varthabharthi


ಅನುಗಾಲ

ಗಾಂಧಿ ಮತ್ತು ಹಿಂದುತ್ವವಾದದ ತರ್ಕಗಳು

ವಾರ್ತಾ ಭಾರತಿ : 14 Jan, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಗಾಂಧಿ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಹೇಳಿದ ತತ್ವಗಳಿಗೂ ಇಂದು ಭಾಜಪ ಸರಕಾರ ಮತ್ತು ಅದರ ತಾತ್ವಿಕ ಗುರುವಾದ ಆರೆಸ್ಸೆಸ್ ಹೇಳುವ ಮತ್ತು ಹೇರಬಯಸುವ ಹಿಂದುತ್ವದ ತರ್ಕಗಳಿಗೂ ಪರಸ್ಪರ ಸಂಬಂಧವೇ ಇಲ್ಲ. ಗಾಂಧಿ ಹೇಳುವ ನಾಗರಿಕ ಮೌಲ್ಯಗಳು ಭಾಗವತರು ಹೇಳುವ ದ್ವೇಷಕಾರಕ ಹಿಂದುತ್ವವಲ್ಲ. ರಾಷ್ಟ್ರ/ದೇಶ ನಮ್ಮದು ಎಂಬುದಕ್ಕಾಗಿ ಅದನ್ನು ಪ್ರೀತಿಸುವುದು ರಾಷ್ಟ್ರಭಕ್ತಿ. ದೇಶ ನನ್ನದು, ನಮ್ಮದು ಎನ್ನುತ್ತ ದ್ವೇಷಿಸುವುದು, ಸಾಮಾಜಿಕ ಹಿತವನ್ನು ಕೆಡಿಸುವುದು ರಾಷ್ಟ್ರಭಕ್ತಿಯಲ್ಲ. ಗಾಂಧಿ ತೆರೆದ ಕಿಟಿಕಿ-ಬಾಗಿಲುಗಳನ್ನು ಬೋಧಿಸಿದರೆ, ಹಿಂದುತ್ವವಾದವು ಗೋಡೆಗಳನ್ನು ಕಟ್ಟುತ್ತಿದೆ.2021ರ ಭಾರತದಲ್ಲಿ ನಿರ್ಭಯಾ ಪ್ರಕರಣಗಳು ಹೆಚ್ಚುತ್ತಿವೆ; ಮತ್ತು ಮುಖ್ಯವಾಗಿ ಯೋಗಿರಾಜ್ಯ ಉತ್ತರಪ್ರದೇಶದಲ್ಲಿ ಅಬಾಲವೃದ್ಧರಾದಿಯಾಗಿ ಎಂಬಂತೆ ಅತ್ಯಾಚಾರ ಘಟನೆಗಳು ಹೆಚ್ಚಾಗುತ್ತಿವೆ. ಈ ದುಶ್ಶಾಸನಪಟ್ಟಿಗೆ ಬದೌನಿನ ದೇವಾಲಯವೊಂದರ ಅರ್ಚಕರೂ ಸೇರಿದ್ದಾರೆ! ಈ ಬಗ್ಗೆ ಮುಖ್ಯಮಂತ್ರಿಗಳಾಗಲೀ ಪ್ರಧಾನಿ ಯಾಗಲೀ ಚಕಾರವೆತ್ತುತ್ತಿಲ್ಲ. ಪ್ರಧಾನಿಯವರು ಸೌರವ್ ಗಂಗುಲಿ ಮುಂತಾದ ಭವಿಷ್ಯದಲ್ಲಿ ಭಾಜಪಕ್ಕೆ ಜೋಡಣೆಯಾಗಬಹುದಾದ ಪ್ರಮುಖರಿಗೆ ದೂರವಾಣಿ ಕರೆಮಾಡಿ ಇಲ್ಲವೇ ಟ್ವಿಟರ್ ಸಂದೇಶದಲ್ಲಿ ಅವರ ಆರೋಗ್ಯವನ್ನು ವಿಚಾರಿಸುವುದರಲ್ಲಿ ಮತ್ತು ಶುಭಕಾಮನೆ ಹೇಳುವುದರಲ್ಲೇ ‘ಬಿಸಿ’ಯಾಗಿದ್ದಾರೆ.

