varthabharthi


ಬೆಂಗಳೂರು

ಹಿರಿಯ ಸಾಹಿತಿ ಹಂಪನಾ ವಿರುದ್ಧ ಪೊಲೀಸ್ ವಿಚಾರಣೆ ರಾಜ್ಯ ಸರಕಾರದ ಕೀಚಕ ನಡೆ ಪ್ರತೀಕ: ಡಿಕೆಶಿ ಟೀಕೆ

ವಾರ್ತಾ ಭಾರತಿ : 22 Jan, 2021

ಹಿರಿಯ ಸಾಹಿತಿ ಹಂ.ಪ. ನಾಗರಾಜಯ್ಯ

ಬೆಂಗಳೂರು, ಜ.22: ಜನಪರ ಧ್ವನಿಯೆತ್ತಿದ ಖ್ಯಾತ ಸಾಹಿತಿ, ಸಂಶೋಧಕ ಹಂ.ಪ. ನಾಗರಾಜಯ್ಯ ವಿರುದ್ಧ ಪೊಲೀಸ್ ಕ್ರಮ ಕೈಗೊಂಡ ರಾಜ್ಯ ಬಿಜೆಪಿ ಸರಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.

ಕೇಂದ್ರ ಸರಕಾರವನ್ನು ಟೀಕಿಸಿದರು ಎಂಬ ಏಕೈಕ ಕಾರಣಕ್ಕಾಗಿ ಹಂಪನಾ ಅವರನ್ನು ಮಂಡ್ಯ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹಾಗೂ ಕೀಚಕ ನಡೆಯ ಪ್ರತೀಕ ಎಂದು ಶಿವಕುಮಾರ್ ಮಾಧ್ಯಮ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ಹಂಪನಾ ಈ ನಾಡು ಕಂಡ ಶ್ರೇಷ್ಠ ಭಾಷಾ ವಿಜ್ಞಾನಿ, ಸಂಶೋಧಕ ಹಾಗೂ ಎಲ್ಲಕ್ಕೂ ಮಿಗಿಲಾಗಿ ಚಿಂತಕ. ಅಂತಹವರ ಧ್ವನಿ ಅಡಗಿಸಲು ರಾಜ್ಯ ಸರಕಾರ ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ.  ತಮ್ಮ ವಿರುದ್ಧ ಧ್ವನಿ ಎತ್ತುವ ರಾಜಕೀಯ ವಿರೋಧಿಗಳ ವಿರುದ್ಧ ಹಗೆತನ ಸಾಧಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದೀಗ ಸಾಹಿತಿಗಳನ್ನೂ ಆ ಪಟ್ಟಿಗೆ ಸೇರಿಸಿಕೊಂಡಿರುವುದು ದುರಂತದ ಸಂಗತಿ ಎಂದು ಅವರು ಟೀಕಿಸಿದ್ದಾರೆ.

ಅದು ಯಾವುದೇ ಸರಕಾರವಿರಲಿ, ಅದರ ಜನ ವಿರೋಧಿ ನಡೆಯನ್ನು ಟೀಕಿಸುವ, ತಿದ್ದುವ, ತೀಡುವ ಹಕ್ಕನ್ನು ಈ ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ ಕಲ್ಪಿಸಿದೆ. ಆದರೆ ಸರಕಾರಗಳು ತಮಗಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು, ಪೊಲೀಸ್ ಬಲದ ಮೂಲಕ ಸಾಹಿತಿಗಳು, ಬುದ್ಧಿಜೀವಿಗಳು, ಪ್ರಜ್ಙಾವಂತರ ಧ್ವನಿ ಅಡಗಿಸಲು ಹೊರಟಿರುವುದು ಖಂಡನೀಯ. ಸರಕಾರ ತನ್ನ ಈ ವಕ್ರನಡೆಯನ್ನು ತಿದ್ದಿಕೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

 ಕೇಂದ್ರ ಬಿಜೆಪಿ ಸರಕಾರವನ್ನು ಆಕ್ಷೇಪಾರ್ಹ ಮಾತುಗಳಿಂದ ಟೀಕಿಸಿದ್ದಾರೆ ಎಂಬ ಆರೋಪದ ಮೇಲೆ ಸಾಹಿತಿ ಹಂ.ಪ.ನಾಗರಾಜಯ್ಯ ಅವರನ್ನು ಮಂಡ್ಯ ನಗರದ ಪಶ್ಚಿಮ ಠಾಣೆ ಪೊಲೀಸರು ಗುರುವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು.

ಜ.17ರಂದು ನಗರದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿದ್ದ ನಾಗರಾಜಯ್ಯ, ಕೇಂದ್ರ ಸರಕಾರವನ್ನು ದುರ್ಯೋಧನ, ಗೋಮುಖ ವ್ಯಾಘ್ರಕ್ಕೆ ಹೋಲಿಕೆ ಮಾಡಿದ್ದರೆನ್ನಲಾಗಿದೆ. ಇದರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪಶ್ಚಿಮ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಹಿನ್ನೆಲೆಯಲ್ಲಿ ಹಂ.ಪ.ನಾ ಅವರನ್ನು ಠಾಣೆಗೆ ಕರೆಸಿದ ಪೊಲೀಸರು ಹೇಳಿಕೆ ಪಡೆದು ಕಳುಹಿಸಿದ್ದರು. ಪೊಲೀಸರ ಈ ಕ್ರಮಕ್ಕೆ ಹಲವಾರು ಸಾಹಿತಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)