varthabharthi


ನಿಮ್ಮ ಅಂಕಣ

ಮೃಗಾಲಯಗಳಿಗೆ ತಟ್ಟಿದ ಗೋಹತ್ಯೆ ನಿಷೇಧ ಕಾಯ್ದೆಯ ಕಾವು!

ವಾರ್ತಾ ಭಾರತಿ : 24 Jan, 2021
ಶ್ರೀನಿವಾಸ ಕೆ. ದಾಖಲೀಕರಣಕಾರರು, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ, ನಾಗರಬಾವಿ, ಬೆಂಗಳೂರು

ಗೋಹತ್ಯೆ ನಿಷೇಧ ಕಾಯ್ದೆಯ ಜಾರಿಯಿಂದ ಮನುಷ್ಯ ಕುಲಕ್ಕೆ ತೊಂದರೆಗಳುಂಟಾಗುವುದಲ್ಲದೆ ರಾಷ್ಟ್ರ ಮತ್ತು ರಾಜ್ಯದಲ್ಲಿರುವ ಮೃಗಾಲಯಗಳು ಮತ್ತು ವನ್ಯಧಾಮದಲ್ಲಿರುವ ಪ್ರಾಣಿಗಳ ಹೊಟ್ಟೆಯ ಮೇಲೆಯೂ ಹೊಡೆದಂತಾಗುತ್ತದೆ.


ಕರ್ನಾಟಕ ಸರಕಾರವು ಗೋಹತ್ಯೆ ನಿಷೇಧ ಕಾಯ್ದೆ-2020 ಜಾರಿಗೊಳಿಸಿದೆ. ಈ ಕಾಯ್ದೆ ಗೋರಕ್ಷಣೆಗೆ ಸಂಬಂಧಿಸಿದ್ದ 1964ರ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸಿದೆ. ಅಲ್ಲದೆ, ಗೋಹತ್ಯೆ ಮಾಡುವವರ ಮೇಲೆ 3 ರಿಂದ 7 ವರ್ಷಗಳ ಜೈಲುವಾಸ, ರೂ. 5 ಲಕ್ಷದಷ್ಟು ದಂಡ ವಿಧಿಸಬಹುದಾದ ನಿಬಂಧನೆಯನ್ನು ಹೊಂದಿದೆ. ಗೋ ಹತ್ಯೆ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸುವ ಸಂಪೂರ್ಣ ಅಧಿಕಾರವನ್ನು ಪೊಲೀಸ್ ಇಲಾಖೆಗೆ ನೀಡಿದೆ. ಈ ಕಾಯ್ದೆಯ ಜಾರಿಯಿಂದ ಕರ್ನಾಟಕದಲ್ಲಿ ಗೋಮಾಂಸ ಮಾರಾಟದ ವೃತ್ತಿನಿರತ 40 ಸಾವಿರಕ್ಕೂ ಅಧಿಕ ಕುಟುಂಬಗಳ ಜೀವನದ ಮೇಲೆ ಬರೆ ಎಳೆದಂತಾಗುವುದಲ್ಲದೆ, ಬಡ ರೈತರು, ಇತರ ಕುಶಲಕರ್ಮಿಗಳ ಬದುಕು ಬೀದಿಗೆ ಬರುವುದುಂಟು. ಗೋಹತ್ಯೆ ನಿಷೇಧ ಕಾಯ್ದೆಯನ್ನು 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಸದನದಲ್ಲಿ ಮಂಡಿಸಿದಾಗ ರಾಜ್ಯಪಾಲರ ಅಂಕಿತ ದೊರಕದೆ ಕಾಯ್ದೆಗೆ ತಡೆಯುಂಟಾಯಿತು. ಈ ಕಾಯ್ದೆಯ ಜಾರಿಯಿಂದ ಮನುಷ್ಯ ಕುಲಕ್ಕೆ ತೊಂದರೆಗಳುಂಟಾಗುವುದಲ್ಲದೆ ರಾಷ್ಟ್ರ ಮತ್ತು ರಾಜ್ಯದಲ್ಲಿರುವ ಮೃಗಾಲಯಗಳು ಮತ್ತು ವನ್ಯಧಾಮದಲ್ಲಿರುವ ಪ್ರಾಣಿಗಳ ಹೊಟ್ಟೆಯ ಮೇಲೆಯೂ ಹೊಡೆದಂತಾಗುತ್ತದೆ.