ಈ ಅತ್ಯಾಚಾರಗಳು ನಡೆಯುವ ಹೊತ್ತಿನಲ್ಲೇ ಹೊಸವರ್ಷದ ಹೊಸ್ತಿಲಿನಲ್ಲಿ ಗಾಂಧಿಯ ಕುರಿತ ‘ಹಿಂದೂ ದೇಶಭಕ್ತರ ನಿರ್ಮಾಣ: ಗಾಂಧೀಜಿಯ ಹಿಂದ್‌ಸ್ವರಾಜ್‌ನ ಹಿನ್ನೆಲೆ’ ಎಂಬ ಪುಸ್ತಕವೊಂದನ್ನು ಬಿಡುಗಡೆ ಮಾಡುತ್ತ ಆರೆಸ್ಸೆಸ್‌ನ ಸರ್ವೋಚ್ಚ ಸ್ಥಾನವಾದ ಸರಸಂಘ ಚಾಲಕರಾದ ಮೋಹನಭಾಗವತರು ‘‘ಹಿಂದೂಗಳು ಸಹಜವಾಗಿಯೇ ರಾಷ್ಟ್ರಭಕ್ತರು’’ ಎಂಬ ಮಾತುಗಳನ್ನಾಡಿದ್ದಾರೆ. ಇದನ್ನು ಕೇಳಿದ, ಓದಿದ, ಹಿಂದುತ್ವವಾದಿಗಳಿಗೆ ಹಿಂದುತ್ವ ಪ್ರತಿಪಾದನೆಯಲ್ಲಿ ಭಾರೀ ದೊಡ್ಡ ಮೆಟ್ಟಲನ್ನು ಹತ್ತಿದಂತೆ ಅಥವಾ ಹೆಜ್ಜೆಯನ್ನಿಟ್ಟಂತೆ ಅನ್ನಿಸುವುದು ಸಹಜ. ಅವರು ಹೇಳದ ಆದರೆ ಹುದುಗಿದ ಇನ್ನೊಂದು ವಾಕ್ಯವೆಂದರೆ ಇತರರು ರಾಷ್ಟ್ರದ್ರೋಹಿಗಳು. ಈ ಇತರರುಗಳಲ್ಲಿ ಹಿಂದುತ್ವವಾದವನ್ನು ಒಪ್ಪದಿರುವ ಮತ್ತು ಭಾಗವತರ ದೃಷ್ಟಿಕೋನವನ್ನು ವಿರೋಧಿಸುವ ಹಿಂದೂಗಳು ಸೇರುತ್ತಾರೋ ಎಂಬುದು ಇನ್ನೂ ಪ್ರಕಟವಾಗಿಲ್ಲ.

ಗಾಂಧಿಯ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ಈ ಪ್ರಮೇಯವು ಹುಟ್ಟಿಕೊಂಡದ್ದು ಕುತೂಹಲಕಾರಿಯೇನಲ್ಲ. ಇತ್ತೀಚೆಗಿನ ದಿನಗಳಲ್ಲಿ ಹಿಂದುತ್ವದ ಪ್ರತಿಪಾದನೆಯು ಉಗ್ರಸ್ವರೂಪವನ್ನು ತಾಳಿದೆ. ಅಯೋಧ್ಯೆಯ ರಾಮಮಂದಿರ, ಕಾಶ್ಮೀರ, ಸಂವಿಧಾನದ 370ನೇ ವಿಧಿ ಇವೆಲ್ಲ ಈಗ ಚರ್ವಿತಚರ್ವಣವಾಗಿರುವುದರಿಂದ ಹೊಸತೇನಾದರೂ ಹೇಳದಿದ್ದರೆ ಈ ದೇಶದ ಹಿಂದುತ್ವವಾದಿಗಳಿಗೆ ತಮ್ಮ ಹಿತೈಷಿಗಳು ಎಲ್ಲಿ ಕುಂಭಕರ್ಣನಿದ್ರೆಗೆ ಸಲ್ಲುತ್ತಾರೋ ಎಂಬ ಆತಂಕವಿದೆ. ಆದ್ದರಿಂದ ಅವರನ್ನು ಆಗಾಗ ಎಚ್ಚರಿಸಲು ಏನಾದರೂ ಕನಸುಗಳನ್ನು ಬಿತ್ತಿ ಎಚ್ಚರಿಸಬೇಕಾದ ಅಗತ್ಯವಿದೆ. ಇದಕ್ಕಾಗಿ ಹಿಂದ್‌ಸ್ವರಾಜ್‌ನ್ನು ಮತೀಯವಾಗಿ ಮತ್ತು ಮತಾಂಧವಾಗಿ ಹೇಗೆ ಅರ್ಥವಿಸಬಹುದು ಎಂಬುದು ಈ ಚಿಂತನಶೀಲತೆಯ ಮುಖ್ಯ ಉದ್ದೇಶವಾಗಿರುತ್ತದೆ. ಇದೊಂದು ರೀತಿಯಲ್ಲಿ ‘ನಮಾಮಿ ಚಿಂತನಗಂಗಾ’ ಯೋಜನೆ.

