varthabharthi


ಸಿನಿಮಾ

ನಾಗಾಭರಣ ಅವರಿಗೇಕೆ ಡಾಕ್ಟರೇಟ್ ಕೊಟ್ಟಿಲ್ಲ? -ಜಯಂತಿ

ವಾರ್ತಾ ಭಾರತಿ : 24 Jan, 2021
ಶಶಿಕರ ಪಾತೂರು

ಶನಿವಾರ ನಾಗಾಭರಣದ 69ನೇ ಜನ್ಮ ದಿನಾಚರಣೆಯನ್ನು ಅವರ ಸಿನೆಮಾಗಳ ‘ನಾಗಾಭರಣ ಸಿನಿಮಾವರಣ’ ಎನ್ನುವ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಮೂಲಕ ವಿಶಿಷ್ಟವಾಗಿ ಆಚರಿಸಲಾಯಿತು. ಸಮಾರಂಭದಲ್ಲಿ ಭಾಗಿಯಾಗಿದ್ದ ಹಿರಿಯ ನಟಿ ‘ಅಭಿನಯ ಶಾರದೆ’ ಬಿರುದಾಂಕಿತೆ ಜಯಂತಿಯವರು ಮಾಧ್ಯಮಗಳ ಮೂಲಕ ಸರಕಾರಕ್ಕೆ ಒಂದು ಪ್ರಶ್ನೆಯನ್ನು ಖಾರವಾಗಿ ಕೇಳಿದ್ದಾರೆ. ಪ್ರತಿಭಾವಂತರಿಗೆ ಸಲ್ಲಬೇಕಾದ ಪ್ರಶಸ್ತಿಗಳನ್ನು ಸರಿಯಾದ ಸಮಯದಲ್ಲಿ ನೀಡುವುದಿಲ್ಲ ಏಕೆ? ಜೀವಂತ ಇರುವಾಗ ಕೊಡಬೇಕಾದ ಪ್ರಶಸ್ತಿ ಸನ್ಮಾನಗಳನ್ನು ನೀಡದೆ ಮರಣೋತ್ತರವಾಗಿ ಕೊಟ್ಟರೆ ಪ್ರಯೋಜನವೇನು? ಎಂದು ಪ್ರಶ್ನಿಸಿದ್ದಾರೆ. ಅವರು ಹಾಗೆ ಪ್ರಶ್ನಿಸಲು ಕಾರಣ, ನಿರ್ದೇಶಕ ನಾಗಾಭರಣ ಅವರಿಗೆ ಇಂದಿಗೂ ಡಾಕ್ಟರೇಟ್ ಲಭಿಸಿಲ್ಲ ಎನ್ನುವುದೇ ಆಗಿತ್ತು.


 ‘‘ನಾಗಾಭರಣ ಅವರು ನನ್ನ ಬಹಳ ಪ್ರೀತಿಯ ನಿರ್ದೇಶಕರು’’ ಎಂದು ಸೌಮ್ಯವಾಗಿ ಜಯಂತಿ ಮಾತು ಶುರು ಮಾಡಿದರು. 

‘‘ಅವರು ಕಲಾವಿದರನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನುವುದಕ್ಕೆ ಅವರಿಗೆ ಅವರೇ ಸಾಟಿ. ಚಿಕ್ಕ ಮಕ್ಕಳನ್ನು ಹೇಗೆ ಪ್ರೀತಿಯಿಂದ ನೋಡಿಕೊಳ್ಳುತ್ತೇವೆಯೋ ಅದೇ ರೀತಿ ಅಷ್ಟೇ ಪ್ರೀತಿಯಿಂದ ಇರುತ್ತಾರೆ. ಹಾಗಾಗಿಯೇ ಅವರ ಜೊತೆಗೆ ಕೆಲಸ ಮಾಡಲು ತುಂಬ ಖುಷಿಯಾಗುತ್ತದೆ. ನಾನು ಅವರೊಂದಿಗೆ ಕೆಲಸ ಮಾಡಿದ್ದೇನೆ. ಕಮರ್ಷಿಯಲ್ ಸಿನೆಮಾರಂಗದಲ್ಲಿ ಹೆಣ್ಣುಮಕ್ಕಳನ್ನೇ ಇರಿಸಿಕೊಂಡು ಚಿತ್ರ ಮಾಡಲು ಯಾರಿಗಾದರೂ ಧೈರ್ಯಬೇಕು. ಅವರು ತುಂಬ ಕ್ರಿಯಾಶೀಲರು. ‘ವಿಮೋಚನೆ’ ಎನ್ನುವ ಆ ಚಿತ್ರದ ಸೆಟ್‌ನಲ್ಲಿ ನಾವು ಹೆಣ್ಣು ಮಕ್ಕಳೆಲ್ಲ ಸೇರಿ ಗಲಭೆ ಎಬ್ಬಿಸುತ್ತಿದ್ದಾಗಲೂ ಗದರಿದವರಲ್ಲ. ಅಸಮಾಧಾನ ಸೂಚಿಸಿದವರಲ್ಲ. ಕೊನೆಗೆ ನಮಗೇನೇ ಅಯ್ಯೋ ಡೈರೆಕ್ಟರ್ ಇಲ್ಲೇ ಇದ್ದಾರಲ್ಲ. ನಾವು ಇಷ್ಟೊಂದು ಶಬ್ದ ಮಾಡಬಾರದು ಎಂದು ಸುಮ್ಮನಾಗಿದ್ದೂ ಇದೆ.’’

