varthabharthi


ಆರೋಗ್ಯ

ಹಕ್ಕಿಜ್ವರ ಪ್ರಕರಣಗಳು ಹೆಚ್ಚುತ್ತಿದ್ದು ನಾವು ಈ ಬಗ್ಗೆ ಕಳವಳ ಪಡಬೇಕೇ?

ವಾರ್ತಾ ಭಾರತಿ : 15 Jan, 2021

2021ರ ಹೊಸವರ್ಷವು ಭಾರತದ ಏಳು ರಾಜ್ಯಗಳಲ್ಲಿ ಹಕ್ಕಿಜ್ವರದಿಂದ ಪಕ್ಷಿಗಳು ಸಾಯುತ್ತಿರುವ ಸುದ್ದಿಯನ್ನು ಹೊತ್ತುಕೊಂಡೇ ಬಂದಿದೆ. ಈ ಹಿಂದೆಯೂ ದೇಶದಲ್ಲಿ ಮನುಷ್ಯರಲ್ಲಿ ಹಕ್ಕಿಜ್ವರದ ಪ್ರಕರಣಗಳು ಕಂಡು ಬಂದಿರುವುದರಿಂದ ಈಗ ಮತ್ತೆ ಹಾವಳಿಯಿಟ್ಟಿರುವ ಹಕ್ಕಿಜ್ವರದ ಬಗ್ಗೆ ನಾವು ಚಿಂತಿಸಬೇಕೇ? ಏನಿದು ಹಕ್ಕಿಜ್ವರ ಮತ್ತು ಅದನ್ನು ತಡೆಯುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ.

ಏವಿಯನ್ ಫ್ಲೂ ಎಂದೂ ಕರೆಯಲಾಗುವ ಹಕ್ಕಿಜ್ವರವು ಎ(ಎಚ್7ಎನ್9),ಎ(ಎಚ್5ಎನ್8)ನಂತಹ ಇನ್‌ಫ್ಲುಯೆಂಝಾ ಎ ವೈರಸ್‌ಗಳಿಂದಾಗಿ ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಎ(ಎಚ್5ಎನ್1) ಇಂತಹ ಹೆಚ್ಚು ಸಾಮಾನ್ಯ ವೈರಸ್ ಆಗಿದೆ. ಈ ವೈರಸ್‌ಗಳು ಸಾಮಾನ್ಯವಾಗಿ ಪಕ್ಷಿಗಳಲ್ಲಿ ಮಾತ್ರ ಸೋಂಕನ್ನುಂಟು ಮಾಡುತ್ತವೆಯಾದರೂ ಇತರ ಪ್ರಾಣಿಗಳು ಮತ್ತು ಮನುಷ್ಯರಿಗೂ ಹರಡಬಲ್ಲವು. ವನ್ಯ ಹಕ್ಕಿಗಳು ಈ ವೈರಸ್‌ಗಳ ನೈಸರ್ಗಿಕ ವಾಹಕಗಳಾಗಿವೆ. ರೋಗವನ್ನುಂಟು ಮಾಡುವ ವೈರಸ್ ತಳಿಯ ಸಾಮರ್ಥ್ಯವನ್ನು ಆಧರಿಸಿ ಪಕ್ಷಿಗಳು ತೀವ್ರ ರೋಗಕ್ಕೆ ತುತ್ತಾಗಬಹುದು ಅಥವಾ ಯಾವುದೇ ಅಸ್ವಸ್ಥತೆಗೆ ಗುರಿಯಾಗದೆ ಇರಲೂಬಹುದು.

ಹಕ್ಕಿಗಳಲ್ಲಿ ವೈರಸ್ ಪ್ರಸಾರ

ಸೋಂಕಿತ ವನ್ಯ ಪಕ್ಷಿಗಳು ಇತರ ಸ್ಥಳಗಳಿಗೆ ವಲಸೆ ಹೋದಾಗ ಮತ್ತು ಮಲ,ಮೂಗಿನ ಸ್ರಾವ ,ಜೊಲ್ಲು ಇತ್ಯಾದಿಗಳ ಮೂಲಕ ವೈರಸ್‌ನ್ನು ಹೊರಗೆ ಹಾಕಿದಾಗ ಆ ಪ್ರದೇಶಗಳಲ್ಲಿಯ ಆರೋಗ್ಯಯುತ ಪಕ್ಷಿಗಳಿಗೆ ಹಕ್ಕಿಜ್ವರವು ಹರಡುತ್ತದೆ. ಆರೋಗ್ಯಯುತ ಪಕ್ಷಿಗಳು ಇವುಗಳ ಅಥವಾ ಸೋಂಕಿತ ಮೇಲ್ಮೈಗಳು/ವಾತಾವರಣಗಳ ನೇರ ಸಂಪರ್ಕಕ್ಕೆ ಬಂದಾಗ ಅವುಗಳಲ್ಲಿಯೂ ಗಂಭೀರ ಸೋಂಕು ಉಂಟಾಗುತ್ತದೆ ಮತ್ತು ಈ ಸೋಂಕು ಅಂತಿಮವಾಗಿ ಅವುಗಳನ್ನು ಕೊಲ್ಲುತ್ತದೆ.

