varthabharthi


ನಿಮ್ಮ ಅಂಕಣ

ವರದಿಗಾರಿಕೆಯ ವಿಭಿನ್ನ ಆಯಾಮ ಪರಿಚಯಿಸಿದ್ದ ನೆಲ್ಲಿ ಬ್ಲೈ

ವಾರ್ತಾ ಭಾರತಿ : 28 Jan, 2021
ಆರ್. ಬಿ. ಗುರುಬಸವರಾಜ

ಜಗತ್ಪ್ರಸಿದ್ಧ ವರದಿಗಾರ್ತಿ ನೆಲ್ಲಿ ಬ್ಲೈ ಭೂಮಿಯಿಂದ ಮರೆಯಾಗಿ ನಿನ್ನೆಗೆ 99 ವರ್ಷಗಳು ಕಳೆದವು. ತನ್ನ ವಿಶೇಷ ವರದಿಗಾರಿಕೆಯಿಂದ ಜಗತ್ತಿನ ಪತ್ರಿಕೆಗಳು ಹಾಗೂ ಓದುಗರ ಮನಗೆದ್ದಿದ್ದ ನೆಲ್ಲಿ ಬ್ಲೈ ಅವರ ಪತ್ರಕರ್ತೆಯ ಬದುಕು ಇಂದಿನ ಪತ್ರಕರ್ತರಿಗೆ ಮಾದರಿಯಾಗಿದೆ.

ಇಂದು ಮಾಧ್ಯಮ ಕ್ಷೇತ್ರದ ಎಲ್ಲಾ ಹಂತಗಳಲ್ಲೂ ಮಹಿಳೆಯರು ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅದರಲ್ಲೂ ದೃಶ್ಯ ಮಾಧ್ಯಮಗಳಲ್ಲಂತೂ ಪಾರಮ್ಯ ಸ್ಥಾನ ಹೊಂದಿದ್ದಾರೆ ಎಂದರೆ ತಪ್ಪಲ್ಲ. ಆದರೆ 150 ವರ್ಷಗಳ ಹಿಂದಿನ ಪರಿಸ್ಥಿತಿ ಈಗಿನಂತಿರಲಿಲ್ಲ ಎಂಬುದು ಸರ್ವಕಾಲಿಕ ಸತ್ಯ. ಹೆಣ್ಣು ಮನೆಯಿಂದ ಹೊರಗೆ ಕಾಲಿಡುವುದೇ ಅಪರಾಧ ಎಂಬಂತೆ ಇದ್ದ ಸನ್ನಿವೇಶದಲ್ಲಿ ತನ್ನ ಲೇಖನಿಯ ಶಕ್ತಿಯಿಂದ ವಿಭಿನ್ನ ವರದಿಗಾರಿಕೆಗೆ ಪ್ರಸಿದ್ಧಿಯಾದವರು ನೆಲ್ಲಿ ಬ್ಲೈ.

ನೆಲ್ಲಿ ಬ್ಲೈ ಅಮೆರಿಕದ ಪೆನ್ಸಿಲ್ವೇನಿಯದಲ್ಲಿ 1864ರಲ್ಲಿ ಜನಿಸಿದರು. ನೆಲ್ಲಿ ಬ್ಲೈಯ ಮೂಲ ಹೆಸರು ಎಲಿಜಬೆತ್ ಜೇನ್ ಕೋಕ್ರೇನ್. ಸ್ಟೀಫನ್ ಫಾಸ್ಟರ್‌ನ ಜನಪ್ರಿಯ ಕವಿತೆಯ ಮುಖ್ಯಪಾತ್ರದ ಹೆಸರಾದ ನೆಲ್ಲಿ ಬ್ಲೈಯನ್ನು ತನ್ನ ಬರಹನಾಮವಾಗಿ ಬಳಸಿಕೊಂಡರು. ಎಲಿಜಬೆತ್ ಕೋಕ್ರೇನ್ ಬದಲಾಗಿ ನೆಲ್ಲಿ ಬ್ಲೈ ಎಂದೇ ಜಗತ್ಪ್ರಸಿದ್ಧಿಯಾದರು. ಕಠಿಣ ಪರಿಶ್ರಮ ಮತ್ತು ದೃಢನಿರ್ಧಾರಗಳನ್ನು ತನ್ನ ತಂದೆಯಿಂದ ಕಲಿತಿದ್ದರು. ಹಾಗಾಗಿ ತನ್ನ ಮನಸ್ಸಿಗೆ ತೋಚಿದ್ದನ್ನೇ ಗೀಚುವ ಪ್ರವೃತ್ತಿ ಬೆಳೆಸಿಕೊಂಡರು. ‘‘ಎದೆಯಾಳದಿಂದ ಬರದ ಒಂದಕ್ಷರವನ್ನೂ ನಾನು ಬರೆದಿಲ್ಲ, ಬರೆಯುವುದೂ ಇಲ್ಲ’’ ಎಂಬ ದೃಢನಿರ್ಧಾರದೊಂದಿಗೆ ಬರವಣಿಗೆಯನ್ನು ಮುಂದುವರಿಸಿದರು.