‘‘ವಿಮೋಚನೆ ಚಿತ್ರ ನೋಡಿದ ಯಾರೇ ಆದರೂ ಇದು ಪ್ರಶಸ್ತಿ ಪಡೆಯಬೇಕಾದ ಸಿನೆಮಾ ಎಂದುಕೊಳ್ಳುತ್ತಾರೆ. ವಿಪರ್ಯಾಸ ಏನೆಂದರೆ ಆ ಸಿನೆಮಾಗೆ ಅವಾರ್ಡ್ ಬರಲೇ ಇಲ್ಲ. ದೊಡ್ಡವರು ಅವಾರ್ಡ್ ಕೊಡುವ ಮನಸು ಮಾಡಲೇ ಇಲ್ಲ. ಅದನ್ನೇ ಅನ್ಯಾಯ ಎನ್ನುವುದು. ನಾಗಾಭರಣರಿಗಂತೂ ಬಹಳ ಅನ್ಯಾಯವಾಗಿದೆ. ನಮ್ಮಲ್ಲಿನ ಸಮಸ್ಯೆ ಏನೆಂದರೆ ಇಲ್ಲಿ ಪ್ರತಿಭೆಗಳನ್ನು ಗುರುತಿಸುವವರೇ ಕಡಿಮೆ. ಒಂದು ವೇಳೆ ನಾಗಾಭರಣ ಅವರಿಗೆ ಪ್ರಶಸ್ತಿ ಬೇಡದೇ ಇರಬಹುದು. ಆದರೆ ನನಗಂತೂ ಅವರಿಗೆ ಡಾಕ್ಟರೇಟ್ ಸಮರ್ಪಣೆ ಆಗುವುದನ್ನು ನೋಡಬೇಕಿದೆ. ಇನ್ನು ಮುಂದೆ ಯಾರಿಂದಲೂ ಮಾಡಲಾಗದಂತಹ ಚಿತ್ರಗಳನ್ನು ಅವರು ಮಾಡಿದ್ದಾರೆ. ಆದರೂ ಸರಕಾರಕ್ಕೆ ಮನಸ್ಸು ಬರಲ್ಲ! ಯಾಕೆಂದರೆ ಕೊಡುವಂತಹ ಒಳ್ಳೆಯ ಮನಸ್ಸು ಇರಬೇಕಲ್ಲವಾ? ಕೊಡಬೇಕು ಎನ್ನುವ ಭಾವನೆ ಇರಬೇಕಲ್ಲವಾ? ಈ ಬಗ್ಗೆ ಮಾಧ್ಯಮದವರು ಕೂಡ ಧ್ವನಿ ಎತ್ತಬೇಕು. ನೀವು ಸಿನೆಮಾ ಬಗ್ಗೆ ವಿಮರ್ಶೆ ಮಾಡುತ್ತೀರಿ. ವಿಮರ್ಶೆ ಖಂಡಿತವಾಗಿ ಬರೆಯಬೇಕು. ಒಳ್ಳೆಯದನ್ನು ಮಾತ್ರ ಬರೆಯುವುದರಲ್ಲಿ ಅರ್ಥವಿಲ್ಲ. ಸರಿ ತಪ್ಪು ಎರಡನ್ನೂ ಬರೆಯಬೇಕು. ಅದೇ ಸಂದರ್ಭದಲ್ಲಿ ಚಿತ್ರರಂಗದಲ್ಲಿನ ಪ್ರತಿಭಾವಂತರನ್ನು ಗುರುತಿಸಿದ ಸರಕಾರ ನೀಡಬೇಕಾದಂತಹ ಗೌರವ ನೀಡದೆ ಹೋದಾಗ ಅದನ್ನು ಪ್ರಶ್ನಿಸಿ ಕೂಡ ಬರೆಯಬೇಕಿದೆ. ಜಯಂತಿಯ ಆಗ್ರಹ ಇದು’’ ಎಂದರು. ‘‘ನನಗಂತೂ ಇದರ ಬಗ್ಗೆ ಯೋಚಿಸಿದರೆ ತಲೆ ಕೆಟ್ಟು ಹೋಗುತ್ತದೆ. ನಾನು ಜೀವಂತವಾಗಿ ಇರುವಾಗಲೇ ನಾಗಾಭರಣರಿಗೆ ಡಾಕ್ಟರೇಟ್ ಬಂದರೆ ಆ ವಿಷಯ ತಿಳಿದು ನಾನು ಖುಷಿಪಡುತ್ತೇನೆ. ನಾನು ತೀರಿಹೋದ ಮೇಲೆ ಕೊಟ್ಟರೆ ನನಗೆ ಹೇಗೆ ತಾನೇ ಗೊತ್ತಾಗುತ್ತದೆ? ಕೆಲವರಿಗೆ ಮರಣ ಹೊಂದಿದ ಮೇಲೆ ಪದ್ಮಶ್ರೀ, ಪದ್ಮವಿಭೂಷಣ ಎಲ್ಲವನ್ನೂ ಕೊಡುತ್ತಾರೆ. ಹಾಗೆ ಕೊಟ್ಟು ಏನು ಪ್ರಯೋಜನ? ಹಸಿದಾಗ ಊಟ ಕೊಡದವರು ತೀರಿ ಹೋದ ಬಳಿಕ ಮೃಷ್ಟಾನ್ನ ಬಡಿಸಿದಂತೆ ಅಲ್ಲವೇ?’’ ಎಂದು ಜಯಂತಿಯವರು ಹತಾಷೆ ವ್ಯಕ್ತಪಡಿಸಿದರು.

ಬಸವನಗುಡಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಅನಾರೋಗ್ಯದ ಕಾರಣ ಆಗಮಿಸುವುದು ಕಷ್ಟ ಎಂದು ಹೇಳಿದ್ದ ಜಯಂತಿಯವರು, ಕೊನೆಯ ಕ್ಷಣದಲ್ಲಿ ಗಟ್ಟಿ ಮನಸು ಮಾಡಿ ನಾಗಾಭರಣರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕು ಎಂದು ಬಂದೇ ಬಿಟ್ಟಿದ್ದರು. ಗುಬ್ಬಿಗೂಡು ರಮೇಶ್ ಮತ್ತು ಎನ್. ಕೆ. ಪದ್ಮನಾಭ್ ಸಂಪಾದನೆಯಲ್ಲಿ ಮೂಡಿ ಬಂದ ಪುಸ್ತಕವನ್ನು ಹಿರಿಯ ನಟ ಅನಂತನಾಗ್ ಬಿಡುಗಡೆಗೊಳಿಸಿದರು. ಹಂಸಲೇಖ, ಎಚ್. ಎಸ್. ವೆಂಕಟೇಶ ಮೂರ್ತಿ, ಮುಖ್ಯಮಂತ್ರಿ ಚಂದ್ರು, ಶ್ರೀಧರ್, ಗಿರಿಜಾ ಲೋಕೇಶ್, ಲಕ್ಷ್ಮೀ ಗೋಪಾಲಸ್ವಾಮಿ, ಸುಧಾರಾಣಿ, ಸುಂದರ್ ರಾಜ್, ಪಿ. ಶೇಷಾದ್ರಿ, ಶಿವಧ್ವಜ್, ದತ್ತಣ್ಣ, ವಿಜಯಲಕ್ಷ್ಮೀ ಸಿಂಗ್, ವನಿತಾ ವಾಸು, ಬಿ. ಕೆ. ಎಸ್. ವರ್ಮಾ, ಶ್ರೀನಾಥ್, ಬಿ. ಜಯಶ್ರೀ ಹೀಗೆ ಚಿತ್ರೋದ್ಯಮದ ಗಣ್ಯರ ದಂಡೇ ನೆರೆದಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)