ತರ್ಕಶಾಸ್ತ್ರದ ಪ್ರಾಥಮಿಕ ಹಂತದಲ್ಲಿ ಕೆಲವು ಪ್ರಮೇಯಗಳನ್ನು ಕಲಿಸಲಾಗುತ್ತಿತ್ತು. ಅದನ್ನು ಹಿಂದುತ್ವವಾದದ ಈ ಸಂದರ್ಭಕ್ಕೆ ಅನ್ವಯಿಸಿ ನೆನಪಿಸಬಹುದಾದರೆ- ಗಾಂಧಿ ಒಬ್ಬ ಹಿಂದೂ. ಗಾಂಧಿ ಒಬ್ಬ ರಾಷ್ಟ್ರಭಕ್ತ. ಆದ್ದರಿಂದ ಹಿಂದೂಗಳು ರಾಷ್ಟ್ರಭಕ್ತರು. ಹಿಂದುತ್ವವಾದದ ಇನ್ನೊಂದು ಕೊನೆ ಹೇಗಿರಬಹುದೆಂದರೆ- ಹಿಂದೂಗಳು ರಾಷ್ಟ್ರಭಕ್ತರು. ಗೋಡ್ಸೆ ಒಬ್ಬ ಹಿಂದೂ. ಆದ್ದರಿಂದ ಗೋಡ್ಸೆ ರಾಷ್ಟ್ರಭಕ್ತ. ಹಿಂದುತ್ವ ಮತ್ತು ಹಿಂದ್‌ಸ್ವರಾಜ್ ಎಂಬ ಪದಗಳು ಪರಸ್ಪರ ನಿಕಟವರ್ತಿಗಳಂತೆ ಕಾಣುವುದರಿಂದ ಜನರಲ್ಲಿ ಗೊಂದಲ ಹುಟ್ಟಿಸಲು ಹಿಂದುತ್ವವಾದಿಗಳಿಗೆ ಇದು ಅನುಕೂಲದ ಜಮಖಾನ. ಈಗ ಪ್ರಯೋಗಕ್ಕೆ ಬಂದಿರುವ ಮತಾಂಧ ಹಿಂದುತ್ವವಾದವನ್ನು ಎಂದಿಗೂ ಪ್ರತಿಪಾದಿಸದ ಸ್ವಾಮಿ ವಿವೇಕಾನಂದ, ಭಗತ್‌ಸಿಂಗ್ ಮುಂತಾದವರನ್ನು ಅಪಹರಿಸಿದ ಹಿಂದುತ್ವವಾದಿಗಳಿಗೆ ಗಾಂಧಿಯನ್ನು ಈ ಮೊದಲೇ ಅಪಹರಿಸುವ ಯೋಚನೆ ಯಾಕೆ ಬರಲಿಲ್ಲವೋ ಗೊತ್ತಿಲ್ಲ.

1908ರಲ್ಲಿ ಪ್ರಕಟವಾದ ಗಾಂಧಿಯ ‘ಹಿಂದ್ ಸ್ವರಾಜ್’ ಮೂಲ ಕೃತಿ ‘ಕಿವಿಮಾತಿನಂತಿದ್ದು’ (ಯು.ಆರ್.ಅನಂತಮೂರ್ತಿ) ಅದು ಗಾಂಧಿಯ ಬದುಕು ಮತ್ತು ಚಿಂತನೆಗಳನ್ನು ಮಾತ್ರವಲ್ಲ, 20ನೇ ಶತಮಾನದ ಪೂರ್ವಾರ್ಧದ ದಕ್ಷಿಣ ಏಶ್ಯದ ರಾಜಕೀಯವನ್ನು ಅರ್ಥಮಾಡಿಕೊಳ್ಳುವಲ್ಲಿ ಮಹತ್ವದ ಮಾರ್ಗಸೂಚಿಯಾಗಿದೆ. (ನಾನು ಸುಮಾರು 20 ವರ್ಷಗಳ ಹಿಂದೆ ಕೊಂಡು ಓದಿದ) ಆ್ಯಂಟನಿ ಜೆ. ಪರೆಲ್ ಅವರ ಆಂಗ್ಲ ಕೃತಿ ‘ಹಿಂದ್ ಸ್ವರಾಜ್ ಮತ್ತು ಇತರ ಲೇಖನಗಳು’ ಈ ನಿಟ್ಟಿನಲ್ಲಿ ಸಂಗ್ರಹಯೋಗ್ಯ ಕೃತಿ. (ಹೋಮರ್ ಎ. ಜಾಕ್ ಸಂಪಾದಿಸಿದ ಗಾಂಧಿ ವಾಚಿಕೆ ಕೂಡಾ ಅಗತ್ಯ ಮಾಹಿತಿಗಳನ್ನು ಮತ್ತು ಒಳನೋಟಗಳನ್ನು ನೀಡುತ್ತದೆ.) ಗಾಂಧಿಯ ಮುಂದಿನ ರಾಜಕೀಯ ತಾತ್ವಿಕತೆಯನ್ನು ಈ ಚಿಂತನೆಗಳು ರೂಪಿಸಿದವು ಎಂದು ಆತ ಹೇಳುತ್ತಾನೆ. ಗಾಂಧಿಯ ದೃಷ್ಟಿಯಲ್ಲಿ ಸ್ವರಾಜ್ಯವು ಎಲ್ಲ ಕಾಲದಲ್ಲೂ ಎಲ್ಲರಿಗೂ ಸಲ್ಲುವ ಗುರಿ. (ಗಾಂಧಿ ‘ಸ್ವರಾಜ್’ ಎಂಬ ಪದವನ್ನೇ ಬಳಸಿದ್ದರು ಎಂಬುದು ಅವರ ಮತ್ತು ಅವರ ಪದಬಳಕೆಯ ವೈಶಿಷ್ಟವನ್ನು ಹೇಳುತ್ತದೆ.) ಅವರ ಸ್ವರಾಜ್ಯದಲ್ಲಿ ಎಲ್ಲರಿಗೂ ಜಾಗವಿದೆ. ಅವರ ಗ್ರಾಮರಾಜ್ಯ, ರಾಮರಾಜ್ಯ ಎರಡೂ ಒಂದೇ. ಆಧುನಿಕ ಆವಿಷ್ಕಾರಗಳು ಜನರ ಉದ್ಯೋಗಗಳನ್ನು ನಿರ್ನಾಮಮಾಡುತ್ತವೆಂಬ ಅಸಮಾಧಾನದಿಂದಲೇ ಅವರು ಚಿಂತಿಸಿದ್ದರು. ಎಲ್ಲರೂ ಪಾಲ್ಗೊಳ್ಳುವ ಒಂದು ಸುಖೀರಾಜ್ಯದ ಕನಸನ್ನು ಗಾಂಧಿ ಹೊಂದಿದ್ದರು.

