varthabharthi


ನಿಮ್ಮ ಅಂಕಣ

ಕೇರಳದ ಕಾಫಿಯ ಬೆಲೆ ನಮ್ಮ ರಾಜ್ಯಕ್ಕೇಕೆ ಮಾದರಿಯಾಗಬಾರದು?

ವಾರ್ತಾ ಭಾರತಿ : 24 Jan, 2021
ಆನಂದ ಕುಮಾರ್ ವಕೀಲ ಮತ್ತು ಕೃಷಿಕ

ಕೇರಳದ ಕಮ್ಯುನಿಸ್ಟ್ ಸರಕಾರ ಐವತ್ತು ಕೆ.ಜಿ. ತೂಗುವ ಒಂದು ಚೀಲ ರೊಬಸ್ಟಾ ಕಚ್ಚಾ (ಚೆರಿ) ಕಾಫಿಗೆ ರೂ. 4,500ರ ಬೆಲೆ ನಿಗದಿಪಡಿಸಿದೆ. ಅಂದರೆ ಪ್ರತೀ ಕಿಲೋ ಕಾಫಿಗೆ 90 ರೂ. ಆದರೆ ನಮ್ಮ ರಾಜ್ಯದ ಬೆಳೆಗಾರರಿಗೆ ಸಿಗುತ್ತಿರುವ ಮಾರ್ಕೆಟ್ ಬೆಲೆ ಚೀಲವೊಂದಕ್ಕೆ ರೂ. 3,200ನ್ನೂ ದಾಟಿಲ್ಲ. ಕಳೆದ ಸಾಲಿನಲ್ಲಿ ಕಿಲೋವೊಂದಕ್ಕೆ ರೂ. 72ರವರೆಗೆ ಮಾರಾಟವಾಗಿದ್ದ ರೊಬಸ್ಟಾ ಕಾಫಿ ಕೋವಿಡ್-19 ಮತ್ತಿತರ ಕಾರಣಗಳಿಂದಾಗಿ ರೂ.64ಕ್ಕೆ ಕುಸಿದಿದೆ. ಪ್ರತೀ ಕಿಲೋ ಕಾಫಿ ಬೆಳೆಯಲು ಬೆಳೆಗಾರನಿಗೆ ರೂ. 50ಕ್ಕೂ ಅಧಿಕ ಖರ್ಚು ತಗಲುತ್ತದೆ. ಈ ವರ್ಷದ ಅತಿವೃಷ್ಟಿಯಿಂದಾಗಿ ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗುವುದು ದುಸ್ತರವಾಗಿದ್ದು, ಬೆಳೆಗಾರರ ಬದುಕು ಮೂರಾಬಟ್ಟೆಯಾಗಿದೆ. ಇದನ್ನರಿತ ಕೇರಳ ರಾಜ್ಯ ಸರಕಾರ ಬೆಳೆಗಾರರ ಬೆನ್ನ ಹಿಂದೆ ನಿಂತಿದೆ.

