varthabharthi


ಅನುಗಾಲ

ದಾಸ್ಯಭಾವದ ಆಧುನಿಕ ಭಕ್ತಿಪಂಥ

ವಾರ್ತಾ ಭಾರತಿ : 21 Jan, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ರಾಷ್ಟ್ರ ರಾಜಕಾರಣವನ್ನು ನಿಯಂತ್ರಿಸುವ ಗೃಹಸಚಿವರು ಬರುತ್ತಾರೆಂದು ಮತ್ತು ಕೇಂದ್ರ ಸರಕಾರದ ‘ಕ್ಷಿಪ್ರ ಕಾರ್ಯಾಚರಣೆ ಪಡೆ’ಯೆಂಬುದಾದ್ದರಿಂದ ಅದನ್ನು ಕನ್ನಡದಲ್ಲಿ ಬರೆಯಬಾರದೆಂಬ ಕಾನೂನು ಎಲ್ಲೂ ಇಲ್ಲ. ಇಷ್ಟಕ್ಕೂ ಫಲಕಗಳು ಇರುವುದು ಓದಲು ಹೊರತು ಹಿರಿಮೆಗಲ್ಲ. ಯಾವುದೇ ಪ್ರಜಾಪ್ರಭುತ್ವದ ಸರಕಾರವು ಜನಸಾಮಾನ್ಯರಲ್ಲಿ ಪ್ರಜೆಗಳನ್ನು ಕಾಣಬೇಕು. ಕನ್ನಡದ ನೆಲದಲ್ಲಿ ಕನ್ನಡವನ್ನು ಓದಲು ಬರದಿರುವವರೂ ಇರಬಹುದು. ಹಾಗೆಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಓದುವವರಿಗಿಂತ ಹೆಚ್ಚು ಮಂದಿ ಕನ್ನಡವನ್ನು ಓದುತ್ತಾರೆ. ಹೀಗಿದ್ದೂ ಕನ್ನಡವನ್ನು ಕಡೆಗಣಿಸಿ ಇತರ ಭಾಷೆಗಳಿಗೆ ಪ್ರಾಶಸ್ತ್ಯವನ್ನು ನೀಡಿದ್ದು ಒಂದು ದೂರಗಾಮೀ ಸಂಚೇ ಹೊರತು ಪ್ರಾಮಾಣಿಕ ತಪ್ಪೇನಲ್ಲವೆನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.


ಮಹಾರಾಷ್ಟ್ರದ ಮುಖ್ಯಮಂತ್ರಿಯೂ ಶಿವಸೇನೆಯ ನಾಯಕರೂ ಆಗಿರುವ ಉದ್ಧವ್ ಠಾಕ್ರೆ ಕರ್ನಾಟಕದಲ್ಲಿರುವ ಮರಾಠಿ ಭಾಷಿಕ ಮತ್ತು ಸಾಂಸ್ಕೃತಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆಂಬ ರಾಜಕೀಯ ಹೇಳಿಕೆ ನೀಡಿದ್ದಾರೆ. ಶಿವಸೇನೆ ಒಂದು ಪ್ರಾದೇಶಿಕ ಪಕ್ಷ. ಅದೀಗ ಮರಾಠಿಗಳನ್ನು ಓಲೈಸುವ ಯತ್ನದಲ್ಲಿದೆ. ಸಹಜವಾಗಿಯೇ ಕರ್ನಾಟಕದ ಮುಖ್ಯಮಂತ್ರಿ ಮತ್ತು ಇತರ ರಾಜಕಾರಣಿಗಳು ಈ ಬಗ್ಗೆ ಖಂಡನೆಯ ಹೇಳಿಕೆಯನ್ನು ನೀಡಿದ್ದಾರೆ. ಸುಯೋಧನ ಠೀವಿಯ ‘‘ಒಂದಿಂಚೂ ಭೂಮಿಯನ್ನು ನೀಡಲಾರೆವು’’, ಅಥವಾ ಸಂವಿಧಾನದ ಒಲವಿನ ‘‘ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು’’ ಮುಂತಾದ ವೀರಾವೇಶದ ಮಾತುಗಳನ್ನು ಒಬ್ಬರಿಂದೊಬ್ಬರು ಸ್ಪರ್ಧಾತ್ಮಕವಾಗಿ ಆಡಿದ್ದಾರೆ. ಆಡಿದ್ದಾರೆ ಎಂಬುದು ಅರ್ಥಪೂರ್ಣ. ಏಕೆಂದರೆ ಇವೆಲ್ಲ ರಾಜಕೀಯದ ಆಟಗಳೇ. ಯಾರಿಗೆ ಪತ್ರಿಕೆಯ ಯಾವ ಪುಟದಲ್ಲಿ ಎಷ್ಟು ಪ್ರಾಶಸ್ತ್ಯ ಸಿಕ್ಕಿದೆಯೆಂಬುದಷ್ಟೇ ಮಹತ್ವಪೂರ್ಣ. ಕರ್ನಾಟಕದ ಕಾಂಗ್ರೆಸಿಗರು ಅದನ್ನು ಇಲ್ಲಿ ವಿರೋಧಿಸಿದರೂ ಅಲ್ಲಿ ವಿರೋಧಿಸುವ ಸ್ಥಿತಿಯಲ್ಲಿಲ್ಲ.

