varthabharthi


ಸಂಪಾದಕೀಯ

ಬಿಜೆಪಿಯೊಳಗೆ ವಂಶ ರಾಜಕಾರಣವಿಲ್ಲವೇ?

ವಾರ್ತಾ ಭಾರತಿ : 14 Jan, 2021

‘‘ವಂಶ ರಾಜಕಾರಣ ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರು’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಈ ಹೇಳಿಕೆ ಯಾರನ್ನು ಗುರಿಯಾಗಿಟ್ಟುಕೊಂಡು ನೀಡಲಾಗಿದೆ ಎನ್ನುವುದನ್ನು ಊಹಿಸುವುದು ಕಷ್ಟವಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ ವಿರೋಧಿ ನಿಲುವೊಂದು ದೇಶದಾದ್ಯಂತ ವಿಸ್ತರಿಸಿಕೊಳ್ಳುವುದಕ್ಕೆ ಕಾಂಗ್ರೆಸ್‌ನ ವಂಶಪಾರಂಪರ್ಯ ನಾಯಕತ್ವದ ಕುರಿತಂತೆ ಜನರಿಗಿದ್ದ ಅಸಹನೆಯೂ ಒಂದು ಕಾರಣವಾಗಿದೆ. ಈ ದೇಶದಲ್ಲಿ ಕಾಂಗ್ರೆಸೇತರ ಶಕ್ತಿಗಳು ಇದರ ವಿರುದ್ಧ ಹಲವು ಬಾರಿ ಒಂದಾದವು. ಅಂತಿಮವಾಗಿ ಈ ಹೋರಾಟದ ಲಾಭವನ್ನು ಬಿಜೆಪಿ ತನ್ನದಾಗಿಸಿಕೊಂಡಿತು. ಸದ್ಯಕ್ಕೆ ಈ ದೇಶವನ್ನು ಆಳುತ್ತಿರುವ ಪ್ರಧಾನಿ ಯಾವುದೇ ವಂಶ ರಾಜಕಾರಣದ ಮೂಲಕ ಬಂದಿರದೇ ಇದ್ದರೂ, ಪ್ರಜಾಪ್ರಭುತ್ವ ಇನ್ನಷ್ಟು ಅಪಾಯಕ್ಕೀಡಾಗಿದೆ.

ತುರ್ತು ಪರಿಸ್ಥಿತಿಯ ದಿನಗಳನ್ನು ಹೊರತು ಪಡಿಸಿ ಎಂದಿಗೂ ಈ ದೇಶದ ಜನರ ವಿರುದ್ಧ ನೇರವಾಗಿ ತನ್ನ ಅಧಿಕಾರವನ್ನು ಚಲಾಯಿಸಿಲ್ಲ. ಇಂದಿರಾಗಾಂಧಿಯ ಕಾಲದಲ್ಲಿ ಭೂಸುಧಾರಣೆ ಕಾಯ್ದೆ, ಬ್ಯಾಂಕ್ ರಾಷ್ಟ್ರೀಕರಣದಂತಹ ಜನಪರ ನೀತಿಗಳು ಜಾರಿಗೊಂಡವು. ಇಂದು ದೇಶದಲ್ಲಿ ಅಘೋಷಿರ್ತ ತುರ್ತುಪರಿಸ್ಥಿತಿಯಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಮೋದಿ ತಮ್ಮ ಅಧಿಕಾರಾವಧಿಯಲ್ಲಿ ಈ ದೇಶದ ಜನರಿಗೆ ಸಾಬೀತು ಪಡಿಸಿದ ಬಹುಮುಖ್ಯ ಅಂಶವೆಂದರೆ ‘‘ವಂಶ ರಾಜಕಾರಣಕ್ಕಿಂತ ಅಪಾಯಕಾರಿ, ವಂಶರಹಿತ ನಾಯಕನ ಆಡಳಿತ’’ ಎನ್ನುವುದು. ಆದುದರಿಂದಲೇ, ದೇಶವಿಂದು ಮೋದಿಯ ಅಚ್ಛೇದಿನ್‌ಗಿಂತ, ಕಾಂಗ್ರೆಸ್‌ನ ಬುರೇದಿನ್ ಚೆನ್ನಾಗಿತ್ತು ಎಂದು ಹೇಳತೊಡಗಿದೆ.

