varthabharthi


ಅನುಗಾಲ

‘ದೇಶ್‌ಕೆ ಗದ್ದಾರೋಂಕೋ, ಗೋಲಿ ಮಾರೋ ಸಾಲೋಂಕೋ’

ವಾರ್ತಾ ಭಾರತಿ : 28 Jan, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

‘‘ದೇಶ್‌ಕೆ ಗದ್ದಾರೋಂಕೋ, ಗೋಲಿ ಮಾರೋ ಸಾಲೋಂಕೋ’’ ಎಂಬ ಘೋಷಣೆಯು ಅಸಭ್ಯವಷ್ಟೇ ಅಲ್ಲ, ಭಯಾನಕವೂ ಆಗಿರುವ ಘೋಷಣೆ. ಜೆಎನ್‌ಯುವಿನಂತಹ ಪ್ರತಿಷ್ಠಿತ ಸಂಸ್ಥೆಯ ವಿರುದ್ಧ ಹಲ್ಲೆ ಮಾಡುವ ಸಂದರ್ಭದಲ್ಲಿ ಶಿಕ್ಷಣವೆಂದರೆ ಏನೆಂದು ಅರಿಯದ, ಸಂಸ್ಕೃತಿಯ ಅಭಾವದ, ಕೆಲವು ಪುಂಡರು ಬಳಸಿದ ಈ ಪದಗಳು ಆನಂತರದ ಸಂದರ್ಭಗಳಲ್ಲಿ ಸರಕಾರದ ಬಳಿಯಿರುವ ಮಾರಕಾಸ್ತ್ರವೆಂಬಂತೆ ಅಧಿಕೃತಗೊಂಡಿರುವುದು ಈ ದೇಶದ ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.


ಪ್ರಾಯಃ ಇತ್ತೀಚೆಗಿನ ವರ್ಷಗಳಲ್ಲಿ ಈ ದೇಶದಲ್ಲಿ ಜೈಹಿಂದ್, ವಂದೇಮಾತರಂ, ಭಾರತ್ ಮಾತಾಕೀ ಜೈ, ಜೈಜವಾನ್, ಜೈಕಿಸಾನ್ ಮುಂತಾದ ಘೋಷಣೆಗಳಿಗಿಂತಲೂ ಹೆಚ್ಚಾಗಿ ಪ್ರತಿಧ್ವನಿಸಿದ್ದು ‘‘ದೇಶ್‌ಕೆ ಗದ್ದಾರೋಂಕೋ, ಗೋಲಿ ಮಾರೋ ಸಾಲೋಂಕೋ’’ ಎಂಬ ಘೋಷಣೆ. ಇದು ಅಸಭ್ಯವಷ್ಟೇ ಅಲ್ಲ, ಭಯಾನಕವೂ ಆಗಿರುವ ಘೋಷಣೆ. ಜೆಎನ್‌ಯುವಿನಂತಹ ಪ್ರತಿಷ್ಠಿತ ಸಂಸ್ಥೆಯ ವಿರುದ್ಧ ಹಲ್ಲೆ ಮಾಡುವ ಸಂದರ್ಭದಲ್ಲಿ ಶಿಕ್ಷಣವೆಂದರೆ ಏನೆಂದು ಅರಿಯದ, ಸಂಸ್ಕೃತಿಯ ಅಭಾವದ, ಕೆಲವು ಪುಂಡರು ಬಳಸಿದ ಈ ಪದಗಳು ಆನಂತರದ ಸಂದರ್ಭಗಳಲ್ಲಿ ಸರಕಾರದ ಬಳಿಯಿರುವ ಮಾರಕಾಸ್ತ್ರವೆಂಬಂತೆ ಅಧಿಕೃತಗೊಂಡಿರುವುದು ಈ ದೇಶದ ಪ್ರಸ್ತುತ ಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ಆಳುವ ಕೇಂದ್ರ ಸರಕಾರ ತನ್ನ ವಿರುದ್ಧದ ಮಾತ್ರವಲ್ಲ, ತನ್ನ ಪ್ರಿಯಪಟ್ಟ ಎಲ್ಲ ರಾಜಕಾರಣಿಗಳ ವಿರುದ್ಧದ ಟೀಕೆಗಳೆಲ್ಲವನ್ನೂ ದೇಶದ ವಿರುದ್ಧದ ಟೀಕೆಗಳೆಂಬಂತೆ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಮಾತ್ರವಲ್ಲ ಭಾಗಶಃ ಯಶಸ್ವಿಯಾಗಿದೆ. ಇದು ಈಗ ನಡೆಯುತ್ತಿರುವ ರೈತ ಚಳವಳಿಯ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಗೋಚರಿಸುತ್ತಿದೆ. ಚಳವಳಿ, ಪ್ರತಿಭಟನೆ ಮುಂತಾದ ಪ್ರಜಾತಂತ್ರಸ್ವರೂಪಿ ಸಾಮುದಾಯಿಕ ನಡೆಗಳನ್ನು ದೇಶದ್ರೋಹವೆಂದು, ಹಾಗೆ ಪ್ರತಿಭಟನೆ ಮಾಡುವವರನ್ನು ರೈತರೇ ಅಲ್ಲವೆಂದೂ ಎಲ್ಲ ಬಗೆಯ ಮಾಧ್ಯಮಗಳಲ್ಲಿ ಪ್ರಚಾರ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಕೇಂದ್ರ ಸರಕಾರ ಇನ್ನಿಲ್ಲದ ಪ್ರಯತ್ನವನ್ನು ನಡೆಸುತ್ತಿದೆ. ಗಣತಂತ್ರದ ಸಂದರ್ಭದಲ್ಲಿ ದಿಲ್ಲಿಯತ್ತ ರ್ಯಾಲಿ ನಡೆಸಿದ ರೈತರ ಕುರಿತು ಸರಕಾರವು ಯಾವ ಸಹಾನುಭೂತಿಯನ್ನೂ ತೋರದೆ ಜೈ ಕಿಸಾನ್ ಎಂಬ ಪದಕ್ಕೆ ಕೊನೆಯ ಮೊಳೆಯನ್ನು ಹೊಡೆದಿದೆ. ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಜನತೆಯ ಉಸಿರುಗಟ್ಟಿಸುವುದಕ್ಕಾಗಿ ಅಲ್ಲಿ ಅಂತರ್ಜಾಲ ವ್ಯವಸ್ಥೆಯನ್ನೇ ನಿಲ್ಲಿಸಿದ ಕುಖ್ಯಾತಿಗೆ ಸಿಕ್ಕ ಈ ರಾಷ್ಟ್ರೀಯ ಸರಕಾರ ಇದೀಗ ದಿಲ್ಲಿಯಲ್ಲಿಯೂ ಅದೇ ಪ್ರಯೋಗಕ್ಕಿಳಿದಿದೆ.

ಪ್ರಾಯಃ ದೇಶವನ್ನು ಹಿಂದೆಳೆಯುವ ತನ್ನ ಯತ್ನದಲ್ಲಿ ಅದು ಇಡೀ ದೇಶದಲ್ಲೇ ಅಂತರ್ಜಾಲ ವ್ಯವಸ್ಥೆಯನ್ನು ನಿಷೇಧಿಸುವ ಕಾಲ ಬಂದರೂ ಅಚ್ಚರಿಯಿಲ್ಲ. ಇಷ್ಟೆಲ್ಲ ನಡೆದರೂ ನಮ್ಮ ಜನರು (ವಿದ್ಯಾವಂತರು, ಬುದ್ಧಿವಂತರು ಎಂದೆಲ್ಲ ಹೇಳಿಸಿಕೊಳ್ಳುವವರೂ ಸೇರಿ) ತಮ್ಮ ಪ್ರಜ್ಞೆಯನ್ನು ಕಳೆದುಕೊಂಡವರಂತೆ ಸರಕಾರದೊಂದಿಗೆ ಕೋರಸ್ ಗಾಯನದ ಕ್ಷಣಿಕ ಸುಖದಲ್ಲಿ ತೊಡಗಿದ್ದನ್ನು ನೋಡಿದರೆ ಈ ದೇಶ ಎಲ್ಲಿಗೆ ಪಯಣಿಸಬಹುದೆಂಬ ಭಯಾನಕ ಭವಿಷ್ಯ ಧುತ್ತೆಂದು ಎದುರಾದಂತೆ ಅನ್ನಿಸುತ್ತದೆ. ಈ ಪ್ರಯತ್ನದಲ್ಲಿ ಅದಕ್ಕೆ ಸಾಥ್ ನೀಡಿದವರು/ನೀಡುತ್ತಿರುವವರು ಪತ್ರಿಕಾಧರ್ಮವನ್ನೇ (ಈಗ ಎಲ್ಲ ಬಗೆಯ ಮಾಧ್ಯಮಗಳಿರುವುದರಿಂದ ಇದನ್ನು ಮಾಧ್ಯಮ ಧರ್ಮವೆನ್ನಬಹುದು) ಮರೆತಂತಿರುವ ಸರಕಾರೀನಿಷ್ಠ ಮಾಧ್ಯಮಗಳು ಮತ್ತು ಆತ್ಮಸಾಕ್ಷಿಯನ್ನು ಮಾರಿ ಜೀವಿಸುವ ಸರಕಾರಿ ಅಧಿಕಾರಿಗಳು ಹಾಗೂ ಸತ್ಯವನ್ನು ತಿರುಚಿ, ಸುಳ್ಳನ್ನು ಇಂದಿನ ಎಲ್ಲ ತಾಂತ್ರಿಕ ಸಲಕರಣೆಗಳೊಂದಿಗೆ ಸತ್ಯವನ್ನಾಗಿ ಪರಿವರ್ತಿಸಬಲ್ಲ ಕೆಲವು ತಂತ್ರಜ್ಞಾನಿ ಖಳನಾಯಕರು. ಇವರ ಸಹಾಯದಿಂದ ತನಗೆ ಸಲ್ಲದವರ ವಿರುದ್ಧ ಅಪಾಯಕಾರಿ ಶಾಸನಗಳ ಪ್ರಕರಣಗಳನ್ನು ದಾಖಲಿಸಿ ಅವರನ್ನು ಸೆರೆಗೆ ತಳ್ಳಿ, ಇಲ್ಲವೇ ಹಿಂಸಿಸಿ ಪೊಲೀಸರ ಮೂಲಕ ದೇಶದ ಶಿಸ್ತನ್ನು ಪಾಲಿಸಿಕೊಂಡು ಬರುವುದು ಸರಕಾರದ ವೈಫಲ್ಯವೇ ಹೊರತು ಪ್ರಜಾತಂತ್ರವಾಗದು.

ನಮ್ಮ ಕಾನೂನಿನ ಬಹುದೊಡ್ಡ ವೈಫಲ್ಯವೆಂದರೆ ನ್ಯಾಯಾಲಯಗಳು ಯಾವುದೇ ಪ್ರಕರಣದ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ತೆಗೆದುಕೊಳ್ಳುವ ಸುದೀರ್ಘಕಾಲ. ಸರಕಾರದ ಪ್ರತಿನಿಧಿಗಳೆಂಬಂತಿರುವ ಪೊಲೀಸರು ಮತ್ತಿತರ ಅಧಿಕಾರಿಗಳು, ಇಲಾಖೆಗಳು ಹೇಳುವುದನ್ನೇ ಸತ್ಯವೆಂದು ಪರಿಗಣಿಸಿ ಆರೋಪಿಗಳಿಗೆ ಸಾಕಷ್ಟು ಯಾತನೆಯನ್ನು ನೀಡಲು ನಮ್ಮ ನ್ಯಾಯ ಪದ್ಧತಿಯು ಎಡೆಮಾಡಿಕೊಡುತ್ತಿದೆ. ಕೊನೆಗೂ ಆರೋಪಿಯು ಅಮಾಯಕನೆಂದು ಗೊತ್ತಾಗುವಾಗ ಅವನ ಬದುಕಿನ ಸಾಕಷ್ಟು ಕಾಲವು ಸಂದಿರುತ್ತದೆ. ಇದನ್ನು ಮರಳಿಸುವ ಸೌಲಭ್ಯವೂ ಇಲ್ಲ. ನ್ಯಾಯಾಲಯಗಳು ತಮ್ಮ ತೀರ್ಪಿನಲ್ಲಿ ಮಹಾನುಭಾವರ ಮಾತುಗಳನ್ನೋ, ದಾರ್ಶನಿಕ ಗ್ರಂಥಗಳ ಉಕ್ತಿಗಳನ್ನೋ, ಸಾಹಿತಿಗಳ ಪದ್ಯಗಳ ಸಾಲುಗಳನ್ನೋ ಉಲ್ಲೇಖಿಸಿ ಆಗಿರುವ ಅನ್ಯಾಯವನ್ನು ಮನದಟ್ಟು ಮಾಡಲು ಎಷ್ಟೇ ಪ್ರಯತ್ನಿಸಿದರೂ ಕೊನೆಗೂ ಅವು ಪುಸ್ತಕದ ಬದನೆಕಾಯಿಗಳಾಗುತ್ತವೆಯೇ ವಿನಾ ಆಗಿರುವ ಅನ್ಯಾಯವನ್ನು ಸರಿಪಡಿಸಲಾರವು. ಇದರಿಂದಾಗಿ ಅಧಿಕಾರವೇ ಕೊನೆಯ ನಗುವನ್ನು ಬೀರುತ್ತದೆ.

