varthabharthi


ಅನುಗಾಲ

ಬಜೆಟ್: ನಂಬಿಕೆಗಳು ಮತ್ತು ಸಂಶಯಗಳು

ವಾರ್ತಾ ಭಾರತಿ : 4 Feb, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಬಜೆಟ್ ಎಂಬುದು ಕುದುರೆಯ ಮುಖದೆದುರು ಕೈಯಳತೆಯಲ್ಲಿ ಕಟ್ಟಿದ ಹುಲ್ಲಿನ ಕಂತೆಯಂತಿದೆ. ನಿಮಗನುಕೂಲವಾಗುತ್ತದೆಂದು ತಿಳಿದರೆ ಆ ಕ್ಷಣ ಕೆಲವು ಷರತ್ತುಗಳು ಅನ್ವಯಿಸಿ ಅವು ಕೈಗೆ ದಕ್ಕದಾಗುತ್ತವೆ. ಬಜೆಟ್ ಇರುವುದು ಸರಕಾರದ ಸೌಲಭ್ಯವನ್ನು ಪಡೆಯುವವರಿಗಷ್ಟೇ ಹೊರತು ದುಡಿಯುವವರಿಗಲ್ಲವೆಂದು ನನಗಂತೂ ಅನ್ನಿಸಿದೆ. ಯಾರೋ ಹೇಳಿದರಲ್ಲ- ‘ಸಾವು ಮತ್ತು ತೆರಿಗೆ ಇವು ಅನಿವಾರ್ಯ’ ಎಂದು!


ನಾವೀಗ ಒಂದು ಸಂಕ್ರಮಣ ಕಾಲದಲ್ಲಿದ್ದೇವೆ ಎಂಬುದೊಂದು ಕ್ಲೀಶೆಯಾಗಿದೆ. ಎಲ್ಲ ಕಾಲವೂ ಸಂಘರ್ಷಕಾಲವೇ. ಎಲ್ಲಿಯ ವರೆಗೆ ವೈವಿಧ್ಯವಿರುತ್ತದೆಯೋ, ಭಿನ್ನತೆಯಿರುತ್ತದೆಯೋ ಅಲ್ಲಿಯವರೆಗೆ ಸಂಘರ್ಷವಿರುತ್ತದೆ. ಈ ಸಂಘರ್ಷವು ಕೆಟ್ಟದ್ದರ ವಿರುದ್ಧವೇ ಎಂಬ ಹಾಗಿಲ್ಲ. ಒಳ್ಳೆಯದರ ವಿರುದ್ಧವೂ ಹೋರಾಟ ನಡೆಯುತ್ತಲಿರುತ್ತದೆ. ವ್ಯವಸ್ಥೆಯನ್ನು ಕಾಪಾಡಿಕೊಂಡು ಬರುವ ಮತ್ತು ಅದನ್ನು ಕೆಡವುವವರ ನಡುವೆಯೂ ಹೀಗೆಯೇ ಹೋರಾಟ ನಡೆಯುತ್ತದೆ. ಜಯಿಸಿದವರು ಇತಿಹಾಸವನ್ನು ಬರೆಯುತ್ತಾರೆ. ಅದು ಚಾರಿತ್ರಿಕ ಸತ್ಯವೆನಿಸಿಕೊಳ್ಳುತ್ತದೆ. ಭವಿಷ್ಯವೆಂದರೆ ಈ ಆಯ-ವ್ಯಯದ ಪಟ್ಟಿ.

ರಾಜಕೀಯದಿಂದ ಸಾಹಿತ್ಯದವರೆಗೆ, ವಿಜ್ಞಾನದಿಂದ ಕ್ರೀಡೆಯವರೆಗೆ, ಎಲ್ಲಕಡೆ ಇಂತಹ ಭಿನ್ನತೆಯಿದೆ; ಆದ್ದರಿಂದಲೇ ಸಂಘರ್ಷವೂ ಇದೆ. ಪರಸ್ಪರ ಗೌರವಿಸಿಕೊಂಡು ಒಪ್ಪದಿರುವ ಸ್ವಾತಂತ್ರ್ಯವನ್ನು ಮನುಷ್ಯ ಎಂದೋ ಕಳೆದುಕೊಂಡಿದ್ದಾನೆ. ಮೇಲಾಟವೆಂದರೆ ಎದುರಾಳಿಯ ನಾಶವೆಂಬ ಹಂತಕ್ಕೆ ತಲುಪಿದೆ. ತಾನು ಸರಿ ಮಾತ್ರವಲ್ಲ, ತಾನು ಮಾತ್ರ ಸರಿ ಎಂಬ ಹಠಕ್ಕೆ ಮನುಷ್ಯ ಬಿದ್ದಿದ್ದಾನೆ. ಆದ್ದರಿಂದ ಎಲ್ಲದಕ್ಕೂ ಅಧಿಕಾರದ ಮತ್ತು ಅಧಿಕೃತತೆಯ ಸರಿತಪ್ಪುಗಳ ಮುದ್ರೆಯನ್ನು ಒತ್ತಲು ಬೇಕಾದ ಕಾರಸ್ಥಾನಗಳು ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ.

