ಅಮಿತ್ ಶಾ ಆಗಮನ: ವಿಧಾನಸೌಧದ ಸುತ್ತಲೂ ಬಿಗಿ ಪೊಲೀಸ್ ಭದ್ರತೆ
ಬೆಂಗಳೂರು, ಜ.16: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೃಹ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧದ ಸುತ್ತಲೂ ಶನಿವಾರ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಈಗಾಗಲೇ ನಗರದ ಕೆಲ ಮಾರ್ಗಗಳ ಸಂಚಾರ ಬದಲಾವಣೆ ಮಾಡುವುದರ ಜೊತೆಗೆ 2,000 ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕಾರ್ಯಕ್ರಮ ಆರಂಭಕ್ಕೂ ಮುನ್ನ, ಶ್ವಾನ ದಳ, ಬಾಂಬ್ ಪತ್ತೆ ದಳ ವಿಧಾನಸೌಧದ ಒಳಗೆ ಸಂಪೂರ್ಣ ತಪಾಸಣೆ ನಡೆಸಿತು.
ವಿಧಾನಸೌಧದ ಸಿಬ್ಬಂದಿಗೆ ಅರ್ಧದಿನ ರಜೆ: ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅರ್ಧ ದಿನ ರಜೆಯನ್ನು ಸರಕಾರ ನೀಡಿದೆ. ಶನಿವಾರ ಮಧ್ಯಾಹ್ನ 1.30ರ ನಂತರ ಮನೆಗೆ ತೆರಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೂಚನೆ ನೀಡಿತ್ತು.
ಮತ್ತೊಂದೆಡೆ ಸಾರ್ವಜನಿಕರಿಗೆ ಬೆಳಗ್ಗೆಯಿಂದಲೇ ವಿಧಾನಸೌಧದ ಪ್ರವೇಶವನ್ನು ನಿರ್ಬಂಧ ಹೇರಲಾಗಿತ್ತು.
Next Story