varthabharthi


ನಿಮ್ಮ ಅಂಕಣ

ಡಿಜಿಟಲ್ ಭಾರತದಲ್ಲಿ ಇನ್ನೂ ಮನುಷ್ಯರೇ ಮುಖ್ಯ

ವಾರ್ತಾ ಭಾರತಿ : 19 Jan, 2021
ಸರಯೂ ನಟರಾಜನ್, ಗೌತಮ್ ರವಿಚಂದರ್

ಕೊರೋನ ಸಾಂಕ್ರಾಮಿಕ ಅವಧಿಯಲ್ಲಿ ನಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ನಾವು ಹಲವಾರು ವ್ಯಕ್ತಿಗಳನ್ನು ಅವಲಂಬಿಸಬೇಕಾಗಿ ಬಂತು. ಹೆಚ್ಚು ಸೇವೆಗಳು ಆನ್‌ಲೈನ್‌ನಲ್ಲಿ ಲಭಿಸಲಾರಂಭಿಸಿದವು. ಸರಕಾರದ ಆಡಳಿತದಲ್ಲಿ ಕೂಡ ಸೇವೆಗಳ ಲಭ್ಯತೆಯ ಈ ರೂಪಾಂತರ ಢಾಳಾಗಿ ಕಾಣಿಸುತ್ತಿದೆ. ಈ ಅವಧಿಯಲ್ಲಿ ಡಿಜಿಟಲೀಕರಣದಿಂದ ಹೊರಗುಳಿದ ಸಮುದಾಯಗಳು ಹೇಗೆ ಸರಕಾರದ ಸವಲತ್ತುಗಳ, ಸೇವೆಗಳ ಜತೆ ವ್ಯವಹರಿಸಿದವು? ಎಂಬುದನ್ನು ಅಧ್ಯಯನ ಮಾಡಿದ ಇ ಗವರ್ನ್‌ಮೆಂಟ್ ಫೌಂಡೇಶನ್ (ಇ ಗೌ) ಮತ್ತು ಆಪ್ತಿ ಇನ್‌ಸ್ಟಿಟ್ಯೂಟ್, ‘ಡಿಜಿಟಲ್ ಭಾರತ’ದಲ್ಲಿ ಕೂಡ ಸರಕಾರ ಮತ್ತು ನಾಗರಿಕರ ನಡುವೆ ವಿಶ್ವಾಸ ಮೂಡಿಸುವಲ್ಲಿ ಮನುಷ್ಯರು ಬಹಳ ಮುಖ್ಯ ಎಂಬುದನ್ನು ಕಂಡುಕೊಂಡವು.

ಆದರೆ ಬಹುತೇಕ ಇ- ಆಡಳಿತ ಕಾರ್ಯಕ್ರಮ ಗಳನ್ನು ವಿನ್ಯಾಸಗೊಳಿಸುವಾಗ ಈ ವಾಸ್ತವವನ್ನು ಪರಿಗಣಿಸಲಿಲ್ಲ. ಕೆಲವೇ ರಾಜ್ಯಗಳು ಮಾತ್ರ ಈ ನಿಟ್ಟಿನಲ್ಲಿ ಮನುಷ್ಯರ ಒಂದು ಕಾರ್ಯಪಡೆಯನ್ನು ರಚಿಸಿದವು. ಉದಾಹರಣೆಗೆ ಆಂಧ್ರಪ್ರದೇಶ 16,000ಕ್ಕೂ ಹೆಚ್ಚು ಮಂದಿ ವಾರ್ಡ್ ಕಾರ್ಯದರ್ಶಿಗಳನ್ನು ಹಾಗೂ ಸ್ವಯಂ ಸೇವಕರನ್ನು ಸಿದ್ಧಗೊಳಿಸಿ ನಾಗರಿಕರ ಮನೆಬಾಗಿಲಿಗೆ ಸರಕಾರಿ ಸೇವೆಗಳು ಲಭಿಸುವಂತೆ ನೋಡಿಕೊಂಡಿತು.