ರಾಷ್ಟ್ರ ಮತ್ತು ರಾಜ್ಯದಲ್ಲಿ ಭಾಜಪ ಸರಕಾರವು ಅಧಿಕಾರಕ್ಕೆ ಬಂದಾಗ ಮುನ್ನೆಲೆಗೆ ಬರುವ ಪ್ರಮುಖ ವಿಚಾರಗಳಲ್ಲಿ ಗೋಹತ್ಯೆ ನಿಷೇಧವು ಒಂದಾಗಿದೆ. ಭಾಜಪ ಗೋರಕ್ಷಣಾ ದಳದಿಂದ ಗೋಹತ್ಯೆಯ ಸಂಪೂರ್ಣ ನಿಷೇಧಕ್ಕೆ ಒತ್ತಾಯಗಳು ಕೇಳಿಬಂದ ಕಾರಣ ರಾಜ್ಯ ಸರಕಾರವು ಈ ಕಾಯ್ದೆಯನ್ನು ಮತ್ತೆ ಮುನ್ನೆಲೆಗೆ ತರುವ ಮುಖೇನ ರಾಜಕೀಯದ ಮೇಲಾಟವನ್ನು ಸೃಷ್ಟಿಸಿದೆ. ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ-1964 ವಿಭಾಗ 5ರಲ್ಲಿ ಎತ್ತು, ಕೋಣ ಇತ್ಯಾದಿ ಜಾನುವಾರುಗಳನ್ನು ವಧಿಸಲು ಅನುಮತಿಯನ್ನು ನೀಡಿತ್ತು. ಅಲ್ಲದೆ, 12 ವರ್ಷಗಳಿಗೆ ಮೇಲ್ಪಟ್ಟ ಸಂತಾನಹೀನ, ಗಾಯಗೊಂಡ, ಹಾಲನ್ನು ನೀಡದ ಜಾನುವಾರುಗಳನ್ನು ಇಲಾಖೆಗಳ ಪ್ರಮಾಣ ಪತ್ರವನ್ನು ಪಡೆದು ವಧಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ, ಗೋಹತ್ಯೆ ನಿಷೇಧ ಕಾಯ್ದೆ- 2020 ಎಲ್ಲಾ ರೀತಿಯ ಜಾನುವಾರು ವಧಿಸುವುದನ್ನು ನಿಷೇಧಿಸಿದೆ. ಕೃಷಿಯಲ್ಲಿನ ಅನೇಕ ಸಮಸ್ಯೆಯಿಂದ ರೈತರು ಕಂಗಾಲಾಗಿರುವ ಸಂದರ್ಭದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವ ಮುಖಾಂತರ ರೈತರಿಗೆ ಮತ್ತಷ್ಟು ನಷ್ಟವನ್ನುಂಟು ಮಾಡಲಾಗಿದೆ ಎಂದು ಅನೇಕ ರೈತ ಸಂಘಟನೆಗಳು ವಿರೋಧಿಸುತ್ತಿವೆ. ಅದಕ್ಕಾಗಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ತೆರೆಯುವುದಾಗಿ ರಾಜ್ಯ ಸರಕಾರ ಭರವಸೆಯನ್ನು ನೀಡಿದೆ.

