ಅಂತಾರಾಷ್ಟ್ರೀಯ
ಆರೆಸ್ಸೆಸ್-ಬಿಜೆಪಿಯೊಂದಿಗಿನ ನಂಟು ಆರೋಪ: ತನ್ನ ಸಂಪುಟದಿಂದ ಇಬ್ಬರು ಭಾರತೀಯ ಅಮೆರಿಕನ್ ರನ್ನು ಹೊರಗಿಟ್ಟ ಬೈಡನ್

photo: AP
ವಾಶಿಂಗ್ಟನ್,ಜ.22: ಅಮೆರಿಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬಿಡೆನ್ ರವರು 13 ಮಹಿಳೆಯರು ಸೇರಿದಂತೆ ಒಟ್ಟು 20 ಮಂದಿ ಭಾರತೀಯ ಅಮೆರಿಕನ್ ರನ್ನು ತಮ್ಮ ಸಂಪುಟದ ಹಲವು ಹುದ್ದೆಗಳಿಗೆ ಹೆಸರಿಸಿದ್ದರು. ಇದೀಗ ಆರೆಸ್ಸೆಸ್ ಮತ್ತು ಬಿಜೆಪಿಯೊಂದಿಗಿನ ನಂಟಿನ ಆರೋಪದಲ್ಲಿ ಇಬ್ಬರನ್ನು ಸಂಪುಟದಿಂದ ಹೊರಗಿಟ್ಟಿದ್ದಾರೆ ಎಂದು nationalheraldindia.com ವರದಿ ಮಾಡಿದೆ.
the tribune ವರದಿ ಪ್ರಕಾರ, ಸೋನಲ್ ಶಾ ಹಾಗೂ ಅಮಿತ್ ಜಾನಿ ಎಂಬಿಬ್ಬರನ್ನು ಸಂಪುಟದಿಂದ ಹೊರಗಿಡಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಭಾರತೀಯ ಜನತಾ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಕಾರಣ ಅವರನ್ನು ಹೊರಗಿಡಲಾಗಿದೆ ಎಂದು ವರದಿ ತಿಳಿಸಿದೆ.
ಸೋನಲ್ ಶಾರ ತಂದೆ ಬಿಡೆನ್ ರ ಯುನಿಟಿ ಟಾಸ್ಕ್ ಫೋರ್ಸ್ ನಲ್ಲಿ ಕೆಲಸ ನಿರ್ವಹಿಸಿದ್ದರು. ಇವರು ಬಿಜೆಪಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು. ಆರೆಸ್ಸೆಸ್ ನ ಏಕಲ್ ವಿದ್ಯಾಲಯವನ್ನೂ ನಡೆಸುತ್ತಿದ್ದರು. ಏಕಲ್ ವಿದ್ಯಾಲಯದ ಹೆಸರಿನಲ್ಲಿ ಹಣ ಸಂಗ್ರಹವನ್ನೂ ಮಾಡಿದ್ದರು ಎಂದು ವರದಿ ತಿಳಿಸಿದೆ.
ಅಮಿತ್ ಜಾನಿ, ʼನೇಮ್ ಬಿಡೆನ್ʼ ಕ್ಯಾಂಪೇನ್ ನ 'ಮುಸ್ಲಿಮರನ್ನು ತಲುಪುವʼ ಕಾರ್ಯಕ್ರಮದ ಸಹ ಸಂಯೋಜಕರಾಗಿದ್ದರು. ಅವರ ಕುಟುಂಬವು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹಲವು ನಾಯಕರೊಂದಿಗೆ ಸಂಪರ್ಕವಿಟ್ಟುಕೊಂಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಗಳ ಪ್ರಕಾರ, ಆರೆಸ್ಸೆಸ್ ಮತ್ತು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಬಿಡೆನ್ ಸಂಪುಟದಲ್ಲಿ ಸೇರಿಸಿಕೊಳ್ಳುವ ಯಾವುದೇ ಸಾಧ್ಯತೆಗಳಿಲ್ಲ ಎನ್ನಲಾಗಿದೆ. ಹಲವಾರು ಸೆಕ್ಯುಲರ್ ಇಂಡೋ ಅಮೆರಿಕನ್ ಸಂಘಟನೆಗಳು, "ಬಿಜೆಪಿ ಮತ್ತು ಆರೆಸ್ಸೆಸ್ ನಂಟಿರುವ ವ್ಯಕ್ತಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳದಂತೆ" ಬಿಡೆನ್ ರ ತಂಡದೊಂದಿಗೆ ಮನವಿ ಮಾಡಿಕೊಂಡಿತ್ತು ಎಂದು ತಿಳಿದು ಬಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