varthabharthi


ರಾಷ್ಟ್ರೀಯ

ಗುಜರಾತ್: ಕಸ್ಟಡಿ ಸಾವು, ನಾಲ್ವರು ಪೊಲೀಸರ ಅಮಾನತು

ವಾರ್ತಾ ಭಾರತಿ : 24 Jan, 2021

 ಭುಜ್ (ಗುಜರಾತ್), ಜ. 24: ಗುಜರಾತ್ ಕಚ್ಛ್ ಜಿಲ್ಲೆಯ ಮುಂಡ್ರಾ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿ ಕೆಲವು ದಿನಗಳ ಹಿಂದೆ ಶಂಕಿತ ಕಳ್ಳನ ಸಾವಿನ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಮೂವರು ಕಾನ್ಸ್‌ಟೇಬಲ್‌‌ಗಳನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

ಹತ್ಯೆ ಆರೋಪಕ್ಕೆ ಒಳಗಾಗಿರುವ ಮೂವರು ಕಾನ್ಸ್‌ಟೇಬಲ್‌ಗಳು ತಲೆಮರೆಸಿಕೊಂಡಿದ್ದಾರೆ, ಅವರನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

      ಮುಂಡ್ರಾ ತಾಲೂಕಿನ ಸಮಘೋಘಾ ಗ್ರಾಮದ ನಿವಾಸಿ ಅರ್ಜುನ್ ಗಾಧ್ವಿ (30) ಕಳ್ಳನೆಂಬ ಶಂಕೆಯಲ್ಲಿ ಮುಂಡ್ರಾ ಪೊಲೀಸ್ ಠಾಣೆಯ ಮೂವರು ಕಾನ್ಸ್‌ಟೇಬಲ್‌ಗಳು ಕರೆದೊಯ್ದಿದ್ದರು. ಅವರು ಆತನ ಬಂಧನವನ್ನು ತಿಳಿಸದೆ ಹಾಗೂ ಕಾನೂನಿನಂತೆ ದಂಡಾಧಿಕಾರಿ ಮುಂದೆ ಹಾಜರುಪಡಿಸದೆ 6 ದಿನಗಳ ಕಾಲ ಕಾನೂನು ಬಾಹಿರ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದರು. ಅಲ್ಲದೆ, ತಪ್ಪೊಪ್ಪಿಕೊಳ್ಳುವಂತೆ ಹಿಂಸೆ ನೀಡಿದ್ದರು. ಅನಂತರ ಬಿಡುಗಡೆ ಮಾಡಿದ್ದರು. ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸಂದರ್ಭ ಜನವರಿ 19ರಂದು ಗಾಧ್ವಿ ಮೃತಪಟ್ಟಿದ್ದಾನೆ ಎಂದು ಆತನ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

 ಕೊಲೆ ಆರೋಪದ ದೂರು ದಾಖಲಾದ ಬಳಿಕ ಇನ್ಸ್‌ಪೆಕ್ಟರ್ ಜೆ.ಎ. ಪಾಧಿಯಾರ್ ಹಾಗೂ ಇತರ ಮೂವರು ಕಾನ್ಸ್‌ಟೇಬಲ್‌ಗಳಾದ ಶಕ್ತಿ ಸಿನ್ಹ ಗೋಹಿಲ್, ಅಶೋಕ್ ಕನ್ನಡಾ ಹಾಗೂ ಜಯದೇವ್ ಸಿನ್ಹಾ ಝಲಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪಶ್ಚಿಮ ಕಚ್ಛ್‌ನ ಪೊಲೀಸ್ ಅಧೀಕ್ಷಕ ಸೌರಭ್ ಸಿಂಗ್ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)