ಗೋಹತ್ಯೆ ನಿಷೇಧ ಕಾಯ್ದೆ ಒಂದು ರಾಜಕೀಯ ಹುನ್ನಾರವಾಗಿದೆ. ರಾಷ್ಟ್ರದಲ್ಲಿನ ಶೇ. 70ರಷ್ಟು ಜಾನುವಾರುಗಳನ್ನು ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ವರ್ಗದ ಜನರು ಸಾಕುತ್ತಿದ್ದಾರೆ. ಅಲ್ಲದೆ, ಶೇ. 71ರಷ್ಟು ದಲಿತರು ಭೂರಹಿತ ಕೃಷಿ ಕಾರ್ಮಿಕರಿದ್ದಾರೆ. ಗೋವನ್ನು ಪೂಜ್ಯನೀಯ ದೃಷ್ಟಿಯಲ್ಲಿ ಕಾಣುವ ಮೇಲ್ವರ್ಗದ ಜನರಿಗೆ ಅದು ಸತ್ತ ಕೂಡಲೇ ಅನುಪಯುಕ್ತ ಅಸ್ಪಶ್ಯ ವಸ್ತುವಾಗಿ ಕಾಣುತ್ತದೆ. ಆ ಸತ್ತ ಗೋವಿನ ಶವವನ್ನು ಸಾಗಿಸಲು ದಲಿತರನ್ನು ಬಳಸಲಾಗುತ್ತದೆ. ಗೋಮಾಂಸವನ್ನು ತಿನ್ನುವ ಬಹುಪಾಲು ಮುಸಲ್ಮಾನರು, ದಲಿತರು ಹಾಗೂ ಕ್ರಿಶ್ಚಿಯನ್ನರು ಬಡವರಾಗಿದ್ದಾರೆ. ಅಲ್ಲದೆ, ಈ ಕಾಯ್ದೆಯಿಂದ ಪೌಷ್ಟಿಕ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂಬುದು ಆರ್ಥಿಕವಾಗಿ ಹಿಂದುಳಿದ ಸಮುದಾಯದ ಅಳಲಾಗಿದೆ. ಪ್ರಪಂಚದ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶಗಳ ಸಾಲಿನಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ. ಬ್ರೆಝಿಲ್ ಮತ್ತು ಆಸ್ಟ್ರೇಲಿಯವು ಮೊದಲೆರಡು ಸ್ಥಾನದಲ್ಲಿವೆ. ಭಾರತವು 2020ರಲ್ಲಿ 14,00,000 ಮೆಟ್ರಿಕ್ ಟನ್‌ನಷ್ಟು ರಫ್ತು ಮಾಡಿದೆ. ಬ್ರೆಝಿಲ್, ಆಸ್ಟ್ರೇಲಿಯ ಹಾಗೂ ಭಾರತ ದೇಶಗಳು ಜಗತ್ತಿನ ರಫ್ತಿನ ಶೇ. 63ರಷ್ಟು ಭಾಗವನ್ನು ಹೊಂದಿವೆ. ದೇಶದಲ್ಲಿ ವಧಿಸುವ ಗೋವಿನ ಅಂಶದಲ್ಲಿ ಶೇ. 50ರಷ್ಟು ಆಹಾರಕ್ಕೆ ಬಳಕೆಯಾದರೆ ಶೇ.50ರಷ್ಟು ಭಾಗವು ಹಲವು ಬಗೆಯ ವಸ್ತುಗಳ ತಯಾರಿಕೆಗೆ ಬಳಕೆಯಾಗುತ್ತಿದೆ ಎನ್ನುವುದು ಗಮನಿಸಬೇಕಾದ ಅಂಶ. ಅಂದರೆ, ಸಕ್ಕರೆ ತಯಾರಿಸಲು, ಐಷಾರಾಮಿ ಕಾರುಗಳ ಸೀಟುಗಳ ತಯಾರಿಕೆಗೆ, ಚಪ್ಪಲಿಗಳು, ಬ್ಯಾಗುಗಳು ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಗೋಮಾಂಸದ ಅಂಶಗಳನ್ನು ಬಳಸಲಾಗುತ್ತದೆಂಬುದು ಅನೇಕ ಸಂಶೋಧನೆಗಳಿಂದ ದೃಢವಾಗಿದೆ. ಹೀಗೆ ನಾವು ದಿನನಿತ್ಯವೂ ಗೋವಿನ ಅಂಶದೊಡನೆಯೇ ಜೀವಿಸುತ್ತಿದ್ದು ದೇಶದ ಆರ್ಥಿಕತೆಯಲ್ಲಿ ಗೋವಿನ ಪಾತ್ರ ಬಹುಮುಖ್ಯವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆಯಿಂದ ಈ ಎಲ್ಲಾ ಅವಲಂಬಿತ ಆರ್ಥಿಕ ಚಟುವಟಿಕೆಗಳು ಕುಂಠಿತವಾಗುತ್ತದೆ.