ಮನುಷ್ಯರಲ್ಲಿ ಹಕ್ಕಿಜ್ವರ-ಒಂದು ಗಂಭೀರ ಕಳವಳ

ಹಕ್ಕಿಜ್ವರದ ವೈರಸ್‌ಗಳು ಸಾಮಾನ್ಯವಾಗಿ ಮನುಷ್ಯರಲ್ಲಿ ಸೋಂಕನ್ನುಂಟು ಮಾಡುವುದಿಲ್ಲ,ಆದರೆ ಸೋಂಕನ್ನುಂಟು ಮಾಡಿದರೆ ವ್ಯಕ್ತಿಯಲ್ಲಿ ತೀವ್ರ ಕಾಯಿಲೆಯು ಕಾಣಿಸಿಕೊಳ್ಳಬಹುದು. ಹಕ್ಕಿಜ್ವರದಿಂದ ಮನುಷ್ಯರ ಮರಣದರವು ಶೇ.60ರಷ್ಟು ಹೆಚ್ಚಿನ ದರದಲ್ಲಿದೆ ಎನ್ನುವುದು ನಿಜಕ್ಕೂ ದಿಗಿಲು ಮೂಡಿಸುತ್ತದೆ. ಪೌಲ್ಟ್ರಿಗಳಲ್ಲಿ ಕೆಲಸ ಮಾಡುತ್ತಿರುವವರು ಅಥವಾ ಮನುಷ್ಯರು ಮತ್ತು ಪಕ್ಷಿಗಳು ನಿಕಟ ಸಾಮೀಪ್ಯ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವವರು ಹಕ್ಕಿಜ್ವರಕ್ಕೆ ತುತ್ತಾಗುವ ಅಪಾಯವು ಹೆಚ್ಚಾಗಿದೆ. ಎಚ್5ಎನ್1 ಹಕ್ಕಿಜ್ವರವು ಮನುಷ್ಯರಿಂದ ಮನುಷ್ಯರಿಗೆ ಸುಲಭವಾಗಿ ಹರಡುವುದಿಲ್ಲ. ಮನುಷ್ಯರಿಂದ ಮನುಷ್ಯರಿಗೆ ಹರಡುವ ಕೆಲವೇ ಪ್ರಕರಣಗಳು ಅತ್ಯಂತ ನಿಕಟ ಸಂಪರ್ಕ ಹೊಂದಿರುವವರಲ್ಲಿ ಕಂಡು ಬರಬಹುದು.

ಸೋಂಕಿತ ಮೃತ ಅಥವಾ ಜೀವಂತ ಪಕ್ಷಿಗಳು,ಸೋಂಕಿತ ಪಕ್ಷಿಗಳ ಮಲ,ಸೋಂಕಿತ ಹಕ್ಕಿಗಳಿಂದ ಮಲಿನಗೊಂಡ ಮೇಲ್ಮೈಗಳು ಅಥವಾ ಪರಿಸರಗಳು ಹಾಗೂ ಕಸಾಯಿ ಮಾಡುವಾಗ ಅಥವಾ ಗರಿಗಳನ್ನು ತೆಗೆಯುವಾಗ ಸೋಂಕಿತ ಪಕ್ಷಿಗಳ ನೇರ ಸಂಪರ್ಕವು ಮನುಷ್ಯರಲ್ಲಿ ಹಕ್ಕಿಜ್ವರದ ಸೋಂಕು ಹರಡಲು ಮುಖ್ಯಕಾರಣವಾಗಿದೆ.

ನಾವೇಕೆ ಎಚ್ಚರಿಕೆ ವಹಿಸಬೇಕು?

