varthabharthi


ರಾಷ್ಟ್ರೀಯ

ನೇತಾಜಿ ಕಲ್ಪನೆಯ ಭಾರತ ಸಾಕಾರಗೊಂಡಿದೆ: ಪ್ರಧಾನಿ ಮೋದಿ

ವಾರ್ತಾ ಭಾರತಿ : 23 Jan, 2021

ಕೋಲ್ಕತ, ಜ.23: ಎಲ್‌ಎಸಿ(ವಾಸ್ತವಿಕ ನಿಯಂತ್ರಣ ರೇಖೆ)ಯಿಂದ ಎಲ್‌ಒಸಿ(ನಿಯಂತ್ರಣ ರೇಖೆ)ವರೆಗೆ ನೇತಾಜಿ ಕಲ್ಪಿಸಿದ್ದ ಭಾರತ ಸಾಕಾರಗೊಳ್ಳುತ್ತಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋಲ್ಕತದ ವಿಕ್ಟೋರಿಯಾ ಮೆಮೊರಿಯಲ್‌ನಲ್ಲಿ ಆಯೋಜಿಸಲಾಗಿದ್ದ ನೇತಾಜಿ ಸುಭಾಷ್ಚಂದ್ರ ಭೋಸ್ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಇನ್ನು ಮುಂದೆ ನೇತಾಜಿಯವರ ಜನ್ಮದಿನವನ್ನು ಪರಾಕ್ರಮ ದಿನ ಎಂದು ಆಚರಿಸಲು ದೇಶ ನಿರ್ಧರಿಸಿದೆ ಎಂದರು.

ನೇತಾಜಿಯವರ ಬದುಕು, ಕಾರ್ಯ ಮತ್ತು ಸಂಕಲ್ಪಗಳು ನಮಗೆಲ್ಲಾ ಸ್ಫೂರ್ತಿಯಾಗಬೇಕು. ದೃಢ ಸಂಕಲ್ಪವಿದ್ದರೆ ಯಾವುದೂ ಅಸಾಧ್ಯವಲ್ಲ. ಬಡತನ, ಅನಕ್ಷರತೆ, ಅನಾರೋಗ್ಯ ಈ ದೇಶದ ಪ್ರಮುಖ ಸಮಸ್ಯೆ ಎಂದವರು ಹೇಳುತ್ತಿದ್ದರು. ಸಮಾಜ ಒಗ್ಗೂಡಿ ಕೆಲಸ ಮಾಡಿದರೆ ಈ ಸಮಸ್ಯೆಗಳ ಪರಿಹಾರ ಸಾಧ್ಯ. ಪ್ರಸ್ತುತ ರೂಪುಗೊಳ್ಳುತ್ತಿರುವ ನವಭಾರತವನ್ನು, ಕೊರೋನ ಲಸಿಕೆಯನ್ನು ಒದಗಿಸುವ ಮೂಲಕ ಇತರ ದೇಶಗಳಿಗೆ ಭಾರತ ನೆರವಾಗುತ್ತಿರುವುದನ್ನು ನೇತಾಜಿ ವೀಕ್ಷಿಸಿದ್ದರೆ ಅವರು ಖಂಡಿತಾ ಹೆಮ್ಮೆಪಟ್ಟುಕೊಳ್ಳುತ್ತಿದ್ದರು ಎಂದು ಮೋದಿ ಹೇಳಿದರು.

ಎಲ್‌ಒಸಿಯಿಂದ ಎಲ್‌ಎಸಿಯವರೆಗೆ ಭಾರತದ ಸದೃಢ ಅವತಾರವನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಇಂದಿನ ಭಾರತ ತನ್ನ ಸಾರ್ವಭೌಮತ್ವಕ್ಕೆ ಸವಾಲು ಹಾಕುವ ಪ್ರಯತ್ನ ನಡೆದಾಗ ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡುತ್ತಿದೆ. ದೇಶ ಸ್ವತಂತ್ರವಾಗುವ ಬಗ್ಗೆ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ನೇತಾಜಿ ಹೇಳುತ್ತಿದ್ದರು. ಇದೇ ರೀತಿ, ಭಾರತ ಆತ್ಮನಿರ್ಭರ(ಸ್ವಾವಲಂಬಿ) ದೇಶವಾಗುವುದನ್ನು ಯಾರು ಕೂಡಾ ತಡೆಯಲಾರರು ಎಂದು ಮೋದಿ ಹೇಳಿದರು. ಇದೇ ಸಂದರ್ಭ ನೇತಾಜಿಯರ 125ನೇ ಜನ್ಮದಿನಾಚರಣೆ ಸ್ಮರಣಾರ್ಥ ಹೊರತರಲಾದ ಅಂಚೆಚೀಟಿ, ನಾಣ್ಯವನ್ನು ಪ್ರಧಾನಿ ಬಿಡುಗಡೆ ಮಾಡಿದರು. ಇದೇ ಸಭೆಯಲ್ಲಿ ಉಪಸ್ಥಿತರಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಷಣ ಮಾಡುವ ಸಂದರ್ಭ ಸಭೆಯಲ್ಲಿ ‘ಮೋದಿ, ಮೋದಿ’ ಎಂಬ ಘೋಷಣೆ ಕೇಳಿಬಂದಿತ್ತು. ಇದರಿಂದ ಅಸಮಾಧಾನಗೊಂಡ ಮಮತಾ ‘ಸರಕಾರದ ಕಾರ್ಯಕ್ರಮಕ್ಕೆ ಒಬ್ಬರನ್ನು ಆಹ್ವಾನಿಸಿದ ಮೇಲೆ ಅವರನ್ನು ಅವಮಾನಿಸಬಾರದು’ ಎಂದು ಹೇಳಿ ಭಾಷಣ ಮೊಟಕುಗೊಳಿಸಿದ ಘಟನೆ ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)