ಇದರ ಭಾಗವೆಂಬಂತೆ ಪ್ರತೀವರ್ಷ ಕೇಂದ್ರ ಮತ್ತು ರಾಜ್ಯಗಳ ಆಯ-ವ್ಯಯಪತ್ರಗಳು ಮಂಡನೆಯಾಗುತ್ತವೆ. ಕ್ರಿಕೆಟ್ ಪಂದ್ಯದಂತೆ ಇದಕ್ಕೆ ಮೊದಲು ಕೆಲವು ದಿನಗಳಿಂದ ಮಾಧ್ಯಮಗಳು ಊಹಾಪೋಹಗಳ ದೊಡ್ಡ ಮಂಜನ್ನೇ ಸೃಷ್ಟಿಸುತ್ತವೆ. ಬಜೆಟ್ ಮಂಡನೆಯಾಗಲಿ, ಏನಿದೆಯೋ ನೋಡೋಣ ಎನ್ನುವುದರ ಬದಲಿಗೆ ಅದು ಹೇಗಿದ್ದೀತು ಎಂಬ ಬಗ್ಗೆ ಮಾಧ್ಯಮಗಳಲ್ಲಿ ತಜ್ಞರಿಂದ ಅಜ್ಞರ ವರೆಗೆ ಎಲ್ಲರೂ ಹುಟ್ಟುವ ಮಗುವಿನ ಕುರಿತು ಚರ್ಚೆ ಮಾಡುತ್ತಾರೆ. ಬಜೆಟ್ ಮಂಡನೆಯಾಗುವ ದಿನವಂತೂ ಅದರ ವೀಕ್ಷಕ ವಿವರಣೆಗೆ ದೊಡ್ಡ ವೇದಿಕೆಗಳೇ ತಯಾರಾಗುತ್ತವೆ. ಪರ-ವಿರೋಧ ಚರ್ಚೆಯಾಗುತ್ತದೆ. ಬಜೆಟ್ ಮಂಡನೆಯಾದ ಮೇಲೆ ಅದರ ಕುರಿತು ಶವಪರೀಕ್ಷೆ ಹೇಗಿದ್ದರೂ ಇರುತ್ತದೆ. ಐದು ವರ್ಷಗಳಿಗೊಮ್ಮ ಚುನಾವಣೆ ನಡೆಯುವ ದೇಶದಲ್ಲಿ ಬಜೆಟ್ ಮಾತ್ರ ಪ್ರತೀವರ್ಷ ಯಾಕಿರಬೇಕೋ ನನಗೆ ಅರ್ಥವಾಗಿಲ್ಲ. ಚುನಾವಣೆಯ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಭಾರತೀಯನ ಕಣ್ಣೀರನ್ನೊರಸುವ, ಬಡತನವನ್ನು ನಿರ್ಮೂಲಮಾಡುವ, ದೃಢಕಾಯ ಭಾರತವನ್ನು ಸ್ಥಾಪಿಸುವ, ವ್ಯಾಯಾಮಶಾಲೆಗಳನ್ನು ತೆರೆಯುವ ಭರವಸೆಯೊಂದಿಗೆ ಅಧಿಕಾರಕ್ಕೇರುವ ಮತ್ತು ಅದೇ ಸರಕಾರ ಆಳುವುದಾದರೆ ತನ್ನ ಪಂಚವಾರ್ಷಿಕ ಸಾಧನೆಗನುಕೂಲವಾಗುವಂತೆ ಐದು ವರ್ಷಗಳ ಬಜೆಟನ್ನು ತಯಾರಿಸಬಹುದಲ್ಲ ಮತ್ತು ಪ್ರಕಟಿಸಬಹುದಲ್ಲ! ಮಧ್ಯೆ ಸರಕಾರ ಬದಲಾದರೆ ಬೇರೆ ಬಜೆಟ್ ಮಾಡುವುದಕ್ಕೆ ಅರ್ಥವಿದೆ. ವರ್ಷ ವರ್ಷ ಬದಲಾಯಿಸುವುದಕ್ಕೆ ಇದು ಕ್ಯಾಲೆಂಡರೇ? ಪ್ರತೀ ವರ್ಷ ಆಚರಿಸುವುದಕ್ಕೆ ಇದೇನು ಹುಟ್ಟುಹಬ್ಬವೇ? ಈಗಲೂ ಅಷ್ಟೇ: ಬಜೆಟ್‌ನಲ್ಲಿ 2022-24ಕ್ಕೆ ಮಾಡಬಹುದಾದ ಯೋಜನೆಗಳೂ ಇವೆ. ಹಾಗಿದ್ದರೆ ಇದರ ಕಾಲಾವಧಿಯೇನು?

