varthabharthi


ರಾಷ್ಟ್ರೀಯ

ವಾಸ್ತವಾಂಶ ದೃಢಪಡಿಸಿಕೊಳ್ಳದೆ ಉಮರ್ ಖಾಲಿದ್ ವಿರುದ್ಧ ‘ಮಾಧ್ಯಮಗಳ ವಿಚಾರಣೆ’ಗೆ ನ್ಯಾಯಾಲಯದ ಟೀಕೆ

ವಾರ್ತಾ ಭಾರತಿ : 24 Jan, 2021

ಹೊಸದಿಲ್ಲಿ,ಜ.24: ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ಸಂಭವಿಸಿದ್ದ ದಂಗೆಗಳಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಾಮಾಜಿಕ ಕಾರ್ಯಕರ್ತ ಉಮರ್ ಖಾಲಿದ್ ಅವರ ಹೇಳಿಕೆಗಳು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಸ್ವೀಕಾರಾರ್ಹವಲ್ಲ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳದೆ ಅವರದ್ದೆನ್ನಲಾದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪ್ರಕಟಿಸಿದ್ದಕ್ಕಾಗಿ ದಿಲ್ಲಿಯ ಮುಖ್ಯ ಮಹಾನಗರ ನ್ಯಾಯಾಲಯವು ಮಾಧ್ಯಮಗಳನ್ನು ತರಾಟೆಗೆತ್ತಿಕೊಂಡಿದೆ ಎಂದು Live Law ವರದಿ ಮಾಡಿದೆ.

ಮಾಧ್ಯಮಗಳ ಒಂದು ವರ್ಗವು ತನ್ನ ಹೇಳಿಕೆಯ ಆಯ್ದ ಭಾಗಗಳನ್ನು ಉಲ್ಲೇಖಿಸಿರುವುದರಿಂದ ಮತ್ತು ಅವು ತನ್ನ ತಪ್ಪೊಪ್ಪಿಗೆ ಹೇಳಿಕೆಯ ಭಾಗಗಳೆಂದು ಹೇಳಿರುವುದರಿಂದ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ತನ್ನ ಹಕ್ಕುಗಳಿಗೆ ಚ್ಯುತಿಯುಂಟಾಗಿದೆ ಎಂದು ದೂರಿ ಖಾಲಿದ್ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು.

ಶುಕ್ರವಾರ ಅರ್ಜಿಗೆ ಸಂಬಂಧಿಸಿದಂತೆ ಆದೇಶವೊಂದನ್ನು ಹೊರಡಿಸಿರುವ ನ್ಯಾ.ದಿನೇಶ್ ಕುಮಾರ್ ಅವರು,ಪೊಲೀಸ್ ಅಧಿಕಾರಿಯ ಎದುರು ನೀಡಲಾದ ತಪ್ಪೊಪ್ಪಿಗೆ ಹೇಳಿಕೆಯು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಪರಿಗಣಿಸಲ್ಪಡುವುದಿಲ್ಲ ಎಂಬ ಪ್ರಾಥಮಿಕ ಜ್ಞಾನವು ಮಾಧ್ಯಮ ವರದಿಗಾರರಿಗೆ ಇರಬೇಕಾಗುತ್ತದೆ ಮತ್ತು ಓದುಗನಿಗೆ ಈ ಬಗ್ಗೆ ಮಾಹಿತಿಯನ್ನು ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಖಾಲಿದ್‌ರನ್ನು ‘ಮೂಲಭೂತವಾದಿ ಇಸ್ಲಾಮಿಸ್ಟ್ ಮತ್ತು ಹಿಂದು ವಿರೋಧಿ ದಿಲ್ಲಿ ದಂಗೆಗಳ ಆರೋಪಿ ’ಎಂದು ಬಣ್ಣಿಸಿರುವ 'OpIndia' ವೆಬ್‌ಸೈಟ್‌ನಲ್ಲಿಯ ಲೇಖನವನ್ನು ನಿರ್ದಿಷ್ಟವಾಗಿ ಆಕ್ಷೇಪಿಸಿದ ನ್ಯಾಯಾಲಯವು, ವಿಚಾರಣೆಯ ನಂತರ ಪ್ರಕರಣದಲ್ಲಿ ತಿರುಳಿದೆಯೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ ಎಂದು ಹೇಳಿದೆ. ಇಡೀ ದಿಲ್ಲಿ ದಂಗೆಗಳನ್ನು ಹಿಂದು ವಿರೋಧಿ ದಂಗೆಗಳು ಎಂದು ಲೇಖನವು ಪ್ರತಿಬಿಂಬಿಸಿದೆ. ಆದರೆ ವಾಸ್ತವದಲ್ಲಿ ಹಾಗೆ ಕಂಡು ಬರುತ್ತಿಲ್ಲ. ಈ ದಂಗೆಗಳ ಪರಿಣಾಮಗಳನ್ನು ಎಲ್ಲ ಸಮುದಾಯಗಳೂ ಅನುಭವಿಸಿವೆ ಎಂದು ಅದು ತಿಳಿಸಿದೆ. 