ಮನುಷ್ಯರಲ್ಲಿ ಹಕ್ಕಿಜ್ವರದ ಪ್ರಕರಣಗಳು ಅಪರೂಪವಾಗಿದ್ದರೂ ಅಸಾಧ್ಯವೇನಲ್ಲ. ವೈರಸ್ ಪ್ರತಿಸಲವೂ ಮನುಷ್ಯರಲ್ಲಿ ಸೋಂಕನ್ನುಂಟು ಮಾಡಿದಾಗ ಅದು ಇನ್ನಷ್ಟು ಜನರನ್ನು ಸೋಂಕಿತರನ್ನಾಗಿಸುವ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮತ್ತು ಸೋಂಕನ್ನು ಸಾಂಕ್ರಾಮಿಕಗೊಳಿಸುವ ಅವಕಾಶವನ್ನು ಪಡೆದುಕೊಳ್ಳುತ್ತದೆ. ಹೀಗಾಗಿ ಹಕ್ಕಿಜ್ವರದ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗುತ್ತದೆ.

 ಇದಲ್ಲದೆ ವೈರಸ್ ಎರಡು ವಿಭಿನ್ನ ವರ್ಗಗಳ ಜೀವಿಗಳಲ್ಲಿ ಎಷ್ಟು ಮಾರಣಾಂತಿಕವಾಗಬಹುದು ಎನ್ನುವುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಉದಾಹರಣೆಗೆ 2013ರಲ್ಲಿ ಹಕ್ಕಿಜ್ವರ ಸಾಂಕ್ರಾಮಿಕವುಂಟಾದಾಗ ಅದು ಪಕ್ಷಿಗಳಲ್ಲಿ ಯಾವುದೇ ಲಕ್ಷಣಗಳನ್ನು ಪ್ರಕಟಿಸಿರಲಿಲ್ಲ ಮತ್ತು ಮನುಷ್ಯರ ಮೇಲೆ ದಾಳಿಯಿಟ್ಟಾಗ ತೀವ್ರ ರೋಗಕ್ಕೆ ಕಾರಣವಾಗಿತ್ತು ಮತ್ತು ಹಲವು ಪ್ರಕರಣಗಳಲ್ಲಿ ಮಾರಣಾಂತಿಕವೂ ಆಗಿತ್ತು.

ಮನುಷ್ಯರಲ್ಲಿ ಹಕ್ಕಿಜ್ವರದ ಲಕ್ಷಣಗಳು

ಮನುಷ್ಯರಲ್ಲಿ ಹಕ್ಕಿಜ್ವರವು ಉಂಟಾಗುವಾಗ ಅದು ಹೊಟ್ಟೆನೋವು,ಎದೆನೋವು ಮತ್ತು ಅತಿಸಾರವನ್ನುಂಟು ಮಾಡಬಹುದು. ಕ್ರಮೇಣ ಅದು ತೀವ್ರ ಉಸಿರಾಟ ಕಾಯಲೆಯನ್ನುಂಟು ಮಾಡುತ್ತದೆ ಹಾಗೂ ತೀವ್ರ ಜ್ವರ,ದೇಹಾಲಸ್ಯ, ಕೆಮ್ಮು,ಸ್ನಾಯುನೋವುಗಳು,ನ್ಯುಮೋನಿಯಾ,ಅಪರೂಪಕ್ಕೆ ಬದಲಾದ ಮನಃಸ್ಥಿತಿ ಮತ್ತು ಸೆಳವುಗಳಂತಹ ನರಶಾಸ್ತ್ರೀಯ ಬದಲಾವಣೆಗಳಿಗೆ ಕಾರಣವಾಗುತ್ತದೆ.

ಹಕ್ಕಿಜ್ವರಕ್ಕೆ ಚಿಕಿತ್ಸೆ

ಮನುಷ್ಯರಲ್ಲಿ ಎಚ್5ಎನ್1 ವೈರಸ್ ಸೋಂಕು ತೀವ್ರ ಕಾಯಿಲೆಯನ್ನುಂಟು ಮಾಡುವ ಹೆಚ್ಚಿನ ಸಾಧ್ಯತೆಗಳಿದ್ದು ತಕ್ಷಣ ಆಸ್ಪತ್ರೆಗೆ ದಾಖಲಾಗಿ ತೀವ್ರ ವೈದ್ಯಕೀಯ ನಿಗಾದಲ್ಲಿರುವುದು ಅಗತ್ಯವಾಗುತ್ತದೆ. ಆದರೆ ಹಲವಾರು ವೈರಸ್ ನಿರೋಧಕ ಔಷಧಿಗಳು ಸಾವಿನ ಅಪಾಯವನ್ನು ತಗ್ಗಿಸುವಲ್ಲಿ ಮತ್ತು ಚೇತರಿಕೆಯ ಅವಕಾಶಗಳನ್ನು ಹೆಚ್ಚಿಸಲು ನೆರವಾಗುತ್ತವೆ ಎನ್ನುವುದು ಕಂಡು ಬಂದಿದೆ.