ನಮ್ಮ ಬಹಳಷ್ಟು ರಾಜಕಾರಣಿಗಳು, ಅಧಿಕಾರಸ್ಥರು ಇಂತಹ ವ್ಯವಸ್ಥೆಯನ್ನೇ ನಂಬಿಕೊಂಡು ಬಂದವರು. ಇದು ಪ್ರಜಾಪ್ರಭುತ್ವದ ಆಶಯಗಳಿಗೆ ಕೊಟ್ಟ, ಕೊಡುತ್ತಿರುವ ಕೊಡಲಿಯೇಟು. ಅಧಿಕಾರಕ್ಕೆ ಬರಲು ಟೊಳ್ಳು-ಪೊಳ್ಳು ಭರವಸೆಯನ್ನು ನೀಡುವುದು ಇಂದಿನ ರಾಜಕೀಯ ಪಕ್ಷಗಳ ಸಹಜ ವರಸೆಯಿರಬಹುದು. ಪ್ರಜಾಪ್ರಭುತ್ವದ ಗುಣಮಟ್ಟವು ಎತ್ತರದಲ್ಲಿದ್ದರೆ ಅಂತಹ ಭರವಸೆಗಳನ್ನು ಈಡೇರಿಸಲು ಮತದಾರರು ಒತ್ತಾಯಿಸುತ್ತಾರೆ. ಈಡೇರಿಸದಿದ್ದರೆ ಮುಂದಿನ ಸಲದ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸಲು ಸನ್ನದ್ಧರಾಗುತ್ತಾರೆ. ಆದರೆ ಪ್ರಜಾಪ್ರಭುತ್ವವು ಕ್ಷೀಣವಾಗಿದ್ದರೆ ಭರವಸೆಗಳು ಬರೀ ವರಸೆಗಳಾಗಿಯೇ ಉಳಿಯುತ್ತವೆ ಮತ್ತು ಜನರು ಗೊತ್ತುಗುರಿಯಿಲ್ಲದೆ ಅಥವಾ ವೈಯಕ್ತಿಕ ಲಾಭ-ಲೋಭಕ್ಕಾಗಿ ಅಧಿಕಾರಸ್ಥರನ್ನು ಬೆಂಬಲಿಸಲು ತಯಾರಾಗುತ್ತಾರೆ. ಕುಟಿಲ ರಾಜಕಾರಣವನ್ನು ಬಲ್ಲವರು ಇಂತಹ ಅನುಕೂಲ ದುಸ್ಥಿತಿಯನ್ನು ದುರ್ಬಳಕೆಮಾಡಲು ಸದಾ ಸಿದ್ಧರಾಗಿರುತ್ತಾರೆ.