ವರ್ತಮಾನಕಾಲದಲ್ಲಿ ಮಂಡನೆಯಾಗುತ್ತಿರುವ ಬಜೆಟ್‌ಗಳು ರಾಜಕೀಯ ಬಜೆಟ್‌ಗಳೇ. ಇವುಗಳ ಕುರಿತು ಆರ್ಥಿಕ ತಜ್ಞರು ಬೆವರು ಸುರಿಸುವುದು ಮತ್ತೆ ಅದನ್ನು ಕೈವಸ್ತ್ರದಿಂದ ಒರೆಸಿಕೊಳ್ಳುವುದು ಏಕೆಂದು ನನಗೆ ಅರ್ಥವಾಗುತ್ತಿಲ್ಲ. ಏಕೆಂದರೆ ಬಹುಪಾಲು ಈ ಬಜೆಟ್‌ಗಳು ರಾಜಕೀಯ ಇಚ್ಛಾಶಕ್ತಿಯ ಮತ್ತು ಸಮೀಪದೃಷ್ಟಿಯ ಶಿಶುಗಳು. ಇವಕ್ಕೆ ರೂಪ-ಸ್ವರೂಪ ನೀಡಲು ಆರ್ಥಿಕ ತಜ್ಞರು ಪ್ರಯತ್ನಿಸುವುದನ್ನು ಗಮನಿಸಿದರೆ ಇವರನ್ನು ಆಳುವ ಯಾರೋ ‘‘ನಾನು ಹೀಗೆ ತೀರ್ಮಾನ ಮಾಡಿದ್ದೇನೆ, ಅದಕ್ಕೆ ಅರ್ಥ ನೀಡಬೇಕಾದವರು ನೀವು’’ ಎಂದು ಅದೇಶಿಸಿದಂತಿದೆ. ನಮ್ಮಲ್ಲೊಬ್ಬರು ಅರೆನ್ಯಾಯಿಕ ಅಧಿಕಾರಿಗಳಿದ್ದರು. ಈ ಧರ್ಮರಾಯನ ಮುಂದೆ ಯಾವುದೇ ಅರ್ಜಿ, ಮೇಲ್ಮನವಿ ಸಲ್ಲಿಕೆಯಾದರೆ ಅವರು ಕುರಿತೋದದೆ ತಮ್ಮ ಮರ್ಜಿ ಅಥವಾ ಪ್ರಭಾವಕ್ಕನುಗುಣವಾಗಿ ಅದನ್ನು ಪುರಸ್ಕರಿಸಬೇಕೇ/ತಿರಸ್ಕರಿಸಬೇಕೇ ಎಂದು ತೀರ್ಮಾನಿಸುತ್ತಿದ್ದರು. ಆದರೆ ತೀರ್ಪಿಗೊಂದು ಸಮರ್ಥನೆ/ಕಾರಣವಲ್ಲದಿದ್ದರೂ ನೆಪವಾದರೂ ಬೇಕಲ್ಲ! ಅವರಿಗೊಬ್ಬ ಬುದ್ಧಿವಂತ ಆಪ್ತ ಸಹಾಯಕನಿದ್ದ. ಅವರು ಈ ಚಿತ್ರಗುಪ್ತನಲ್ಲಿ ‘‘ನಾನಿದನ್ನು ಎತ್ತಿಹಿಡಿಯಲು (ಅಥವಾ ವಜಾ ಮಾಡಲು) ನಿರ್ಧರಿಸಿದ್ದೇನೆ, ತೀರ್ಪು ಬರೆ’’ ಎಂದು ಆದೇಶಿಸುತ್ತಿದ್ದರು. ಅವನೋ ತೋಳ-ಕುರಿಮರಿ ಕಥೆಯಂತೆ ಯಾವುದೋ ಬಾದರಾಯಣ ವಾದವನ್ನು ಎಳೆತಂದು ಅದಕ್ಕೆ ಸರಿಯಾಗಿ ತೀರ್ಪಿನ ‘ಬರೆ’ ಎಳೆಯುತ್ತಿದ್ದ. ಈಗಿನ ಬಜೆಟ್‌ಗಳನ್ನು ಸಮರ್ಥಿಸುವ ಅಥವಾ ವಿರೋಧಿಸುವ ಆರ್ಥಿಕ ತಜ್ಞರ ಚರ್ಚೆಯನ್ನು ಕೇಳುವಾಗ/ನೋಡುವಾಗ ನನಗೆ ಈ ಕಥೆ ನೆನಪಿಗೆ ಬರುತ್ತದೆ. ಆರ್ಥಿಕ ತಜ್ಞರ ಚರ್ಚೆ, ಪ್ರತಿಕ್ರಿಯೆ ಮತ್ತು ಉಪಸಂಹಾರಗಳನ್ನು ಗಮನಿಸಿದರೆ ಕೇಳುಗರಿಗೆ/ವೀಕ್ಷಕರಿಗೆ, ‘ಬರಿಗುಲ್ಲು, ನಿದ್ರೆಗೇಡು’ ನೆನಪಾದರೆ ಅಚ್ಚರಿಯಿಲ್ಲ!

