varthabharthi


ಸಂಪಾದಕೀಯ

ಅರ್ನಬ್‌ರನ್ನು ಬಿಟ್ಟು ರೈತರಲ್ಲಿ ಉಗ್ರನನ್ನು ಹುಡುಕುತ್ತಿರುವ ಎನ್‌ಐಎ

ವಾರ್ತಾ ಭಾರತಿ : 18 Jan, 2021

ರೈತ ಪ್ರತಿಭಟನೆಯನ್ನು ಸರಕಾರ ಅತ್ಯಂತ ಗೊಂದಲಕಾರಿಯಾಗಿ ನಿಭಾಯಿಸುತ್ತಿದೆ. ಆರಂಭದಲ್ಲಿ, ಸರಕಾರ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ‘ಖಾಲಿಸ್ತಾನಿಗಳು, ಉಗ್ರವಾದಿಗಳು’ ಎಂದು ಕರೆದು ಅವರನ್ನು ಅವಮಾನಿಸಿತು. ಇದಾದ ಬಳಿಕ, ಕೇಂದ್ರದ ಬಿಜೆಪಿ ನಾಯಕರೇ, ‘ಪ್ರತಿಭಟನಾಕಾರರು ಉಗ್ರವಾದಿಗಳಲ್ಲ, ಖಾಲಿಸ್ತಾನಿಗಳಲ್ಲ’ ಎಂದು ಸ್ಪಷ್ಟೀಕರಣ ನೀಡಿದರು. ಪೊಲೀಸರನ್ನು ಮುಂದಿಟ್ಟು ಪ್ರತಿಭಟನೆಯನ್ನು ದಮನಿಸುವ ಸರ್ವ ಪ್ರಯತ್ನ ವಿಫಲವಾದ ಬಳಿಕ ಮಾತುಕತೆಯ ನಾಟಕವಾಡಿದರು. ಅಲ್ಲೂ ರೈತರು ತಮ್ಮ ನಿಲುವಿನಿಂದ ಹಿಂದೆ ಸರಿಯದೇ ಇದ್ದಾಗ, ಸುಪ್ರೀಂಕೋರ್ಟ್‌ನ ಮೂಲಕ ಅವರ ಪ್ರತಿಭಟನೆಯನ್ನು ಸ್ಥಗಿತಗೊಳಿಸುವ ಹುನ್ನಾರ ನಡೆಸಿದರು. ರೈತರ ಪ್ರತಿಭಟನೆಯನ್ನು ಸುಪ್ರೀಂಕೋರ್ಟ್ ಗಂಭೀರವಾಗಿ ತೆಗೆದುಕೊಂಡಿತು ಮಾತ್ರವಲ್ಲ, ಸರಕಾರದ ವರ್ತನೆಯನ್ನು ತೀವ್ರವಾಗಿ ಟೀಕಿಸಿತು. ಆದರೆ ಈ ಟೀಕೆಯೂ ಒಂದು ತಂತ್ರವೆನ್ನುವುದು ರೈತರಿಗೆ ಮನವರಿಕೆಯಾಯಿತು.

