varthabharthi


ನಿಮ್ಮ ಅಂಕಣ

ನಮ್ಮ ಆಹಾರ ಹೇಗಿರಬೇಕು?

ವಾರ್ತಾ ಭಾರತಿ : 20 Jan, 2021
ಡಾ. ಮುರಲೀಮೋಹನ ಚೂಂತಾರು

ನಾವು ದಿನನಿತ್ಯ ಸೇವಿಸುವ ಆಹಾರ ಯಾವ ರೀತಿ ಇರಬೇಕು, ಏನೆಲ್ಲಾ ತಿನ್ನಬೇಕು, ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದರ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ವೈಜ್ಞಾನಿಕವಾಗಿ ನೀಡುವ ಆಹಾರದ ಮಾರ್ಗದರ್ಶಿ ಸೂತ್ರವನ್ನು ‘ಫುಡ್ ಪಿರಮಿಡ್’ ಎಂದು ಕರೆಯಲಾಗುತ್ತದೆ. ಮೊದಲ ಫುಡ್ ಪಿರಮಿಡ್ 1974ರಲ್ಲಿ ಸ್ವೀಡನ್ ದೇಶದಲ್ಲಿ ಆರಂಭಿಸಲಾಯಿತು. 1992ರಲ್ಲಿ ಅಮೆರಿಕದಲ್ಲಿ ಪರಿಷ್ಕರಿಸಿದ ಫುಡ್ ಪಿರಮಿಡ್‌ನ್ನು ಆಹಾರ ಸಂಶೋಧನಾ ತಂಡದ ಆಹಾರ ತಜ್ಞರು ತಯಾರಿಸಿ ಅದಕ್ಕೆ ‘ಫುಡ್‌ಗೈಡ್ ಪಿರಮಿಡ್’ ಎಂದು ಮರು ನಾಮಕರಣ ಮಾಡಿದರು. 2005ರಲ್ಲಿ ಮಗದೊಮ್ಮೆ ಪರಿಷ್ಕರಿಸಿ ‘ನನ್ನ ಪಿರಮಿಡ್’ ಎಂದು ಹೆಸರಿಸಲಾಯಿತು. 2011ರಲ್ಲಿ ಇನ್ನೊಮ್ಮೆ ಪರಿಷ್ಕರಿಸಿ ‘ಮೈ ಪ್ಲೇಟ್’ ಅಥವಾ ‘ನನ್ನ ತಟ್ಟೆ’ ಎಂದು ಹೊಸ ಹೆಸರನ್ನು ನೀಡಲಾಯಿತು. ಒಟ್ಟಿನಲ್ಲಿ ಫುಡ್ ಪಿರಮಿಡ್ ಎನ್ನುವುದು ಬೇರೆ ಬೇರೆ ಹೆಸರಿದ್ದರೂ ಮೂಲಭೂತವಾಗಿ ಯಾವ ವಯಸ್ಸಿಗೆ ಏನು ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಮತ್ತು ಯಾಕಾಗಿ ತಿನ್ನಬೇಕು, ತಿನ್ನುವುದರಿಂದ ಉಂಟಾಗುವ ಲಾಭ ನಷ್ಟಗಳೇನು ಎಂಬುದರ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ನೀಡಿ ಸರಿಯಾದ ಆಹಾರ ತಿನ್ನುವುದರಿಂದ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದರಲ್ಲಿ ಯಶಸ್ವಿಯಾಗಿದೆ ಎಂಬುದಂತೂ ಸತ್ಯವಾದ ಮಾತು. ನಮಗೆಲ್ಲಾ ತಿಳಿದಿರುವಂತೆ ಪಿರಮಿಡ್ ಎನ್ನುವುದು ಒಂದು ಸಾಂಕೇತಿಕವಾದ ಸಿಂಬಲ್ ಆಗಿರುತ್ತದೆ. ಈ ಪಿರಮಿಡ್‌ನ ತಳಭಾಗ ಬಹಳ ವಿಸ್ತಾರವಾಗಿರುತ್ತದೆ. ಮೇಲೆ ಮೇಲೆ ಹೋದಂತೆ ಈ ಪಿರಮಿಡ್‌ನ ವಿಸ್ತಾರ ಕಡಿಮೆಯಾಗಿ ತುದಿ ತಲುಪಿದಾಗ ಕೇವಲ ಒಂದು ಬಿಂದುವಿನಲ್ಲಿ ಮುಕ್ತಾಯವಾಗುತ್ತದೆ. ಇದನ್ನೇ ಆಹಾರ ತಜ್ಞರು ಮತ್ತು ವಿಜ್ಞಾನಿಗಳು ನಮ್ಮ ದಿನನಿತ್ಯದ ಆಹಾರದ ಸೇವನೆಯ ಕ್ರಮಕ್ಕೆ ಅಳವಡಿಸಿ ಫುಡ್ ಪಿರಮಿಡ್ ಎಂಬ ಪರಿಕಲ್ಪನೆಯನ್ನು ಜನರಿಗೆ ಪರಿಚಯಿಸಿದ್ದಾರೆ.

