varthabharthi


ನಿಮ್ಮ ಅಂಕಣ

ಹೀಗೊಂದು ಅನಿಸಿಕೆ

ಲಸಿಕೆ ವಿತರಣೆಯ ಅವಸರ ಅನುಮಾನ ಹುಟ್ಟಿಸುತ್ತಿದೆ

ವಾರ್ತಾ ಭಾರತಿ : 15 Jan, 2021
ಕೆ. ಎಸ್. ಮಂಗಳೂರು

 ನಮ್ಮ ದೇಶದಲ್ಲಿ ಕೊರೋನ ನಿರೋಧಕ ಲಸಿಕೆ ವಿತರಿಸಲು ನಡೆಯುತ್ತಿರುವ ಅವಸರ ನೋಡಿದರೆ, ಈ ಲಸಿಕೆ ಬಗ್ಗೆ ಬಹಳ ಅನುಮಾನ ಹುಟ್ಟುತ್ತಿದೆ. ಯಾಕೆಂದರೆ ಕೊರೋನ ಸೋಂಕು ಈ ದಿನಗಳಲ್ಲಿ ತೀವ್ರವಾಗಿ ಕುಸಿದಿದೆ. ಅಂಗಡಿಗಳು, ಮಾಲ್‌ಗಳು, ಥಿಯೆಟರ್‌ಗಳು, ಶಾಲಾ-ಕಾಲೇಜುಗಳು, ವಾಹನ ಸಂಚಾರ ಎಲ್ಲವೂ ಮುಕ್ತಗೊಂಡು, ಜನರು ಮೊದಲಿನಂತೆ ಜೀವನ ನಡೆಸುತ್ತಿದ್ದಾರೆ. ಮದುವೆಗಳಲ್ಲಿ, ಜಾತ್ರೆಗಳಲ್ಲಿ, ಸಮಾರಂಭಗಳಲ್ಲಿ ಜನರು ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಸಂಪರ್ಕಗಳು ಹೆಚ್ಚುತ್ತಿರುವಾಗಲೇ ಕೊರೋನ ಇಳಿಮುಖವಾಗುತ್ತಿದೆ. ವಾಸ್ತವ ಹೀಗಿರುವಾಗ ಸರಕಾರಕ್ಕೆ ಮತ್ತು ಲಸಿಕೆ ತಯಾರಿಕಾ ಕಂಪೆನಿಗಳಿಗೆ ವ್ಯಾಕ್ಸಿನ್ ವಿತರಿಸುವ ಅವಸರವೇಕೋ ಅರ್ಥವಾಗುವುದಿಲ್ಲ.

ಸರಿಯಾಗಿ ಪರಾಂಬರಿಸಿ ನೋಡಿದರೆ, ಇಂದು ಕೊರೋನಕ್ಕಾಗಿ ಆತಂಕಪಡಬೇಕಾಗಿಯೇ ಇಲ್ಲ. ಸುರಕ್ಷಿತ ಅಂತರ ಪಾಲನೆ ಮಾಡದಿದ್ದರೂ, ಮಾಸ್ಕುಗಳನ್ನು ಸರಿಯಾಗಿ ಮೂಗು, ಬಾಯಿಗಳಿಗೆ ಮುಚ್ಚದಿದ್ದರೂ, ಆಗಾಗ ಕೈ ತೊಳೆಯುವ ಅಭ್ಯಾಸ ಕಡಿಮೆಯಾಗಿದ್ದರೂ, ಸ್ಯಾನಿಟೈಸರ್ ಮೂಲೆ ಸೇರಿದ್ದರೂ, ಬಸ್ಸುಗಳಲ್ಲಿ ಒತ್ತೊತ್ತಾಗಿ ನಿಂತು ಪ್ರಯಾಣಿಸಿದರೂ, ಕೊರೋನ ಅಂಟಿಕೊಂಡ ಲಕ್ಷಣವೂ ಇಲ್ಲ; ಆಸುಪಾಸಿನಲ್ಲೆಲ್ಲೂ ಕೊರೋನ ಪೀಡಿತರ ಸುಳಿವೂ ಇಲ್ಲ. ಅಂದರೆ ಕೊರೋನ ಕಾರಣದಿಂದ ಹೆದರಬೇಕಾದ ಯಾವ ಅವಶ್ಯಕತೆಯೂ ಕಾಣುವುದಿಲ್ಲ.

