varthabharthi


ನಿಮ್ಮ ಅಂಕಣ

ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ: ವಸ್ತುಸ್ಥಿತಿಯೇನು?

ವಾರ್ತಾ ಭಾರತಿ : 21 Jan, 2021
ಡಾ.ಬಿ.ಪಿ.ಮಹೇಶ ಚಂದ್ರ ಗುರು

ಕುರುಬ ಸಮುದಾಯವನ್ನೂ ಒಳಗೊಂಡಂತೆ ಯಾವುದೇ ಹಿಂದುಳಿದ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಾದರೆ ಅನುಸರಿಸಲೇಬೇಕಾದ ಮೊತ್ತ ಮೊದಲ ಕ್ರಮವೆಂದರೆ ವೈಜ್ಞಾನಿಕ ಕುಲಶಾಸ್ತ್ರೀಯ ಅಧ್ಯಯನ. ಈ ನಿಟ್ಟಿನಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಬದ್ಧರಾದ ಸಿದ್ದರಾಮಯ್ಯನವರು ದಿನಾಂಕ 18-10-2018ರಲ್ಲಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಹಿಂದುಳಿದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಲುವಾಗಿ ತಕ್ಷಣದಲ್ಲೇ ಕುಲಶಾಸ್ತ್ರೀಯ ಅಧ್ಯಯನ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದರು. ಅಲ್ಲದೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯ ನಿರ್ದೇಶಕರಿಂದ ಈ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಿರ್ವಹಣೆಗೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಅದೇ ಸಂದರ್ಭದಲ್ಲಿ ಸರಕಾರದಿಂದ 40ಲಕ್ಷ ರೂ. ಬಿಡುಗಡೆ ಮಾಡಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಮುನ್ನುಡಿಯನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಬರೆದಿದ್ದಾರೆ. ಚರಿತ್ರೆಗೂ ಚಾರಿತ್ರ್ಯಕ್ಕೂ ಇರುವ ಮೂಲಭೂತ ವ್ಯತ್ಯಾಸವನ್ನರಿ ಯದ ಕೆ. ಎಸ್. ಈಶ್ವರಪ್ಪ, ಎ. ಎಚ್. ವಿಶ್ವನಾಥ್, ಮುಕುಡಪ್ಪಮೊದಲಾದ ಬಿಜೆಪಿಗೆ ಸೇರಿದ ಕೆಲವರು ಈ ವಿಷಯದಲ್ಲಿ ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ಮೀಸಲಾತಿಗೆ ಬದ್ಧರಾಗಿಲ್ಲವೆಂಬ ತಪ್ಪುಸಂದೇಶವನ್ನು ಕುರುಬ ಸಮುದಾಯಕ್ಕೆ ನೀಡಲು ಹೊರಟಿರುವುದು ಸತ್ಯಕ್ಕೆ ಬಗೆದ ಬಹುದೊಡ್ಡ ಅಪಚಾರವಾಗಿದೆ. ಇವರಿಗೆ ಜನಾಂಗವನ್ನು ಉದ್ಧರಿಸುವುದಕ್ಕಿಂತ ಮುಖ್ಯವಾಗಿ ಕಪಟ ನಾಟಕದ ಮೂಲಕ ತಾವೇ ಕುರುಬ ಜನಾಂಗದ ಅಸಲಿ ನಾಯಕರೆಂದು ಬಿಂಬಿಸಿಕೊಂಡು ಹೈಕಮಾಂಡ್‌ನಿಂದ ಅಧಿಕಾರ ಪಡೆಯುವುದು ಬಹುದೊಡ್ಡ ಗೌಪ್ಯ ಕಾರ್ಯಸೂಚಿಯಾಗಿದೆ.

ಇಂತಹ ನಕಲಿ ಜನಾಂಗದ ನಾಯಕರ ಬಗ್ಗೆ ಕುರುಬ ಸಮುದಾಯ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಸಿದ್ದರಾಮಯ್ಯನವರು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ನಿಟ್ಟಿನಲ್ಲಿ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ಮತ್ತು ಹಣನೀಡಿ ಎರಡು ವರ್ಷಗಳು ಸಂದಿವೆ. 2019ರಿಂದಲೂ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಮತ್ತು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ ಅಸ್ತಿತ್ವದಲ್ಲಿವೆ. ಕುರುಬ ಸಮುದಾಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ನಾಯಕರಿಗೆ ನಿಜವಾದ ಕಾಳಜಿ ಇದ್ದ ಪಕ್ಷದಲ್ಲಿ ಇಷ್ಟೊತ್ತಿಗಾಗಲೇ ತಮ್ಮದೇ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಸ್ಥೆಯಿಂದ ಕುಲಶಾಸ್ತ್ರೀಯ ಅಧ್ಯಯನ ವರದಿ ತರಿಸಿಕೊಂಡು ಮುಂದಿನ ಸೂಕ್ತ ಕ್ರಮಕ್ಕಾಗಿ ರಾಷ್ಟ್ರೀಯ ಬುಡಕಟ್ಟು ಆಯೋಗಕ್ಕೆ ವರದಿಯನ್ನು ಮಂಡಿಸಬಹುದಿತ್ತು. ಅಲ್ಲದೆ ಕೇಂದ್ರ ಸರಕಾರದ ಮಟ್ಟದಲ್ಲಿ ಜವಾಬ್ದಾರಿಯುತವಾಗಿ ಲಾಬಿ ನಡೆಸಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಲುವಾಗಿ ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಸಕಾಲದಲ್ಲಿ ಅನುಮೋದನೆ ಪಡೆಯಬಹುದಿತ್ತು.

ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದ ಬಳಿಕ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಾನೂನಾತ್ಮಕವಾಗಿ ಒಪ್ಪಿಗೆ ಪಡೆದು ಸಂಬಂಧಪಟ್ಟ ಕಡತವನ್ನು ಕೇಂದ್ರ ಸರಕಾರವೇ ರಾಷ್ಟ್ರಪತಿಗೆ ಸಲ್ಲಿಸಿ ಸಾಂವಿ ಧಾನಿಕವಾಗಿ ಅಂಗೀಕಾರ ಪಡೆಯಬಹುದಿತ್ತು. ತದನಂತರ ರಾಜ್ಯಪತ್ರದಲ್ಲಿ ಪ್ರಕಟನೆ ಹೊರಡಿಸಿದ ನಂತರವೇ ಪ್ರಸ್ತಾಪಿತ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಅಧಿಕೃತವಾಗಿ ಸೇರಿಸಬಹುದಿತ್ತು. ಇಷ್ಟು ಹಂತಗಳನ್ನು ಒಳಗೊಂಡಿರುವ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗಿರುವುದನ್ನು ಕರ್ನಾಟಕದ ಕುರುಬ ಸಮುದಾಯ ಮನಗಾಣಬೇಕು. ವಸ್ತುಸ್ಥಿತಿ ಹೀಗಿರುವಾಗ ಕರ್ನಾಟಕದ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಲ್ಲಿ ಪ್ರಸ್ತುತ ಸಂದರ್ಭದಲ್ಲಿ ಯಾವುದೇ ಮಹತ್ವದ ಸಾಂವಿಧಾನಿಕ ಹುದ್ದೆ ಮತ್ತು ಜವಾಬ್ದಾರಿಗಳನ್ನು ಹೊಂದಿಲ್ಲದ ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದಿಂದ ದೂರವಿರಿಸುವ ಷಡ್ಯಂತ್ರವನ್ನು ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರು ರೂಪಿಸಿರುವುದು ಅವಿವೇಕ ಮತ್ತು ಕ್ರೌರ್ಯಗಳ ಪರಮಾವಧಿಯಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಮೀಸಲಾತಿ ನೀಡುವ ಅಧಿಕಾರ ಹೊಂದಿರುವ ಬಿಜೆಪಿ ನೇತೃತ್ವದ ಸರಕಾರಗಳು ಸಾಂವಿಧಾನಿಕ ಚೌಕಟ್ಟಿನಲ್ಲಿ ಸಕಾಲದಲ್ಲಿ ಅವಶ್ಯಕ ಕ್ರಮಗಳನ್ನು ಕೈಗೊಂಡಿದ್ದರೆ ಕುರುಬ ಸಮುದಾಯಕ್ಕೆ ಒಳಿತುಂಟಾಗುತ್ತಿತ್ತು.

ಅಧಿಕಾರದಲ್ಲಿ ರುವವರು ನ್ಯಾಯೋಚಿತವಾಗಿ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡುವುದರ ಬದಲಿಗೆ ಹೋರಾಟವೆಂಬ ಕಪಟ ನಾಟಕವನ್ನಾಡಿ ಶೋಷಿತರ ನಾಯಕ ಸಿದ್ದರಾಮಯ್ಯನವರನ್ನು ರಾಜಕೀಯ ಕಾರಣಗಳಿಗಾಗಿ ಸಂದರ್ಭದ ಬಲಿಪಶುವನ್ನಾಗಿ ಮಾಡಲು ಹೊರಟಿರುವುದು ಸರಿಯಲ್ಲ. ಶೋಷಿತ ಸಮುದಾಯಗಳ ಸಬಲೀಕರಣಕ್ಕೆ ಬದ್ಧರಾಗಿಲ್ಲದ ಆರೆಸ್ಸೆಸ್, ಬಿಜೆಪಿ ಮೊದಲಾದ ಹಿಂದುತ್ವವಾದಿಗಳ ಹುನ್ನಾರವನ್ನು ಕುರುಬರನ್ನೂ ಒಳಗೊಂಡಂತೆ ಸಮಸ್ತ ಶೋಷಿತ ಜನಾಂಗಗಳು ಅರ್ಥಮಾಡಿಕೊಂಡು ಇವರಿಗೆ ತಕ್ಕ ಪಾಠ ಕಲಿಸಬೇಕು. ರಾಜಕೀಯ ಅಧಿಕಾರವನ್ನು ವಾಮ ಮಾರ್ಗದಲ್ಲಿ ಗಳಿಸಿ-ಉಳಿಸಿಕೊಂಡು ಹೋಗುವುದೇ ಬಹುದೊಡ್ಡ ಸಾಧನೆಯಲ್ಲ. ಸುಮ್ಮನೆ ಜೀವಂತವಾಗಿ ಉಳಿಯುವುದು ಮತ್ತು ರಾಜಕೀಯ ಅಧಿಕಾರವನ್ನು ಅನುಭವಿಸುವುದಕ್ಕೂ ಘನತೆ ಗೌರವದಿಂದ ಬಾಳಿ ಬದುಕುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆಯೆಂಬುದನ್ನು ಇಂದು ನಮ್ಮನ್ನು ರಾಜ್ಯ ಹಾಗೂ ರಾಷ್ಟ್ರದಲ್ಲಿ ಆಳುತ್ತಿರುವವರು ಅರ್ಥಮಾಡಿಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)