varthabharthi


ಕರಾವಳಿ

ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಉದ್ಘಾಟನೆ

ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಣಕ್ಕಾಗಿ ದಂಡ ಹೇರಿಕೆ: ಪೊಲೀಸ್ ಕಮಿಷನರ್

ವಾರ್ತಾ ಭಾರತಿ : 20 Jan, 2021

ಮಂಗಳೂರು, ಜ.20: ಸಂಚಾರ ನಿಯಮಗಳನ್ನು ಉಲ್ಲಂಘಿಸುವುದನ್ನು ನಿಯಂತ್ರಿಸುವುದಕ್ಕಾಗಿ ದಂಡ ಹಾಕಲಾಗುತ್ತದೆಯೇ ಹೊರತು ಸರಕಾರದ ಬೊಕ್ಕಸ ತುಂಬಿಸುವ ಉದ್ದೇಶದಿಂದಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿಪ್ರಾಯಿಸಿದ್ದಾರೆ.

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವತಿಯಿಂದ ಬುಧವಾರ ಹಮ್ಮಿಕೊಂಡಿರುವ ಸಪ್ತಾಹದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ನಿರ್ಲಕ್ಷ್ಯದಿಂದಾಗಿಯೇ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು, ಇದರಿಂದ ಸಾಕಷ್ಟು ಪ್ರಾಣಾಪಾಯಗಳು ಸಂಭವಿಸುತ್ತವೆ. ಒಟ್ಟು ಅಪರಾಧ ಪ್ರಕರಣಗಳಲ್ಲಿ ಸಂಭವಿಸುವ ಸಾವಿನಲ್ಲಿ ರಸ್ತೆ ಅಪಘಾತದ್ದೇ ಅಧಿಕವಾಗಿರುತ್ತದೆ. ಸಂಚಾರಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿದರೆ ಅಪಘಾತ ಪ್ರಕರಣಗಳು ನಿಯಂತ್ರಿಸಲ್ಪಡುತ್ತವೆ ಎಂದವರು ಹೇಳಿದರು.

ಮಂಗಳೂರು ಬುದ್ಧಿವಂತರು, ವಿದ್ಯಾವಂತರ ನಗರವಾಗಿರುವುದರಿಂದ ದೇಶಕ್ಕೆ ಮಾದರಿ ಸಂಚಾರಿ ವ್ಯವಸ್ಥೆಗೆ ಇಲ್ಲಿಂದಲೇ ದಿಕ್ಸೂಚಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಎಚ್ಚೆತ್ತುಕೊಂಡು ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನಗಳ ಮಾಲಕರು ತಮ್ಮ ಉದ್ಯೋಗಿಗಳಿಗೆ ಸಂಚಾರ ನಿಯಮ ಪಾಲನೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಸಭೆಯಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಹಾಗೂ ವಿವಿಧ ವಾಹನ ಮಾಲಕರ, ಚಾಲಕರ ಸಂಘಟನೆಗಳ ಮುಖ್ಯಸ್ಥರಿಗೆ ಸಲಹೆ ನೀಡಿದರು.

ಡಿಸಿಪಿ ಹರಿರಾಂ ಶಂಕರ್ ಮಾತನಾಡಿ, ಕೊರೋನ ಲಾಕ್‌ಡೌನ್ ಸಂದರ್ಭ ಸಾವಿನ ಸಂಖ್ಯೆ ಸಾಕಷ್ಟು ಕ್ಷೀಣಿಸಲು ಕಾರಣ ರಸ್ತೆಗಳಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿರುವುದು. ಇದನ್ನು ನಾವು ಅರ್ಥಮಾಡಿಕೊಂಡಲ್ಲಿ ಸುಗಮ ಸಂಚಾರದ ಜತೆಗೆ ಪ್ರಾಣ ರಕ್ಷಣೆಯೂ ಸಾಧ್ಯ ಎಂದರು.

ಅಂಚೆ ಇಲಾಖೆಯ ಮಂಗಳೂರು ವಿಭಾಗದ ಮುಖ್ಯ ಅಧೀಕ್ಷಕ ಶ್ರೀಹರ್ಷ, ಯೂನಿಯನ್ ಬ್ಯಾಂಕ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಗನ್ನಾಥ್, ಆರ್‌ಟಿಒ ವರ್ಣೇಕರ್, ರೋಶನಿ ನಿಲಯ ಕಾಲೇಜಿನ ಪ್ರಾಂಶುಪಾಲ ಜೂಲಿಯೆಟ್ ಮೊದಲಾದವರು ಉಪಸ್ಥಿತರಿದ್ದರು.

ಎಸಿಪಿ ನಟರಾಜ್ ಸ್ವಾಗತಿಸಿದರು.

ಸಮಾರಂಭದಲ್ಲಿ ಯೂನಿಯನ್ ಬ್ಯಾಂಕ್‌ನಿಂದ ರಸ್ತೆ ಸುರಕ್ಷತೆಗಾಗಿ ಮಂಗಳೂರು ಪೊಲೀಸ್ ಇಲಾಖೆಗೆ 200 ಬ್ಯಾರಿಕೇಡ್‌ಗಳನ್ನು ಹಸ್ತಾಂತರಿಸಲಾಯಿತು.

ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಕಾಲೇಜು ವಿದ್ಯಾರ್ಥಿಗಳಿಂದ ನೆಹರೂ ಮೈದಾನದಿಂದ ರಮಣ ಪೈ ಸಭಾಂಗಣದವರೆಗೆ ರಸ್ತೆ ಸುರಕ್ಷತಾ ಜಾಥಾ ನಡೆಯಿತು. ರೋಶನಿ ನಿಲಯದ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯ ಅಗತ್ಯತೆ ಕುರಿತಂತೆ ಕಿರುಪ್ರಹಸನವನ್ನು ಪ್ರದರ್ಶಿಸಿದರು.


2020ರಲ್ಲಿ 114 ಭೀಕರ ಅಪಘಾತ 116 ಸಾವು

ಪ್ರಾಸ್ತಾವಿಕವಾಗಿ ಮಾತನಾಡಿದ ಡಿಸಿಪಿ ವಿನಯ ಗಾಂವ್ಕರ್, 2018ರಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 165 ಭೀಕರ ಅಪಘಾತಗಳು ಸಂಭವಿಸಿದ್ದು, 120 ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು. 2019ರಲ್ಲಿ 146 ಅಪಘಾತಗಳಲ್ಲಿ 154 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 2020ರಲ್ಲಿ 114 ಅಪಘಾತ ಪ್ರಕರಣಗಳಲ್ಲಿ 116 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಅವರು ಮಾಹಿತಿ ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)