ಮೋದಿಯವರ ಅಭಿಪ್ರಾಯದಂತೆ, ಈ ದೇಶದಲ್ಲಿ ವಂಶ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಆದರೆ ಈ ಮಾತಿನ ಸತ್ಯಾಸತ್ಯತೆಯನ್ನು ಕೆದಕುತ್ತಾ ಹೋದರೆ, ಈ ದೇಶದ ರಾಜಕೀಯದಲ್ಲಿ ಸ್ವಜನ ಪಕ್ಷಪಾತ ಮತ್ತು ವಂಶಪರಂಪರೆಯ ವಿಷಯದಲ್ಲಿ ಬಿಜೆಪಿಯೂ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ ಎನ್ನುವುದು ಬಯಲಾಗುತ್ತದೆ. ಅಂಕಿಅಂಶಗಳನ್ನು ಪರಿಶೀಲಿಸಿದಾಗ 1999ರಿಂದ ಕಾಂಗ್ರೆಸ್‌ನ 36 ವಂಶಪಾರಂಪರ್ಯ ಹಿನ್ನೆಲೆಯ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದರೆ ಬಿಜೆಪಿಯ 31 ಸಂಸದರು ಆಯ್ಕೆಯಾಗಿದ್ದಾರೆ. 1999ರಲ್ಲಿ 13ನೇ ಲೋಕಸಭೆ ರಚನೆಯಾದಾಗ ಕಾಂಗ್ರೆಸ್‌ನ ಒಟ್ಟು ಸಂಸದರಲ್ಲಿ 8 ಶೇ. ಸಂಸದರು ವಂಶ ಪರಂಪರೆಯ ಅಥವಾ ಮಾಜಿ ಸಂಸದರ ಜೊತೆ ಮದುವೆಯಾದ ಹಿನ್ನೆಲೆ ಹೊಂದಿದ್ದರೆ, ಬಿಜೆಪಿಯ ಒಟ್ಟು ಸಂಸದರಲ್ಲಿ 6 ಶೇ. ಸಂಸದರು ಈ ವರ್ಗಕ್ಕೆ ಸೇರಿದವರಾಗಿದ್ದರು. ಇಲ್ಲಿ ವಂಶ ಪರಂಪರೆ ಎಂದರೆ ಮಾಜಿ ಸಂಸದರ ಪತಿ/ಪತ್ನಿ, ಮಕ್ಕಳು, ಬಂಧುಗಳು ಸೇರಿದ್ದಾರೆ. 2009ರಲ್ಲಿ ಕಾಂ್ರೆಸ್‌ನ ಒಟ್ಟು ಸಂಸದರಲ್ಲಿ 11ಶೇ., ಬಿಜೆಪಿಯ ಒಟ್ಟು ಸಂಸದರಲ್ಲಿ 12 ಶೇ. ಸಂಸದರು ವಂಶಪರಂಪರೆಯ ಅಥವಾ ಸಂಸದರ ಜೊತೆ ವೈವಾಹಿಕ ಹಿನ್ನೆಲೆಯಿದ್ದವರು. ಕೇವಲ ರಾಷ್ಟ್ರ ರಾಜಕಾರಣದಲ್ಲಿ ಮಾತ್ರ ನಾವು ವಂಶಪಾರಂಪರ್ಯವನ್ನು ಗುರುತಿಸುತ್ತಾ ಬಂದಿದ್ದೇವೆ. ಆದರೆ ಸಣ್ಣ ಮತ್ತು ಪ್ರಾದೇಶಿಕ ಪಕ್ಷಗಳಲ್ಲಿ ವಂಶಪಾರಂಪರ್ಯದ ಆಡಳಿತ ಹಾಗೂ ಅಧಿಕಾರ ಕೇಂದ್ರೀಕರಣ ಹೆಚ್ಚಿದೆ.

2009ರಲ್ಲಿ ಲೋಕಸಭೆಗೆ ಆಯ್ಕೆಯಾದ ಜಮ್ಮು-ಕಾಶ್ಮೀರ ನ್ಯಾಷನಲ್ ಕಾಂಗ್ರೆಸ್ ಪಕ್ಷದ 3 ಸಂಸದರಲ್ಲಿ ಇಬ್ಬರು ರಾಜವಂಶದವರು(ಫಾರೂಕ್ ಅಬ್ದುಲ್ಲಾ ಮತ್ತು ಮಿರ್ಝಾ ಮೆಹಬೂಬ ಬೇಗಮ್). ಅಂದರೆ ಪಕ್ಷದ 67ಶೇ. ಸಂಸದರು ರಾಜವಂಶದ ಹಿನ್ನೆಲೆಯವರು ಎಂದಾಯಿತು. ಇದೇ ಅವಧಿಯಲ್ಲಿ ರಾಷ್ಟ್ರೀಯ ಜನತಾದಳದ 40ಶೇ. ಮತ್ತು ಶಿರೋಮಣಿ ಅಕಾಲಿದಳದ 25ಶೇ. ಸಂಸದರು ರಾಜವಂಶದವರಾಗಿದ್ದರು.