ಈಶ್ವರ ಎಂದರೆ ಒಡೆಯ ಎಂದಷ್ಟೇ ಅರ್ಥ, ನಿರೂಪಣೆ. ಅದಕ್ಕೆ ಹಿಂದೂ-ಮುಸ್ಲಿಮ್-ಇಸಾಯಿ ಎಂಬ ಅಂತರವಿಲ್ಲ. ಗಾಂಧಿ ಹಿಂದೂಧರ್ಮದ ಬಹುದೇವತೋಪಾಸನೆಯನ್ನು ಗೌರವಿಸಿದರು; ಸ್ವೀಕರಿಸಿದರು. ಆದರೆ ಅದು ಅವರ ಪಾಲಿಗೆ ಒಂದು ಆಧ್ಯಾತ್ಮಿಕ ಸತ್ಯವಾಗಿತ್ತೇ ವಿನಾ ವ್ಯಾವಹಾರಿಕ ತಂತ್ರ/ಸೂತ್ರವಾಗಿರಲಿಲ್ಲ. ಇತರ ಧರ್ಮ/ಮತಗಳ ಒಳ್ಳೆಯ ವಿಚಾರವನ್ನು ಸದಾ ತೆರೆದ ಮನಸ್ಸಿನಿಂದ ಗಾಂಧಿ ಒಪ್ಪಿಕೊಂಡಿದ್ದರು. ಋಗ್ವೇದದ ‘ಆನೋ ಭದ್ರಾ ಕೃತವೋ ಯಾಂತು ವಿಶ್ವತಃ’= ಒಳ್ಳೆಯ ವಿಚಾರಗಳು ಎಲ್ಲೆಡೆಯಿಂದಲೂ ಬರಲಿ ಎಂಬ ವಿಚಾರವನ್ನು ಅವರು ತಮ್ಮ ನಡೆನುಡಿಯಲ್ಲಿ ಒಪ್ಪಿಕೊಂಡಿದ್ದರು. ಗಾಂಧಿ ತಾನು ಹಿಂದೂ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ ಆ ಹಿಂದುತ್ವ ಬೇರೆ; ಇಂದು ಭಾಗವತರು ಸೂಚಿಸುವ ಹಿಂದುತ್ವವು ಬೇರೆ. ಹೀಗಿದ್ದರೂ ಗಾಂಧಿಯನ್ನು ನಮ್ಮವರಾಗಿಸದಿದ್ದರೆ ಜನರು ನಮ್ಮವರಾಗರು ಎಂಬ ಅರಿವು ಭಾಗವತರಿಗಿದೆ. ಅದಕ್ಕಾಗಿಯೇ ಗಾಂಧಿಯನ್ನು ಬಳಸಲು ಪ್ರಜ್ಞಾಪೂರ್ವಕವಾಗಿ ಪ್ರಯತ್ನಿಸಲಾಗಿದೆ. ಭಾಗವತರು ಹೇಳುವ ಹಿಂದುತ್ವವು ಸಾವರ್ಕರ್‌ಪ್ರಣೀತ ಹಿಂದುತ್ವಕ್ಕೆ ಮಾತ್ರವಲ್ಲ, ಅದನ್ನೂ ಮೀರಿಸುವ ಏಕಧರ್ಮೀಯ ಏಕಮತೀಯ ಸೂತ್ರದ ತತ್ವಕ್ಕೆ ಬದ್ಧ.

