varthabharthi


ರಾಷ್ಟ್ರೀಯ

ಈತ ಬಿಜೆಪಿ ಲಸಿಕೆ ಹಾಕಿಸಿಕೊಂಡನೇ ಎಂದು ಕೇಳಿದ ಜನ

ಶಾ ಫೈಸಲ್‌ ತಿಪ್ಪರಲಾಗ: ಭಾರತ ಜಗದ್ಗುರು ಆಗುತ್ತಿದೆ ಎಂದು ಕೇಂದ್ರದ ಗುಣಗಾನ

ವಾರ್ತಾ ಭಾರತಿ : 23 Jan, 2021

ಹೊಸದಿಲ್ಲಿ,ಜ.23: 2009ರಲ್ಲಿ ಐಎಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಜಮ್ಮುಕಾಶ್ಮೀರದ ಪ್ರಥಮ ಐಎಎಸ್‌ ಅಧಿಕಾರಿಯಾಗಿ ಹೊರಹೊಮ್ಮಿದ ಶಾ ಫೈಸಲ್‌ ಕಳೆದ ವರ್ಷ ಆರ್ಟಿಕಲ್‌  370ನ್ನು ತೆಗೆದು ಹಾಕಿದ ವೇಳೆ ಬಂಧನಕ್ಕೊಳಗಾಗಿದ್ದರು. ಬಳಿಕ ರಾಜಕೀಯವನ್ನೂ ತ್ಯಜಿಸಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರವನ್ನು ಹೊಗಳುವ ಮೂಲಕ ಮತ್ತೆ ಶಾ ಫೈಸಲ್‌ ಸುದ್ದಿಯಾಗಿದ್ದಾರೆ.

ವಾರಣಾಸಿಯಲ್ಲಿ ಕೋವಿಡ್‌ ಲಸಿಕೆಯನ್ನು ನೀಡಿದ ಬಳಿಕ ಫಲಾನುಭವಿಗಳೊಂದಿಗೆ ಪ್ರಧಾನಿ ಮೋದಿ ನಡೆಸಿದ್ದ ಮಾತುಕತೆಯ ವೀಡಿಯೋವನ್ನು ಶೇರ್‌ ಮಾಡಿದ ಫೈಸಲ್‌, "ಇದು ಲಸಿಕೆ ನೀಡುವ ಕಾರ್ಯಕ್ರಮಕ್ಕಿಂತ ಹೆಚ್ಚಿನದ್ದಾಗಿದೆ. ಉತ್ತಮ ಆಡಳಿತ + ಮಾನವ ಸಂಪನ್ಮೂಲ ರಚನೆ + ಭಾರತವು ಜಗತ್ತಿಗೆ ನಾಯಕನಾಗಿ ಜಗದ್ಗುರು ಆಗಿದೆ ಎಂದು ಶಾ ಫೈಸಲ್‌ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಮತ್ತು ಕೇಂದ್ರ ಸರಕಾರವನ್ನು ಹೊಗಳುವ ಮುಂಚೆ "ಮುಸ್ಲಿಮರ ನಾಡಿನಲ್ಲಿ ಧಾರ್ಮಿಕ ಸಾಂಪ್ರದಾಯಿಕತೆ ಮತ್ತು ಸರ್ವಾಧಿಕಾರವಾದದ ಮೂಲಗಳು" ಎಂಬ ಪುಸ್ತಕ ಓದಿರುವ ಕುರಿತು ಅವರು ಪೋಸ್ಟ್‌ ಮಾಡಿದ್ದರು.

ಬಂಧನದಿಂದ ಬಿಡುಗಡೆಯಾದ ಬಳಿಕ ಶಾ ಫೈಸಲ್‌ ಯಾವುದೇ ರಾಜಕೀಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹೇಳಿಕೆಗಳನ್ನು ನೀಡಿರಲಿಲ್ಲ. ಆದರೆ ಇದೀಗ ಕೇಂದ್ರ ಸರಕಾರ ಮತ್ತು ನರೇಂದ್ರ ಮೋದಿಯನ್ನು ಹೊಗಳಿರುವುದು ಜಮ್ಮು ಕಾಶ್ಮೀರ ಮತ್ತು ಇತರ ಕಡೆಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅವರ ಬೆಂಬಲಿಗರು ಕೂಡಾ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಾಶ್ಮೀರದ ಜನತೆಯನ್ನು ಬೆಂಬಲಿಸಿ ಮಾಡಿದ್ದ ಎಲ್ಲಾ ಟ್ವೀಟ್‌ ಗಳನ್ನು ಫೈಸಲ್‌ ಅಳಿಸಿ ಹಾಕಿದ್ದಾರೆ.

ಈ ಕುರಿತು theprint.in ನೊಂದಿಗೆ ಮಾತನಾಡಿದ ಫೈಸಲ್‌, "ನಾನು ರಾಜಕೀಯವನ್ನು ತ್ಯಜಿಸಿದ್ದೇನೆ. ವಿಶ್ವವೇ ಮೋದಿಯನ್ನು ಹೊಗಳುತ್ತಿರುವಾಗ ನಾನು ಕೂಡಾ ಹೊಗಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾಗಿ ವರದಿ ತಿಳಿಸಿದೆ. ಆರ್ಟಿಕಲ್‌ 370 ತೆಗೆದು ಹಾಕಿದ ನಂತರ ಬಂಧನಕ್ಕೊಳಗಾಗಿದ್ದ ರಾಜಕೀಯ ನಾಯಕರಲ್ಲಿ ಫೈಸಲ್‌ ಕೂಡಾ ಸೇರಿದ್ದರು. ಇದೀಗ ಕೇಂದ್ರ ಸರಕಾರ ಮತ್ತು ಮೋದಿಯನ್ನು ಹೊಗಳುವ ಮೂಲಕ ಮತ್ತೆ ರಾಜಕೀಯ ಪ್ರವೇಶ ಮಾಡುವ ಸಾಧ್ಯತೆ ಇರಬಹುದು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ವಿಟರ್‌ ನಲ್ಲಿ ಫೈಸಲ್‌ ಹೇಳಿಕೆ ಕುರಿತುಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಬಿಜೆಪಿ ಲಸಿಕೆ ಹಾಕಿಕೊಂಡಿರಬಹುದು. ಹಾಗಾಗಿ ಈ ಮಾತುಗಳನ್ನಾಡುತ್ತಿದ್ದಾರೆ ಎಂದು ಬಳಕೆದಾರರೋರ್ವರು ವ್ಯಂಗ್ಯವಾಡಿದ್ದಾರೆ. ಕೇವಲ ನಿಮ್ಮ ಟ್ವಿಟರ್‌ ಅಕೌಂಟ್‌ ಮಾತ್ರವಲ್ಲ, ನಿಮ್ಮ ತಲೆಯನ್ನೂ ಬಿಜೆಪಿಯವರು ಹ್ಯಾಕ್‌ ಮಾಡಿರುವ ಸಾಧ್ಯತೆ ಇದೆ ಎಂದು ಇನ್ನೋರ್ವರು ಕಮೆಂಟಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)