ಎಚ್5ಎನ್1 ವೈರಸ್ ಅಥವಾ ಹಕ್ಕಿಜ್ವರಕ್ಕೆ ಲಸಿಕೆ ಇದೆಯೇ?

ಸಾಂಕ್ರಾಮಿಕದ ವಿರುದ್ಧ ಸನ್ನದ್ಧತೆ ನಿಟ್ಟಿನಲ್ಲಿ ಎಚ್5ಎನ್1 ಇನ್‌ಫ್ಲುಯೆಂಜಾವನ್ನು ತಡೆಯಲು ಲಸಿಕೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ನಿಷ್ಕ್ರಿಯಗೊಳಿಸಲಾದ ಇನ್‌ಫ್ಲುಯೆಂಝಾ ಲಸಿಕೆಯು 18ರಿಂದ 64ವರ್ಷದವರೆಗಿನ, ಲಸಿಕೆಯು ಒಳಗೊಂಡಿರುವ ಎಚ್5ಎನ್1 ವೈರಸ್ ಉಪ ಮಾದರಿಗೆ ಒಡ್ಡಿಕೊಳ್ಳುವ ಹೆಚ್ಚಿನ ಅಪಾಯವನ್ನು ಹೊಂದಿರುವರಿಗಾಗಿ ಬಳಕೆಯಾಗುತ್ತದೆ. ಎಚ್5ಎನ್1 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಸೋಂಕನ್ನು ಹರಡುವ ಸಾಮರ್ಥ್ಯ ಪಡೆದುಕೊಂಡು ಸಾಂಕ್ರಾಮಿಕವನ್ನುಂಟು ಮಾಡುವ ಅಪಾಯವಿದ್ದಾಗ ಮಾತ್ರ ಈ ಲಸಿಕೆಯು ಬಳಕೆಗೆ ಲಭ್ಯವಾಗುತ್ತದೆ. ಆದ್ದರಿಂದ ಈ ಲಸಿಕೆಯು ಸದ್ಯಕ್ಕೆ ವ್ಯಾಪಕ ಬಳಕೆಗೆ ಲಭ್ಯವಿಲ್ಲ.

ಹೀಗೆ ಮಾಡಿದರೆ ಹಕ್ಕಿಜ್ವರ ನಮಗೆ ಹರಡುವುದಿಲ್ಲ

ಮಾಂಸ ಮತ್ತು ಮೊಟ್ಟೆಗಳನ್ನು ಕನಿಷ್ಠ ಅರ್ಧ ಗಂಟೆ ಕಾಲ 700 ಡಿ.ಸೆ. ಅಥವಾ ಹೆಚ್ಚಿನ ಉಷ್ಣತೆಯಲ್ಲಿ ಬೇಯಿಸಬೇಕು.

 ಮೊಟ್ಟೆಗಳಲ್ಲಿ ನೀರಿನ ಅಂಶವಿಲ್ಲ ಮತ್ತು ಸರಿಯಾಗಿ ಬೆಂದಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಸೋಂಕಿತ ಅಥವಾ ಶಂಕಿತ ಪಕ್ಷಿಗಳು ಮತ್ತು ಪ್ರಾಣಿಗಳ, ವಿಶೇಷವಾಗಿ ಅವುಗಳ ಮಲ,ಜೊಲ್ಲು ಮತ್ತು ಇತರ ಸ್ರಾವಗಳ ನಿಕಟ ಸಂಪರ್ಕವನ್ನು ನಿವಾರಿಸಬೇಕು.

ಹಸಿ ಮಾಂಸವನ್ನು ಮತ್ತು ಹಸಿಯಾಗಿ ತಿನ್ನುವ ಇತರ ಆಹಾರವಸ್ತುಗಳನ್ನು ಪ್ರತ್ಯೇಕವಾಗಿ ಇರಿಸಬೇಕು.

ಆಗಾಗ್ಗೆ,ವಿಶೇಷವಾಗಿ ಕೋಳಿ ಮತ್ತು ಮೊಟ್ಟೆಗಳನ್ನು ಮುಟ್ಟಿದ ಬಳಿಕ ಸಾಬೂನು ಮತ್ತು ನೀರಿನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುತ್ತಿರಬೇಕು.

ಜೀವಂತ ಪಕ್ಷಿಗಳ ಮಾರುಕಟ್ಟೆ ಮತ್ತು ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳನ್ನು,ವಿಶೇಷವಾಗಿ ಹಕ್ಕಿಜ್ವರ ಪೀಡಿತ ಪ್ರದೇಶಗಳಿಗೆ ಭೇಟಿಯನ್ನು ನಿವಾರಿಸಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)