ಪಿಟ್ಸ್‌ಬರ್ಗ್‌ನ ‘ಡಿಸ್ಪ್ಯಾಚ್’ ಪತ್ರಿಕೆಯಲ್ಲಿ ಪ್ರಕಟವಾದ ‘ಮಹಿಳೆ ಯಾವುದಕ್ಕೆ ಲಾಯಕ್ಕು’ ಎಂಬ ಬರಹದ ವಿರುದ್ಧ ತನ್ನ ಧ್ವನಿ ಎತ್ತಲು ನಿರ್ಧರಿಸಿ ಬರವಣಿಗೆಗೆ ಇಳಿದರು. ಆಗ ಆಕೆಗಿನ್ನೂ 16ರ ಹರೆಯ. ‘ಲೋನ್ಲಿ ಆರ್ಫನ್ ಗರ್ಲ್’ ಹೆಸರಿನಲ್ಲಿ ಲೇಖನದ ವಿರುದ್ಧ ಪ್ರತಿಕ್ರಿಯೆಯೊಂದನ್ನು ಬರೆದು ಸಂಪಾದಕರಿಗೆ ಕಳುಹಿಸಿದರು. ಪ್ರತಿಕ್ರಿಯೆಯನ್ನು ಓದಿದ ಸಂಪಾದಕರು ಒಂದು ಕ್ಷಣ ದಂಗಾದರು ಮತ್ತು ಅದನ್ನು ಪ್ರಕಟಿಸಿದರು. ಲೋನ್ಲಿ ಆರ್ಫನ್ ಗರ್ಲ್ ತಮ್ಮನ್ನು ಸಂಪರ್ಕಿಸುವಂತೆ ಪತ್ರಿಕೆಯಲ್ಲಿ ಪ್ರಕಟನೆ ನೀಡಿದರು. ಬರಹಗಾರರು ಸಂಪಾದಕರನ್ನು ಹುಡುಕಿಕೊಂಡು ಹೋಗುವುದು ಸಾಮಾನ್ಯ. ಆದರೆ ಹೊಸ ಹಾಗೂ ಮೊದಲ ಬರಹಗಾರ್ತಿಯನ್ನು ಪ್ರಮುಖ ಪತ್ರಿಕೆಯ ಸಂಪಾದಕರೊಬ್ಬರು ಹುಡುಕಲು ಪ್ರಾರಂಭಿಸಿದ್ದು ಇದೇ ಮೊದಲಿರಬೇಕು. ಸಂಪಾದಕರ ಸಂಪರ್ಕಕ್ಕೆ ಬಂದ ನೆಲ್ಲಿ ಬ್ಲೈ, ಅವರ ಉತ್ತೇಜನದಿಂದ ಅಂಕಣಕಾರ್ತಿಯಾದರು. ತನ್ನ ಬರಹಗಳಲ್ಲಿ ಮಹಿಳೆಯರ ಪರವಾದ ಧ್ವನಿ ಎತ್ತಲು ಪ್ರಾರಂಭಿಸಿದರು. ಮಹಿಳಾ ಕಾರ್ಮಿಕರು, ಕೊಳಗೇರಿ ಮಹಿಳೆಯರು ಅನುಭವಿಸುವ ಸಂಕಷ್ಟಗಳು ಮುಂತಾದ ಜ್ವಲಂತ ಸಮಸ್ಯೆಗಳು ಹಾಗೂ ವೈಚಾರಿಕತೆಯ ಬಗ್ಗೆ ಬರೆಯತೊಡಗಿದರು. ಅವರ ಬರಹಗಳು ಪ್ರಬುದ್ಧತೆಯ ಅನುಭವಿ ವರದಿಗಾರರನ್ನು ಮೀರಿಸಿದ ಬರಹಗಳಾಗಿದ್ದವು.