ಬಜೆಟ್‌ಗೆ ಬರುವ ರಾಜಕೀಯ ಪ್ರತಿಕ್ರಿಯೆಗಳು ನಿರೀಕ್ಷಿತ ದಿಕ್ಕಿನಲ್ಲೇ ಇರುತ್ತವೆ. ಆಳುವ ಪಕ್ಷದವರೆಲ್ಲ ಅದನ್ನು ಬೆಂಬಲಿಸಬೇಕೆಂಬ ಮತ್ತು ಪ್ರತಿಪಕ್ಷದವರೆಲ್ಲ ಅದನ್ನು ವಿರೋಧಿಸಬೇಕೆಂಬ ಅಲಿಖಿತ ನಿಯಮವಿದ್ದಂತೆ ಕಾಣುತ್ತದೆ. ಈ ಪರ-ವಿರೋಧಕ್ಕೆ ಕಾರಣಗಳನ್ನು ನಮ್ಮ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳಂತೆ ಕಾದಿರಿಸುವುದು ಒಳ್ಳೆಯದು. ಏಕೆಂದರೆ ಸಾಮಾನ್ಯವಾಗಿ ರಾಜಕಾರಣಿಗಳು ಇದನ್ನು ತಿಳಿದಿರುವುದಿಲ್ಲವಾದ್ದರಿಂದ ಅವರಿಗೂ ಆರ್ಥಿಕ ಸಹಾಯಕರು ಬೇಕಾಗುತ್ತಾರೆ. ಇನ್ನು ಕೆಲವು ಬಾರಿ ಒಂದಷ್ಟು ಅಂಶಗಳು ಜನಸಾಮಾನ್ಯರ ಗೊತ್ತಿಗೂ ಒಳಪಡುತ್ತವೆ. ಅಂತಹ ಅಂಶಗಳನ್ನು ರಾಜಕಾರಣಿಗಳು ಬಲ್ಲರು. ಆದ್ದರಿಂದ ಅವರು ಅದೇ ಬಜೆಟ್‌ನ ಮುಖ್ಯಾಂಶವೆಂಬಂತೆ ಒತ್ತಿ ಹೇಳುತ್ತಾರೆ. ಮುಂದಿನ ಕುರ್ಚಿಯಲ್ಲಿ ಕುಳಿತವರು ತುಂಬಾ ಎತ್ತರದವರಾದರೆ ವೇದಿಕೆಯಲ್ಲಿ ಏನು ನಡೆಯುತ್ತದೆಂಬುದು ಹಿಂದೆ ಕುಳಿತವರಿಗೆ ಕಾಣಿಸುವುದಿಲ್ಲ. ಆಗ ಅವರು ಅಲ್ಲೇನು ನಡೆಯುತ್ತದೆ ಎಂದು ಮುಂದಿನ ಸಾಲಿನವರನ್ನು ವಿಚಾರಿಸಬೇಕಾಗುತ್ತದೆ. ಹಾಗೆಯೇ ಕೆಳಹಂತದ ಅಪ್ರಬುದ್ಧ ಆದರೆ ಪಕ್ಷಬದ್ಧ ಕಾರ್ಯಕರ್ತರು ತಾವು ಯಾವಾಗ, ಯಾವುದಕ್ಕೆ, ಯಾರಿಗೆ ಜೈ ಎನ್ನಬೇಕು, ಧಿಕ್ಕಾರ ಹೇಳಬೇಕು ಎಂಬುದನ್ನು ತಾವು ಹಿಂಬಾಲಿಸುವ ಪಾಳೇಗಾರ ನಾಯಕಮಣಿಗಳಲ್ಲಿ, ಪಕ್ಷಕಚೇರಿಗಳಲ್ಲಿ ವಿಚಾರಿಸಿ ಅದನ್ನು ಶಿರಸಾವಹಿಸುತ್ತಾರೆಯೇ ಹೊರತು ಬಜೆಟ್‌ನ ಫಲಾಫಲಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಂದು ರೀತಿಯ ಸ್ಥಿತಪ್ರಜ್ಞರಿವರು.