ಕಳೆದ ವಾರ ಕೇರಳ ಸರಕಾರದ ಅರ್ಥಮಂತ್ರಿ ಟಿ. ಎಂ. ಥಾಮಸ್ ಮಂಡಿಸಿದ ಬಜೆಟ್‌ನಲ್ಲಿ ಕಾಫಿ ಬೆಳೆಗಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಈಗಿನ ಮಾರುಕಟ್ಟೆ ಬೆಲೆಗೆ ಸರಕಾರದ ಬೆಂಬಲ ಬೆಲೆಯೂ ಸೇರಿದಂತೆ ರೊಬಸ್ಟಾ ಕಾಫಿಗೆ ಚೀಲವೊಂದಕ್ಕೆ ಎಂಎಸ್‌ಪಿ ರೂ. 4,500ರನ್ನು ಕೊಡುವ ಅಭಯಹಸ್ತ ನೀಡಲಾಗಿದೆ. ಹಾಗೆ ನೋಡಿದರೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಾತ್ರ ರೊಬಸ್ಟಾ ಕಾಫಿಯನ್ನು ಬೆಳೆಯಲಾಗುತ್ತಿದೆ. ನಮ್ಮ ಕೊಡಗಿಗೆ ಅಂಟಿಕೊಂಡಿರುವ ವಯನಾಡ್ ಪ್ರಾಂತ ಮಲೆನಾಡಾಗಿದ್ದು, ಮೆಣಸು ಮತ್ತು ಕಾಫಿ ಬೆಳೆಗೆ ಸೂಕ್ತ ಹವಾಮಾನ ಹೊಂದಿದೆ. ಅನೇಕರಿಗೆ ಗೊತ್ತಿಲ್ಲದ ವಿಷಯವೇನೆಂದರೆ ಆ ಜಿಲ್ಲೆಯ ಬಹಳಷ್ಟು ಬೆಳೆಗಾರರು ಕನ್ನಡಿಗ ಅರೆಭಾಷೆ ಗೌಡರು!. ಕ್ರಿಶ್ಚಿಯನ್ನರಿಗೆ ಸೇರಿದ ಕಾಫಿ ತೋಟಗಳೂ ಅಲ್ಲಿ ಸಾಕಷ್ಟಿವೆ. ಸರಿ ಸುಮಾರು ಹದಿಮೂರು ಸಾವಿರ ಕಾಫಿ ಬೆಳೆಗಾರರು ಬ್ರಹ್ಮಗಿರಿ ಅಭಿವದ್ಧಿ ಸಂಘದ ಹೆಸರಿನಲ್ಲಿ ಒಕ್ಕೂಟವೊಂದನ್ನು ರಚಿಸಿಕೊಂಡು ತಮ್ಮ ಶ್ರೇಯೋಭಿವೃದ್ಧ್ದಿಗೆ ಕಂಕಣ ತೊಟ್ಟು ನಿಂತಿದ್ದಾರೆ. ಸಂಘಟನೆಯ ಅಧ್ಯಕ್ಷರಾದ ರಾಜೇಶ್ ಎನ್ನುವವರು ಅಲ್ಲಿಯ ಸರಕಾರ ಮತ್ತು ಕಾಫಿ ಮಂಡಳಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಬೆಳೆಗಾರರ ಸಂಕಷ್ಟಗಳನ್ನೆಲ್ಲ ಪಟ್ಟಿ ಮಾಡಿ ಸರಕಾರದ ಗಮನ ಸೆಳೆದಿದ್ದಾರೆ. ಅದರ ಫಲಶ್ರುತಿಯೇ ಕಾಫಿಗೆ ಬೆಂಬಲ ಬೆಲೆ ದೊರಕಿರುವುದು.

ಸಣ್ಣಬೆಳೆಗಾರರನ್ನು ಬೆಲೆಕುಸಿತ, ಪ್ರಕೃತಿ ವಿಕೋಪ ಮತ್ತಿತರ ಕಾರಣಗಳಿಂದ ಬಚಾವ್ ಮಾಡಲು ಜಿಲ್ಲಾ ಕೇಂದ್ರವಾದ ಕಲ್ಲೆಟ್ಟದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬ್ರಹ್ಮಗಿರಿ ಅಭಿವೃದ್ಧಿ ಸಂಘವು ಎಲ್ಲಾ ರೀತಿಯಿಂದಲೂ ಸನ್ನದ್ಧವಾಗಿ ನಿಂತಿದ್ದು ‘ಮಲಬಾರ್ ಕಾಫಿ’ ಹೆಸರಿನಲ್ಲಿ ಕಾಫಿಪುಡಿಯನ್ನು ತಯಾರಿಸಿ ಮಾರಾಟ ಮಾಡುವ ಘಟಕವೊಂದನ್ನು ಸ್ಥಾಪಿಸಿದ್ದು ಗುಣಮಟ್ಟದ ಕಾಫಿ ಪುಡಿಯನ್ನು ತಯಾರಿಸುವುದು, ಇನ್‌ಸ್ಟಂಟ್ ಕಾಫಿ ಪುಡಿ ತಯಾರಿಸುವುದು, ಕಾಫಿ ಬೇಳೆ ಮತ್ತು ಗ್ರೀನ್ ಕಾಫಿ ಬೇಳೆ ಸಿದ್ಧಗೊಳಿಸಿ ಮಾರುಕಟ್ಟೆಗೆ ತರುವುದರ ಜೊತೆಗೆ, ಜಿಲ್ಲೆಯಲ್ಲಿ ಬೆಳೆಯುವ ಕಾಳುಮೆಣಸು ಸೇರಿದಂತೆ ಇತರ ಬೆಳೆಗಳಿಗೆ ಮಾರುಕಟ್ಟೆ ಸೃಷ್ಟಿಸುವುದು ಸಂಘದ ಉದ್ದೇಶವಾಗಿದೆ. ಅಲ್ಲಿಯ ಕಾಫಿ ಮಂಡಳಿಯ ಸಂಶೋಧನಾ ಅಧಿಕಾರಿಗಳಾದ ಬಿ. ಜೆ. ಅಶ್ವತ್ಥನಾರಾಯಣ ಬೆಳೆಗಾರರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಲಹೆ ಸಹಕಾರಗಳನ್ನು ನೀಡುತ್ತಿದ್ದಾರೆ.