ಕೆಲ ಸಮಯದ ನಂತರ ಅಮೆರಿಕದಿಂದ ಹೊರಹೋಗಿ ಬರೆಯಲು ನಿರ್ಧರಿಸಿದರು. ಆಗ ಅವರ ವಯಸ್ಸು ಕೇವಲ 21 ವರ್ಷ ಮಾತ್ರ. ಸಕಲ ಸೌಲಭ್ಯವುಳ್ಳ ಇಂದಿನ ಕಾಲದಲ್ಲೂ ಆ ವಯಸ್ಸಿನ ಹೆಣ್ಣು ಮಕ್ಕಳು ದೇಶ ಬಿಟ್ಟು ಹೊರಹೋಗುವುದು ತೊಂದರೆದಾಯಕವಾಗಿರುವಾಗ, ನೆಲ್ಲಿ ಬ್ಲೈ ಸೌಲಭ್ಯಗಳಿಲ್ಲದ ಅಂದಿನ ಕಾಲದಲ್ಲಿಯೇ ದೇಶ ಬಿಟ್ಟು ಹೊರಹೋಗಿ ವರದಿ ಮಾಡಲು ಕೈಗೊಂಡ ನಿರ್ಧಾರ ಅವರ ಬದ್ಧತೆ ಮತ್ತು ಅಚಲತೆಗಳನ್ನು ಎತ್ತಿ ತೋರುತ್ತದೆ. 1886-87ರಲ್ಲಿ ಮೆಕ್ಸಿಕೊದಲ್ಲಿ ಹಲವಾರು ತಿರುಗಾಟದ ಫಲವಾಗಿ, ಅನೇಕ ಬರಹಗಳನ್ನು ಪತ್ರಿಕೆಗೆ ಕಳುಹಿಸಿದರು. ಅದರಲ್ಲಿ ಮುಖ್ಯವಾಗಿ ಅಧಿಕಾರಿಗಳ ಭ್ರಷ್ಟಾಚಾರ, ಬಡವರ ಶೋಚನೀಯ ಸ್ಥಿತಿಗತಿ, ಪತ್ರಕರ್ತರ ಬವಣೆಗಳು, ಜನಜೀವನ, ವರ್ತಮಾನದ ರಾಜಕೀಯ, ಆಳುವ ವರ್ಗದ ಸರ್ವಾಧಿಕಾರ ಧೋರಣೆಗಳ ಕುರಿತು ಬರೆದರು. ಇದರಿಂದ ಬೆಚ್ಚಿಬಿದ್ದ ಅಧಿಕಾರಿಗಳು ಮತ್ತು ಆಳುವ ವರ್ಗದವರು ಅವರನ್ನು ದೇಶದಿಂದ ಗಡಿಪಾರು ಮಾಡಲು ಕುತಂತ್ರ ಮಾಡಿದರು. ಆದರೂ ಅವುಗಳಿಗೆ ಜಗ್ಗದೆ ಬಗ್ಗದೆ ತನ್ನ ಬರವಣಿಗೆಯನ್ನು ಮುಂದುವರಿಸಲು ದೃಢನಿರ್ಧಾರ ಕೈಗೊಂಡರು. ಮೆಕ್ಸಿಕೊದಿಂದ ಬಂದ ನಂತರ ‘ಸಿಕ್ಸ್ ಮಂತ್ಸ್ ಇನ್ ಮೆಕ್ಸಿಕೊ’ ಎನ್ನುವ ಪುಸ್ತಕ ಬರೆದರು.