ಶ್ರೀಸಾಮಾನ್ಯರಲ್ಲಿ ದೇಹದುಡಿಮೆಯಿಂದ ಬದುಕುವ, ಅಥವಾ ತೀರ ಬಡತನದ ಬಹುಪಾಲು ಮಂದಿಗೆ ಬಜೆಟ್ ಕಾಡುವುದೇ ಇಲ್ಲ. ‘‘ಸಾವಿರ ಕುರಿಗಳ ಮಂದೆಯ ಕುರುಬಗೆ ಅಂಕೆಯ ತಿಳಿವಳಿಕಿರುತಿಹುದೇ? ಕುರಿಗಳು ಮೇಯ್ವವು...’’ ಎಂಬ ಕವಿವಾಣಿಯ ಹಾಗೆ ಅವರು ಅವರ ಪಾಡಿಗೆ ಬದುಕುತ್ತಾರೆ. ಇಂದು ದುಡಿದರೆ ನಾಳೆ ಊಟ ಎಂಬ ರೀತಿಯಲ್ಲಿರುವವರಿಗೆ ಯಾವ ಬಜೆಟ್ ಆದರೇನು? ಕೊರೋನ ಬಂದಾಗ ಅದರಿಂದ ಪರಿತಪಿಸಿದವರಿಗಿಂತ ಹೆಚ್ಚಾಗಿ ಬಡವರು ಅದುಕಾರಣವಾಗಿ ಸರಕಾರ ವಿಧಿಸಿದ ಕಷ್ಟಕರ ನಿಯಮಗಳಿಂದ ಬಳಲಿದ್ದೇ ಹೆಚ್ಚು. ಗುಂಪಿನಲ್ಲಿ ಬೆಂಕಿ ಬಿದ್ದಾಗ ಅಥವಾ ಸಮಾರಂಭದ ಜನಜಂಗುಳಿಯಲ್ಲಿ ಹುಲಿಯೋ, ಹಾವೋ, ಇನ್ನೇನೋ ಬಂತೆಂದು ಅಳಲಿದಾಗ ದಿಕ್ಕುದೆಸೆ ನೋಡದೆ ಚಲ್ಲಾಪಿಲ್ಲಿ ಓಡುವವರಂತೆ ಈ ದೇಶದ ವಲಸೆ ಕಾರ್ಮಿಕರು ವರ್ತಿಸಿದ್ದು ಸಹಜವೇ. ಕೊಳ್ಳುವ ವಸ್ತುವಿನ ದರ ಮೇಲೇರಿದರೆ ಅವರು ಕೊಳ್ಳುವುದಿಲ್ಲ. ಎರಡು ಹೊತ್ತಿನ ಊಟಕ್ಕೆ ತತ್ವಾರವಾದರೆ ಒಂದೇ ಹೊತ್ತು ಉಣ್ಣುತ್ತಾರೆ. ಅದೂ ಇಲ್ಲದಿದ್ದರೆ ಹೊಟ್ಟೆಗೆ ಬಟ್ಟೆ ಸುತ್ತಿ ಮಲಗುತ್ತಾರೆ; ಅದೂ ಸಾಧ್ಯವಾಗದಿದ್ದರೆ ಹಸಿವಿನಿಂದ ಸಾಯುತ್ತಾರೆ. ಇಂತಹ ಗೋಳು ಒಂದು ಹಂತದಿಂದ ಮೇಲೆ ದೃಶ್ಯವಾಗದೆ ಆವಿಯಾಗುತ್ತದೆ.

