಯೊಗಳನ್ನು ಸಿದ್ಧಪಡಿಸಲು ಬಳಸಿಕೊಳ್ಳಲಾಗಿದೆ.

ಈ ಎಲ್ಲವನ್ನು ವೆಬ್‌ಸೈಟ್‌ಗೆ ಅಳವಡಿಸಲಾಗುತ್ತದೆ. ಹಾಗಾದಾಗ, ಈ ಸಿದ್ಧ ಪಠ್ಯ ಖಾಸಗಿ ಕಾಲೇಜಿನ ಪ್ರಾಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಮುಕ್ತವಾಗಿ ದೊರೆಯುತ್ತವೆ. ಸರಕಾರಿ-ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿಗುವ ಅನುಕೂಲವಾದ್ದರಿಂದ, ಇಬ್ಬರನ್ನೂ ಈ ಕೆಲಸಕ್ಕೆ ಬಳಸಿಕೊಳ್ಳಬಹುದಿತ್ತು. ಆದರೆ ಸರಕಾರಿ ಕಾಲೇಜಿನ ಬೋಧಕರನ್ನು ಹಗಳಿರುಳು ದುಡಿಸಿಕೊಂಡು ಖಾಸಗಿ ಕಾಲೇಜಿಗೂ ಆ ಲಾಭ ದಕ್ಕುವಂತೆ ನೋಡಿಕೊಳ್ಳಲಾಗಿದೆ. ಸರಕಾರಿ ಕಾಲೇಜಿನ ಬೋಧಕರು ಅತಿಥಿ ಉಪನ್ಯಾಸಕರಿಲ್ಲದ ವೇಳೆಯಲ್ಲಿ ಹೆಚ್ಚುವರಿ ತರಗತಿಗಳನ್ನು ನಡೆಸಲು ಅವಕಾಶವಿಲ್ಲದಂತೆ ತಮ್ಮ ಕೆಲಸದ ಜೊತೆ ಪಿಪಿಟಿ ಸ್ಟಡಿ ಮಟೇರಿಯಲ್ ಮತ್ತು ವಿಡಿಯೋಗಳನ್ನು ಸಿದ್ಧಪಡಿಸುವಲ್ಲಿ ತೊಡಗಿಕೊಳ್ಳಬೇಕಾಯಿತು. ಎಲ್.ಎಂ.ಎಸ್. ಜಾರಿಗೆ ತಂದು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೆ ಇರುವ ಹಾಗೂ ಬೋಧಕರನ್ನು ನೇಮಿಸಿಕೊಳ್ಳಲಾರದ ಸ್ಥಿತಿಗೆ ಉನ್ನತ ಶಿಕ್ಷಣವನ್ನು ಕೊಂಡೊಯ್ಯುವ ಹುನ್ನಾರ ನಡೆದಿದೆ ಎಂಬ ಸಂಶಯಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ತಾಂತ್ರಿಕ ಐಟಿ-ಬಿಟಿ ಕಂಪೆನಿಗಳಿಗೆ ಹಣದ ಹೊಳೆ ಹರಿಸುವ ಯೋಜನೆ ಇದಾಗಿದೆ. ನೇರವಾಗಿ ತರಗತಿಯಲ್ಲಿ ಪಾಠ ಮಾಡಲು ವೀಡಿಯೊಗಳ ಅಗತ್ಯವಿರಲಿಲ್ಲ. ಆದರೂ ಪ್ರತಿ ವಿಷಯದಲ್ಲೂ ಪ್ರತಿ ಸೆಷನ್ನಿಗೂ ವೀಡಿಯೊ ಸಿದ್ಧಪಡಿಸಲಾಗಿದೆ.

ಒಟ್ಟಾರೆ, ಯಾವ ರಾಜ್ಯದಲ್ಲೂ ಇಲ್ಲದಷ್ಟು 430 ಕಾಲೇಜುಗಳಿವೆ, ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗಿದೆ. ಆದರೆ ರಾಜ್ಯ ಸರಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳು ಸರಕಾರಿ ಕಾಲೇಜುಗಳನ್ನು ಬಲಪಡಿಸುವ ಬದಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಕಾರಿಯಾಗಿರುವುದು ದುರಂತ. ಈ ಬಗ್ಗೆ ಉನ್ನತ ಶಿಕ್ಷಣ ಸಚಿವರು ಗಮನ ಹರಿಸುವರೇ?

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)