varthabharthi


ರಾಷ್ಟ್ರೀಯ

ಸುಪ್ರೀಂಕೋರ್ಟ್ ಪೀಠಕ್ಕೆ ದಕ್ಷಿಣ ರಾಜ್ಯ ವಕೀಲರ ಸಂಘಗಳ ಹಕ್ಕೊತ್ತಾಯ

ವಾರ್ತಾ ಭಾರತಿ : 25 Jan, 2021

ಹೈದರಾಬಾದ್, ಜ.25: ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠ ಆರಂಭಿಸುವಂತೆ ಇದೇ ಮೊದಲ ಬಾರಿಗೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಕೀಲರ ಸಂಘಗಳು ಒಕ್ಕೊರಲಿನಿಂದ ಹಕ್ಕೊತ್ತಾಯ ಮಂಡಿಸಿವೆ.

ದೂರದಲ್ಲಿರುವ ಸುಪ್ರೀಂಕೋರ್ಟ್‌ಗೆ ತೆರಳಲು ಮತ್ತು ದುಬಾರಿ ವೆಚ್ಚವನ್ನು ಭರಿಸಲು ಅಸಮರ್ಥರಾಗಿ ದೇಶದ ಅತ್ಯುನ್ನತ ನ್ಯಾಯ ವ್ಯವಸ್ಥೆಯ ಕದತಟ್ಟುವ ಯೋಚನೆಯನ್ನೇ ಕೈಬಿಡುತ್ತಿರುವ ಈ ಭಾಗದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಆಗ್ರಹ ಮುಂದಿಟ್ಟಿರುವುದಾಗಿ ವಕೀಲರ ಸಂಘಗಳು ಹೇಳಿವೆ.
ತೆಲಂಗಾಣ ರಾಜ್ಯ ವಕೀಲರ ಮಂಡಳಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಈ ಐದು ರಾಜ್ಯಗಳ ವಕೀಲರ ಮಂಡಳಿ ಮುಖ್ಯಸ್ಥರು ಈ ಬಗ್ಗೆ ಚರ್ಚೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬಂದಿದ್ದಾರೆ. ತೆಲಂಗಾಣ ವಕೀಲರ ಪರಿಷತ್‌ನ ಅಧ್ಯಕ್ಷ ನರಸಿಂಹ ರೆಡ್ಡಿ ಅವರನ್ನು ಈ ಉದ್ದೇಶಕ್ಕಾಗಿ ನೇಮಕ ಮಾಡಿರುವ ಸಮಿತಿಯ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ. ದಕ್ಷಿಣ ಭಾರತದಲ್ಲಿ ಸುಪ್ರೀಂಕೋರ್ಟ್ ಪೀಠದ ಸ್ಥಾಪನೆಯ ಒತ್ತಾಯ ಈ ಹಿಂದೆಯೂ ಕೇಳಿ ಬಂದಿದ್ದರೂ, ಇದೇ ಮೊದಲ ಬಾರಿಗೆ ಈ ಭಾಗದ ಕಾನೂನು ತಜ್ಞರು ಒಕ್ಕೊರಲಿನಿಂದ ಈ ಒತ್ತಾಯ ಮಾಡಿದ್ದಾರೆ.

ಸುಪ್ರೀಂಕೋರ್ಟ್ ದೇಶದ ನಾಲ್ಕು ಭಾಗಗಳಲ್ಲಿ ಏಕೆ ಮೇಲ್ಮನವಿ ಪೀಠಗಳನ್ನು ರಚಿಸಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ರೆಡ್ಡಿ ಹೇಳಿದ್ದಾರೆ. "ದಿಲ್ಲಿಯಲ್ಲಿ ಸುಪ್ರೀಂಕೋರ್ಟ್ ಬಹುತೇಕ ಸಂವಿಧಾನಾತ್ಮಕ ವಿಷಯಗಳ ಬಗ್ಗೆ ಗಮನಹರಿಸಬಹುದು. ಅಂತೆಯೇ ಮೇಲ್ಮನವಿ ಪೀಠಗಳು ಹೈಕೋರ್ಟ್ ತೀರ್ಪಿನ ವಿರುದ್ಧದ ಮೇಲ್ಮನವಿಗಳನ್ನು ಪರಿಗಣಿಸಬಹುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವ ರವಿಶಂಕರ್ ಪ್ರಸಾದ್, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಆಗ್ರಹಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)