ಇದೇ ಸಮಯಕ್ಕೆ ಬೆಳಗಾವಿಯಲ್ಲಿ ಕರ್ನಾಟಕದ ಇಬ್ಬರು ಸಚಿವರು ಭಾಗವಹಿಸಿದ್ದ ಸಾರ್ವಜನಿಕ ಸಮಾರಂಭವೊಂದು ಮರಾಠಿ ಭಾಷೆಯಲ್ಲೇ ನಡೆಯಿತೆಂದು ವರದಿಯಾಗಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಹೇಳಿಕೆಯ ಕುರಿತು ಉತ್ತರಕುಮಾರತ್ವವನ್ನು ತೋರಿದ ಕರ್ನಾಟಕ ಸರಕಾರ ತನ್ನ ಸಚಿವರ ಮೂಲಕ ಮರಾಠಿಯ ಬಗ್ಗೆ ತೋರಿದ ಅನಗತ್ಯ ಮತ್ತು ಅತೀ ಒಲವಿಗೆ ಏನು ಅರ್ಥ ಕಲ್ಪಿಸಬೇಕು?

ಇದಕ್ಕೂ ಮೊದಲೇ ಕರ್ನಾಟಕದ ಹೃದಯಭಾಗದಲ್ಲಿರುವ, ಕನ್ನಡ ಸಾಹಿತ್ಯ-ಸಂಸ್ಕೃತಿ ಸಮೃದ್ಧಿಯ ದ್ಯೋತಕವಾಗಿರುವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿಯವರ ತವರು ಕ್ಷೇತ್ರವಾದ ಶಿವಮೊಗ್ಗದ ಭದ್ರಾವತಿಯಲ್ಲಿ ನಡೆದ, ಕೇಂದ್ರ ಗೃಹಮಂತ್ರಿಗಳೂ ಕರ್ನಾಟಕದ ಮುಖ್ಯಮಂತ್ರಿಯಾದಿಯಾಗಿ ಹಲವಾರು ಸಚಿವರು ಭಾಗಿಯಾಗಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಕನ್ನಡವು ನಾಮಫಲಕ ಸಹಿತ ಮಾಯವಾಗಿತ್ತೆಂದು ವರದಿಯಾಗಿದೆ. ಇದನ್ನು ನಾಡಿನ ಗಣ್ಯರನೇಕರು ಖಂಡಿಸಿದ್ದಾರೆ. ಆದರೆ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಿಲುವು ಎಂದು ಇನ್ನೊಂದು ಸಂದರ್ಭದಲ್ಲಿ ಘರ್ಜಿಸಿದ ಸರಕಾರ ಸುಮ್ಮನಾಗಿದೆ. ಈ ಅನರ್ಥಕ್ಕೆ ಏನು ಹೇಳಬೇಕು? ಸಾಹಿತ್ಯದ ಸಂದರ್ಭವೊಂದಕ್ಕೆ ಸಂಬಂಧಿಸಿದಂತೆ ಬರೆಯುತ್ತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ‘‘ಬರವಣಿಗೆ ಸತ್ಯವಾಗಿ ಬಾಯಿಮಾತು ಸುಳ್ಳಾಗುವುದು ರಾಜಕೀಯದಲ್ಲಿ’’ ಎನ್ನುತ್ತಾರೆ. (ಇದು ಸಾಹಿತ್ಯದ ರಾಜಕೀಯಕ್ಕೂ ಅನ್ವಯಿಸುವ ಮಾತು.) ಆದರೆ ಇಂದು ಬರೆದದ್ದು, ಬರೆಯದ್ದು ಹೀಗೆ ಎಲ್ಲವೂ ಸುಳ್ಳಾಗುವುದು ರಾಜಕೀಯದಲ್ಲಿ. ತಮ್ಮ ಮೂಗಿಗೆ ನೇರವಾಗಿ ಯೋಚಿಸುವ, ಯೋಜನೆಗಳನ್ನು ಕಾರ್ಯಗತಗೊಳಿಸುವ, ಒಟ್ಟಾರೆ ಮೇಲೆ ಜನಮಾನಸದ ಮೇಲೆ ಅಹಂಕಾರದಿಂದ ಸವಾರಿ ಮಾಡುವುದು ರಾಜಕಾರಣವೆಂದೆನಿಸಿಕೊಳ್ಳುತ್ತಿದೆ.

ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವದ ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ರಾಜ್ಯವು ಸಾಂಪ್ರದಾಯಿಕವಾಗಿ ಸಂವಿಧಾನಕ್ಕೆ ತೋರಬೇಕಾದ ಬದ್ಧತೆಯೊಂದಿಗೆ ಆಯಾ ರಾಜ್ಯದ ನೆಲ-ಜಲ-ಭಾಷೆ ಇವೆಲ್ಲವನ್ನು ರಕ್ಷಿಸಬೇಕು. ಈ ಕುರಿತು ವೇದಿಕೆ ಸಿಕ್ಕಾಗಲೆಲ್ಲ ಮತ್ತು ವಿಶೇಷವಾಗಿ ಸಾಹಿತ್ಯ ಸಮ್ಮೇಳನದ ಸಭಾಂಗಣದಲ್ಲಿ ಭರವಸೆಯನ್ನು ನೀಡುತ್ತಾರೆ. ಸದ್ಯ ನಮ್ಮ ಮುಂದೆ ಕರ್ನಾಟಕವಿರಲಿ. ನೆಲ ಅಂದರೆ ಅದರಲ್ಲಿರುವ ಕಾಡು, ಬೆಟ್ಟ, ನಿಧಿ, ವನ್ಯಜೀವಿ ಇಂತಹ ಎಲ್ಲ ಸಂಪನ್ಮೂಲಗಳು ಸೇರಿವೆಯೆಂದರ್ಥ. (ಮನುಷ್ಯರನ್ನು ರಕ್ಷಿಸುವ ಭರವಸೆಯನ್ನು ಯಾರೂ ನೀಡಿದ್ದು ಕಂಡುಬರುವುದಿಲ್ಲ!) ಜಲವಿದ್ದರೆ ಅದನ್ನು ಸಂರಕ್ಷಿಸಲು ಪ್ರಯತ್ನಿಸಬೇಕು.