ಗೋಹತ್ಯೆ ನಿಷೇಧ ಕಾಯ್ದೆ ಸಂಪೂರ್ಣ ಜಾರಿಯಾಗಬೇಕೆನ್ನು ವುದು ಭಾಜಪದ ಅಂಗ ಸಂಸ್ಥೆಯಾದ ಆರೆಸ್ಸೆಸ್‌ನ ಬಹುಮುಖ್ಯ ಬೇಡಿಕೆಗಳಲ್ಲೊಂದು. ಅಸ್ಸಾಮಿನಲ್ಲಿ ಭಾಜಪ ಕಾರ್ಯಕರ್ತರು ಮೃಗಾಲಯಕ್ಕೆ ಗೋಮಾಂಸ ಸರಬರಾಜು ಮಾಡುವ ವಾಹನಗಳನ್ನು ತಡೆಗಟ್ಟಿ ಧರಣಿ ನಡೆಸಿದ್ದು ಅಕ್ಟೋಬರ್ 11, 2020ರಲ್ಲಿ ವಿವಿಧ ರಾಷ್ಟ್ರೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಧರಣಿಯ ಮುಂಚೂಣಿ ವಹಿಸಿದ್ದ ಸತ್ಯರಂಜನ್ ಬೋಹ್ರಾ ಎಂಬುವವರು ಮೃಗಾಲಯದ ಹುಲಿ, ಸಿಂಹ, ಚಿರತೆ ಮೊದಲಾದ ಮಾಂಸಹಾರಿ ಪ್ರಾಣಿಗಳಿಗೆ ಗೋಮಾಂಸದ ಬದಲು ಕುರಿ, ಮೇಕೆ ಹಾಗೂ ಕೋಳಿ ಮಾಂಸವನ್ನು ನೀಡಬೇಕೆಂದು ಮೃಗಾಲಯದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಹಕ್ಕಿ ಜ್ವರ ಆತಂಕಕ್ಕೆ ಕಾರಣವಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಅಲ್ಲದೆ, ಕುರಿ ಹಾಗೂ ಮೇಕೆಯ ಮಾಂಸದ ಬೆಲೆಯು ಗಗನಕ್ಕೇರಿರುವುದು ಆರ್ಥಿಕ ಹೊರೆಯಾಗಬಹುದು. ಈಗ ದೇಶದಲ್ಲಿ 190ಕ್ಕೂ ಅಧಿಕ ಮೃಗಾಲಯಗಳಿದ್ದರೆ, ಕರ್ನಾಟಕದಲ್ಲಿ 10ಕ್ಕೂ ಅಧಿಕ ಮೃಗಾಲಯಗಳಿವೆ. ಹಾಗೆಯೇ, 2019ಕ್ಕೆ ಭಾರತದಲ್ಲಿ ಹುಲಿಗಳ ಸಂಖ್ಯೆಯು 1,400ರಿಂದ 2,967ಕ್ಕೆ ಹೆಚ್ಚಾಗಿದ್ದರೆ, ಸಿಂಹಗಳ ಸಂಖ್ಯೆಯು 674ಕ್ಕೆ ಹೆಚ್ಚಾಗಿದೆ. ಚಿರತೆಗಳ ಸಂಖ್ಯೆಯು ದೇಶದಲ್ಲಿ 12,852ರಷ್ಟಿದ್ದರೆ, ಕರ್ನಾಟಕದಲ್ಲಿ 1,783ರಷ್ಟಿದೆ. ಕರ್ನಾಟಕದ ಪ್ರಸಿದ್ಧ ಮೃಗಾಲಯಗಳಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯವು ಪ್ರಸಿದ್ಧಿಯಾಗಿದ್ದು, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವೂ ರಾಜ್ಯದ ಬೊಕ್ಕಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.

ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿದಿನ 350 ಕೆ.ಜಿ.ಯಷ್ಟು ಗೋಮಾಂಸ ಸರಬರಾಜಾಗುತ್ತಿದ್ದರೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ 1,300 ಕೆ.ಜಿ.ಯಷ್ಟು ಗೋಮಾಂಸವನ್ನು ಒದಗಿಸಲಾಗುತ್ತಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ 100 ಸಿಂಹಗಳು, 41 ಹುಲಿಗಳು ಮತ್ತು 30ಕ್ಕೂ ಅಧಿಕ ಚಿರತೆಗಳಿವೆ. ಹಾಗೆಯೇ, ಚಾಮರಾಜೇಂದ್ರ ಮೃಗಾಲಯದಲ್ಲಿ 25 ಸಿಂಹ, 50 ಹುಲಿ ಮತ್ತು 100 ಚಿರತೆಗಳಿದ್ದು ಇವುಗಳ ಪೌಷ್ಟಿಕತೆ ಮತ್ತು ಆರೋಗ್ಯದ ದೃಷ್ಟಿಯಿಂದ ಗೋಮಾಂಸವನ್ನು ನೀಡಲಾಗುತ್ತಿದೆ. ಹಾಲನ್ನು ಉತ್ಪಾದಿಸದ ಕುರಿ, ಮೇಕೆ ಹಾಗೂ ಕೋಳಿಗಳ ಮಾಂಸವನ್ನು ಈ ಪ್ರಾಣಿಗಳಿಗೆ ಆಹಾರವಾಗಿ ನೀಡುವುದರಿಂದ ಕಾಲು-ಬಾಯಿ ರೋಗವು ಉಲ್ಭಣವಾಗುವುದೆಂಬುದು ಮೃಗಾಲಯದ ಅಧಿಕಾರಿ ವರ್ಗದ ಆತಂಕವಾಗಿದೆ. ದೇಶದ ಆರ್ಥಿಕತೆಯಲ್ಲಿ ಬಹುಮುಖ್ಯ ಪಾಲುದಾರಿಕೆ ಹೊಂದಿರುವ ಗೋಮಾಂಸವು ಪ್ರಸ್ತುತ ಕಾನೂನಿನಿಂದ ರಾಷ್ಟ್ರ ಮತ್ತು ರಾಜ್ಯದ ಆರ್ಥಿಕತೆಗೆ ಮಾರಕವಾಗಬಲ್ಲದು. ಅಲ್ಲದೆ, ಒಂದು ವ್ಯವಸ್ಥಿತ ನೀತಿ-ನಿಯಮಗಳನ್ನು ರಚಿಸುವ ಮೂಲಕ ಉತ್ಪಾದನೆಯಿಲ್ಲದ, ಗಾಯಗೊಂಡ, ಸಂತಾನಹೀನ, ರೈತರಿಗೆ ಹೊರೆಯಾಗಬಲ್ಲ ಜಾನುವಾರುಗಳನ್ನು ಸರಕಾರಿ ದೃಢೀಕರಣ ಸಂಸ್ಥೆಯಿಂದ ಪ್ರಮಾಣ ಪತ್ರಗಳನ್ನು ಪಡೆಯುವ ಮೂಲಕ ವಧಿಸಲು ಅವಕಾಶ ಕಲ್ಪಿಸಬೇಕಾಗಿದೆ.

ಇಲ್ಲವಾದರೆ, ಗೋಹತ್ಯೆಯು ಒಂದು ಕಾನೂನುಬಾಹಿರ ಚಟುವಟಿಕೆಯಾಗಿ ಮುಂದುವರಿಯುವ ಅಪಾಯಗಳುಂಟು. ಪ್ರತಿನಿತ್ಯವು ಗೋರಕ್ಷಕರೆಂದು ಬಿಂಬಿಸಿಕೊಳ್ಳುತ್ತಾ ಜನಾಂಗೀಯ ದ್ವೇಷದೊಡನೆ ಅನೇಕ ಕೊಲೆಗಳು, ಮಾರಣಾಂತಿಕ ಹಲ್ಲೆ ಎಸಗುತ್ತಿರುವುದು ವರದಿಯಾಗುತ್ತಿವೆ. ಅಲ್ಲದೆ, ಈ ಕಾಯ್ದೆಯಿಂದ ಮೂಕ ವನ್ಯಜೀವಿಗಳು ಅನೇಕ ಕಾಯಿಲೆಗಳಿಗೆ ತುತ್ತಾಗಿ ಮರಣ ಹೊಂದುವ ಸಾಧ್ಯತೆಗಳಿವೆ. ಆದರಿಂದ, ಸರಕಾರವು ಮೇಲಿನ ಎಲ್ಲಾ ಸಮಸ್ಯೆಗಳನ್ನು ಗಮದಲ್ಲಿಟ್ಟುಕೊಂಡು ವ್ಯವಸ್ಥಿತವಾದ ನೀತಿ-ನಿಯಮಗಳನ್ನು, ಅಗತ್ಯವಾದ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಬೇಕಾದ ಜರೂರಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)