ಸರಕಾರಗಳು ಸದಾ ಮಾತನಾಡುವುದು ಇಂತಹವರ ಬಗ್ಗೆಯೇ ಆದರೂ ಇಂತಹವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುತ್ತದೆ. ಇದೊಂದು ಜಾಗತಿಕ ವಿದ್ಯಮಾನವೆಂದುಕೊಂಡು ಆಳುವವರು ಸುಮ್ಮನಾಗುತ್ತಾರೆ. ಜೈಲಿನಲ್ಲಿರುವವನೊಬ್ಬ ಈಚೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಅನಾರೋಗ್ಯದ ಕಾರಣದ ಮೇಲೆ ಜಾಮೀನು ಕೋರಿ ತಾನು ತೀವ್ರ ಕಾಯಿಲೆಯಿಂದ ನರಳುತ್ತಿರುವುದಾಗಿ ಮತ್ತು ವಿಳಂಬವಾದರೆ ಜೀವಹಿಡಿಯುವುದು ಕಷ್ಟವಾಗಬಹುದು ಎಂದಾಗ ಮುಖ್ಯ ನ್ಯಾಯಮೂರ್ತಿಗಳೇ ‘‘ಸಾಯುವವರು ಹೇಗೂ ಸಾಯುತ್ತಾರೆ, ಜಾಮೀನು ನೀಡದಿರುವುದೇ ಒಳಿತು’’ ಎಂಬರ್ಥದಲ್ಲಿ ಹೇಳಿದರೆಂದು ವರದಿಯಾಗಿದೆ. ಮನುಷ್ಯ ಸಂವೇದನೆ ಈ ಹಂತಕ್ಕಿಳಿದಿರುವಾಗ ಮೂರ್ತ ಜಗತ್ತಿನ ವ್ಯಾವಹಾರಿಕ ಆಗುಹೋಗುಗಳನ್ನು ನಿಯಂತ್ರಿಸುವ ರಾಜಕೀಯ ಬಜೆಟ್ ಇನ್ನೆಷ್ಟು ಜೀವ ಸಂವೇದಿಯಾಗಲು ಸಾಧ್ಯ?

ನಿಜಕ್ಕೂ ಬಜೆಟ್ ಕುರಿತು ಚಿಂತಿಸುವವರು ಮಧ್ಯಮವರ್ಗಿಗಳು. ಆದರೆ ಅದರ ಎಲ್ಲ ಪರಿಣಾಮಗಳನ್ನು ಮೌನವಾಗಿ ಒಪ್ಪಿಕೊಳ್ಳುವವರೂ, ಅನುಭವಿಸುವವರೂ ಇವರೇ. ಚರ್ಚಿಸುವಾಗ ನಮ್ಮ ದೈನಂದಿನ ಅಗತ್ಯ-ಅನಗತ್ಯಗಳ ಬೆಲೆ, ಲಭ್ಯತೆ ಇತ್ಯಾದಿಗಳನ್ನು ಧೀರಗಂಭೀರವಾಗಿಯೇ ಮಧ್ಯಮವರ್ಗಿಗಳು ಎದುರಿಸುತ್ತಾರೆ. ಸಂಸದರೂ ಆರ್ಥಿಕ ತಜ್ಞರೂ ಆದ ಸುಬ್ರಮಣಿಯನ್ ಸ್ವಾಮಿ ಪೆಟ್ರೋಲ್ ಬೆಲೆ ರೂ.42ಕ್ಕಿಂತ ಹೆಚ್ಚಾದರೆ ಅದು ಶೋಷಣೆಯೇ ಎನ್ನುವುದನ್ನು ಕೇಳಿ ನಕ್ಕು ಸುಮ್ಮನಾಗುತ್ತಾರೆ. ನಾಳೆಯಿಂದ ತೈಲಬೆಲೆ ಹೆಚ್ಚಾಗುತ್ತದೆಂದು ತಿಳಿದಾಕ್ಷಣ ಮೊದಲು ತಮ್ಮತಮ್ಮ ವಾಹನಗಳಿಗೆ ಇಂಧನ ತುಂಬಿಕೊಳ್ಳುವುದರ ಹೊರತಾಗಿ ಇನ್ನೇನೂ ಮಾಡದಿರುವವರು ಮಧ್ಯಮವರ್ಗಿಗಳೇ. ಬೆಳಗಾಗದಿರಲಿ ಎಂದು ಹಲುಬುವುದರ ನಿರರ್ಥಕತೆಯ ಅರಿವಿರುವುದರಿಂದ ಬೆಲೆ ಹೆಚ್ಚಾಗುವ ಆ ನಾಳೆಯನ್ನು ಡಾ. ಫಾಸ್ಟಸ್‌ನಂತೆ ಕಾಯುವುದನ್ನು ಬಿಟ್ಟು ಇನ್ನೇನೂ ಮಾಡಲಾಗದ ವಿಹ್ವಲತೆ ಅವರದ್ದು. ಪತಿವ್ರತೆ ಸುಮತಿಯಂತೆ ಅದನ್ನು ತಡೆಯುವ ಪೌರಾಣಿಕ ಯುಗವಂತೂ ಎಂದೋ ಕಳೆದಿದೆ. ಆದ್ದರಿಂದ ಇದೂ ಒಂದು ಯಾತನಾ ಮನೋರಂಜನೆಯೆಂದು ಪರಿಭಾವಿಸಿ ದಿನಕಳೆಯುವ ಈ ಮಧ್ಯಮವರ್ಗಿಗಳನ್ನು ಕಂಡರೆ ನನಗೆ ಅನುಕಂಪಭರಿತ ಅಭಿಮಾನವಿದೆ.