ಸದ್ಯ ಕರ್ನಾಟಕದ ನದಿ-ಬಾವಿ-ಕೆರೆ-ಕಟ್ಟೆಗಳಲ್ಲಿ ನೀರಿನ ಬರವಿದೆ. ಈಗ ಚಾತಕ ಪಕ್ಷಿಗಳಂತೆ ಮಳೆಗೆ ಕೊರಳೊಡ್ಡಿ ಸಂಗ್ರಹವಾದ ನೀರು ಬದುಕಿಗೆ ಸಾಕಾದೀತೆಂಬ ಭರವಸೆಯಲ್ಲಿರಬೇಕಾಗಿದೆ. ಆದ್ದರಿಂದ ಜಲಸಂರಕ್ಷಣೆಯೆಂಬುದು ನಿಯಮಗಳಿಗೆ ಮತ್ತು ಈ ಷರತ್ತುಗಳಿಗೊಳಪಟ್ಟಿದೆ. ಇನ್ನು ನುಡಿಯೆಂಬುದು ನಾವಾಗಿ ಕಟ್ಟಿಕೊಂಡ ಕೋಟೆ. ಅಸಂಖ್ಯ ಭಾಷೆಗಳ ಉಗ್ರಾಣವಾದ ಈ ದೇಶವನ್ನು ಭಾಷಾಧಾರಿತ ರಾಜ್ಯಗಳಾಗಿ ವಿಂಗಡಿಸಿದಾಗ ಸಣ್ಣಪುಟ್ಟ ಭಾಷೆಗಳನ್ನು ನಿಜಕ್ಕೂ ನಿರ್ಲಕ್ಷಿಸಲಾಯಿತು. ಆಯಾ ಭೂಪ್ರದೇಶದಲ್ಲಿ ಮುಖ್ಯವೆಂದೆನ್ನಿಸಿಕೊಂಡ ಭಾಷೆಯನ್ನು ಆ ರಾಜ್ಯದ ಭಾಷೆಯೆಂದು ಪರಿಗಣಿಸಲಾಯಿತು. ಅದರರ್ಥ ಇತರ ಭಾಷೆಗಳನ್ನು ಬಿಟ್ಟುಕೊಡಬೇಕೆಂದಲ್ಲ. ಸರಕಾರದ ಸಹಾಯಹಸ್ತದಿಂದಾಗಿ ಸಣ್ಣಭಾಷೆಗಳು ಈಗ ಹೆಚ್ಚು ಪ್ರಖರವಾಗುತ್ತಿವೆ.

ಆದರೆ ಸ್ವತಂತ್ರ ಭಾರತದ ಈ ಏಳೂ ಚಿಲ್ಲರೆ ದಶಕಗಳಲ್ಲಿ ನಾವು ಕಂಡದ್ದು, ಉಂಡದ್ದು ಭಾಷೆಯ ಹೆಸರಿನಲ್ಲಿ ನಡೆದ ರಾಜಕೀಯವನ್ನೇ. ರಾಷ್ಟ್ರೀಯ ಪಕ್ಷಗಳು ಒಂದೊಂದು ರಾಜ್ಯದಲ್ಲಿ ಒಂದೊಂದು ನಿಲುವಿನ ದ್ವಂದ್ವವನ್ನು ಪ್ರಕಟಿಸುತ್ತಲೇ ಬಂದರೂ ಜನರು ಅದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಆದರೆ ಮುಖ್ಯವಾಗಿ ಗಮನಿಸಬೇಕಾದ್ದೆಂದರೆ ಭಾಷೆ ಯಾವ ರಾಜಕೀಯ ಪಕ್ಷಕ್ಕೂ ಮುಖ್ಯವಲ್ಲ ಎಂಬುದನ್ನು. ಭಾಷೆ ಆ ಮೂಲಕ ಸಾಹಿತ್ಯ-ನಾಟಕ ಮುಂತಾದ ಕಲೆಗಳು (ಭಾಷೆಯ ಕಟ್ಟಿಲ್ಲದ ಚಿತ್ರ, ಶಿಲ್ಪ ಮುಂತಾದ ಕಲೆಗಳೂ ಇವೆಯಲ್ಲ!), ಅವುಗಳ ಮೂಲಕ ಸಂಸ್ಕೃತಿಯೆಂದು ರೂಢಿಯಲ್ಲಿ ಹೇಳುವ ಜೀವನವೈಶಿಷ್ಟ್ಯ ಇವು ರಾಜಕಾರಣದಲ್ಲಿ ನಗಣ್ಯ. ತೋರಿಕೆಗಷ್ಟೇ ರಾಜಸತ್ತೆಯನ್ನು ನೆನಪಿಸುವಂತೆ ಪ್ರಶಸ್ತಿ ಗೌರವಗಳು, ಆಸ್ಥಾನದ ಬಿರುದು ಬಾವಲಿಗಳು ನಡೆಯುತ್ತವೆಯೇ ಹೊರತು ಶಾಸನವನ್ನು ನಿಯಂತ್ರಿಸುವ ಸಾಂಸ್ಕೃತಿಕ ನೆಲೆಗಟ್ಟಿಲ್ಲ. ಆದ್ದರಿಂದ ರಾಜಕಾರಣಿಗಳಾಡಿದ್ದೇ ಭಾಷೆ, ಸಾಹಿತ್ಯ, ಸಂಸ್ಕೃತಿ ಎಂದಾಗಿದೆ. ಸದ್ಯ ಕೇಂದ್ರ ಸರಕಾರವು ಹಿಂದಿಯನ್ನು ಎಲ್ಲಕಡೆ ಹೇರುವ ಯತ್ನದಲ್ಲಿದೆ. ಅದರದ್ದೇ ರಾಜ್ಯಸರಕಾರಗಳಿದ್ದಲ್ಲಿ ಈ ಹೇರಿಕೆ ಸುಲಭ.