ನಂತರ 1887ರಲ್ಲಿ ಕೆಲಸ ಹುಡುಕಿ ನ್ಯೂಯಾರ್ಕ್‌ಗೆ ತೆರಳಿದರು. ಅಲ್ಲಿ ಜೊಸೆಫ್ ಪುಲಿಟ್ಜರ್ ಅವರ ‘ನ್ಯೂಯಾರ್ಕ್ ವರ್ಲ್ಡ್’ನಲ್ಲಿ ಕೆಲಸಕ್ಕೆ ಸೇರಿದರು. ಅಲ್ಲಿ ವಿಶೇಷವಾದ ಮೊದಲ ಲೇಖನ ನೀಡಬಯಸಿದರು. ನ್ಯೂಯಾರ್ಕ್ ನಗರದ ಹೊರವಲಯದಲ್ಲಿರುವ ಬ್ಲ್ಯಾಕ್‌ವೆಲ್ ದ್ವೀಪದಲ್ಲಿ ಹುಚ್ಚರ ನಿರಾಶ್ರಿತ ತಾಣಕ್ಕೆ ಹುಚ್ಚಿಯ ರೂಪ ಧರಿಸಿ ದಾಖಲಾದರು. ಅಲ್ಲಿ ಹುಚ್ಚರು ಅನುಭವಿಸುವ ಯಾತನೆಗಳನ್ನು ತೀರಾ ಸನಿಹದಿಂದ ಕಂಡರು. ಹುಚ್ಚರ ಸಹವಾಸ ಅವರಿಗೆ ಹೊಸತು. ಅವರ ಜೊತೆಗಿದ್ದು ಅವರ ಕಷ್ಟಗಳ ಕುರಿತು ಬರೆಯುವ ಸಲುವಾಗಿ ತಾನು ಹುಚ್ಚಿಯಂತಾಗಿ ಅಲ್ಲಿಗೆ ಹೋದರು. ರಾತ್ರಿಯಾಗುತ್ತಿದ್ದಂತೆ ಕದ್ದು ಮುಚ್ಚಿ ಒಬ್ಬೊಬ್ಬ ರೋಗಿಯನ್ನು ಭೇಟಿಯಾಗಿ ಅವರ ಅಂತರಾಳವನ್ನು ತಿಳಿಯುವ ಪ್ರಯತ್ನದಲ್ಲಿ ಯಶಸ್ವಿಯಾದರು. ಅಲ್ಲಿರುವವರು ಹುಚ್ಚರಲ್ಲ ಎಂಬುದನ್ನು ಅರಿತರು. ಆಸ್ತಿ ಅಥವಾ ಇನ್ನಾವುದೇ ವಿಚಾರಕ್ಕೆ ಬಲವಂತವಾಗಿ ಹುಚ್ಚರೆಂದು ಗುಲ್ಲೆಬ್ಬಿಸಿ ಅವರನ್ನು ಈ ಕೂಪಕ್ಕೆ ದೂಡಲಾದ ಸತ್ಯತೆಯನ್ನು ಕಂಡುಕೊಂಡರು. ಒಂದು ತಿಂಗಳ ಕಾಲ ಅಲ್ಲಿರಲು ಬಯಸಿ ಬಂದ ನೆಲ್ಲಿಗೆ ಹತ್ತು ದಿನಗಳಲ್ಲೆ ಹಿಂದಿರುಗುವಂತಾಯಿತು. ಇನ್ನು ಹೆಚ್ಚು ದಿನ ಅಲ್ಲಿದ್ದರೆ ತಾನೂ ಜೀವನಪೂರ್ತಿ ಹುಚ್ಚಿಯಾಗಬಹುದೆನಿಸಿ ಸಂಪಾದಕರ ಸಹಾಯದಿಂದ ಹೊರಬಂದರು.