ಕಾಫಿ ಪುಡಿ ತಯಾರಿಸುವ ಘಟಕಕ್ಕೆ ಕೇರಳ ಸರಕಾರ ರೂ. 70 ಲಕ್ಷ ಸಹಾಯ ಧನವನ್ನು ಕೊಟ್ಟು ಸಂಘದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದೆ. ಬಿಡಿಎಸ್ ಸಂಘಟನೆಯು ಜಿಲ್ಲೆಯಾದ್ಯಂತ ಶಿಬಿರಗಳನ್ನು ಏರ್ಪಡಿಸಿ ರಸಗೊಬ್ಬರ ಬಳಸದೆ ಸಾವಯವ ಕೃಷಿ ಮಾಡಿ ಕಾಫಿ ಬೆಳೆಯುವ ಬಗ್ಗೆ ಬೆಳೆಗಾರರಿಗೆ ತಿಳುವಳಿಕೆ ನೀಡುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಕಾಫಿ ಬೆಳೆಯನ್ನು ದ್ವಿಗುಣಗೊಳಿಸುವ, ಕಾಫಿ ಪ್ರಿಯರಿಗೆ ಉನ್ನತಗುಣಮಟ್ಟದ ಕಾಫಿಯನ್ನು ಒದಗಿಸುವ ಮತ್ತು ಕಾಫಿ ಬೆಳೆಗಾರರಿಗೆ ಕಿಲೋ ಒಂದಕ್ಕೆ ರೂ. 240 ಅಂದರೆ ಪ್ರತಿ ಚೀಲ ರೊಬಸ್ಟಾ ಕಾಫಿಗೆ ರೂ. 12,000 ಬೆಲೆಯನ್ನು ತಂದುಕೊಡುವ ಘನ ಉದ್ದೇಶವನ್ನಿಟ್ಟುಕೊಂಡು ಸಂಘವು ಕಾರ್ಯಮಗ್ನವಾಗಿದೆ. ಇಂತಹದ್ದೊಂದು ಅದ್ಭುತ ಕನಸು ಕಾಣಲು, ಅಂತಹ ಕನಸನ್ನು ನನಸು ಮಾಡಲು ಪಣ ತೊಡುವುದು ನಮ್ಮ ಪಕ್ಕದ ಪುಟ್ಟ ರಾಜ್ಯಕ್ಕೆ ಸಾಧ್ಯವಾಗುವುದಾದರೆ ಮಲೆನಾಡಿನ ನಾಲ್ಕು ಜಿಲ್ಲೆಗಳಲ್ಲಿ ಕಾಫಿ ಬೆಳೆಯುವ ನಮ್ಮ ರಾಜ್ಯಕ್ಕೆ ಏಕೆ ಅದು ಸಾಧ್ಯವಾಗುತ್ತಿಲ್ಲ ಎಂಬುದೇ ಲಕ್ಷ ಡಾಲರ್ ಪ್ರಶ್ನೆ.

ಕೃಷಿ ಕಾರ್ಮಿಕರ ಮತ್ತು ಕಾಫಿ ವ್ಯಾಪಾರಸ್ಥರ ಶೋಷಣೆಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಣ್ಣ ಹಿಡುವಳಿದಾರರ ನಡುವೆ ಒಗ್ಗಟ್ಟಿನ ಕೊರತೆ ಕಾಣುತ್ತಿದೆ. ನಿದ್ರಾವಸ್ಥೆಯಲ್ಲಿರುವ ಕಾಫಿ ಮಂಡಳಿ ಮತ್ತು ಕಾಫಿ ಬೆಳೆಗಾರರ ಬಗ್ಗೆ ಅಸಡ್ಡೆ ಮತ್ತು ದಿವ್ಯ ಮೌನ ವಹಿಸಿರುವ ರಾಜ್ಯ ಸರಕಾರಕ್ಕೆ ಚಾಟಿ ಏಟು ಬೀಸುವ ಶಕ್ತಿಹೊಂದಿರುವ ದೊಡ್ಡ ದೊಡ್ಡ ಪ್ಲಾಂಟರ್‌ಗಳು ಕೈಕಟ್ಟಿ ಕುಳಿತಿರುವುದು ಮಾತ್ರ ಒಂದು ದೊಡ್ಡ ವಿಪರ್ಯಾಸವೇ ಸರಿ.