ಇತರ ರಾಜ್ಯಗಳಲ್ಲಿ ಈ ಪ್ರಯೋಗ ಅಷ್ಟು ಸುಲಭವಾಗಿ ಯಶಸ್ವಿಯಾಗುವುದಿಲ್ಲ. ಇತರ ಪಕ್ಷದ/ಗಳ ಕೆಲವು ರಾಜ್ಯ ಸರಕಾರಗಳು ಕೇಂದ್ರದ ವಿರುದ್ಧ ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಿವೆ. ಆದರೂ ರಾಜ್ಯ ಸರಕಾರಗಳ ಶಕ್ತಿ-ಸಾಮರ್ಥ್ಯವನ್ನು ಕ್ಷೀಣಗೊಳಿಸುವ ರಾಜಕೀಯ ಸಾಧನಗಳು ಕೇಂದ್ರದ ಬಳಿ ಇರುತ್ತವೆ. ಕರ್ನಾಟಕದಲ್ಲಿರುವ ಸರಕಾರ ಕೇಂದ್ರ ಸರಕಾರದ ಪಕ್ಷವೇ ಆಗಿರುವುದರಿಂದ ಕರ್ನಾಟಕವು ಯಾವುದೇ ಪ್ರತಿರೋಧವನ್ನು ತೋರುತ್ತದೆಯೆಂದು ನಿರೀಕ್ಷಿಸುವುದೇ ತಪ್ಪು. ಅದು ದಾಸಪಂಥವನ್ನೂ ಭಕ್ತಿಪಂಥವನ್ನೂ ಏಕಕಾಲಕ್ಕೆ ಅನುಷ್ಠಾನಗೊಳಿಸುತ್ತದೆ. ಮೊನ್ನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆದದ್ದು ಇದೇ. ರಾಷ್ಟ್ರ ರಾಜಕಾರಣವನ್ನು ನಿಯಂತ್ರಿಸುವ ಗೃಹಸಚಿವರು ಬರುತ್ತಾರೆಂದು ಮತ್ತು ಕೇಂದ್ರ ಸರಕಾರದ ‘ಕ್ಷಿಪ್ರ ಕಾರ್ಯಾಚರಣೆ ಪಡೆ’ಯೆಂಬುದಾದ್ದರಿಂದ ಅದನ್ನು ಕನ್ನಡದಲ್ಲಿ ಬರೆಯಬಾರದೆಂಬ ಕಾನೂನು ಎಲ್ಲೂ ಇಲ್ಲ.