ಆದರೆ ಬಜೆಟ್‌ನ ರಾಜಕೀಯವನ್ನು ಗಮನಿಸಿ ಸಿಟ್ಟು ಬಾರದಿರುವುದು ಹೇಗೆ? ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಶೂನ್ಯ ಸಂಪಾದನೆ. (ಅನುಷ್ಠಾನಗೊಳ್ಳದ ಮೆಟ್ರೋ ಯೋಜನೆಯೊಂದು ದಕ್ಕಿದೆ. ದೂರದ ಬೆಟ್ಟ!) ಪ್ರಾಯಃ ನಮ್ಮ ಮುಖ್ಯಮಂತ್ರಿಗಳು ಜಾತ್ಯಾಧಾರಿತ ಮಠಗಳಿಗೆ ಮತ್ತು ವಿವಿಧ ಮುಂದುಳಿದ ಜಾತಿ, ಪಂಗಡಗಳಿಗೆ ಕೋಟಿಕೋಟಿ ಬಾಚಿ, ಚಾಚಿ ನೀಡುವುದನ್ನು ನೋಡಿ ಕೇಂದ್ರ ಸರಕಾರವು ಇವರಿಗೆ ವಿಜಯನಗರದ ವೈಭವವು ಮರುಕಳಿಸಿದೆ ಇಲ್ಲವೇ ಕೋಲಾರದ ಚಿನ್ನದ ಗಣಿ ಮತ್ತೆ ಬಾಯ್ದೆರೆದಿದೆ ಎಂದು ಭಾವಿಸಿ ಯೋಜನೆಗಳ, ಅಭಿವೃದ್ಧಿಯ ಮಾತ್ರವಲ್ಲ, ಹಣದ ಅಗತ್ಯವೂ ಇಲ್ಲವೆಂದು ತಿಳಿದರೆ ತಪ್ಪಿಲ್ಲ. ಆನೆ ನಡೆದರೆ ನೆಲದಲ್ಲಿದ್ದ ಪುಟ್ಟ ಕ್ರಿಮಿಕೀಟಗಳನ್ನು ಗಮನಿಸದು. ಆದರೆ ಆಗಸದಲ್ಲಿ ಹಾರುವ ಹದ್ದಿನ ದೃಷ್ಟಿಯು ನೆಲದ ಮೇಲೆ ಬಿದ್ದ ಮಾಂಸದ ತುಂಡಿನ ಮೇಲಿರುತ್ತದೆ. ಹಾಗೆಯೇ ಈಗ ಕೇಂದ್ರದ ಹದ್ದಿನ ದೃಷ್ಟಿಯು ಮುಂದಿನ ರಾಜ್ಯ ಚುನಾವಣೆಗಳ ಮೇಲಿದೆಯೆಂಬುದು ಖಚಿತ.

ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಮ್ ಈ ರಾಜ್ಯಗಳಿಗೆ ಕೇಂದ್ರದ ಭಾರೀ ವ್ಯವಧಾನ ದಾನವಿದೆ. (ಅರ್ಥಮಂತ್ರಿಗಳು ಟಾಗೋರರನ್ನು ಉಲ್ಲೇಖಿಸಿದ್ದು ಮತ್ತು ಬೆಂಗಾಲಿ ಬಜೆಟ್ ಸೀರೆಯನ್ನು ಸುತ್ತಿದ್ದು ಕೂಡಾ ಚುನಾವಣಾ ಜಾಣ್ಮೆಯೇ!) ಇವೆಲ್ಲ ರಾಷ್ಟ್ರೀಯ ಹಿತಾಸಕ್ತಿಯ ಬೆಳವಣಿಗೆಗಳು ಎಂದು ತಪ್ಪುತಿಳಿಯಬಾರದು. ನಮ್ಮಲ್ಲಿ ಸದ್ಯ ಚುನಾವಣೆಗಳಿಲ್ಲ; ಆದ್ದರಿಂದ ನಮಗೆ ಈ ಬಾರಿ ಸಿಹಿಯಿಲ್ಲ ಎಂದಷ್ಟೇ ಕನ್ನಡಿಗರು ಭಾವಿಸಿ ತೃಪ್ತಿಪಟ್ಟುಕೊಳ್ಳಬೇಕು. ವೈಯಕ್ತಿಕವಾಗಿ ಯಾರಿಗೆ ಏನು ದಕ್ಕಿತೋ ಗೊತ್ತಿಲ್ಲ. ನಮ್ಮ ಮಾಧ್ಯಮಗಳು ಆಯ್ದ ಸಾಲುಗಳನ್ನು ಪ್ರಕಟಿಸುವುದರಿಂದ ನಮಗೆ ಬಜೆಟನ್ನು ಓದದಿದ್ದರೆ ಅದರ ಹಿಂದು ಮುಂದು ಗೊತ್ತಾಗುವುದಿಲ್ಲ. ಉದಾಹರಣೆಗೆ 75 ವರ್ಷ ಮೀರಿದ ಹಿರಿಯರಿಗೆ (ಇವರನ್ನು ಹಿರಿಯ ನಾಗರಿಕರೆಂದು ಯಾಕೆ ಪ್ರತ್ಯೇಕಿಸಿ ಉಲ್ಲೇಖಿಸಿದ್ದಾರೋ ಗೊತ್ತಿಲ್ಲ!) ಆದಾಯ ತೆರಿಗೆ ದಾಖಲೆ ಸಲ್ಲಿಸುವುದರಿಂದ ವಿನಾಯಿತಿಯಿದೆಯೆಂದು ವರದಿಯಾಯಿತು.