ಗಾಂಧಿಯ ಹಿಂದುತ್ವದಲ್ಲಿ ಹಿಂದೂಗಳು ಬಳಸುವ ಈಶ್ವರ ಪದವನ್ನು ಬಳಸಿದರೂ ಅದು ‘ಈಶ್ವರ ಅಲ್ಲಾ ತೇರೇನಾಮ್’ ಎಂದೇ ಇರುವುದು ಪ್ರಮುಖ ಅಂಶ. ಈಗಿನ ಹಿಂದುತ್ವದಲ್ಲಿ ಈಶ್ವರ ಎಂಬ ಪದದ ಆನಂತರವಿರುವ ಅಲ್ಲಾ ಎಂಬ ಪದಕ್ಕೆ ಮಸಿಹಚ್ಚಿ ಬೇರೇನೋ ಬಳಸಲಾಗುತ್ತಿದೆ. ಪುನರ್ನಾಮಕರಣ ಮಾಡುವ ಹೊಸ ಪರಿಪಾಠಕ್ಕೆ ಎಂದೋ ನಾಂದಿ ಹಾಡಲಾಗಿತ್ತು ಎಂಬುದನ್ನು ಯೋಚಿಸಿದರೆ ಈಗ ನಡೆಯುತ್ತಿರುವುದು ಅಚ್ಚರಿ ತರುವುದಿಲ್ಲ.

ಇಂದು ಅಬ್ಬರಿಸುತ್ತಿರುವ ಹಿಂದುತ್ವವು ಲಗ್ಗೆಯಿಡುವ ಮೊದಲೂ ಗಾಂಧಿಯ ಅಶಯಗಳನ್ನು ಕಾಂಗ್ರೆಸ್ ಆಡಳಿತವು ಅನುಸರಿಸಲಿಲ್ಲವೆಂಬುದು ವಿಷಾದದ ವಿಚಾರ. ಈಗ ಭಾಗವತರ ಮಾತಿಗೆ ಶಶಿ ತರೂರ್ ಹೊರತಾಗಿ ಇನ್ಯಾವ ಕಾಂಗ್ರೆಸಿನ ನಾಯಕರೂ ಪ್ರತಿಕ್ರಿಯಿಸಿಲ್ಲ!

ಈಗ ನಾಲ್ಕೈದು ದಶಕಗಳ ಹಿಂದೆ ಹಿಂದುತ್ವವಾದದ ಹಾದಿ ಬೇರೆಯಿತ್ತು. ದೇಶದ ಸ್ವಾತಂತ್ರ್ಯೋತ್ಸವ ದಿನವನ್ನು ಈ ಮಂದಿ ಒಪ್ಪುತ್ತಿರಲಿಲ್ಲ. ಆ ದಿನ ದೇಶದ ಎಲ್ಲೆಡೆ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದರೆ ಹಿಂದುತ್ವವಾದದ ಸಂಕೇತವಾದ ಭಗವಾಧ್ವಜವನ್ನು ಹಾರಿಸಲಾಗುತ್ತಿತ್ತು. ದೇಶವಿಭಜನೆಯಾದ ಕರಾಳದಿನವೆಂದು ತಿಳಿಹೇಳಲಾಗುತ್ತಿತ್ತು. ಜೊತೆಗೇ ಅಂದು ಮಹರ್ಷಿ ಅರವಿಂದ ಘೋಷ್ ಅವರ ಜನ್ಮದಿನವನ್ನು ಆಚರಿಸಲಾಗುತ್ತಿತ್ತು. ಆದರೆ 1975ರ ತುರ್ತುಸ್ಥಿತಿಯ ಆನಂತರದ ದಿನಗಳಲ್ಲಿ ರಾಷ್ಟ್ರದ ಪ್ರತಿಪಕ್ಷಗಳು ಜನತಾ ಪರಿವಾರವಾದಾಗ ಇಂತಹ ಪ್ರಬಲ ವಿರೋಧವು ಸ್ವಲ್ಪ ಹಿಂದೆ ಸರಿದು ಉದಾರವಾದವು ತಲೆಯೆತ್ತುತ್ತದೇನೋ ಎಂದು ಭಾವಿಸಲಾಗಿತ್ತು. ಆದರೆ ಸ್ವಲ್ಪಕಾಲ ಹೊಂದಾಣಿಕೆಯ ಮೊಟ್ಟೆಗೆ ಕಾವು ಕೊಡುತ್ತಲೇ ಬಂದು ಒಮ್ಮೆಗೇ ಅದು ವಿಷಕಾರುತ್ತ ಹೊರಬಂದಾಗಲೇ ಅದರ ಸಹಜಸ್ವರೂಪ ಅರ್ಥವಾದದ್ದು. ಸ್ವಲ್ಪಮಟ್ಟಿಗೆ ಕಾಂಗ್ರೆಸಿನ ಸಿದ್ಧಮಾದರಿಯ, ಹೊಸತನಕ್ಕೆ ಹೊಂದಿಕೊಳ್ಳದ, ವಂಶಪಾರಂಪರ್ಯದ ರಾಜಕಾರಣವೂ ಸೋಮಾರಿತನದ ಮತ್ತು ಅಲ್ಪಸಂಖ್ಯಾತರನ್ನು ತುಷ್ಟೀಕರಿಸುತ್ತದೆನ್ನುವ ಆಪಾದನೆಯೂ ಈ ಬೆಳವಣಿಗೆಗೆ ಸಹಕಾರಿಯಾಯಿತು.