ಇಷ್ಟಕ್ಕೂ ಫಲಕಗಳು ಇರುವುದು ಓದಲು ಹೊರತು ಹಿರಿಮೆಗಲ್ಲ. ಯಾವುದೇ ಪ್ರಜಾಪ್ರಭುತ್ವದ ಸರಕಾರವು ಜನಸಾಮಾನ್ಯರಲ್ಲಿ ಪ್ರಜೆಗಳನ್ನು ಕಾಣಬೇಕು. ಕನ್ನಡದ ನೆಲದಲ್ಲಿ ಕನ್ನಡವನ್ನು ಓದಲು ಬರದಿರುವವರೂ ಇರಬಹುದು. ಹಾಗೆಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನು ಓದುವವರಿಗಿಂತ ಹೆಚ್ಚು ಮಂದಿ ಕನ್ನಡವನ್ನು ಓದುತ್ತಾರೆ. ಹೀಗಿದ್ದೂ ಕನ್ನಡವನ್ನು ಕಡೆಗಣಿಸಿ ಇತರ ಭಾಷೆಗಳಿಗೆ ಪ್ರಾಶಸ್ತ್ಯವನ್ನು ನೀಡಿದ್ದು ಒಂದು ದೂರಗಾಮೀ ಸಂಚೇ ಹೊರತು ಪ್ರಾಮಾಣಿಕ ತಪ್ಪೇನಲ್ಲವೆನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಇದೇನೂ ರಹಸ್ಯ ಕಾರ್ಯಾಚರಣೆಯಾಗಿರಲಿಲ್ಲ. ಆದ್ದರಿಂದ ರಾಜ್ಯ ಸರಕಾರಕ್ಕೆ ಮಾಹಿತಿಯಿರಲಿಲ್ಲವೆಂಬುದು ಸುಳ್ಳಾಗುತ್ತದೆ. ತನ್ನ ಗಮನಕ್ಕೆ ಬರಲಿಲ್ಲ ಎಂಬ ಸಬೂಬನ್ನು ಯಾರಾದರೂ ರಾಜಕಾರಣಿ ಇಲ್ಲವೇ ಅಧಿಕಾರಿ ಹೇಳಿದರೆ ಅದು ಅವರ ಮೂರ್ಖತನ ಮತ್ತು ದಡ್ಡತನವನ್ನು ತೋರಿಸೀತು. ಸಾಧುವಾದ ಒಂದೇ ಅಭಿಪ್ರಾಯವೆಂದರೆ ಈ ರಾಜಕಾರಣಿಗಳು ಮತ್ತು ಅಧಿಕಾರಿಗಳು ನತಮಸ್ತಕರಾಗಿ ಕನ್ನಡಕ್ಕಾದ ಅಪಮಾನವನ್ನು ನುಂಗಿಕೊಂಡರು ಎಂಬುದು. ಒಕ್ಕೊರಲಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನು ಟೀಕಿಸುವ ಯಡಿಯೂರಪ್ಪನವರಿಗೆ, ಈಶ್ವರಪ್ಪನವರಿಗೆ ಭದ್ರಾವತಿಯಲ್ಲಿ ಅಮಿತ್‌ಶಾರೆದುರು ಕೊರಳ ಸೆರೆ ಬಿಗಿದು ಮಾತು ಹೊರಡಲಿಲ್ಲ. ಕನ್ನಡಕ್ಕೊಂದು ಸ್ಥಾನ ನೀಡೋಣವೆಂದು ಹೇಳುವ ಧೈರ್ಯ ಇವರ್ಯಾರಿಗೂ ಇರಲಿಲ್ಲವೆಂಬುದು ಸ್ಪಷ್ಟ. ಹಿಂದೆ ಕಾಂಗ್ರೆಸಿನಲ್ಲಿದ್ದ ಹೈಕಮಾಂಡ್ ಸಂಸ್ಕೃತಿ(!) ಈಗ ಭಾರತೀಯ ಜನತಾ ಪಾರ್ಟಿಯ ಪಾಲಾಗಿರುವುದರಿಂದ ಅಲ್ಲಿನ ಗುಲಾಮಗಿರಿಯ ಎಲ್ಲ ಸಂಕೇತಗಳನ್ನೂ ಅನುಸರಿಸಲೇಬೇಕಲ್ಲ! ಹೀಗಾದರೆ ‘ದಾಸರೆಂದರೆ ಪುರಂದರದಾಸರಯ್ಯ’ ಎಂಬ ಉಲ್ಲೇಖವು ವಿಕೃತಗೊಂಡು ಅಲ್ಲಿ ನಮ್ಮ ರಾಜ್ಯದ ಸಚಿವರ ಹೆಸರನ್ನು ಹಿಂದಿ ಅಥವಾ ಇಂಗ್ಲಿಷಿನಲ್ಲಿ ಪ್ರದರ್ಶಿಸಬಹುದು!