ದಿನವೊಂದಕ್ಕೆ ಸುಮಾರು ಒಂದು ಲಕ್ಷದಷ್ಟು ಮಂದಿಗೆ ಸೋಂಕು ತಗಲುತ್ತಿದ್ದ ದಿನಗಳು ಈಗ ಇಲ್ಲ. ಈಗ ನಮ್ಮ ದೇಶದಲ್ಲಿ ಸೋಂಕಿಗೆ ತುತ್ತಾಗುವವರ ಸಂಖ್ಯೆ 16,000 ಕ್ಕಿಂತಲೂ ಕಡಿಮೆ. ಪ್ರತಿದಿನ ಸೋಂಕಿಗೆ ಒಳಗಾಗುವವರ ಪ್ರಮಾಣ ಕೇವಲ ಶೇ. 0.2, ಅಂದರೆ ಸಾವಿರದಲ್ಲಿ ಕೇವಲ ಇಬ್ಬರಿಗೆ. ಒಂದು ಕೋಟಿ ಐದು ಲಕ್ಷ ಸೋಂಕಿತರಲ್ಲಿ ಒಂದು ಕೋಟಿ ಒಂದು ಲಕ್ಷ ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಪ್ರಮಾಣ ಶೇ. 1.5ಕ್ಕಿಂತ ಕಡಿಮೆ ಮತ್ತು ಸಾವು ಸಂಭವಿಸಿರುವುದು ಹೆಚ್ಚಾಗಿ ಗಂಭೀರ ಕಾಯಿಲೆಗಳಲ್ಲಿ ನರಳುತ್ತಿರುವವರಿಗೆ ಮಾತ್ರ.

ಹಾಗಾದರೆ ಕೊರೋನ ವೈರಸ್‌ಗಳೆಲ್ಲ ಮಾಯವಾಗು ತ್ತಿವೆಯೇ? ಅಲ್ಲವೇ ಅಲ್ಲ. ನಿಜ ಸಂಗತಿ ಏನೆಂದರೆ, ಕೊರೋನ ಸೋಂಕು ಈಗಾಗಲೇ ಹೆಚ್ಚು ಕಡಿಮೆ ದೇಶದ ಮುಕ್ಕಾಲು ಪಾಲು ಜನರಿಗೆ ತಗಲಿದೆ. ಇದರಲ್ಲಿ ಹೆಚ್ಚಿನವರಲ್ಲಿ ಯಾವ ರೋಗಲಕ್ಷಣಗಳೂ ಕಾಣಿಸದೆ ಅವರಿಗದು ಅರಿವಿಗೇ ಬರಲಿಲ್ಲ. ಕೆಲವರಿಗೆ ಸಣ್ಣ ಪುಟ್ಟ ನೆಗಡಿ, ಕೆಮ್ಮು ಬಂದಿದ್ದು, ಇದು ಕೊರೋನ ಆಗಿರಲಿಕ್ಕಿಲ್ಲ ಎಂದು ತಮಗೆ ತಾವೇ ಸಮಾಧಾನಪಡಿಸಿಕೊಂಡೋ ಅಥವಾ ಪರೀಕ್ಷೆ ಮಾಡಿಸಿದಾಗ ಎಲ್ಲಾದರೂ ಪಾಸಿಟಿವ್ ವರದಿಯಾಗಿಬಿಟ್ಟರೆ, ಆ ರಗಳೆ ಯಾಕೆ ಎಂದು ಪರೀಕ್ಷೆ ಮಾಡಿಸಿಕೊಳ್ಳದೆಯೇ ದಿನ ಕಳೆದು ಇದೀಗ ಸ್ವಸ್ಥರಾಗಿಬಿಟ್ಟಿದ್ದಾರೆ. ಈ ಎಲ್ಲರಿಗೂ ಕೊರೋನ ಬಂದು ಹೋದ ಕಾರಣ ಸೋಂಕು ನಿರೋಧಕ ಗುಣ ಪ್ರಾಪ್ತವಾಗಿರುವುದರಿಂದಲೇ, ಈಗ ಯಾವ ಜನಜಂಗುಳಿ ಮಧ್ಯೆ ನುಸುಳಿದರೂ ಕೊರೋನ ಬಾಧಿಸುತ್ತಿಲ್ಲ. ಅಂದರೆ ಕೊರೋನ ಹಾವಳಿ ಕಡಿಮೆಯಾದದ್ದಲ್ಲ, ಬದಲಿಗೆ ಹೆಚ್ಚಿನ ಮಂದಿಗೆ ಕೊರೋನವನ್ನು ನಿರೋಧಿಸುವ ಶಕ್ತಿ ಶರೀರದಲ್ಲಿ ಪ್ರಾಪ್ತವಾಗಿರುವುದು.