ಸದಾ ಅಂತಃಕಲಹದಲ್ಲಿ ಮುಳುಗಿ ಹೋಗಿರುವ ರಾಜ್ಯ ಬೆಳೆಗಾರರ ಒಕ್ಕೂಟದಿಂದ ಕಾಫಿ ಉದ್ಯಮಕ್ಕೆ ಏನಾದರೂ ಆಗುತ್ತದೆ ಎಂದು ನಾವು ಭ್ರಮಿಸುವುದು ಕೂಡ ತಪ್ಪಾಗುತ್ತದೆ. ಮೊನ್ನೆ ಒಕ್ಕೂಟದ ಪದಾಧಿಕಾರಿಗಳು ಬೆಂಗಳೂರಿನ ಕಾಫಿ ಮಂಡಳಿಗೆ ಭೇಟಿ ನೀಡಿ ತಮ್ಮ ಅಹವಾಲನ್ನೇನೋ ಸಲ್ಲಿಸಿ ಬಂದಿದ್ದರಾದರೂ ಅದರ ಫಲಶ್ರುತಿ ಏನೂ ಗೋಚರಿಸುತ್ತಿಲ್ಲ. ಕಲ್ಲೆಟ್ಟದ ಬಿಡಿಎಸ್‌ನಿಂದ ನಾನು ಹೇಳಿರುವುದೆಲ್ಲ ಸಾಧ್ಯವಾಗುವುದಾದರೆ ಅಂತಹದ್ದೊಂದು ಪ್ರಯತ್ನ ಮಾಡಲು ಒಕ್ಕೂಟಕ್ಕೆ ಏಕೆ ಸಾಧ್ಯವಾಗುತ್ತಿಲ್ಲ? ಸೋಮವಾರದಂದು ಕೊಡಗಿನ ಕುಟ್ಟಾದಿಂದ ಬೆಳೆಗಾರರು ಜಾಥಾ ನಡೆಸುತ್ತಿದ್ದಾರೆ. ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲಿ ಇಂತಹ ಎಚ್ಚರಿಕೆ ಗಂಟೆ ಮೊಳಗಬೇಕಾಗಿದೆ.

ಆಂತರಿಕ ಕಚ್ಚಾಟ ಆಡಳಿತದ ನಿದ್ರಾವಸ್ಥೆಯಲ್ಲಿರುವ ರಾಜ್ಯ ಸರಕಾರವನ್ನು ಬಡಿದೆಬ್ಬಿಸಬೇಕಿದೆ. ಬೆಳೆಗಾರರು ಬದುಕುಳಿಯಬೇಕಾದರೆ ಇದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಪ್ರತಿ ದಿನ ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ತಾವು ಕುಡಿಯುತ್ತಿರುವುದು, ತಿನ್ನುತ್ತಿರುವುದು ರೈತನ ಬೆವರ ಹನಿಯಿಂದ ಬರುತ್ತಿದೆಯೆಂಬ ಅಲ್ಪಅರಿವೂ ಇಲ್ಲದ ನಮ್ಮನ್ನಾಳುತ್ತಿರುವ ರೈತ ವಿರೋಧಿ ಕೇಂದ್ರ ಸರಕಾರದಿಂದ ಹೆಚ್ಚಿನದಿನ್ನೇನು ನಿರೀಕ್ಷಿಸಲು ಸಾಧ್ಯ? ಸರಕಾರದ ನಿರ್ಲಕ್ಷದಿಂದ ಇಷ್ಟೆಲ್ಲಾ ನೋವು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಕಾಫಿ ಬೆಳೆಯುವ ಮಲೆನಾಡು ಪ್ರಾಂತದವರು ಆಡಳಿತ ಪಕ್ಷವನ್ನು ಕಣ್ಣುಮುಚ್ಚಿಕೊಂಡು ಬೆಂಬಲಿಸುತ್ತಿರುವುದು ಮಾತ್ರ ನನ್ನಂತಹವನಿಗಂತೂ ಸಖೇದಾಶ್ಚರ್ಯವನ್ನುಂಟುಮಾಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)