‘ಮಾಧ್ಯಮ ವಿಚಾರಣೆ’ಗಳು ಆರೋಪಿಯೋರ್ವನ ವಿರುದ್ಧದ ಆರೋಪವು ರುಜುವಾತಾಗುವವರೆಗೂ ಆತ ಅಮಾಯಕನಾಗಿದ್ದಾನೆ ಎಂಬ ಗ್ರಹಿಕೆಯನ್ನು ನಾಶಗೊಳಿಸಬಾರದು ಎಂದೂ ಹೇಳಿರುವ ಆದೇಶವು,ಇಂತಹ ಗ್ರಹಿಕೆಗಳ ರಕ್ಷಣೆಯು ನ್ಯಾಯಾಲಯಗಳ ಘನತೆಯನ್ನು ಕಾಯ್ದುಕೊಳ್ಳಲು ಅಗತ್ಯವಾಗಿವೆ ಮತ್ತು ಇದು ಮುಕ್ತ ಪ್ರಜಾಪ್ರಭುತ್ವ ದೇಶದಲ್ಲಿ ಕಾನೂನಿನ ಆಡಳಿತದ ಮುಖ್ಯ ತತ್ತ್ವಗಳಲ್ಲೊಂದಾಗಿದೆ ಎಂದೂ ತಿಳಿಸಿದೆ. ಖಾಲಿದ್ ತನ್ನ ಅರ್ಜಿಯಲ್ಲಿ ಯಾವುದೇ ನಿರ್ದಿಷ್ಟ ಕೋರಿಕೆಯನ್ನು ಸಲ್ಲಿಸಿರದ ಹಿನ್ನೆಲೆಯಲ್ಲಿ ನ್ಯಾಯಾಲಯವು ಯಾವುದೇ ನಿರ್ದೇಶವನ್ನು ನೀಡಿಲ್ಲ. ಆದರೆ ಸ್ವ-ನಿಯಂತ್ರಣವನ್ನು ರೂಢಿಸಿಕೊಳ್ಳುವಂತೆ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿರುವ ಅದು,ಮಾಧ್ಯಮ ವರದಿಗಳು ವ್ಯಕ್ತಿಯ ಘನತೆಗೆ ಹಾನಿಯನ್ನುಂಟು ಮಾಡಿದರೆ ಅದು ಸಂವಿಧಾನದ ವಿಧಿ 21ರಡಿ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

53 ಜನರು ಮೃತಪಟ್ಟು ಹಲವಾರು ಜನರು ಗಾಯಗೊಂಡಿದ್ದ ದಿಲ್ಲಿ ದಂಗೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ಪೊಲೀಸರು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಡಿ ಖಾಲಿದ್‌ರನ್ನು ಬಂಧಿಸಿದ್ದರು. ಪ್ರಕರಣದಲ್ಲಿ ಖಾಲಿದ್ ಮತ್ತು ವಿದ್ಯಾರ್ಥಿ ಕಾರ್ಯಕರ್ತರಾದ ಶಾರ್ಜೀಲ್ ಇಮಾಮ್ ಹಾಗೂ ಫೈಝಾನ್ ಖಾನ್ ವಿರುದ್ಧ ನ.22ರಂದು ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು. ದಿಲ್ಲಿ ದಂಗೆಗಳಿಗೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿಯೂ ಅ.1ರಂದು ಖಾಲಿದ್‌ರನ್ನು ಬಂಧಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)