ಪಿರಮಿಡ್‌ನ ತಳಭಾಗ ಅಥವಾ ಗ್ರೌಂಡ್‌ಫ್ಲೋರ್

ನಮ್ಮ ದಿನನಿತ್ಯದ ದೈನಂದಿನ ಆಹಾರದಲ್ಲಿ ಹೆಚ್ಚಿನ ಪಾಲು ಧಾನ್ಯಗಳಿರಬೇಕು. ಅದು ಅನ್ನ, ಚಪಾತಿ, ರೊಟ್ಟಿ, ಮುದ್ದೆ ಹೀಗೆ ಎಲ್ಲವೂ ಮಿಶ್ರಿತವಾಗಿರಬೇಕು. ನಮ್ಮ ದೈನಂದಿನ ಕ್ಯಾಲರಿಗಳ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ಹೆಚ್ಚು ಪಾಲು ಕ್ಯಾಲರಿಗಳು ಇವುಗಳಿಂದ ಪೂರೈಕೆಯಾಗುತ್ತದೆ. ಈ ಧಾನ್ಯಗಳ ಪ್ರಮಾಣವನ್ನು 10 ಎಂದುಕೊಂಡಲ್ಲಿ ಇದಕ್ಕೆ ಅನುಪಾತವಾಗಿ ಉಳಿದ ಆಹಾರದ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ. ಇದು ನಮ್ಮ ಆಹಾರ ಪಿರಮಿಡ್‌ನ ತಳಭಾಗದ ಅಂತಸ್ತಿನ ಎಲ್ಲರೂ ಸೇವಿಸಬೇಕಾದ ದೈನಂದಿನ ಆಹಾರದ ಬಹುಭಾಗವನ್ನು ಪ್ರತಿನಿಧಿಸುತ್ತದೆ.

ಪಿರಮಿಡ್‌ನ ಮೊದಲ ಅಂತಸ್ತಿನ, ಅತ್ಯವಶ್ಯಕ ಆಹಾರ

ಇದನ್ನು ಆಹಾರ ಪಿರಮಿಡ್‌ನ ಫಸ್ಟ್ ಫ್ಲೋರ್ ಆಹಾರ ಎಂದೂ ಕರೆಯಲಾಗುತ್ತದೆ. ಈ ಆಹಾರದ ಹೆಚ್ಚು ಭಾಗ ತರಕಾರಿಗಳಿಂದ ಕೂಡಿರುತ್ತದೆ. ಇದರ ಪ್ರಕಾರ ಪ್ರತಿಯೊಬ್ಬರೂ ಯಥೇಚ್ಛವಾಗಿ ಹಸಿ ತರಕಾರಿ ಮತ್ತು ತರಕಾರಿಯಿಂದ ಮಾಡಿದ ಪದಾರ್ಥಗಳನ್ನು ಸೇವಿಸತಕ್ಕದ್ದು. ಹಾಗೆಂದ ಮಾತ್ರಕ್ಕೆ ಉಳಿದೆಲ್ಲಾ ಆಹಾರಗಳನ್ನು ವರ್ಜಿಸಿ ಬರೀ ತರಕಾರಿ ಮಾತ್ರ ಸೇವಿಸಬೇಕು ಎಂಬರ್ಥವಲ್ಲ. ಆಡು ಮಾತಿನಲ್ಲಿ ಹೇಳುವುದಾದರೆ ನಮ್ಮ ಆಹಾರದಲ್ಲಿ ತರಕಾರಿಗಳ ತಳಭಾಗದ ಪ್ರಮಾಣ 10 ಇದ್ದಲ್ಲಿ ಮೊದಲ ಅಂತಸ್ತಿನ ತರಕಾರಿಗಳ ಪಾಲು 6ರಷ್ಟು ಇರುವುದು ಸೂಕ್ತ ಎನ್ನಲಾಗಿದೆ.

ಉಳಿದ ನಂತರದ ಸ್ಥಾನಗಳು

ತರಕಾರಿಗಳ ಬಳಿಕದ ಸ್ಥಾನ ತಾಜಾ ಹಣ್ಣು ಹಂಪಲುಗಳಿಗೆ ಸೇರುತ್ತದೆ. ಇದರ ಪ್ರಮಾಣದ 5ರಷ್ಟು ಇದ್ದರೆ ಉತ್ತಮ, ಆ ಬಳಿಕದ ಸ್ಥಾನವನ್ನು ಬೇಳೆಕಾಳುಗಳಿಗೆ ಸಲ್ಲುತ್ತದೆ. ಅವುಗಳ ಪ್ರಮಾಣ 4ರಷ್ಟು ಇದ್ದರೆ ಉತ್ತಮ. ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಮಜ್ಜಿಗೆ ಇತ್ಯಾದಿಗಳಿಗೆ ನಂತರದ ಸ್ಥಾನವನ್ನು ನೀಡಲಾಗಿದೆ. ಇವುಗಳ ಪ್ರಮಾಣ 3 ಎಂದು ವ್ಯಾಖ್ಯಾನಿಸಲಾಗಿದೆ. ಆನಂತರದ ಸ್ಥಾನವನ್ನು ಮಾಂಸಾಹಾರಕ್ಕೆ ನೀಡಲಾಗಿದೆ. ಸಂಖ್ಯೆಯ ಅನುಪಾತದಲ್ಲಿ ಮಾಂಸಾಹಾರಕ್ಕೆ 2 ಎಂದು ಗುರುತಿಸಲಾಗಿದೆ. ಇದು ಹಿತಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆಹಾರ ತಜ್ಞರು ಅಂದಾಜಿಸಿದ್ದಾರೆ.

