varthabharthi


ಕರಾವಳಿ

ಜಿ.ಕೆ.ರಮೇಶ್‌ಗೆ ಕೆ.ಟಿ.ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ ಪ್ರದಾನ

ವಾರ್ತಾ ಭಾರತಿ : 24 Jan, 2021

ಮುಂಬಯಿ, ಜ.24: ಪತ್ರಿಕಾ ವೃತ್ತಿ ಎಂಬುದು ಸಮಾಜದ ಸಮಸ್ಯೆ- ಸವಾಲುಗಳ ಪರಿಹಾರಕ್ಕೆ ಸಂಜೀವಿನಿಯಾಗಿದೆ. ಪತ್ರಿಕೋದ್ಯಮ ಎಂಬುದು ಸಮಾಜಕ್ಕೆ ಅತ್ಯಗತ್ಯವಾದ ಜೀವಸೆಲೆ ಎಂಬುದನ್ನು ಎಲ್ಲರೂ ಮನಗಂಡು ಪತ್ರಕರ್ತರ ಭಾವನೆಗಳಿಗೆ ಸ್ಪಂದಿಸುವ ಅಗತ್ಯವಿದೆ. ಆದ್ದರಿಂದ ನಿಷ್ಠಾವಂತ ಪತ್ರಕರ್ತರ ವೃತ್ತಿನಿಷ್ಠೆಯನ್ನು ತಿದ್ದುವ ಕಾಯಕಕ್ಕೆ ಹೋಗದೆ ಪತ್ರಕರ್ತರನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಬೇಕು ಎಂದು ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸದಸ್ಯ ಗೋಪಾಲ ಸಿ.ಶೆಟ್ಟಿ ಹೇಳಿದ್ದಾರೆ.

ಮುಂಬಯಿ ಅಂಧೇರಿ ಪಶ್ಚಿಮದ ಮೊಗವೀರ ಭವನದ ಎಂವಿಎಂ ಶ್ರೀಮತಿ ಶಾಲಿನಿ ಜಿ.ಶಂಕರ್ ಸಭಾಗೃಹದಲ್ಲಿ ರವಿವಾರ ಮಹಾರಾಷ್ಟ್ರದ ಕನ್ನಡಿಗ ಪತ್ರಕರ್ತರ ಸಂಘ ಪ್ರದಾನಿಸಿದ ಸಂಘದ ದ್ವಿತೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಿ ಸಂಸದ ಗೋಪಾಲ ಶೆಟ್ಟಿ ಮಾತನಾಡಿದರು.

ಮುಂಬಯಿಯಲ್ಲಿ ಹಿರಿಯ ಪತ್ರಕರ್ತರಾಗಿದ್ದ ಕೆ.ಟಿ.ವೇಣುಗೋಪಾಲ್ ಅವರ ನೆನಪಿನಲ್ಲಿ ಕುಟುಂಬ ಪ್ರಾಯೋಜಿಸಿದ ಕೆ.ಟಿ.ವೇಣುಗೋಪಾಲ್- ಕಸಪಮ ರಾಷ್ಟ್ರೀಯ ಮಾಧ್ಯಮಶ್ರೀ ಪ್ರಶಸ್ತಿ-2020ನ್ನು ಬ್ರಹನ್ಮುಂಬಯಿಯ ಹಿರಿಯ ಕನ್ನಡ ಪತ್ರಕರ್ತ, ‘ಮೊಗವೀರ’ ಮಾಸಿಕದ ಸಂಪಾದಕ ಕೆ.ಜಿ.ರಮೇಶ್ ಗೆ ಗೋಪಾಲ ಸಿ.ಶೆಟ್ಟಿ ಪ್ರದಾನಿಸಿದರು.

ಪ್ರಶಸ್ತಿಯು 25,000ರೂ. ನಗದು, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ರಮೇಶ್ ಅವರಿಗೆ ಇವುಗಳೊಂದಿಗೆ ಶಾಲು ಹೊದಿಸಿ, ಫಲಪುಷ್ಪಗಳನ್ನಿತ್ತು ಗೌರವಿಸಲಾಯಿತು. ವೃತ್ತಿ ಬದುಕಿನಲ್ಲಿ ತನ್ನ ಆತ್ಮೀಯ ಮಿತ್ರರಾಗಿದ್ದ ಕೆ.ಟಿ.ವೇಣುಗೋಪಾಲ್ ನೆನಪಿನ ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದಕ್ಕೆ ಕೆ.ಜಿ.ರಮೇಶ್ ಕೃತಜ್ಞತೆ ಸಲ್ಲಿಸಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಅಧ್ಯಕ್ಷ ಕೆ.ಎಲ್ ಬಂಗೇರ ಅತಿಥಿ ಅಭ್ಯಾಗತರಾಗಿ ಭಾಗವಹಿಸಿದ್ದು, ಸಂಘದ ಸಲಹಾ ಸಮಿತಿ ಸದಸ್ಯರೂ, ಪ್ರಶಸ್ತಿ ಆಯ್ಕೆ ಸಮಿತಿ ಕಾರ್ಯಧ್ಯಕ್ಷೆ ಡಾ. ಸುನೀತಾ ಎಂ.ಶೆಟ್ಟಿ ಹಾಗೂ ಕೆ.ಟಿ.ವೇಣುಗೋಪಾಲ್ ಹಾಗೂ ಸಾಹಿತಿ ತುಳಸಿ ವೇಣುಗೋಪಾಲ ದಂಪತಿ ಪುತ್ರ ವಿಕಾಸ್ ವೇಣುಗೋಪಾಲ್ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಹಿತೈಷಿಗಳಾಗಿದ್ದು ಇತ್ತೀಚೆಗೆ ನಿಧನರಾದ ಮುಂಬಯಿ ಬಿಲ್ಲವರ ಸಂಘದ ಅಧ್ಯಕ್ಷ ಜಯ ಸಿ.ಸುವರ್ಣ, ಸಂಘದ ಪೋಷಕ ಸದಸ್ಯ ಎಂ.ಬಿ.ಕುಕ್ಯಾನ್, ಸಂಘದ ಮಾಜಿ ಜೊತೆ ಕೋಶಾಧಿಕಾರಿ ಸುರೇಶ್ ಆಚಾರ್ಯ, ನಾಡಿನ ಹಿರಿಯ ಪತ್ರಕರ್ತ ಬನ್ನಂಜೆ ಗೋವಿಂದಾಚಾರ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪತ್ರಕರ್ತರ ಸಂಘದ ಗೌರವ ಕೋಶಾಧಿಕಾರಿ ನಾಗೇಶ್ ಪೂಜಾರಿ ಏಳಿಂಜೆ ಸ್ವಾಗತಿಸಿದರು. ಪತ್ರಕರ್ತರ ಭವನ ಸಮಿತಿ ಕಾರ್ಯಾಧ್ಯಕ್ಷ ಡಾ.ಶಿವ ಮೂಡಿಗೆರೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎಸ್. ಸುವರ್ಣ ಅತಿಥಿಗಳನ್ನು ಪರಿಚಯಿಸಿದರು. ಅನಿತಾ ಪಿ.ಪೂಜಾರಿ ತಾಕೋಡೆ ಕಾರ್ಯಕ್ರಮ ನಿರೂಪಿಸಿ ಗೌರವ ಕಾರ್ಯದರ್ಶಿ ವೀಂದ್ರ ಶೆಟ್ಟಿ ತಾಳಿಪಾಡಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)