ಕೊರೋನ ಸೋಂಕು ದಿಢೀರ್ ಆಗಿ ಇಳಿಮುಖವಾಗುತ್ತಿರುವುದನ್ನು ಕಂಡಾಗ ಗಾಬರಿಗೊಂಡವರು ಲಸಿಕೆ ತಯಾರಿಸುವ ಸಂಸ್ಥೆಗಳು. ಲಸಿಕೆಯ ಅವಶ್ಯಕತೆ ಬೀಳದ ದಿನಗಳು ಹತ್ತಿರದಲ್ಲೇ ಇರುವುದನ್ನು ಮನಗಂಡ ಈ ಸಂಸ್ಥೆಗಳು ಅತ್ಯಾತುರದಿಂದ ಲಸಿಕೆ ವಿತರಣೆಗೆ ಹೊರಟಿರುವುದು ಇದೇ ಕಾರಣಕ್ಕೆ ಅಲ್ಲವೇ? ಅಲ್ಲದೆ ಹೋದರೆ ತಾವು ತಯಾರಿಸಿದ ಲಸಿಕೆಯನ್ನು ಸರಿಯಾಗಿ ಪರೀಕ್ಷೆಗಳಿಗೆ ಗುರಿಪಡಿಸಿ ಫಲಿತಾಂಶ ಬರುವ ಮೊದಲೇ ಅದರ ಉತ್ಪಾದನೆಯಲ್ಲಿ ತೊಡಗಿ ಜನರಿಗೆ ಚುಚ್ಚಲು ದಾಂಗುಡಿಯಿಡುವುದೇಕೆ?

ಒಂದು ಲಸಿಕೆ ತಯಾರಾದಾಗ ಮೊದಲಿಗೆ ಅದನ್ನು ಕೆಲವು ನೂರು ಮಂದಿಯ ಮೇಲೆ ಪ್ರಯೋಗಿಸಿ, ಪರಿಣಾಮಗಳನ್ನು ಅಧ್ಯಯನ ಮಾಡಿ, ಬಳಿಕ ಎರಡನೇ ಹಂತದಲ್ಲಿ ಕೆಲವು ಸಾವಿರ ಮಂದಿಯ ಮೇಲೆ ಪ್ರಯೋಗಿಸಿ ಪರಿಣಾಮ ತಿಳಿದು ಮೂರನೇ ಹಂತದಲ್ಲಿ ಅದಕ್ಕಿಂತ ದೊಡ್ಡ ಸಂಖ್ಯೆಯ ಜನರ ಮೇಲೆ ಪ್ರಯೋಗಿಸಿ ಫಲಿತಾಂಶಗಳ ಅಧ್ಯಯನ ಮಾಡಿ ಅದು ಯೋಗ್ಯವೆಂದು ಸಿದ್ಧವಾದ ಬಳಿಕವೇ ಅದರ ಬೃಹತ್ ಪ್ರಮಾಣದ ಉತ್ಪಾದನೆ ಮತ್ತು ವಿತರಣೆ ನಡೆಯಬೇಕು. ಆದರೆ ಈಗ ಸಿದ್ಧಗೊಂಡಿರುವ ಲಸಿಕೆಗಳ ಮೇಲೆ ನಡೆದ ಮೊದಲೆರಡು ಹಂತದ ಪ್ರಯೋಗಗಳ ಫಲಿತಾಂಶಗಳ ವರದಿ ಲಭ್ಯವಿಲ್ಲ. ಮೂರನೇ ಹಂತವೇ ಪೂರ್ಣಗೊಂಡಿಲ್ಲ. ಮೂರು ಹಂತಗಳ ಪ್ರಯೋಗದ ಕಾರಣ ಒಂದು ಲಸಿಕೆ ತಯಾರಾಗಲು ಕನಿಷ್ಠ ಎರಡು ವರ್ಷ ತಗಲುತ್ತದೆ. ಆದರೆ ಕೊರೋನ ವ್ಯಾಕ್ಷಿನ್ ಕೇವಲ 9 ತಿಂಗಳಿಗೂ ಕಡಿಮೆ ಅವಧಿಯಲ್ಲಿ ತಯಾರಾಗುತ್ತಿರುವಂತಿದೆ.

ಜನರೆಲ್ಲ ಕೊರೋನ ಲಸಿಕೆ ನಮಗೆ ಅಗತ್ಯವಿಲ್ಲ, ಎಂದು ತೀರ್ಮಾನಿಸಬಹುದಾದ ಸಾಧ್ಯತೆಗಳನ್ನು ಗಮನಿಸಿಯೇ ಈ ಕಂಪೆನಿಗಳು ಈಗ ಅವಸರದಲ್ಲಿರುವುದು ನಿಜವಾಗಿರಬಹುದೇ? ವ್ಯಾಪಾರ, ವ್ಯವಹಾರ, ಉದ್ಯಮಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಸರಕಾರ ಕೂಡ ಈ ಸಂಸ್ಥೆಗಳೊಂದಿಗೆ ಅರ್ಥಪೂರ್ಣವಾಗಿ ಕೈಜೋಡಿಸುತ್ತಿರುವಂತೆ ಭಾಸವಾಗುತ್ತಿದೆ.

ಲಸಿಕೆಯ ಒಂದು, ಎರಡು, ಮೂರನೇ ಹಂತದ ಫಲಿತಾಂಶವಾಗಲೀ, ಅವುಗಳಿಂದ ಉಂಟಾಗಬಹುದಾದ ಅಡ್ಡಪರಿಣಾಮಗಳ ಬಗೆಗಿನ ಸಂಪೂರ್ಣ ಮಾಹಿತಿಯಾಗಲೀ ಇನ್ನೂ ಲಭ್ಯವಿಲ್ಲದಿರುವುದರಿಂದ ಈ ಲಸಿಕೆ ಎಷ್ಟು ಪ್ರಯೋಜನಕಾರಿ ಎಂಬುದು ಕೂಡ ಪ್ರಶ್ನಾರ್ಥಕವೇ.ಅಲ್ಲದೆ ಈ ಲಸಿಕೆಯಿಂದ ಲಭಿಸುವ ರೋಗ ನಿರೋಧಕ ಗುಣ ಎಷ್ಟು ಕಾಲ ಮನುಷ್ಯ ದೇಹದಲ್ಲಿ ಉಳಿಯಲಿದೆ ಎಂಬ ಮಾಹಿತಿಗಳು ಕೂಡ ಲಭ್ಯವಿಲ್ಲ. ಜನರು ತಿಳಿದಿರಲೇಬೇಕಾದ ಮಾಹಿತಿಗಳ ಕಡೆಗೆ ಗಮನ ಹರಿಸದೆ, ಲಸಿಕೆ ಸಾಗಾಟ, ವಿತರಣೆಗಳ ಬಗ್ಗೆ ವೈಭವೀಕೃತ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿರುವುದನ್ನು ನೋಡುವಾಗ ಅನುಮಾನಗಳು ಹೆಚ್ಚಾಗುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)