ಕರ್ನಾಟಕ
ಸ್ಪಷ್ಟನೆ ನೀಡಿದ ಡಿಎಚ್ಒ
ಕೋವಿಡ್ ಲಸಿಕೆ ಪಡೆದುಕೊಂಡಂತೆ ನಟನೆ ಮಾಡಿದ ಜಿಲ್ಲಾ ವೈದ್ಯಾಧಿಕಾರಿ ?: ವಿಡಿಯೋ ವೈರಲ್

ತುಮಕೂರು, ಜ.20: ಕೊರೋನ ನಿಯಂತ್ರಣ ಲಸಿಕೆ ನೀಡುವ ಅಭಿಯಾನ ದೇಶಾದ್ಯಂತ ಈಗಾಗಲೇ ಆರಂಭವಾಗಿದ್ದು, ಅದರಂತೆ ತುಮಕೂರು ನಗರದಲ್ಲೂ ವಾಕ್ಸಿನ್ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆದರೆ ಜಿಲ್ಲಾ ವೈದ್ಯಾಧಿಕಾರಿ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಲಸಿಕೆ ಪಡೆಯುತ್ತಿರುವಂತೆ ನಟನೆ ಮಾಡಿದ್ದಾರೆನ್ನಲಾದ ವಿಡಿಯೋವೊಂದು ವೈರಲ್ ಆಗಿದೆ.
ಜಿಲ್ಲಾ ವೈದ್ಯಾಧಿಕಾರಿ(ಡಿಎಚ್ಒ) ನಾಗೇಂದ್ರಪ್ಪ ಮತ್ತು ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ರಜನಿ ಅವರು ಇಂದು ಕೊವಾಕ್ಸಿನ್ ಚುಚ್ಚುಮದ್ದು ತೆಗೆದುಕೊಂಡಂತೆ ನಟನೆ ಮಾಡಿದ್ದಾರೆ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಲ್ಲದೇ, ಭಾರೀ ಆಕ್ರೋಶ ವ್ಯಕ್ತವಾಗಿದೆ.
ಮೊದಲು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ ಅವರು ಲಸಿಕೆ ತೆಗೆದುಕೊಂಡಿದ್ದು, ಬಳಿಕ ನಾಗೇಂದ್ರಪ್ಪ ಮತ್ತು ಡಾ.ರಜನಿ ಅವರು ಲಸಿಕೆ ಪಡೆಯಲೆಂದು ಕೂತಿದ್ದಾರೆ. ಆದರೆ ಲಸಿಕೆ ಪಡೆದಂತೆ ನಟನೆ ಮಾಡಿದ್ದಾರೆ ಹೊರತು ಸೂಜಿ ಚುಚ್ಚಿಸಿಕೊಳ್ಳಲಿಲ್ಲ. ಬಳಿಕ ಕೈ ಎತ್ತಿ ಸಂಭ್ರಮಿಸಿದ್ದಲ್ಲದೇ, ಅಲ್ಲಿನ ಸಿಬ್ಬಂದಿ ಚಪ್ಪಾಳೆ ತಟ್ಟುತ್ತಾರೆ. ಈ ದೃಶ್ಯವು ವೀಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಡಿಹೆಚ್ಓ ನಾಗೇಂದ್ರಪ್ಪ ಅವರು, ನಾನು ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. “ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜ.16ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಖುದ್ದಾಗಿ ಲಸಿಕೆ ಹಾಕಿಸಿಕೊಳ್ಳಲಾಗಿತ್ತು. ಆದರೆ ಇದಕ್ಕೆ ಸಂಬಂಧಿಸಿದಂತೆ ದಾಖಲಾತಿಯು ತಾಂತ್ರಿಕ ಅಂಶಗಳಿಂದ ಅಪ್‌ಲೋಡ್ ಆಗಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಹಾಗೂ ಈ ಮೂಲಕ ಮಾಧ್ಯಮ ವರದಿ ಬಗ್ಗೆ ಸ್ಪಷ್ಟನೆ ನೀಡುತ್ತಿದ್ದೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.
ಡಾ.ರಜನಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಲಸಿಕೆ ತೆಗೆದುಕೊಂಡಿರುವುದರ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