ಡಿಜಿಟಲ್ ಸೇವೆಗಳ ಲಭ್ಯತೆ ಕುರಿತು ನಾಗರಿಕರಿಗೆ ಅರಿವು ಇಲ್ಲದಾಗ ಇಂತಹ ಮಧ್ಯವರ್ತಿಗಳು ಆ ನಾಗರಿಕರ ನೆರವಿಗೆ ಒದಗಿ ಬರುತ್ತಾರೆ. ಸಮಾಜದ ಅಂಚಿನಲ್ಲಿರುವವರಿಗೆ, ಬಡವರು ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಸೇವೆಗಳ ಕುರಿತಾದ ಅರಿವಿಲ್ಲದಿರುವುದು ಬಹಳ ದೊಡ್ಡ ತಡೆಗೋಡೆಯಾಗುತ್ತದೆ. ಇಂತಹ ತಡೆಗೋಡೆಗಳನ್ನು ಬೀಳಿಸಿ ನಾಗರಿಕರಿಗೆ ಅವರು ಯಾರನ್ನು ಸಂಪರ್ಕಿಸಬೇಕು, ಯಾರಿಗೆ ದೂರು ನೀಡಬೇಕು ಮತ್ತು ಹೇಗೆ ಅವುಗಳನ್ನು ಬೆನ್ನುಹತ್ತಬೇಕು ಎಂಬುದನ್ನು ಮಧ್ಯವರ್ತಿಗಳು ನಾಗರಿಕರಿಗೆ ತಿಳಿಸಿಕೊಡುತ್ತಾರೆ.

ಮಧ್ಯವರ್ತಿಗಳು ಸರಕಾರಕ್ಕೆ ತನ್ನ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡುವಂತೆ ಸಹಕರಿಸುವ ಆಫ್‌ಲೈನ್ ಶಿಲ್ಪಿಗಳು. ಅವರು ರಾಜಕೀಯ ಪಕ್ಷಗಳ ಕಾರ್ಯಕರ್ತರೂ ಇರಬಹುದು ಅಥವಾ ಯಾವುದೇ ರಾಜಕೀಯ ಹಿತಾಸಕ್ತಿಗಳಿಲ್ಲದ ಸಾಮಾಜಿಕ ಕಾರ್ಯಕರ್ತರು ಅಥವಾ ಸಮುದಾಯದ ನಾಯಕರೂ ಇರಬಹುದು. ನಮ್ಮ ಸಂಶೋಧನೆಯ ಪ್ರಕಾರ ಮಧ್ಯವರ್ತಿಗಳ ನೆರವು ಪಡೆಯುವುದರಿಂದ ನಾಗರಿಕರಿಗೆ ಸವಲತ್ತುಗಳನ್ನು ಒದಗಿಸುವ ಸರಕಾರದ ಸಾಮರಸ್ಯ ಇನ್ನಷ್ಟು ಹೆಚ್ಚುತ್ತದೆ. ನಿಜ ಹೇಳಬೇಕೆಂದರೆ, ತಂತ್ರಜ್ಞಾನ ಒದಗಿಸುವ ಅನುಕೂಲಗಳನ್ನು ಜನಸಾಮಾನ್ಯರಿಗೆ ಒದಗಿಸುವಲ್ಲಿ ಮಧ್ಯವರ್ತಿಗಳು ಜನರ ಪಾಲಿಗೆ ದೈನಂದಿನ ಬದುಕಿನ ಒಂದು ವಾಸ್ತವವಾಗಿದ್ದಾರೆ.