ಈಗ ಆಗಿರುವುದೂ ಇದೇ. ಹಿಂದೆ ಎಲ್ಲವೂ ಸರಿಯಿತ್ತೆಂದಲ್ಲ. ಆದರೆ, ಕಳೆದ ಸುಮಾರು ಆರು ವರ್ಷಗಳ ಅವಧಿಯಲ್ಲಿ ಅಧಿಕಾರದ ಮೂಲಕ ಏನೇನು ಜಬರ್ದಸ್ತು ಮಾಡಬಹುದೋ ಅಷ್ಟನ್ನೂ ಈ ಸರಕಾರ ಮಾಡಿದೆ; ಮಾಡುತ್ತಿದೆ. ತನ್ನ ಭರವಸೆಗಳನ್ನು ಜನಮನದಿಂದ ಮರೆಮಾಡಲು ಬೇಕಾದ ಸುಳ್ಳು ಪ್ರಚಾರವನ್ನೇ ಕಾಯಕವಾಗಿಸಿದ ಸರಕಾರವು ನೋಟು ಅಮಾನ್ಯೀಕರಣದಿಂದ ಮೊದಲ್ಗೊಂಡು ಇತ್ತೀಚೆಗೆ ಜಾರಿಮಾಡಿದ ರೈತಾಪಿ ವರ್ಗಕ್ಕೆ ಸಂಬಂಧಿಸಿದ ಕಾನೂನಿನ ಮೂಲಕ ಏಕಪಕ್ಷೀಯವಾಗಿ ಕೆಲವೇ ಬಂಡವಾಳಗಾರರಿಗೆ ಕಿಂಕಾಪಿನ ಕೆಂಪುಹಾಸನ್ನು ಹಾಸಿದೆ. ಕೋವಿಡ್-19ರ ಅವಧಿಯಲ್ಲಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಲು ಮತ್ತು ಬಡವರು ಮತ್ತಷ್ಟು ಬಡವರಾಗಲು ಸೂಕ್ತ ವೇದಿಕೆಯನ್ನು ನಿರ್ಮಿಸಿದ ಈ ಸರಕಾರ ಮಧ್ಯಮ ವರ್ಗದವರಿಗೆ ಮಂಕುಬೂದಿಯನ್ನೆರಚಿ ಸುಮ್ಮನಾಗಿಸಿದೆ ಮಾತ್ರವಲ್ಲ ಅವರಿಂದಲೇ ಸೊಗಸಾದ ಭಜನಾಮಂಡಳಿಗಳನ್ನು ಸ್ಥಾಪಿಸಿದೆ. ಈ ಬಗ್ಗೆ ವಿವರವಾದ ವರದಿಗಳು ಬೇಕಷ್ಟು ಬಂದಿವೆ.

ತೈಲ ಬೆಲೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪಾತಾಳಕ್ಕಿಳಿದರೂ ಅದು ಈ ದೇಶದಲ್ಲಿ ಮಾತ್ರ ಗಗನಕ್ಕೇರಿದೆ. ಆದರೂ ಜನರು ಸುಮ್ಮನಿರುವ ದುರಂತ ವೈಚಿತ್ರ್ಯ ಇನ್ನೆಲ್ಲೂ ಇರಲಾರದು. ಸರಕಾರದ ನವರತ್ನ ಕಂಪೆನಿಗಳು ಮಾತ್ರವಲ್ಲ ಯಾವುದನ್ನೆಲ್ಲ ಹಣವಾಗಿ ಪರಿವರ್ತಿಸಬಹುದೋ ಅವನ್ನೆಲ್ಲ ತಮ್ಮ ಖಾಸಾ ಖಾಸಗಿಯವರಿಗೆ ನೀಡಿ ಕೈತೊಳೆದುಕೊಳ್ಳಲು ನಿಶ್ಚಯಿಸಿದ ಸರಕಾರವು ತನ್ನ ಅಮಾತ್ಯರಾಕ್ಷಸತ್ವವನ್ನು ಚಾಣಕ್ಯತಂತ್ರದಂತೆ ಪ್ರತಿಬಿಂಬಿಸಿದೆ. ದೇಶದ ಬಹುಸಂಖ್ಯಾತ ಜನರ ಧಾರ್ಮಿಕ, ಮತೀಯ ಭಾವನೆಗಳನ್ನೇ ಕೆದಕಿ, ಕೆಣಕಿ, ಜನರಿಗೆ ಅರ್ಥವಾಗದಂತೆ ಈ ಕಾರಸ್ಥಾನವು ಬೆಳೆಯುತ್ತಿದೆ. ಪ್ರಾಯಃ ಸ್ಫೋಟಗೊಳ್ಳುವ ಹೊತ್ತು ದೂರವಿರಲಾರದೆಂದು ಅನ್ನಿಸಿದರೂ ಅದಕ್ಕೆ ತೆರಬೇಕಾದ ಬೆಲೆ ಊಹಿಸಲೂ ಅಸಾಧ್ಯವಾದದ್ದು. ಪಶು, ಪಕ್ಷಿ, ಪರಿಸರದ ಹೆಸರಿನಲ್ಲಿಯೂ ವ್ಯಾಪಾರ ನಡೆಸಬಹುದೆಂದು ಈ ಸರಕಾರ ತೋರಿಸಿಕೊಟ್ಟಿದೆ. ಪ್ರಾಣಿದಯಾಪರತೆಯ ಹೆಸರಿನಲ್ಲಿ ಯಾವುದೇ ಜೀವಹಿಂಸೆಗೆ ನಿಷೇಧ ಹಾಕಿದರೆ ಅದು ಉದಾತ್ತತೆಯ ಪರಮಾವಧಿಯೆಂದಾದರೂ ಸಹಿಸಿಕೊಳ್ಳಬಹುದಿತ್ತು. ಆದರೆ ಸರಕಾರವು ಮನುಷ್ಯನ ಧಾರ್ಮಿಕ ಮತಾಂಧತೆಗೆ ಲಗ್ಗೆಯಿಟ್ಟಿದೆ.