ಇನ್ನೂ ಆಕರ್ಷಕವಾದ ಅಂಶವೆಂದರೆ ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕವೊಂದೇ ಇಷ್ಟು ನಿರಭಿಮಾನವನ್ನು ಪ್ರದರ್ಶಿಸುತ್ತಿರುವುದು. ಕನ್ನಡಿಗರು ತಾವು ‘ನಿರಭಿಮಾನಿಗಳು’ ಎಂದು ಎದೆ ತಟ್ಟಿ ಹೇಳುತ್ತಾರೆಂದು ಖ್ಯಾತ ನಾಟಕನಟ ಮಾಸ್ಟರ್ ಹಿರಣ್ಣಯ್ಯನವರು ಸದಾ ಟೀಕಿಸುತ್ತಿದ್ದರು. ತಮಿಳುನಾಡಿನಲ್ಲಿ ಈಚೆಗೆ ನಡೆದ ಮತ್ತು ಕೇಂದ್ರ ಗೃಹಮಂತ್ರಿ ಭಾಗವಹಿಸಿದ ಕಾರ್ಯಕ್ರಮವೊಂದರಲ್ಲಿ ತಮಿಳು ಮತ್ತು ಇಂಗ್ಲಿಷಿನಲ್ಲಿ ಬ್ಯಾನರ್‌ಗಳು, ಫಲಕಗಳು ರಾರಾಜಿಸುತ್ತಿದ್ದವು. ಅಲ್ಲಿನ ಜನರು ಏನನ್ನಾದರೂ ತ್ಯಜಿಸಿಯಾರು; ಭಾಷೆಯೂ ಸೇರಿದಂತೆ ತಮ್ಮ ಅಸ್ಮಿತೆಯನ್ನು ಬಿಟ್ಟುಕೊಡಲಾರರು. ಪ್ರಾಯಃ ಹಿಂದಿ ಭಾಷೆಯ ಹೇರಿಕೆಯನ್ನು ಸತತ ತಡೆಯುತ್ತಲೇ ಬಂದಿರುವವರಲ್ಲಿ ತಮಿಳರು ಅಗ್ರಗಣ್ಯರು. ದಕ್ಷಿಣದ ಇತರ ರಾಜ್ಯಗಳಲ್ಲಿಯೂ ಈ ಪ್ರಮಾಣದಲ್ಲಿಯಲ್ಲವಾದರೂ ಜನರು ತಮ್ಮ ಪ್ರಾದೇಶಿಕ ವೈಶಿಷ್ಟವನ್ನು ಬಿಟ್ಟುಕೊಡಲಾರರು. ಆದರೆ ಕನ್ನಡಿಗರು ಅದರಲ್ಲೂ ರಾಜಕಾರಣಿಗಳು ಅಸ್ಮಿತೆಯೆಂಬುದನ್ನೇ ಅರಿಯರು.

ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಇಲ್ಲಿನ ರಾಜಕಾರಣಿಗಳು ‘ಕುರಿಗಳು ಸಾರ್ ಕುರಿಗಳು’ ಎಂಬ ನಿಸಾರ್ ಅಹಮದ್ ಅವರ ಕವಿತೆಯ ನಾಯಕರು. ಅವರನ್ನು ಆರತಿಯೆತ್ತಿ ಬೆಳಗುವ ‘ಸ್ವಂತತೆಯೇ ಬಂದಾಗಿ ಅಂಡಲೆಯುವ’ ಎಲ್ಲರೂ ಕುರಿಗಳೇ. ಸತ್ಯವನ್ನು ಕಟುವಾಗಿ ಹೇಳುವುದಾದರೆ ಕನ್ನಡನಾಡಿನ ಆಡಳಿತಕ್ಕೆ ಗಂಡಭೇರುಂಡಕ್ಕಿಂತಲೂ ಕುರಿಯೇ ಸಮರ್ಪಕವಾದ ಲಾಂಛನವೆಂದು ಅನ್ನಿಸುತ್ತದೆ. ಭಾಷೆಯನ್ನು ಉಳಿಸಿ, ಬೆಳೆಸಿ ಎಂದು ಭಾಷಣ ಮಾಡುವವರೆಲ್ಲ ಅದನ್ನು ಅಳಿಸಿ ಹಾಕಲು ಪಣತೊಟ್ಟಂತಿದೆ. ವಿ.ಜಿ.ಭಟ್ಟರು ತಮ್ಮ ‘ಬುರಕಿ’ ಕಿರುಗತಾ ಸಂಕಲನ (ಪ್ರಕಟನೆೆ: 1947) ದಲ್ಲಿ ಸೂತ್ರ ವಾಕ್ಯವಾಗಿ ಹೇಳಿದ ‘‘...ಆ ನಾಡವರ್ಗಳ್ ... ನಿಜದಿಂ ಕುರಿ...’’ ಎಂಬುದು ಸಾರ್ವಕಾಲಿಕ ಸತ್ಯವಾಗುವ ಭಯವಿದೆ. ಅದೇ ಕೃತಿಯಲ್ಲಿ ಬರುವ ‘ಅಭಿಮಾನ’ ಎಂಬ ಪುಟ್ಟ ಕತೆ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಕತೆ ಹೀಗಿದೆ:

‘‘ಒಬ್ಬ ಕನ್ನಡಾಭಿಮಾನಿಗಳು ನನ್ನೊಡನೆ ವಾದಿಸಿದರು,-ಮಂಗಳ ಲೋಕದಲ್ಲಿ ಕನ್ನಡಿಗರು ಇದ್ದೇ ಇದ್ದಾರೆಂದು. ನಾನು ಏನು ಹೇಳಿದರೂ ಅವರು ತಮ್ಮ ಅಭಿಮಾನದ ಒರಟನ್ನೇ ಸಾಧಿಸಿದರು. ‘ಇಲ್ಲ ಅಂತ ಹೇಗೆ ಹೇಳುವಿರಿ?’ ಅನ್ನುವುದೇ ಅವರ ಪ್ರಶ್ನೆ. ಕದನ ಏಕೆಂದು ‘ಇರಬಹುದು’ ಎಂದೆ. ‘ಬಹುದು ಏಕೆ? ಇದ್ದಾರೆ ಅನ್ನಿ’ ಎಂದು ಅವರು ತಮ್ಮ ಯಶಸ್ಸಿಗಾಗಿ, ಆತ್ಮತೃಪ್ತಿಯಿಂದ ನಕ್ಕರು. ‘ಹುಂ’ ಅಂದು ಬಂದೆ.

ನಿಜವಾಗಿಯೂ ಹಾಗೇ ಇರಬೇಕೇ ವಸ್ತುಸ್ಥಿತಿ! ಕನಸಿನಲ್ಲಿ ಮಂಗಳಲೋಕಕ್ಕೆ ಹೋಗಿ ನೋಡಿದೆ. ಅರ್ಧಕ್ಕಿಂತ ಹೆಚ್ಚು ಅಚ್ಛಾ-ಅಚ್ಛಾ ಕನ್ನಡ!! ಬರೀ ಕನ್ನಡಿಗರಷ್ಟೇ ಅಲ್ಲ ಅವರು. ಅವರಿಗೆ ಬುದ್ಧಿಯೂ ಇದೆ!’’

*

 ಇಂತಹ ವ್ಯಂಗ್ಯಗಳ ಹೊರತಾಗಿಯೂ ಭಾಷೆಯ ಕುರಿತು ಆಳುವವರೂ ಆಳಿಸಿಕೊಳ್ಳುವವರೂ, ಸ್ವಯಂಘೋಷಿತ ಕನ್ನಡ ಚಿಂತಕರು, ಒಂದಷ್ಟು ಗಂಭೀರವಾಗಿ ಯೋಚಿಸಬಹುದು. ಇಂತಹ ಪರಿಸ್ಥಿತಿಗೆ ಯಾರು ಕಾರಣರು? ಮತಹಾಕಿ ತಮ್ಮನ್ನು ತಾವು ಮಾರಿಕೊಂಡವರೇ? ಜನರ ದಡ್ಡತನದ ಬಗ್ಗೆ ಖಾತ್ರಿಯಿರುವ ರಾಜಕಾರಣಿಗಳೇ? ಈ ಎರಡೂ ಗುಂಪಿನ ನಡುವೆ ಆಯಕಟ್ಟಿನ ಸ್ಥಾನದಲ್ಲಿ ಕುಳಿತು ಬಿಸಿಲಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕುಳಿತು ಭಾಷೆಯನ್ನು ಬಳಸಿಕೊಳ್ಳುವ ಕಲಿತ ಜಾಣರೇ? ಹೇಗೂ ಇರಲಿ, ಭಾರತಮಾತೆಯ ತನುಜಾತೆಯೆಂದು ಕುವೆಂಪು ಹೇಳಿದ ಕರ್ನಾಟಕಮಾತೆ ತನ್ನ ತಾಯಿಗಾಗಿ ಅಸುನೀಗಿದಳೆಂದು ಇತಿಹಾಸ ಹೇಳದಿದ್ದರೆ ಸಾಕು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)