ಯಾವ ಪಕ್ಷಕ್ಕೂ ನೈಜ ರಾಷ್ಟ್ರೀಯತೆ, ಜಾತ್ಯತೀತತೆ ಬೇಕಿಲ್ಲ. ಆದರೆ ಇದನ್ನು ಸಮರ್ಥವಾಗಿ ದುರ್ಬಳಕೆ ಮಾಡಿಕೊಂಡದ್ದು ಹಿಂದುತ್ವವಾದವೇ. ‘ಢೋಂಗಿ ಜಾತ್ಯತೀತತೆ’ ಎಂದು ಅಡ್ವಾಣಿಯವರು ಬಳಸಿದಾಗ ಅವರನ್ನು ಯಾರೂ ಸಮರ್ಥವಾಗಿ ಪ್ರಶ್ನಿಸಲೇ ಇಲ್ಲ. ಜನರ ಮುಂದೆ ಜಾತಿ ರಾಜಕಾರಣವನ್ನು ಮುಚ್ಚಿಟ್ಟು ಧರ್ಮ/ಮತ ರಾಜಕಾರಣವನ್ನು ಎತ್ತಿಹಿಡಿದು ಅಧಿಕಾರಕ್ಕೆ ಬರುವಲ್ಲಿ ಹಿಂದುತ್ವವಾದವು ಯಶಸ್ಸಾದದ್ದೇ ಹೀಗೆ. ಈಗ ಅದು ತನ್ನ ಭೀಷಣ ಸ್ವರೂಪವನ್ನು ಜನರ, ದೇಶದ ಮೇಲೆ ಹೇರಲಾರಂಭಿಸಿದೆ. ಇದನ್ನು ಪ್ರತಿರೋಧಿಸಬಲ್ಲ ಚಿಂತನೆಗಳಿದ್ದರೂ ಅವು ದೇಶವ್ಯಾಪಿ ಪ್ರಸಾರವಾಗದೆ ಉಳಿದಿವೆ. ಕಾಂಗ್ರೆಸಿನ ಮುಂದುವರಿದ ಭಾಗದಂತಿರುವ ಭಾರತೀಯ ಜನತಾ ಪಕ್ಷಕ್ಕೆ ಈ ಹಿಂದುತ್ವವಾದವು ಹೊರೆಯಾಗದಿರಲಾರದು.

