varthabharthi


ರಾಷ್ಟ್ರೀಯ

ರಾಜಸ್ಥಾನದ ಕಾಂಗ್ರೆಸ್ ಶಾಸಕ ಗಜೇಂದ್ರ ಸಿಂಗ್ ಶೆಖಾವತ್ ನಿಧನ

ವಾರ್ತಾ ಭಾರತಿ : 20 Jan, 2021

ಜೈಪುರ: ರಾಜಸ್ಥಾನದ ಉದಯಪುರ ಜಿಲ್ಲೆಯ ವಲ್ಲಭ್ ನಗರದ ಕಾಂಗ್ರೆಸ್ ಶಾಸಕ ಗಜೇಂದ್ರ ಸಿಂಗ್ ಶೆಖಾವತ್  ದೀರ್ಘಕಾಲದ ಅನಾರೋಗ್ಯದಿಂದಾಗಿ ಬುಧವಾರ ನಿಧನರಾದರು. ಶೆಖಾವತ್ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರ ಆಪ್ತರಾಗಿದ್ದಾರೆ.

ಕಳೆದ ವರ್ಷ ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆತೋರಿದಾಗ  ಪೈಲಟ್‍ರೊಂದಿಗೆ ಬಂಡಾಯ ಎದ್ದ 18 ಕಾಂಗ್ರೆಸ್ ಶಾಸಕರ ಪೈಕಿ ಶೆಖಾವತ್ ಒಬ್ಬರಾಗಿದ್ದರು.

48ರ ವಯಸ್ಸಿನ ಶೆಖಾವತ್ ಅನಾರೋಗ್ಯದಿಂದ ಬಳಲುತ್ತಿದ್ದು, ದಿಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲೇ ಇಂದು ನಿಧನರಾದರು.

ಕಳೆದ ಒಂದೂವರೆ ತಿಂಗಳುಗಳಿಂದ ಶೆಖಾವತ್ ದಿಲ್ಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಜಾಂಡೀಸ್ ನಿಂದ ಬಳಲುತ್ತಿದ್ದರು. ಕೋವಿಡ್-19 ಸೋಂಕು ಇರುವುದು ದೃಢಪಟ್ಟಿತ್ತು. ಇಂದು ಬೆಳಗ್ಗೆ ಅವರು ನಿಧನರಾದರು ಎಂದು ಉದಯಪುರ ಜಿಲ್ಲೆಯ ಕಾಂಗ್ರೆಸ್ ನ ಮಾಜಿ ವಕ್ತಾರ ಪಂಕಜ್ ಶರ್ಮಾ ಹೇಳಿದ್ದಾರೆ.

ಶೆಖಾವತ್ ನಿಧನಕ್ಕೆ ಸಚಿನ್ ಪೈಲಟ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಶೆಖಾವತ್ ಅವರ ತಂದೆ ದಿವಂಗತ ಗುಲಾಬ್ ಸಿಂಗ್ ಶೆಖಾವತ್ ಕಾಂಗ್ರೆಸ್‍ನ ಪ್ರಮುಖ ನಾಯಕನಾಗಿದ್ದರು.ವಲ್ಲಭ್ ನಗರ ಅಸೆಂಬ್ಲಿ ಕ್ಷೇತ್ರದಿಂದ ಹಲವುಬಾರಿ ಆಯ್ಕೆಯಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)