ಚುನಾವಣೆ ಘೋಷಣೆಯಾದಾಗ ರಾಜವಂಶಕ್ಕೆ ಸಂಬಂಧಿಸಿದವರ ಹೆಸರೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಸಿಗಲು ಪ್ರಮುಖ ಕಾರಣವೆಂದರೆ ಇವರಲ್ಲಿರುವ ಅಪಾರ ಸಂಪತ್ತು. ಭಾರತದಲ್ಲಿ ಚುಣಾವಣೆಗೆ ಸ್ಪರ್ಧಿಸುವುದು ಅಪಾರ ವೆಚ್ಚದಾಯಕ ಕಾರ್ಯವಾಗಿದ್ದು 2014ರಲ್ಲಿ ಪ್ರಮುಖ ಅಭ್ಯರ್ಥಿಗಳು ಸುಮಾರು 1 ಕೋಟಿ ರೂ.ನಿಂದ 16 ಕೋಟಿ ರೂ.ವರೆಗೂ ಖರ್ಚು ಮಾಡಿದ್ದು, ಇದು ಕಾನೂನಿನಲ್ಲಿ ನಿಗದಿಗೊಳಿಸಿದ ವೆಚ್ಚದ ಪ್ರಮಾಣಕ್ಕಿಂತ ಸುಮಾರು 50 ಪಟ್ಟು ಹೆಚ್ಚು. 2014ರಲ್ಲಿ ಪಕ್ಷೇತರ ಸಂಸದರ ಸಂಖ್ಯೆ 3ಕ್ಕೆ ಇಳಿಯಲು (ಒಮ್ಮೆ ಗರಿಷ್ಠ 42 ಸದಸ್ಯರಿದ್ದರು) ಇದೂ ಒಂದು ಕಾರಣವಾಗಿದೆ. ದೇಶದಲ್ಲಿ ರಾಜವಂಶದ(ವಂಶಪಾರಂಪರ್ಯ) ಆಡಳಿತ ಇರಲು ಇದಕ್ಕಿಂತ ಬೇರೆ ಕಾರಣದ ಅಗತ್ಯವಿಲ್ಲ. ಉತ್ತರಪ್ರದೇಶದಲ್ಲಿ 1952ರಲ್ಲಿ ಸಂಸದರಾಗಿ ಆಯ್ಕೆಯಾದವರಲ್ಲಿ 51 ಮಂದಿ, ಬಿಹಾರದಲ್ಲಿ 27 ಮಂದಿ , ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನಲ್ಲಿ ತಲಾ 10 ಮಂದಿ ರಾಜವಂಶದ ಹಿನ್ನೆಲೆಯವರು.