ಪ್ರಾದೇಶಿಕ ಸಾಮಾಜಿಕ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂದರ್ಭ ಸನ್ನಿವೇಶಗಳನ್ನು ಅವಲಂಬಿಸಿ ಹಲವು ರೀತಿಗಳ ಮಧ್ಯವರ್ತಿಗಳ ಅವಶ್ಯಕತೆ ತಲೆದೋರುತ್ತದೆ. ಆದ್ದರಿಂದ ‘ಎಲ್ಲಕ್ಕೂ ಒಂದು ಸೈಜ್ ಹೊಂದಿಕೊಳ್ಳುತ್ತದೆ’ ಎನ್ನುವ ತಂತ್ರ ಇಲ್ಲಿ ಉಪಯೋಗವಾಗುವುದಿಲ್ಲ. ಅಲ್ಲದೆ ಮಧ್ಯವರ್ತಿಗಳಿಗೆ ಸಿಗುವ, ಸಿಗಬೇಕಾದ ಪ್ರೋತ್ಸಾಹ ಹಾಗೂ ಪ್ರತಿಫಲದ ಕುರಿತು ಕೂಡ ಗಮನಹರಿಸುವ ಅವಶ್ಯಕತೆ ಇದೆ. ಸರಕಾರದ ಆಡಳಿತದ ಪ್ರತಿಫಲ ವಾಸ್ತವ ವಾಗಬೇಕಾದರೆ ಮಧ್ಯವರ್ತಿಗಳು ಬಹಳ ಅವಶ್ಯಕ. ಸ್ವಿಗ್ಗಿ ಮತ್ತು ಉಬರ್ ಗೆ ಡೆಲಿವರಿ ಏಜೆಂಟರು ಹಾಗೂ ವಾಹನ ಚಾಲಕರು ಹೇಗೆ ಅನಿವಾರ್ಯವೋ ಹಾಗೆಯೇ ಮಧ್ಯವರ್ತಿಗಳು ಡಿಜಿಟಲೀಕೃತ ಸೇವೆಗಳಲ್ಲಿ ಸರಕಾರಕ್ಕೆ ಅನಿವಾರ್ಯ. ಅವರು ಸರಕಾರದ ವಿಸ್ತರಿಸಲ್ಪಟ್ಟ ಒಂದು ಸಹಜ ಅಂಗವೆಂದು ಪರಿಗಣಿಸಿದಲ್ಲಿ ನಾಗರಿಕರಿಗೆ ಅವರು ಇನ್ನಷ್ಟು ಉತ್ತಮ ಸೇವೆ ಸಲ್ಲಿಸುವಂತೆ ನಾವು ಅವರನ್ನು ಹೇಗೆ ಬೆಂಬಲಿಸಬಹುದು ಎಂಬ ಪ್ರಶ್ನೆ ಕೇಳಿಕೊಳ್ಳಬೇಕಾಗುತ್ತದೆ. ಮ್ಯೂಚುವಲ್ ಫಂಡ್ಸ್‌ಗಳಂತಹ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಭಾರತ ಮಧ್ಯವರ್ತಿತ್ವವನ್ನು (ಇಂಟರ್ ಮೀಡಿಯೇಷನ್) ಚೆನ್ನಾಗಿ ಬಳಸಿಕೊಂಡಿದೆ. ಈ ರಂಗದಿಂದ ನಾವು ಕಲಿಯುವುದು ತುಂಬಾ ಇದೆ.

ಇನ್ನೂ ದೊಡ್ಡದಾದ ಒಂದು ಮಟ್ಟದಲ್ಲಿ ಆರೋಗ್ಯ, ಹಣಕಾಸು ಸೇವೆ, ನ್ಯಾಯದಾನ ಹಾಗೂ ಸಾಮಾಜಿಕ ಸೇವೆಗಳಲ್ಲಿ ಆಡಳಿತದ ಡಿಜಿಟಲೀಕರಣ ಅನಿವಾರ್ಯವಾಗಿದೆ. ಸಾಂಪ್ರದಾಯಿಕ ವಿಧಾನಗಳಿಂದ ಸೇವೆಗಳ ಡಿಜಿಟಲೀಕರ ಣದತ್ತ ಆಗುವ ಬದಲಾವಣೆಯ ಈ ಹಂತದಲ್ಲಿ ನಾಗರಿಕರ ತಿಳಿವಳಿಕೆಯನ್ನು ಹೆಚ್ಚಿಸಿ, ಮಧ್ಯವರ್ತಿಗಳ ಕೌಶಲ್ಯ ಹಾಗೂ ಸಾಮರ್ಥ್ಯಗಳನ್ನು ವೃದ್ಧಿಸಿ ಸೂಕ್ತ ಫೀಡ್‌ಬ್ಯಾಕ್ ದೊರಕುವಂತೆ ನಾವು ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ನಾವು ಮಧ್ಯವರ್ತಿಗಳ ಜೊತೆಗೂಡಿ ಕಾರ್ಯಪ್ರವೃತ್ತರಾಗಬೇಕು. ಹೀಗೆ ಮಾಡಿದಲ್ಲಿ ಸಮಾಜದ ಎಲ್ಲ ಸಮುದಾಯಗಳಿಗೂ ಜವಾಬ್ದಾರಿಯುತ, ಉತ್ತರದಾಯಿಯಾದ ಹಾಗೂ ದತ್ತಾಂಶ ಕೇಂದ್ರಿತವಾದ ಆಡಳಿತವನ್ನು ನೀಡುವ ಪ್ರಕ್ರಿಯೆಯನ್ನು ಬೆಂಬಲಿಸಲು ನಾವು ಸಮರ್ಥರಾಗುತ್ತೇವೆ.

ಕೃಪೆ: TheHindu
(ಸರಯೂ ನಟರಾಜನ್ ಆಫ್ತಿ ಇನ್‌ಸ್ಟಿಟ್ಯೂಷನ್‌ನ ಸ್ಥಾಪಕರು.
ಗೌತಮ್ ರವಿಚಂದರ್ ಇಗೌ. ಫೌಂಡೇಶನ್‌ನ ಮುಖ್ಯಸ್ಥರು)            

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)