ಬಹುಸಂಖ್ಯಾತರಲ್ಲಿ ಮನೆಮಾಡಿರುವ ಗೋಗೌರವವನ್ನು ಬಂಡವಾಳವಾಗಿಸಿಕೊಂಡು ಗೋಹತ್ಯಾ ನಿಷೇಧ ಕಾನೂನು ಜಾರಿಗೊಳ್ಳುತ್ತಿದೆ. ಈಚೆಗೆ ಗೋಹತ್ಯಾ ನಿಷೇಧ ಕಾಯ್ದೆಯು ಭಾಜಪ ಸರಕಾರಗಳಿರುವ ರಾಜ್ಯಗಳಲ್ಲೆಲ್ಲ ಕ್ಯಾನ್ಸರಿನಂತೆ ವೃದ್ಧಿಗೊಳ್ಳುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ ಇರುವ 1964ರ ಕಾಯ್ದೆಯನ್ನು ಮೀರಿ ಜನರ ಹುಂಬತನಕ್ಕೆ ಪ್ರೋತ್ಸಾಹ ನೀಡುವಂತಹ ಹೊಸ ಕಾಯ್ದೆಯನ್ನು ತರಲು ಸರಕಾರ ಸಿದ್ಧವಾಗಿದೆ. ಇದರ ಪರಿಣಾಮವೇನಾಗಬಹುದು ಎಂಬುದು ಜನರಿಗೆ ನಿತ್ಯಜೀವನದಲ್ಲಿ ಅರ್ಥವಾದರೂ ಅವರು ತಮ್ಮ ಮೂರ್ಖತನವನ್ನು ಬಲಿಕೊಡಲಾರರು. ಈಗಾಗಲೇ ಅನೇಕರು ದನಗಳನ್ನು ಸಾಕಲಾರದೆ, ಮಾರಲಾರದೆ ಎಲ್ಲೆಲ್ಲೋ ಬಿಟ್ಟು ಬರುವ ಪ್ರಸಂಗದ ಕುರಿತು, ದನಗಳನ್ನು ಬಿಟ್ಟು ಎಮ್ಮೆಗಳನ್ನು ಸಾಕುವ ವರದಿಗಳು ಬಂದಿವೆ. ಇಷ್ಟಕ್ಕೂ ಈ ಕಾಯ್ದೆಯ ಕುರಿತು ಪ್ರಚಾರ ಮಾಡುವ ಬಹಳಷ್ಟು ಜನರು ಮತ್ತು ರಾಜಕಾರಣಿಗಳು ಸ್ವತಃ ದನಸಾಕದವರೇ! ಗೋರಕ್ಷಣೆಯೆಂದರೆ ರಾಜಕೀಯವಾಗಿ ತಮಗಾಗದವರನ್ನು ಹಿಂಸಿಸುವುದು ಎಂದೇ ಅರ್ಥವಾಗುತ್ತಿದೆ. ಪರಿಸರದ, ವನ್ಯಮೃಗಗಳ ರಕ್ಷಣೆಯ ಹೆಸರಿನಲ್ಲಿಯೇ ಇಲಾಖೆಯೊಂದಿದ್ದರೂ ಅದು ಗಣಿಗಾರಿಕೆ, ಮರಹನನ ಮುಂತಾದವುಗಳ ಮೂಲಕ ಹೇಗೆ ಲಾಭಮಾಡಬಹುದು ಎಂದಷ್ಟೇ ಯೋಚಿಸುತ್ತಿದೆ. ಪಶ್ಚಿಮಘಟ್ಟದ ರಕ್ಷಣೆಯೆಂಬುದು ಒಂದು ವ್ಯಂಗ್ಯನಾಟಕವಾಗಿದೆ. ಧನದಾಹದಿಂದ ಪರಿಸರವನ್ನು ನಾಶಮಾಡುವವರು ಮತ್ತು ಮತದಾಹದಿಂದ ಗಾಡ್ಗಿಲ್, ಕಸ್ತೂರಿರಂಗನ್ ವರದಿಗಳನ್ನು ವಿರೋಧಿಸುವವರು, ಸಂವಿಧಾನದಲ್ಲಿ ಹೇಳಿದ ಪರಿಸರವನ್ನು ಕಾಪಾಡುವುದಕ್ಕಿರುವ ಮಹತ್ವವನ್ನು ಅರಿಯದವರು, ಪರಿಸರ ರಕ್ಷಣೆಯ ಶಾಸನಾತ್ಮಕ ಹೊಣೆಯನ್ನು ಹೊರುತ್ತಾರೆ.

