varthabharthi


ರಾಷ್ಟ್ರೀಯ

ಅಸ್ಸಾಂ: 1ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಭೂದಾಖಲೆ ಹಸ್ತಾಂತರ ಯೋಜನೆಗೆ ಪ್ರಧಾನಿ ಚಾಲನೆ

ವಾರ್ತಾ ಭಾರತಿ : 23 Jan, 2021

ಗುವಾಹಟಿ, ಜ.23: ಈ ತಿಂಗಳಲ್ಲಿ ಅಸ್ಸಾಂನ ಸ್ಥಳೀಯ ಬುಡಕಟ್ಟು ಸಮುದಾಯದ 1 ಲಕ್ಷ 3 ಸಾವಿರ ಜನರಿಗೆ ಜಮೀನಿನ ದಾಖಲೆ ಹಸ್ತಾಂತರಿಸುವ ರಾಜ್ಯ ಸರಕಾರದ ಯೋಜನೆಗೆ ಶನಿವಾರ ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸಾಂಕೇತಿಕ ಚಾಲನೆ ನೀಡಿದ್ದಾರೆ.

ಬಳಿಕ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು ‘ಈ ದಿನ ನಿಮ್ಮ ಸಂತಸ ಮತ್ತು ಸಂಭ್ರಮದ ಭಾಗವಾಗಿ ಇಲ್ಲಿ ಉಪಸ್ಥಿತನಿದ್ದೇನೆ. ರಾಜ್ಯದ ಬಿಜೆಪಿ ಸರಕಾರ ದೊಡ್ಡ ಕಾರ್ಯವನ್ನು ಪೂರ್ಣಗೊಳಿಸಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಹಲವು ವರ್ಷಗಳ ಬಳಿಕವೂ ಅಸ್ಸಾಂನಲ್ಲಿ ಹಲವರಿಗೆ ತಮ್ಮ ಜಮೀನಿನ ಪಟ್ಟಾ(ದಾಖಲೆ) ದೊರೆತಿರಲಿಲ್ಲ. ರಾಜ್ಯದಲ್ಲಿ ಸತತ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರಕಾರ ಜನರ ಸಮಸ್ಯೆಗೆ ಕಿವುಡಾಗಿತ್ತು.

ಆದರೆ ಸರ್ಬಾನಂದ ಸೊನೊವಾಲ್ ನೇತೃತ್ವದ ಬಿಜೆಪಿ ಸರಕಾರ ಕಳೆದ ನಾಲ್ಕೂವರೆ ವರ್ಷದಲ್ಲಿ ಅಸ್ಸಾಂನ ಸಂಸ್ಕೃತಿ ಮತ್ತು ಪರಂಪರೆಯನ್ನು ರಕ್ಷಿಸಿಕೊಂಡು ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಂಡಿದೆ. ಜಮೀನಿನ ದಾಖಲೆ ಪಡೆದಿರುವುದರಿಂದ ಇನ್ನು ಸ್ಥಳೀಯರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆ, ನೆರವಿನ ಪ್ರಯೋಜನ ಪಡೆಯಲು ಸುಲಭವಾಗುತ್ತದೆ’ ಎಂದು ಹೇಳಿದರು. ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ್ದ ಮುಖ್ಯಮಂತ್ರಿ ಸೊನೊವಾಲ್, ರಾಜ್ಯದ ಹಲವೆಡೆ ಸರಕಾರಿ ಜಮೀನು ಹಾಗೂ ಬುಡಕಟ್ಟು ಜಮೀನನ್ನು ಅಕ್ರಮ ವಲಸಿಗರು ಅತಿಕ್ರಮಿಸಿದ್ದು, ಅಕ್ರಮ ವಲಸಿಗರನ್ನು ತಮ್ಮ ಸರಕಾರ ತೆರವುಗೊಳಿಸಿ ಜಮೀನಿನ ದಾಖಲೆಯನ್ನು ಸ್ಥಳೀಯರಿಗೆ ದೊರಕಿಸಿಕೊಟ್ಟಿದೆ ಎಂದಿದ್ದರು.

ಅಸ್ಸಾಂನಲ್ಲಿ ಮಾರ್ಚ್-ಎಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ರಾಜ್ಯದ 70ಕ್ಕೂ ಅಧಿಕ ಬುಡಕಟ್ಟು ಸಮುದಾಯದ ವಿಶ್ವಾಸ ಗಳಿಸಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕಳೆದ ವರ್ಷ ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)