ಇತ್ತೀಚೆಗಿನ 3 ಲೋಕಸಭಾ ಚುನಾವಣೆಗಳಲ್ಲಿ ವಂಶಪಾರಂಪರ್ಯ ರಾಜಕಾರಣದಲ್ಲೂ ಮೇಲ್ವರ್ಗದವರ ಕೈ ಮೇಲಾಗುತ್ತಿದ್ದು ದಲಿತರು ಅಥವಾ ಆದಿವಾಸಿಗಳ ಪ್ರಮಾಣ ಕಡಿಮೆಯಾಗಿದೆ ಎಂದು ನ್ಯೂಯಾರ್ಕ್ ವಿವಿಯ ಪ್ರೊಫೆಸರ್ ಕಾಂಚನ್ ಚಂದ್ರನ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 2014ರಲ್ಲಿ ಮೇಲ್ವರ್ಗದ 27.33ಶೇ. ಸಂಸದರು ವಂಶಪರಂಪರೆಯ ಹಿನ್ನೆಲೆಯುಳ್ಳವರಾಗಿದ್ದರೆ 8.4ಶೇ. ಪರಿಶಿಷ್ಟ ಜಾತಿ, 16.67ಶೇ. ಪರಿಶಿಷ್ಟ ವರ್ಗದವರು. ವಂಶಪರಂಪರೆಯ ಹಿನ್ನೆಲೆಯುಳ್ಳ, ಅತೀ ದೀರ್ಘಾವಧಿಗೆ ಆರಿಸಿ ಬಂದ ಸಂಸದರೆಂದರೆ ಸಿಪಿಐ ಮುಖಂಡರಾಗಿದ್ದ ಸೋಮನಾಥ ಚಟರ್ಜಿ. ಅವರು ಪ.ಬಂಗಾಲದಿಂದ 10 ಅವಧಿಗೆ ಸಂಸದರಾಗಿದ್ದರೆ ಅವರ ತಂದೆ ಎನ್‌ಸಿ ಚಟರ್ಜಿ 3 ಅವಧಿಗೆ ಸಂಸದರಾಗಿದ್ದರು. ಕಾಂಗ್ರೆಸ್ ಬಗ್ಗೆ ಸ್ವಜನ ಪಕ್ಷಪಾತದ ಆರೋಪಕ್ಕೆ ಗಾಂಧಿ ಕುಟುಂಬ ಕಾಂಗ್ರೆಸ್‌ನ ನೇತೃತ್ವ ವಹಿಸಿರುವುದು ಕಾರಣ ಹೊರತು, ಆ ಪಕ್ಷದೊಳಗೆ ವಂಶಪಾರಂಪರ್ಯದ ಪ್ರಕರಣ ಹೆಚ್ಚಿರುವುದಕ್ಕಲ್ಲ . ಸದ್ಯಕ್ಕೆ ದೇಶದ ಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಇಂದು ಯಾರು ಉತ್ತಮ ಆಡಳಿತ ನೀಡಿದ್ದಾರೆ ಅಥವಾ ನೀಡಿಲ್ಲ ಎನ್ನುವುದು ಚರ್ಚೆಯಾಗಬೇಕಾಗಿದೆ.

ಸರಕಾರ ಆ ಚರ್ಚೆಯನ್ನು ಬದಿಗೆ ತಳ್ಳುವುದಕ್ಕಾಗಿಯೇ ಪದೇ ಪದೇ ವಂಶ ಪಾರಂಪರ್ಯ ರಾಜಕಾರಣವನ್ನು ಮುನ್ನೆಲೆಗೆ ತರುತ್ತಿದೆ ಮತ್ತು ಮೋದಿ ತನ್ನ ಸಂಸಾರವನ್ನು ಬೀದಿಪಾಲಾಗಿಸಿರುವುದನ್ನೇ ಹೆಗ್ಗಳಿಕೆಯಾಗಿ ಪರಿವರ್ತಿಸಲು ಯತ್ನಿಸುತ್ತಿದೆ. ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಆಡಳಿತದ ಜೊತೆಗೆ ನರೇಂದ್ರ ಮೋದಿಯವರ ಆಡಳಿತವನ್ನು ಯಾವ ರೀತಿಯಲ್ಲೂ ಹೋಲಿಸುವುದಕ್ಕೆ ಸಾಧ್ಯವಾಗದಷ್ಟು ಕಳಪೆಯಾಗಿದೆ. ಯಾವುದೇ ರಾಜಕೀಯ ಮುತ್ಸದ್ದಿತನದ ಹಿನ್ನೆಲೆ ಮೋದಿಯವರಿಗೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಭಾವಿಸಲಾಗುತ್ತಿದೆ. ‘ವಂಶ ಪಾರಂಪರ್ಯ ರಾಜಕಾರಣದಿಂದ ಬಂದಿಲ್ಲ’ ಎನ್ನುವ ಜನರೊಳಗಿದ್ದ ಮೋದಿಯ ಕುರಿತ ಹೆಮ್ಮೆಯನ್ನು ಸ್ವತಃ ಮೋದಿಯವರೇ ಹುಸಿ ಮಾಡಿರುವಾಗ, ಕಾಂಗ್ರೆಸ್‌ನ ವಂಶಪಾರಂಪರ್ಯವನ್ನು ಮತ್ತೆ ಮತ್ತೆ ಟೀಕಿಸುವುದು ಕ್ಲೀಷೆಯಾಗಿ ಬಿಡುತ್ತದೆ. ಸದ್ಯಕ್ಕೆ ದೇಶವನ್ನಾಳುತ್ತಿರುವುದು ಗಾಂಧಿ ಕುಟುಂಬದ ಪ್ರಧಾನಿಯಲ್ಲ. ಹಾಗಿದ್ದರೂ ಪ್ರಜಾಪ್ರಭುತ್ವ ಯಾಕೆ ಅಪಾಯದಲ್ಲಿದೆ ಎನ್ನುವ ಪ್ರಶ್ನೆಗೆ ಮೋದಿಯವರು ಉತ್ತರಿಸಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)