ಈ ಅರ್ಹತೆ ನನಗಿಲ್ಲವಾದರೂ ಇದನ್ನೋದಿ ಮನಸ್ಸು ಹಗುರಾಯಿತು. ಆದರೆ ವಿವರಗಳನ್ನೋದಿದಾಗ ಪಿಂಚಣಿ ಬರುವವರಿಗಷ್ಟೇ ಇದು ಅನ್ವಯವಾಗುತ್ತದೆಂದೂ ಆದರೆ ಬ್ಯಾಂಕ್ ಬಡ್ಡಿ ಇತ್ಯಾದಿ ಇತರ ಆದಾಯಗಳಿಗೆ ಮೂಲದಿಂದ ಮುರಿದುಕೊಳ್ಳುವ ತೆರಿಗೆ ಅನ್ವಯವಾಗುತ್ತದೆಂದೂ ತಿಳಿದೆ. ಹಾಗೆಯೇ ಭವಿಷ್ಯನಿಧಿಯ ಬಡ್ಡಿಗೆ ವಿನಾಯಿತಿಯೆಂದು ಓದಿದೆ; ಆದರೆ 2.5 ಲಕ್ಷಕ್ಕೂ ಹೆಚ್ಚು ವಾರ್ಷಿಕ ಭವಿಷ್ಯನಿಧಿಯ ಮೇಲಣ ಬಡ್ಡಿಗೆ ತೆರಿಗೆಯಿದೆಯೆಂದು ಓದಿ ಈ ನಿವೃತ್ತರ ಕುರಿತು ಒಂದು ಹನಿ ಕಣ್ಣೀರು ಹರಿಸಿದೆ. ಬಜೆಟ್ ಎಂಬುದು ಕುದುರೆಯ ಮುಖದೆದುರು ಕೈಯಳತೆಯಲ್ಲಿ ಕಟ್ಟಿದ ಹುಲ್ಲಿನ ಕಂತೆಯಂತಿದೆ. ನಿಮಗನುಕೂಲವಾಗುತ್ತದೆಂದು ತಿಳಿದರೆ ಆ ಕ್ಷಣ ಕೆಲವು ಷರತ್ತುಗಳು ಅನ್ವಯಿಸಿ ಅವು ಕೈಗೆ ದಕ್ಕದಾಗುತ್ತವೆ. ಬಜೆಟ್ ಇರುವುದು ಸರಕಾರದ ಸೌಲಭ್ಯವನ್ನು ಪಡೆಯುವವರಿಗಷ್ಟೇ ಹೊರತು ದುಡಿಯುವವರಿಗಲ್ಲವೆಂದು ನನಗಂತೂ ಅನ್ನಿಸಿದೆ. ಯಾರೋ ಹೇಳಿದರಲ್ಲ- ‘ಸಾವು ಮತ್ತು ತೆರಿಗೆ ಇವು ಅನಿವಾರ್ಯ’ ಎಂದು!

ಕೊನೆಗೂ ಅರ್ಥಮಂತ್ರಿಗಳು ಉಲ್ಲೇಖಿಸಿದ ಟಾಗೋರ್ ನುಡಿಯಂತೆ ನಂಬಿಕೆಯೆಂಬುದು ಬೆಳಕನ್ನು ಅನುಭವಿಸುತ್ತ ಬೆಳಗಿನ ಮಬ್ಬಿನಲ್ಲೂ ಹಾಡುವ ಹಕ್ಕಿ! ಇದು ಶಕುನದ ಹಕ್ಕಿಯೋ ಗೊತ್ತಿಲ್ಲ. ಕಣ್ಣುಮುಚ್ಚಿ ನಂಬುವ, ನಂಬದಿರುವ ಶಕುನ ಮಾತ್ರ ನಮ್ಮದು!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)