ರೈತರ ಜೊತೆಗೆ ಮಾತುಕತೆಗೆಂದು ಸುಪ್ರೀಂಕೋರ್ಟ್ ನೇಮಕ ಮಾಡಿದ ತಂಡದ ಸದಸ್ಯರು ಈ ಹಿಂದೆಯೇ ಕೃಷಿ ನೀತಿಯನ್ನು ಬೆಂಬಲಿಸಿದವರು. ಸುಪ್ರೀಂಕೋರ್ಟ್ ಉದ್ದೇಶವೂ ರೈತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದೇ ಆಗಿತ್ತು. ಇದೀಗ ರೈತರು ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್ಯಾಲಿಗಳನ್ನು ನಡೆಸಿಯೇ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಜನವರಿ 26ರಂದು ಈ ದೇಶದಲ್ಲಿ ಮೊದಲ ಬಾರಿಗೆ ಎರಡು ಬಗೆಯ ಗಣರಾಜ್ಯೋತ್ಸವ ಆಚರಣೆಯಾಗಲಿದೆ. ಒಂದು ಸರಕಾರದ ಗಣರಾಜ್ಯೋತ್ಸವ. ಇನ್ನೊಂದು ರೈತರ ಅಥವಾ ಭಾರತದ ಜನಸಾಮಾನ್ಯರ ಗಣರಾಜ್ಯೋತ್ಸವ. ಸುಪ್ರೀಂಕೋರ್ಟ್‌ನ ತೀರ್ಪಿನ ಹಿಂದಿರುವ ಕಪಟ ನಾಟಕ ರೈತರಿಗೆ ಮನವರಿಕೆಯಾಗಿ ಅವರು ಮಾತುಕತೆಯ ತಂಡವನ್ನು ಸಂಪೂರ್ಣ ತಿರಸ್ಕರಿಸಿದಂತೆಯೇ ಸರಕಾರ ತನ್ನ ನಿಜವಾದ ಮುಖವನ್ನು ಬಹಿರಂಗಪಡಿಸಿದೆ.

ಇದೀಗ ರೈತ ಚಳವಳಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಲೋಕಭಲಾಯಿ ಇನ್ಸಾಫ್ ವೆಲ್‌ಫೇರ್ ಸೊಸೈಟಿಯ ಅಧ್ಯಕ್ಷ ಬಲ್‌ದೇವ್ ಸಿಂಗ್ ಸಿರ್ಸಾಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮೂಲಕ ಸಮನ್ಸ್ ಜಾರಿ ಮಾಡಿದೆ. ನಿಷೇಧಿತ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ ಜೊತೆಗೆ ಇವರಿಗೆ ಸಂಬಂಧವಿದೆ ಎನ್ನುವ ಅನುಮಾನ ಎನ್‌ಐಎಗೆ ಬಂದಿದೆಯಂತೆ. ಅಂದರೆ ಈ ಹಿಂದೆ ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ ಜನರನ್ನು ಉಗ್ರವಾದಿಗಳೆಂದು ಬಂಧಿಸಿದಂತೆಯೇ ರೈತರನ್ನೂ ಬಂಧಿಸುವುದಕ್ಕೆ ಸರಕಾರ ಸಿದ್ಧತೆಯನ್ನು ನಡೆಸುತ್ತಿದೆ.