ಮೇಲಂತಸ್ತು

ಆಹಾರ ಪಿರಮಿಡ್‌ನ ಮೇಲಿನ ಅಂತಸ್ತನ್ನು ಕೇವಲ ಬಿಂದುವಿನ ರೂಪದಲ್ಲಿ ವ್ಯಾಖ್ಯಾನಿಸಲಾಗಿದೆ. ಇದರ ಅರ್ಥ ಇಂತಹ ಆಹಾರಗಳನ್ನು ಸೇವಿಸುವ ಅವಶ್ಯಕತೆ ಇಲ್ಲ ಎಂಬುದಾಗಿದೆ. ಇಂತಹ ಆಹಾರಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಸೇವಿಸತಕ್ಕದ್ದು. ಈ ಆಹಾರ ಪದಾರ್ಥಗಳ ಪಟ್ಟಿಗೆ ಕೊಬ್ಬು ಜಾಸ್ತಿ ಇರುವ ಕರಿದ ತಿಂಡಿಗಳು, ಸಂಸ್ಕರಿಸಿದ ರಾಸಾಯನಿಕ ಮತ್ತು ಶೇಖರಿಸಬಹುದಾದ ಆಹಾರಗಳು, ಐಸ್‌ಕ್ರೀಂ, ಸ್ವೀಟ್ಸ್ ಮುಂತಾದ ಆಹಾರ ಪದಾರ್ಥಗಳು ಸೇರುತ್ತದೆ. ಈ ಆಹಾರದ ಪ್ರಮಾಣವನ್ನು ತಳ ಅಂತಸ್ತಿನ 10ಕ್ಕೆ ಹೋಲಿಸಿದರೆ ಕೇವಲ 1 ಆಗಿರುತ್ತದೆ. ಇದರರ್ಥ ಇಂತಹ ಆಹಾರ ಪದಾರ್ಥಗಳನ್ನು ಅತೀ ಅನಿವಾರ್ಯವಾದಲ್ಲಿ ಮಾತ್ರ ಸೇವಿಸಬೇಕು. ದಿನನಿತ್ಯದ ಆಹಾರದ ಪಟ್ಟಿಯಲ್ಲಿ ಇಂತಹ ಆಹಾರಗಳಿಗೆ ಅವಕಾಶ ನೀಡಲೇಬಾರದು. ಈ ಆಹಾರಗಳನ್ನು ಬಾಯಿಚಪಲಕ್ಕೆ ತಿನ್ನುವ ಆಹಾರ ಎಂದು ಹೆಸರಿಸಲಾಗಿದ್ದು, ಹೊಟ್ಟೆ ತುಂಬಿಸುವ ಆಹಾರ ಅಲ್ಲ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ವಿಪರ್ಯಾಸವೆಂದರೆ ಈಗೀಗ ನಮ್ಮ ಯುವಜನರು ಆಹಾರ ಪಿರಮಿಡ್‌ನ ಮೇಲಂತಸ್ತಿನ ಆಹಾರವನ್ನು ಹೆಚ್ಚು ಸೇವಿಸಿ, ತಳ ಅಂತಸ್ತಿನ ಆಹಾರವನ್ನು ಕಡಿಮೆ ಮಾಡಿ, ದೇಹದಲ್ಲಿ ಅನಗತ್ಯ ಬೊಜ್ಜು, ಕೊಬ್ಬು ಬೆಳೆಸಿ, ದೇಹವನ್ನು ರೋಗಗಳ ಹಂದರವಾಗಿ ಮಾಡುತ್ತಿರುವುದು ವಿಪರ್ಯಾಸದ ಪರಮಾವಧಿ ಎಂದರೂ ತಪ್ಪಾಗಲಾರದು.

ಕೊನೆಮಾತು:

ನಾವು ತಿನ್ನುವ ಆಹಾರ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಬೇಕು. ಸಿಕ್ಕಿದ್ದೆಲ್ಲಾ ತಿನ್ನುವುದು ಬಹಳ ಅಪಾಯಕಾರಿ. ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನು ಮಾತ್ರ ಹಿತಮಿತವಾಗಿ ಸೇವಿಸಬೇಕು. ಆಹಾರವನ್ನು ಔಷಧಿಯಂತೆ ಸೇವಿಸಬೇಕು. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವನ್ನಾಗಿ ಸೇವಿಸಬೇಕಾದ ಪರಿಸ್ಥಿತಿ ಬರಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)