ವಾಜಪೇಯಿಯವರಿದ್ದಾಗ ಈ ಅರಿವಿನಿಂದಲೇ ಉದಾರವಾದವನ್ನು, ಅಭಿವೃದ್ಧಿಯ ಮಂತ್ರವನ್ನು ಜಪಿಸಲಾಯಿತು. ಆದರೆ ಇಂತಹ ಅತಿಸಾರದಿಂದಲೇ ಮುಂಚೂಣಿಗೆ ಬಂದು ನಾಯಕನಾದ ಮೋದಿಗೆ ಹುಲಿ ಸವಾರಿ ಅನಿವಾರ್ಯ. ಒಂದು ದೇಶದ ಇತಿಹಾಸದ ಚರಿತ್ರೆಯಲ್ಲಿ ಒಂದು ದಶಕ ತೀರ ಚಿಕ್ಕ ಅವಧಿ. ಇಂದಲ್ಲ ನಾಳೆ ಹಿಂದುತ್ವವಾದವು ತನ್ನ ಭಾರಕ್ಕೆ ತಾನು ಕುಸಿಯುವುದು ಅನಿವಾರ್ಯ; ಅಥವಾ ಈ ದೇಶದ ವೈವಿಧ್ಯಮಯ ಸ್ವತಂತ್ರ ಜೀವನಶೈಲಿಯನ್ನು ಒಡೆಯಲಾಗದೆ ಜನರಿಂದ ದೂರವಾಗಬಹುದು. ಹಿಂದುತ್ವವಾದದ ಶಕ್ತಿವರ್ಧನೆಗಾಗಿ ಕೇಂದ್ರ ಸರಕಾರದ ಬೆಂಬಲದೊಂದಿಗೆ ಅನೇಕ ಭಾಜಪ ಸರಕಾರಗಳು ಲವ್‌ಜಿಹಾದ್ ವಿರುದ್ಧದ (ಆದರೆ ಈ ಹಣೆಪಟ್ಟಿಯಿಲ್ಲದ!) ಶಾಸನಗಳನ್ನು ತಂದಿವೆ. ವಿಶೇಷವೆಂದರೆ ಈ ಕಾಯ್ದೆಯಡಿ ದಾಖಲಾದ ಬಹುತೇಕ ಪ್ರಕರಣಗಳನ್ನು ಉಚ್ಚನ್ಯಾಯಾಲಯಗಳು ರದ್ದುಗೊಳಿಸುತ್ತಿವೆ ಮತ್ತು ಜಾತಿ-ಮತ-ಧರ್ಮಗಳ ಹಂಗಿಲ್ಲದೆ ತಮಗಿಷ್ಟಬಂದವರೊಂದಿಗೆ ಬದುಕುವುದು ಪ್ರತಿಯೊಬ್ಬ ಪ್ರಾಪ್ತವಯಸ್ಕರ ಮೂಲಭೂತ ಮತ್ತು ಬದುಕಿನ ಹಕ್ಕು ಎಂದು ತೀರ್ಪು ನೀಡುತ್ತಿವೆ. ಈ ಕಾನೂನಿನ ಸಾಂವಿಧಾನಿಕತೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ; ಎಂದಿನಂತೆಯೇ ಅಲ್ಲಿನ ಪ್ರಭೃತಿಗಳು ಯಾವ ತಡೆಯಾಜ್ಞೆಯನ್ನೂ ನೀಡದೆ ನೋಟಿಸ್ ಜಾರಿಮಾಡಿದ್ದಾರೆ.

ಆದ್ದರಿಂದ ಸದ್ಯಕ್ಕೆ ಅಮಾಯಕರು ಈ ಕಾನೂನಿನಡಿ ನರಳುವುದು ಅನಿವಾರ್ಯ. ಇಷ್ಟಾದರೂ ಪೊಲೀಸರು ಸರಕಾರದ ಕೂಲಿಯಾಳುಗಳಂತೆ, ಗುಲಾಮರಂತೆ ಕಂಡು ಮತ್ತೆಮತ್ತೆ ಅಂತಹ ಪ್ರಕರಣಗಳನ್ನು ದಾಖಲಿಸುತ್ತಿರುವುದು ರಾಕ್ಷಸೀಯ ಪ್ರವೃತ್ತಿಗೆ ಸಾಕ್ಷಿ. ಇದೂ ರಾಷ್ಟ್ರಭಕ್ತಿಯಾದರೆ ಅಂತಹ ಹಿಂದೂರಾಷ್ಟ್ರಕ್ಕೆ ಹಿಟ್ಲರನೇ ರಾಷ್ಟ್ರಪಿತನಾಗಬೇಕು; ಗಾಂಧಿಯಲ್ಲ. ಆರಂಭದಲ್ಲಿ ಉಲ್ಲೇಖಿಸಿದ ಭಾಗವತರ ಈ ಹೊಸ (ಅವರ ಪ್ರಕಾರ ಸನಾತನ-ಅಂದರೆ-ಹಳೆಯ) ವ್ಯಾಖ್ಯಾನವು ಅನೇಕ ಎಡರುತೊಡರುಗಳನ್ನು ಅವರಿಗೇ ಒಡ್ಡುತ್ತದೆ. ಈಗ ನಡೆಯುತ್ತಿರುವ ಅತ್ಯಾಚಾರಗಳ ಆರೋಪಿಗಳು ಹಿಂದೂಗಳಾಗಿದ್ದರೆ, ಅಷ್ಟೇ ಸಹಜವಾಗಿ ‘‘ರಾಷ್ಟ್ರಭಕ್ತರುಗಳು ಸಾಮೂಹಿಕ ಅತ್ಯಾಚಾರ ಮಾಡಿದರು’’ ಎಂದೇ ವರದಿ ಮಾಡಬೇಕಾಗುತ್ತದೆ. ಇಲ್ಲಿರುವವ ರೆಲ್ಲರೂ ಭಾರತೀಯರು ಎಂಬುದನ್ನು ಅಪಭ್ರಂಶಿಸಿ ಇಲ್ಲಿರುವವರೆಲ್ಲರೂ ಹಿಂದೂಗಳು ಎಂಬ ನಿರೂಪಣೆ, ಅರ್ಥವಿವರಣೆ ಜನರಿಗೆ ಪಥ್ಯವಾದಂತಿಲ್ಲ. ರಾಷ್ಟ್ರಭಕ್ತರು ಸಾಮೂಹಿಕ ಅತ್ಯಾಚಾರ, ಸಮೂಹದೊಂಬಿಗಳನ್ನು ನಡೆಸಿದರೆ ಅದನ್ನು ಸಮಾಜ ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಭಾಗವತರಲ್ಲಿ ಉತ್ತರವಿ(ರಲಿಕ್ಕಿ)ಲ್ಲ.