ವಿಪರ್ಯಾಸವೆಂದರೆ, ಕೇಂದ್ರ ಸರಕಾರ-ರೈತ ಸಂಘಟನೆಗಳ ಮಧ್ಯೆ ನಡೆದ ಮಾತುಕತೆಯಲ್ಲಿ ಬಲ್‌ದೇವ್ ಸಿಂಗ್ ಸಿರ್ಸಾ ಅವರೂ ಇದ್ದರು. ಒಂದೆಡೆ ರೈತ ಮುಖಂಡರ ಜೊತೆಗೆ ಮಾತುಕತೆ ನಡೆಸುವುದು, ಮಗದೊಂದೆಡೆ ಅವರ ವಿರುದ್ಧ ಉಗ್ರವಾದದ ಆರೋಪ ಹೊರಿಸಿ ವಿಚಾರಣೆ ನಡೆಸುವ ಸರಕಾರ ಈ ಮೂಲಕ ಏನನ್ನು ಸಾಧಿಸಲು ಹೊರಟಿದೆ? ಬಲದೇವ್ ಸಿಂಗ್ ಸಿರ್ಸಾ ಶಂಕಿತ ಉಗ್ರವಾದಿಯಾಗಿದ್ದರೆ ಅವರ ಜೊತೆಗೆ ಸರಕಾರ ಮಾತುಕತೆ ನಡೆಸಿದ್ದು ಹೇಗೆ? ಈ ತನಿಖೆಯ ಮೂಲಕ ಸರಕಾರ ಇಡೀ ಪ್ರತಿಭಟನೆಯನ್ನು ದೇಶದ ವಿರುದ್ಧ ಸಂಚು ಎಂದು ಪ್ರತಿಪಾದಿಸಲು ಹೊರಟಿದೆ. ಇಂತಹ ಆಪಾದನೆ ರೈತ ಪ್ರತಿಭಟನೆಯನ್ನು ಅತ್ಯಂತ ಅಪಾಯಕಾರಿಯಾದ ಘಟ್ಟಕ್ಕೆ ಒಯ್ಯುವ ಎಲ್ಲ ಸಾಧ್ಯತೆಗಳಿವೆ. ಬಲ್‌ದೇವ್ ಸಿಂಗ್ ಅವರ ಮೇಲೆ ಮಾತ್ರವಲ್ಲ, ದೇಶಾದ್ಯಂತ ಹೋರಾಟ ನಿರತ ರೈತರ ಮೇಲೆ ಅನಗತ್ಯ ದೂರುಗಳನ್ನು ದಾಖಲಿಸಿ ಅವರನ್ನು ಜೈಲಿಗೆ ತಳ್ಳುವ ಪ್ರಕ್ರಿಯೆ ಈಗಾಗಲೇ ಸರಕಾರದಿಂದ ಆರಂಭವಾಗಿದೆ.

 ಸರಕಾರದ ಪ್ರಕಾರ ರೈತರನ್ನು ಪ್ರತಿಭಟನೆ ನಡೆಸುವುದಕ್ಕೆ ಪ್ರೇರೇಪಿಸುವುದು ಅಪರಾಧ. ಈ ಹಿಂದಿನ ಯಾವ ಸರಕಾರವೂ ರೈತರು ಮತ್ತು ಕಾರ್ಮಿಕರ ಪ್ರತಿಭಟನೆಗಳನ್ನು ಅಪರಾಧವಾಗಿ ಚಿತ್ರೀಕರಿಸಿರಲಿಲ್ಲ. ಪ್ರಜಾಸತ್ತಾತ್ಮಕವಾಗಿ ಸರಕಾರದ ವಿರುದ್ಧ ಪ್ರತಿಭಟಿಸುವುದು ಜನಸಾಮಾನ್ಯರ ಹಕ್ಕು. ಕೋವಿ ಹಿಡಿದ ಉಗ್ರವಾದಿ ಸಂಘಟನೆಗಳಿಗೆ ಸರಕಾರವೇ ಆಗಾಗ ‘ಶಸ್ತ್ರ ತ್ಯಜಿಸಿ ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಿ’ ಎಂದು ಕರೆ ನೀಡುವುದಿದೆ. ಆದರೆ ಇಲ್ಲಿ, ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವುದು ಕೂಡ ದೇಶದಲ್ಲಿ ಅರಾಜಕತೆಯ ವಾತಾವರಣ ಸೃಷ್ಟಿಸುವ ಸಂಚು ಎಂದು ಸರಕಾರ ಭಾವಿಸುತ್ತಿದೆ. ಮೊತ್ತ ಮೊದಲು ಸರಕಾರ, ಪ್ರತಿಭಟಿಸುವವರು ರೈತರೋ, ಉಗ್ರರೋ ಎನ್ನುವುದನ್ನು ಸ್ಪಷ್ಟ ಪಡಿಸಿಕೊಳ್ಳಬೇಕಾಗಿದೆ.