ಹಳ್ಳಿಯಲ್ಲಿ ಕೂಳಿಲ್ಲದೆ, ಕಾಳಿಲ್ಲದೆ ಜೀವನೋಪಾಯಕ್ಕೆ ನಮ್ಮ ಮಕ್ಕಳು ನಗರದತ್ತ ಮುಖಮಾಡಿದಂತೆ ಕಾಡಿನಲ್ಲಿ ಕಾಡೇ ಇಲ್ಲದೆ ವನ್ಯಮೃಗಗಳು ನಾಡಿನತ್ತ ಮುಖಮಾಡಿವೆ. ಇವನ್ನೆಲ್ಲ ಚಿಂತಿಸದೆ ನಮ್ಮ ಸಚಿವರು ಸದಾ ಚಿಂತನೆಯ ಅಭ್ಯಾಸವನ್ನೂ ಘೋಷಣೆಯನ್ನೂ ಮಾಡುತ್ತಿರುತ್ತಾರೆ. ಈಗ ಗೋಹತ್ಯಾನಿಷೇಧ ಕಾನೂನಿಗೆ ಪೂರಕವಾಗಿ ಮೃಗಾಲಯದ ಹುಲಿಗಳಿಗೆ ಗೋಮಾಂಸದ ಬದಲಿಗೆ ಕೋಳಿಮಾಂಸವನ್ನು ನೀಡುವ ಯೋಜನೆ ಬಂದಿದೆಯೆಂದು ವರದಿಯಾಗಿದೆ. ಇಂತಹವರ ನಡುವೆ ಪುಣ್ಯಕೋಟಿಯೂ ಸುರಕ್ಷಿತವಲ್ಲ, ಅರ್ಬುದ ಹುಲಿಯೂ ಸುರಕ್ಷಿತವಲ್ಲ. ನಮ್ಮ ಪುರಾಣಗಳಲ್ಲಿ ಪ್ರಸ್ತಾವಿಸಿದ ಯುಗಗಳೇ ಚೆನ್ನಾಗಿದ್ದವು. ಹಿರಣ್ಯಕಶಿಪುವಿಗೊಬ್ಬ ಪ್ರಹ್ಲಾದನಿದ್ದ. ರಾವಣನಂತಹ ದುರುಳನ ಆಸ್ಥಾನದಲ್ಲೂ ಒಬ್ಬ ವಿಭೀಷಣನಿದ್ದ. ದುರ್ಯೋಧನನಿಗೊಬ್ಬ ವಿದುರನಿದ್ದ. ಬುದ್ಧಿ ಹೇಳುವ, ಇಲ್ಲವೇ ಸಿಡಿದೇಳುವ ಬಂಧುಗಳಿದ್ದರು. ಇಂದಿರಾಗಾಂಧಿಯ ಕಾಲದಲ್ಲೂ ತುರ್ತುಸ್ಥಿತಿಯ ಕ್ಷಣದಲ್ಲಿ ಹೊರಬರಲು ಧೈರ್ಯಮಾಡಿದ ಜಗಜೀವನರಾಮ್, ಬಹುಗುಣರಂತಹವರಿದ್ದರು. ಈಗಿನ ಆಳ್ವಿಕೆಯಲ್ಲಿ ಬಾಲಮುದುರಿಸಿಕೊಂಡು ಜೀಯಾ, ಹಸಾದ ಎಂಬ ವ್ಯಕ್ತಿನಿಷ್ಠ ಉತ್ತರಕುಮಾರರಿದ್ದಾರೆಯೇ ಹೊರತು ಪ್ರಾಜ್ಞರಿಲ್ಲ; ಧೈರ್ಯವಿರುವ ದೇಶಭಕ್ತರೂ ಇಲ್ಲ. ಇಲ್ಲವಾದರೆ ಗಾಂಧಿ ಹುಟ್ಟಿದ ಗುಜರಾತಿನಿಂದಲೇ ಆರಿಸಿಬಂದವರು, ಉದ್ಯೋಗ ಪಡೆದವರು, ದೇಶದ ರಕ್ಷಣೆಯ ಬದಲಾಗಿ ತಮ್ಮ ಹಿಂಸಾತ್ಮಕ ಆಸುರೀಸಮೀಕರಣವನ್ನೇ ತಲೆಯಲ್ಲಿ ಹೊತ್ತು ಜನರನ್ನು ಮರುಳುಮಾಡುವುದು ಸಾಧ್ಯವಿರಲಿಲ್ಲ.

