varthabharthi


ಕರ್ನಾಟಕ

ರೈತರ ಚಳವಳಿ ಹತ್ತಿಕ್ಕುವ ಕೇಂದ್ರ ಸರಕಾರದ ಷಡ್ಯಂತ್ರ ಫಲಿಸದು: ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ

ವಾರ್ತಾ ಭಾರತಿ : 26 Jan, 2021

ಬೆಂಗಳೂರು, ಜ.26: ಕರಾಳ ಕೃಷಿ ಕಾನೂನುಗಳನ್ನು ವಿರೋಧಿಸಿ ದೇಶದಾದ್ಯಂತ ರೈತರು ನಡೆಸುತ್ತಿರುವ ಚಳುವಳಿಯನ್ನು ಹತ್ತಿಕ್ಕುವ ಕೇಂದ್ರ ಸರಕಾರದ ಷಡ್ಯಂತ್ರ ಫಲಿಸದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.

ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ಟ್ರ್ಯಾಕ್ಟರ್ ಪರೇಡ್ ನಂತರ ಬಹಿರಂಗ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಹಲವು ದಿನಗಳಿಂದ ನಿರಂತರ ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ದೇಶದ ಹಲವೆಡೆ ಕೇಂದ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಆದರೆ, ಎರಡು ತಿಂಗಳಾದರೂ ತಮ್ಮ ಬೇಡಿಕೆಗಳು ಈಡೇರದ ಪರಿಣಾಮ ಹೋರಾಟಗಾರರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಟ್ರಾಕ್ಟರ್ ರ್‍ಯಾಲಿ ನಡೆಸಿದ್ದು, ಇದರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.

ಹಲವು ಸುತ್ತಿನ ಮಾತುಕತೆ ನಡೆದರೂ, ರೈತರ ಬೇಡಿಕೆಗಳಿಗೆ ಈ ಕೇಂದ್ರ ಸರಕಾರ ಸ್ಪಂದಿಸಿಲ್ಲ. ಹೀಗಾಗಿಯೇ, ರೈತರ ಆಕ್ರೋಶ ಹೆಚ್ಚಾಗಿದೆ. ಏನೇ ಅನಾಹುತ ಆದರೂ, ಪ್ರಧಾನಿ ನರೇಂದ್ರ ಮೋದಿ, ಆಡಳಿತ ನಡೆಸುವ ಸರಕಾರಗಳೇ ಜವಾಬ್ದಾರಿಗಳಾಗಿವೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಮಂಗಳವಾರ ಹೊಸದಿಲ್ಲಿಯ ಹೋರಾಟದ ನಡುವೆ ಪೊಲೀಸರು ಲಾಠಿಚಾರ್ಚ್ ನಡೆಸಿ ಅಶ್ರುವಾಯು ಸಿಡಿಸಿದ್ದಾರೆ. ಪರಿಣಾಮ ಓರ್ವ ಮೃತಪಟ್ಟಿದ್ದರೆ, 20 ಜನ ಗಾಯಗೊಂಡಿದ್ದಾರೆ. ದೆಹಲಿಯಲ್ಲಿ ನಡೆದಿರುವ ಅಹಿತಕರ ಘಟನೆಗೆ ಕೇಂದ್ರ ಸರಕಾರವೇ ಹೊಣೆ ಅಲ್ಲವೇ ಎಂದು ದೊರೆಸ್ವಾಮಿ ಪ್ರಶ್ನಿಸಿದರು.

ಸಮಾವೇಶದಲ್ಲಿ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಚಾಮರಸ ಮಾಲಿ ಪಾಟೀಲ್, ಬಿ.ನಾಗೇಂದ್ರ, ಜೆ.ಎಂ.ವೀರಸಂಗಯ್ಯ, ಸಚಿನ್ ಮೀಗಾ, ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ದಲಿತ ಮುಖಂಡ ಮಾವಳ್ಳಿ ಶಂಕರ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ, ಕಾರ್ಮಿಕ ಒಕ್ಕೂಟದ ಕೆವಿ ಭಟ್, ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

‘ದೇಶದ್ರೋಹ ಪಟ್ಟ ಮೊದಲಿನಿಂದ ಇದೆ’

ಆಳುವವರ ಕಾಯ್ದೆಗಳ ವಿರುದ್ಧ ಧ್ವನಿ ಎತ್ತಿದರೆ ದೇಶದ್ರೋಹದ ಪಟ್ಟ ಕಟ್ಟುವುದು ಬಹುಕಾಲದಿಂದ ನಡೆದುಬಂದಿದೆ. ರೈತ ಸಾಮಾನ್ಯವಾಗಿ ಮಾತನಾಡುವುದಿಲ್ಲ, ಹಲವು ದಿನಗಳಿಂದ ಮಡುಗಟ್ಟಿದ್ದ ಮೌನ ಈಗ ಮಾತಾಗಿ ಹೊರಬರುತ್ತಿದೆ. ಹೀಗಾಗಿ ಸರಕಾರಕ್ಕೆ ಬೇರೆ ಮಾರ್ಗ ಇಲ್ಲ, ರೈತರಿಗೆ ಉತ್ತರಿಸಲೇಬೇಕು.

-ಬಿ.ಸುರೇಶ್, ನಿರ್ದೇಶಕ, ಚಿಂತಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)