ಅವರು ಉಗ್ರರೇ ಆಗಿದ್ದರೆ ಅವರ ಜೊತೆಗೆ ಮಾತನಾಡುವ ಅಗತ್ಯವೇ ಇರುವುದಿಲ್ಲ. ರೈತರೆನ್ನುವುದು ಒಪ್ಪಿಕೊಂಡು ಮಾತುಕತೆ ನಡೆಸುತ್ತಿದೆಯಾದರೆ, ಕೃಷಿ ಕಾನೂನಿನ ಕುರಿತಂತೆ ಅವರ ಆಕ್ಷೇಪಗಳನ್ನು ಕಿವಿಗೊಟ್ಟು ಆಲಿಸಬೇಕಾಗಿದೆ. ‘ಈ ಕಾನೂನಿನಿಂದ ನಮಗೆ ಲಾಭವಿಲ್ಲ’ ಎಂದು ರೈತರು ಜೋರು ದನಿಯಲ್ಲಿ ಹೇಳುತ್ತಿರುವಾಗ, ‘ಸರಿ, ರೈತರಿಗೆ ಬೇಡವಾದ ಕಾನೂನು ನಮಗೂ ಬೇಡ’ ಎಂದು ಸರಕಾರವೇ ರೈತರ ಪರವಾಗಿ ನಿಲ್ಲಬೇಕು. ಆದರೆ ಇಂದು ತನ್ನ ಕೃಷಿ ವಿರೋಧಿ ನೀತಿಯಿಂದ ರೈತರನ್ನು ಪ್ರಚೋದಿಸುತ್ತಿರುವುದು ಸ್ವತಃ ಸರಕಾರ. ಇಂದು ರೈತರಿಂದ ನಿಜಕ್ಕೂ ಅರಾಜಕತೆ ಸೃಷ್ಟಿಯಾಗಿದೆಯಾದರೆ ಅದರ ಸಂಪೂರ್ಣ ಹೊಣೆಯನ್ನು ಸರಕಾರವೇ ಹೊರಬೇಕು. ಇಂತಹ ಸ್ಥಿತಿಯನ್ನು ನಿರ್ಮಾಣ ಮಾಡಿರುವುದಕ್ಕಾಗಿ ಎನ್‌ಐಎ ಯಾರನ್ನಾದರೂ ವಿಚಾರಣೆ ನಡೆಸುವ ಉದ್ದೇಶವಿದ್ದರೆ, ಸರಕಾರದೊಳಗಿರುವ ಶಕ್ತಿಗಳನ್ನೇ ವಿಚಾರಣೆ ನಡೆಸಲಿ.

ಈ ದೇಶದ ಅತಿ ದೊಡ್ಡ ಇನ್ನೊಂದು ದುರಂತವಿದೆ. ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಮೇಲೆ ‘ರಕ್ಷಣಾ ಮಾಹಿತಿ ಸೋರಿಕೆ’ ಮಾಡಿದ ಭಾರೀ ಆರೋಪವೊಂದು ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಡೆಯುವ ಮೂರು ದಿನಗಳ ಮೊದಲೇ ‘ಪುಲ್ವಾಮ ದಾಳಿಯ ಸಂಭ್ರಮ’ ಆಚರಿಸಿಕೊಂಡ ಆರೋಪ ಈತನ ಮೇಲಿದೆ. ಒಬ್ಬ ಮಾಮೂಲಿ ಪತ್ರಕರ್ತನಿಗೆ ಈ ದೇಶ ಅತ್ಯಂತ ಗುಟ್ಟಾಗಿ ನಡೆಸಲಿರುವ ‘ಸರ್ಜಿಕಲ್ ಸ್ಟ್ರೈಕ್’ನ ಮಾಹಿತಿ ಗೊತ್ತಿರುತ್ತದೆ, ಅದನ್ನು ಆತ ತನ್ನ ಟಿಆರ್‌ಪಿಗಾಗಿ ಬಳಸಲು ಸಿದ್ಧತೆ ನಡೆಸುತ್ತಾನೆ ಎಂದಾದರೆ ಈ ದೇಶದ ರಕ್ಷಣಾ ವ್ಯವಸ್ಥೆಯ ಕುರಿತಂತೆ ನಾವು ನಂಬಿಕೆಯನ್ನಿಡುವುದು ಹೇಗೆ? ಈ ಅರ್ನಬ್ ಪುಲ್ವಾಮ ದಾಳಿಯಲ್ಲಿ ಮೃತಪಟ್ಟ ಸೈನಿಕರ ಸಾವನ್ನು ಸಂಭ್ರಮಿಸುತ್ತಾರೆ ಮಾತ್ರವಲ್ಲ, ದಾಳಿ ನಡೆಯುವ ಮೊದಲೇ ಅದರ ಪರಿಣಾಮಗಳನ್ನು ಅರಿತವನಂತೆ ‘ಮೋದಿಯ ಚುನಾವಣೆಯ ಗೆಲುವಿನ ಬಗ್ಗೆ’ ಮಾತನಾಡುತ್ತಾನೆ. ಈಗಲೂ ಬಾಲಾಕೋಟ್ ದಾಳಿಯ ಕುರಿತಂತೆ ಎದ್ದಿರುವ ಪ್ರಶ್ನೆಗಳಿಗೆ ಸೇನೆ ಉತ್ತರಿಸಿಲ್ಲ.

