varthabharthi


ಅಂತಾರಾಷ್ಟ್ರೀಯ

ರಶ್ಯ : ಪ್ರತಿಪಕ್ಷ ನಾಯಕ ನವಾಲ್ನಿಗೆ 30 ದಿನಗಳ ಜೈಲು

ವಾರ್ತಾ ಭಾರತಿ : 19 Jan, 2021

ಮಾಸ್ಕೋ (ರಶ್ಯ), ಜ. 19: ರಶ್ಯದ ನ್ಯಾಯಾಲಯವೊಂದು ಸೋಮವಾರ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ 30 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮಾಸ್ಕೋದ ಹೊರವಲಯದಲ್ಲಿರುವ ಪೊಲೀಸ್ ಠಾಣೆಯಲ್ಲೇ ತಾತ್ಕಾಲಿಕ ನ್ಯಾಯಾಲಯವೊಂದನ್ನು ಸ್ಥಾಪಿಸಲಾಗಿತ್ತು. ಆ ಪೊಲೀಸ್ ಠಾಣೆಯಲ್ಲಿ ಅವರನ್ನು ಒಂದು ದಿನ ಇಡಲಾಗಿತ್ತು.

ನವಾಲ್ನಿಗೆ ಫೆಬ್ರವರಿ 15ರವರೆಗೆ ಜೈಲು ವಿಧಿಸಬೇಕು ಎಂಬ ಪ್ರಾಸಿಕ್ಯೂಶನ್ ಮನವಿಗೆ ನ್ಯಾಯಾಲಯವು ಒಪ್ಪಿಗೆ ನೀಡಿತು.

ಬಳಿಕ ಪೊಲೀಸರು, ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಕಟ್ಟಾ ಟೀಕಾಕಾರರಾಗಿರುವ ನವಾಲ್ನಿಯನ್ನು ಮಾಸ್ಕೋದ ಮಟ್ರೋಸ್ಕಯದಲ್ಲಿರುವ ಕುಖ್ಯಾತ ಟಿಶಿನ ಜೈಲಿಗೆ ಸ್ಥಳಾಂತರಿಸಿದರು. ಇದೇ ಜೈಲಿನಲ್ಲಿ 2009ರಲ್ಲಿ ವಕೀಲ ಸರ್ಗಿ ಮ್ಯಾಗ್ನಿಟ್‌ಸ್ಕಿ ಮೃತಪಟ್ಟಿದ್ದರು. ಅವರನ್ನು ಆ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಇಡಲಾಗಿತ್ತು.

ರವಿವಾರ ಬರ್ಲಿನ್‌ನಿಂದ ಸ್ವದೇಶಕ್ಕೆ ಆಗಮಿಸಿದ ನವಾಲ್ನಿಯನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿತ್ತು.

ಬೀದಿಗಿಳಿದು ಹೋರಾಡಿ

ಬೆಂಬಲಿಗರಿಗೆ ನವಾಲ್ನಿ ಕರೆ

ನನ್ನ ಬಂಧನದ ವಿರುದ್ಧ ಬೀದಿಗಿಳಿದು ಹೋರಾಡುವಂತೆ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ತನ್ನ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಸೋಮವಾರ ತಾತ್ಕಾಲಿಕ ನ್ಯಾಯಾಲಯವೊಂದು ತನಗೆ 30 ದಿನಗಳ ವಿಚಾರಣಾವಧಿ ಜೈಲು ವಿಧಿಸಿದ ಬಳಿಕ ಅವರು ಈ ಕರೆ ನೀಡಿದ್ದಾರೆ.

‘‘ವೌನವಾಗಿ ಇರಬೇಡಿ, ಪ್ರತಿಭಟಿಸಿ. ರಸ್ತೆಗಿಳಿಯಿರಿ... ನನಗಾಗಿ ಅಲ್ಲ, ನಿಮಗಾಗಿ’’ ಎಂದು ವೀಡಿಯೊ ಸಂದೇಶವೊಂದರಲ್ಲಿ 44 ವರ್ಷದ ನವಾಲ್ನಿ ಹೇಳಿದ್ದಾರೆ.

ಅವರ ಬೆಂಬಲಿಗರು ಈ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)