 ಗಾಂಧಿ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ಹೇಳಿದ ತತ್ವಗಳಿಗೂ ಇಂದು ಭಾಜಪ ಸರಕಾರ ಮತ್ತು ಅದರ ತಾತ್ವಿಕ ಗುರುವಾದ ಆರೆಸ್ಸೆಸ್ ಹೇಳುವ ಮತ್ತು ಹೇರಬಯಸುವ ಹಿಂದುತ್ವದ ತರ್ಕಗಳಿಗೂ ಪರಸ್ಪರ ಸಂಬಂಧವೇ ಇಲ್ಲ. ಗಾಂಧಿ ಹೇಳುವ ನಾಗರಿಕ ಮೌಲ್ಯಗಳು ಭಾಗವತರು ಹೇಳುವ ದ್ವೇಷಕಾರಕ ಹಿಂದುತ್ವವಲ್ಲ. ರಾಷ್ಟ್ರ/ದೇಶ ನಮ್ಮದು ಎಂಬುದಕ್ಕಾಗಿ ಅದನ್ನು ಪ್ರೀತಿಸುವುದು ರಾಷ್ಟ್ರಭಕ್ತಿ. ದೇಶ ನನ್ನದು, ನಮ್ಮದು ಎನ್ನುತ್ತ ದ್ವೇಷಿಸುವುದು, ಸಾಮಾಜಿಕ ಹಿತವನ್ನು ಕೆಡಿಸುವುದು ರಾಷ್ಟ್ರಭಕ್ತಿಯಲ್ಲ. ಗಾಂಧಿ ತೆರೆದ ಕಿಟಿಕಿ-ಬಾಗಿಲುಗಳನ್ನು ಬೋಧಿಸಿದರೆ, ಹಿಂದುತ್ವವಾದವು ಗೋಡೆಗಳನ್ನು ಕಟ್ಟುತ್ತಿದೆ. ಗಾಂಧಿ ಹಿಂದ್‌ಸ್ವರಾಜ್ ಕೃತಿಯ ಕುರಿತಾಗಿ ಹೇಳಿದ ಈ ಪುಸ್ತಕವನ್ನು ಎಳೆಯ ಮಗುವಿಗೂ ಕೊಡಬಹುದು. ಇದು ದ್ವೇಷದ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಹಿಂಸೆಗೆ ಬದಲು ಪ್ರೀತಿಯನ್ನು ಬೋಧಿಸುತ್ತದೆ. ಆತ್ಮತ್ಯಾಗವನ್ನು ಕಲಿಸುತ್ತದೆ. ಪಶುಬಲಕ್ಕೆ ವಿರುದ್ಧವಾಗಿ ಆತ್ಮಬಲವನ್ನು ನಿಲ್ಲಿಸುತ್ತದೆ ಎಂಬ ಮಾತುಗಳನ್ನು ಪ್ರಾಯಃ ಭಾಗವತರು ಓದಿದ್ದರೆ ಗಾಂಧಿಯನ್ನು ತಮ್ಮ ಸಂಘಟನೆಗೆ ದತ್ತು ಸ್ವೀಕರಿಸಲಾರರು ಮತ್ತು ಗಾಂಧಿಯ ಹಿಂದ್‌ಸ್ವರಾಜ್ ಮತ್ತು ತಮ್ಮ ಹಿಂದುತ್ವ ಪ್ರತ್ಯೇಕವಾದದ್ದು ಮಾತ್ರವಲ್ಲ ಪರಸ್ಪರ ಎಂದೂ ಒಂದಾಗದ್ದು ಎಂಬುದನ್ನು ಹೇಳಿ ಇತರ ಗಲ್ಲಿಗಳನ್ನು ಹುಡುಕಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)