‘ಎಷ್ಟು ಜನ ಉಗ್ರರು ಮೃತಪಟ್ಟಿದ್ದಾರೆ?’ ಎನ್ನುವ ಪ್ರಶ್ನೆಗೂ ಈವರೆಗೆ ಉತ್ತರ ಸಿಕ್ಕಿಲ್ಲ. ಗುಡ್ಡಗಾಡು ಪ್ರದೇಶಗಳಿಗೆ ಬಾಂಬ್‌ಗಳನ್ನು ಸುರಿದು, ಅದನ್ನೇ ಸರ್ಜಿಕಲ್ ಸ್ಟ್ರೈಕ್ ಎಂದು ಕರೆಯಲಾಗಿದೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿತ್ತು. ಇದೀಗ ಅರ್ನಬ್ ಅವರ ಸೋರಿಕೆಯಾದ ವಾಟ್ಸ್‌ಆ್ಯಪ್ ಚಾಟ್ ಆ ಆರೋಪಗಳಿಗೆ ಪುಷ್ಟಿಯನ್ನು ನೀಡುತ್ತಿದೆ. ಇಂತಹ ಗಂಭೀರ ಆರೋಪಗಳನ್ನು ಹೊತ್ತ ಅರ್ನಬ್‌ರನ್ನು ಇನ್ನೂ ಬಂಧಿಸಲಾಗಿಲ್ಲ. ಎನ್‌ಐಎಗೆ ಈತನನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದೂ ಅನ್ನಿಸಿಲ್ಲ. ಈತನನ್ನು ಬಿಟ್ಟು, ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಉಗ್ರವಾದಿಗಳನ್ನು ಹುಡುಕುತ್ತಿರುವ ಸಂಸ್ಥೆಯ ನಡೆಯನ್ನು ದೇಶವೂ ಗಂಭೀರವಾಗಿ ಗಮನಿಸುತ್ತಿದೆ. ಎನ್‌ಐಎ ಎನ್ನುವ ತನಿಖಾ ಸಂಸ್ಥೆ ಈ ಮೂಲಕ ಯಾರನ್ನು ರಕ್ಷಿಸಲು ಹೊರಟಿದೆ ಎನ್ನುವುದನ್ನು ಊಹಿಸುವುದು ದೇಶದ ಜನರಿಗೆ ಕಷ್ಟವೇನೂ ಅಲ್ಲ. ತನಿಖಾ ಸಂಸ್ಥೆಯ ಈ ಆಷಾಢಭೂತಿ ನಡೆಯಿಂದ ‘ರಾಷ್ಟ್ರದ ಭದ್ರತೆ ಅತ್ಯಂತ ಅಪಾಯದಲ್ಲಿದೆ’ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)