ನಿಜವಾದ ವರದಿಗಾರಿಕೆಗೆ ಇರಬೇಕಾದ ಎದೆಗಾರಿಕೆ ಎಂತಹದ್ದು ಎಂಬುದನ್ನು ನೆಲ್ಲಿ ಬ್ಲೈ ತೋರಿಸಿಕೊಟ್ಟರು. ಅಲ್ಲಿ ತಾನು ಅನುಭವಿಸಿದ ಯಾತನೆಯ ದಿನಗಳ ಬಗ್ಗೆ ‘ಟೆನ್ ಡೇಸ್ ಇನ್ ಮ್ಯಾಡ್ ಹೌಸ್’ ಎಂಬ ಬರಹ ಬರೆದರು. ಇದು ನ್ಯೂಯಾರ್ಕ್ ನಗರದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿನ ಹುಚ್ಚಾಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ಸಂಶಯ ಹುಟ್ಟುವಂತೆ ಮಾಡಿತು. ನೆಲ್ಲಿ ಬ್ಲೈ ಸದಾ ಹೊಸತನಕ್ಕೆ ಹಾತೊರೆಯುತ್ತಿದ್ದರು. 1888ರಲ್ಲಿ ಮತ್ತೊಂದು ವಿನೂತನ ಯೋಜನೆ ರೂಪಿಸಿದರು. ‘ಅರೌಂಡ್ ದ ವರ್ಲ್ಡ್ ಇನ್ 80 ಡೇಸ್’ ಎಂಬ ಸಾಹಸ ಭರಿತ ಕಾದಂಬರಿ ಅವರಲ್ಲಿ ಹೊಸ ಐಡಿಯಾ ಹುಟ್ಟಿಸಿತ್ತು. ಅದಕ್ಕಾಗಿ 72 ದಿನಗಳಲ್ಲಿ 24,899 ಮೈಲಿಗಳ ದೂರ ಪ್ರಯಾಣಿಸಲು ಯೋಜನೆ ರೂಪಿಸಿದರು. 1889ರ ನವೆಂಬರ್ 14ರಂದು ನ್ಯೂಯಾರ್ಕ್‌ನಿಂದ ಪ್ರಯಾಣ ಶುರುಮಾಡಿ, ಜನವರಿ 21ಕ್ಕೆ ತನ್ನ ನಿಗದಿತ ವೇಳಾಪಟ್ಟಿಗಿಂತ ಎರಡುದಿನ ಮೊದಲು ಅಮೆರಿಕಕ್ಕೆ ತಲುಪಿದರು. ಈ ಅುಭವವನ್ನು ‘ಅರೌಂಡ್ ದ ವರ್ಲ್ಡ್ ಇನ್ 72 ಡೇಸ್’ ಹೆಸರಿನಲ್ಲಿ ಬರೆದು ಪ್ರಕಟಿಸಿದರು. 72 ದಿನಗಳ ವಿಶ್ವಪರ್ಯಟನೆ ವಿಶ್ವದಾಖಲೆಯಾಯಿತು. ನಂತರ ಬೇರೆಯವರು ಅದನ್ನು ಮುರಿದರಾದರೂ ಚಿಕ್ಕ ವಯಸ್ಸಿನ ಹುಡುಗಿಯೊಬ್ಬಳು ಭೂಗೋಳ ಸುತ್ತಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಅಮೆರಿಕದ ಮುಂಚೂಣಿ ಪತ್ರಕರ್ತೆಯಾಗಿದ್ದ ನೆಲ್ಲಿ ಬ್ಲೈ ಕೈಗಾರಿಕೋದ್ಯಮಿ ರಾಬರ್ಟ್ ಸೀಮನ್‌ರನ್ನು 1895ರಲ್ಲಿ ಮದುವೆಯಾದರು. ಮದುವೆಯ ನಂತರ ಪತ್ರಿಕಾರಂಗಕ್ಕೆ ವಿದಾಯ ಹೇಳಿದರೂ ಕೆಲವೇ ವರ್ಷಗಳಲ್ಲಿ ಪುನಃ ಪತ್ರಿಕೋದ್ಯಮಕ್ಕೆ ಬಂದರು. ಇದೇ ವೇಳೆಗೆ ಜಗತ್ತಿನ ಮೊದಲ ಮಹಾಯುದ್ಧ ಪ್ರಾರಂಭವಾಗಿತ್ತು. ಆಸ್ಟ್ರೇಲಿಯಾಕ್ಕೆ ತೆರಳಿ ಯುದ್ಧದ ವರದಿ ಮಾಡಿದರು. 1913ರಲ್ಲಿ ಮಹಿಳಾ ಸಮಾನ ವೇತನ ಹೋರಾಟದ ಬಗ್ಗೆ ವಿವರವಾಗಿ ಬರೆದರು. ಅನೇಕ ಪತ್ರಿಕೆಗಳ ಅಂಕಣಗಳಿಗೆ ಸಲಹೆಗಾರ್ತಿಯಾಗಿ ಕೆಲಸ ಮಾಡಿದರು. ಬದುಕಿನ ಕೊನೆಯ ದಿನಗಳಲ್ಲಿ ಸಾಕಷ್ಟು ನೋವು ಅನುಭವಿಸಿದರು. ಅಂತಿಮವಾಗಿ 1922ರ ಜನವರಿ 27ರಂದು ನ್ಯೂಮೋನಿಯಾಗೆ ಬಲಿಯಾದರು.

ವೈಯಕ್ತಿಕ ಬದುಕಿನಲ್ಲಿ ಅನೇಕ ಏರಿಳಿತಗಳನ್ನು ಕಂಡ ನೆಲ್ಲಿ ಬ್ಲೈ ಪತ್ರಕರ್ತೆಯಾಗಿ ಉತ್ತುಂಗ ಸ್ಥಾನದಲ್ಲಿದ್ದರು. ಅವರ ಹುಚ್ಚು ಸಾಹಸದ ಬರವಣಿಗೆಯನ್ನು ಕೆಲವರು ಹೀಗಳೆದರೂ ಪತ್ರಿಕೋದ್ಯಮಕ್ಕೊಂದು ವಿಭಿನ್ನ ಆಯಾಮ ನೀಡಿದ ನೆಲ್ಲಿ ಬ್ಲೈಯ ಬರವಣಿಗೆ ಮಾಧ್ಯಮ ರಂಗದ ಭಾವಿ ಪತ್ರಕರ್ತರಿಗೆ ಕೈಗನ್ನಡಿಯಾಗಿದೆ ಎಂಬುದು ನಿಸ್ಸಂಶಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)