ಇಂದು ಆಳುವ ಬಹಳಷ್ಟು ರಾಜಕಾರಣಿಗಳು ದ್ವಿದಳ ಧಾನ್ಯಗಳೇ; ಇಬ್ಬರು ಸಂಗಾತಿಗಳ ಸುಖವನ್ನು ಪಡೆದವರೇ. ಕಾಂಗ್ರೆಸ್ ಆಡಳಿತದಲ್ಲಿ ಅದರ ಕೈಹಿಡಿದು ಸಕಲ ಸುಖಸೌಭಾಗ್ಯವನ್ನು ಪಡೆದು ಆನಂತರ ಈಗ ಅಲ್ಲಿಂದ ಸಮುದ್ರೋಲ್ಲಂಘನ ಮಾಡಿ ದೇಶಭಕ್ತರಾದವರು. ಭಾಜಪದ ಕೈಹಿಡಿದು ಇಲ್ಲಿನ ಸಕಲ ಸೌಭಾಗ್ಯಗಳನ್ನೂ ಅನುಭವಿಸುತ್ತ ಹಿಂದಿನ ತಮ್ಮ ಚರಿತೆಯನ್ನು ಮರೆತು ಕಾಂಗ್ರೆಸನ್ನು ದೂಷಿಸುವವರು. ಇಂತಹವರಿಂದ ದೇಶದ ಹಿತವನ್ನು ಬಯಸುವವರು ಮೂರ್ಖರು. ಸ್ವಾಮಿ ವಿವೇಕಾನಂದರು ಹೇಳಿದಂತೆ ನಿನ್ನ ಏಳ್ಗೆಗೆ ನೀನೇ ಶಿಲ್ಪಿ! ಹೇಗೆಯೋ ಹಾಗೆಯೇ ನಿನ್ನ ಅವನತಿಗೂ ನೀನೇ ಶಿಲ್ಪಿ!. ಆದ್ದರಿಂದ ನಮ್ಮ ಮತದಾರರು ತಮ್ಮ ಮಕ್ಕಳನ್ನೇ ಬಾವಿಗೆ ತಳ್ಳಿ ಆಳನೋಡುವ ಈ ಸಂದರ್ಭದಲ್ಲಿ ದೇಶದ ಏಳಿಗೆ ನಡೆದೀತೆಂದು ಭಾವಿಸಲಾಗದು. ಇಂತಹ ಪರಿಸ್ಥಿತಿಯಲ್ಲಿ ರೈತರ ಮೇಲೆ ‘ದೇಶ್‌ಕೆ ಗದ್ದಾರೋಂಕೋ, ಗೋಲಿ ಮಾರೋ ಸಾಲೋಂಕೋ’ ಎಂಬ ಘೋಷಣೆಯೊಂದಿಗೆ ಸರಕಾರ ಹಿಂಸಾಪ್ರವೃತ್ತವಾದರೆ ಅದನ್ನು ನಮ್ಮ ಕಾಲದ ವಿಪರ್ಯಾಸಕ್ಕೆ, ದುರಂತಕ್ಕೆ ಉದಾಹರಣೆಯೆಂದು ಭಾವಿಸುವುದು ಮತ್ತು ಅದು ಸರಿಯಲ್ಲವೆಂದು ಎತ್ತರದ ದನಿಯಲ್ಲಿ ಕೂಗಿ ಹೇಳುವುದೇ ಸಾತ್ವಿಕ, ಪ್ರಜ್ಞಾವಂತ ಆಕ್ರೋಶವಾಗಬಹುದು. ದೇಶದ್ರೋಹಿಗಳು ಯಾರೆಂದು ಆಳುವವರನ್ನು ಮೀರಿದ ಕಾಲವೇ ಹೇಳಬೇಕಷ್ಟೇ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)