varthabharthi


ವಿಶೇಷ-ವರದಿಗಳು

'ದಿ ಇಕನಾಮಿಸ್ಟ್' ಲೇಖನ

ಜನರು ತುಟಿ ಬಿಚ್ಚುವ ಮೊದಲೇ ಅವರನ್ನು ಸೆನ್ಸರ್ ಮಾಡುತ್ತಿದೆ ಭಾರತ ಸರಕಾರ

ವಾರ್ತಾ ಭಾರತಿ : 8 Feb, 2021

ಸಾಂದರ್ಭಿಕ ಚಿತ್ರ

ಉಗಾಂಡಾದ ಸರ್ವಾಧಿಕಾರಿಯಾಗಿದ್ದ ಇದಿ ಅಮೀನ್ ತಾನು ವಾಕ್‌ಸ್ವಾತಂತ್ರವನ್ನು ಗೌರವಿಸುತ್ತೇನೆ, ಆದರೆ ಮಾತನಾಡಿದ ಬಳಿಕ ಸ್ವಾತಂತ್ರದ ಖಾತರಿ ನೀಡುವುದಿಲ್ಲ ಎಂದೊಮ್ಮೆ ಘೋಷಿಸಿದ್ದ. ಭಾರತ ಸರಕಾರವು ಈ ಪರಿಕಲ್ಪನೆಯನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೊಯ್ದಿರುವಂತಿದೆ. ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಆಗಾಗ್ಗೆ ಹೊಗಳಲ್ಪಡುವ ಅದು ಜನರು ಮಾತನಾಡುವ ಮುನ್ನವೇ ಅವರ ಬಾಯಿ ಮುಚ್ಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದೆ.

ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕಳೆದ ವರ್ಷದ ಅಕ್ಟೋಬರ್‌ನಿಂದ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಜೈಲಿನ ಕಂಬಿಗಳ ಹಿಂದಿರುವ ಕಪ್ಪನ್‌ರ ತಪ್ಪೆಂದರೆ ಅವರು ಉತ್ತರ ಪ್ರದೇಶದ ಹಥರಾಸ್‌ಗೆ ಪ್ರಯಾಣಿಸುತ್ತಿದ್ದಾಗ ಹೆದ್ದಾರಿಯ ಟೋಲ್ ಬೂತ್‌ವೊಂದರಲ್ಲಿ ಪೊಲೀಸರ ಕೈಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಮೇಲ್ಜಾತಿಗೆ ಸೇರಿದ ದುಷ್ಕರ್ಮಿಗಳಿಂದ 19ರ ಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವರದಿಗಾರಿಕೆಗಾಗಿ ಇತರ ವರದಿಗಾರರು ಹಥರಾಸ್‌ನಲ್ಲಿ ಸೇರಿದ್ದರು. ಆದರೆ ಇದೇ ಕಾರ್ಯಕ್ಕೆ ತೆರಳುತ್ತಿದ್ದ ಕಪ್ಪನ್‌ಗೆ ಹಥರಾಸ್ ತಲುಪಲು ಸಾಧ್ಯವಾಗಿರಲಿಲ್ಲ. ಆರೋಪಿಗಳೊಂದಿಗೆ ಶಾಮೀಲಾಗಿರುವ ಉತ್ತರ ಪ್ರದೇಶ ಪೊಲೀಸರು ಸಾಕ್ಷ್ಯಾಧಾರವನ್ನು ಮುಚ್ಚಿಹಾಕಲು ತಮ್ಮ ಪುತ್ರಿಯ ಮೃತದೇಹವನ್ನು ತಮಗೆ ಹಸ್ತಾಂತರಿಸದೆ ತಾವೇ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಯುವತಿಯ ಕುಟುಂಬ ಸದಸ್ಯರು ಬಲವಾಗಿ ಆರೋಪಿಸಿದ್ದರೆ, ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿರುವ ಪೊಲೀಸರು ಜಾತಿ ಸಂಘರ್ಷವನ್ನು ಹುಟ್ಟು ಹಾಕಲು ವ್ಯಾಪಕ ಒಳಸಂಚು ನಡೆದಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ. ಬಂಧಿಸಲ್ಪಟ್ಟಿರುವ ಕಪ್ಪನ್ ಇಂತಹುದೇ ಉದ್ದೇಶವನ್ನು ಹೊಂದಿದ್ದರು ಎಂದು ಅವರು ಆರೋಪಿಸಿದ್ದಾರೆ.

ಕಾಮಿಡಿಯನ್ ಮುನವ್ವರ್ ಫಾರೂಕಿಗೂ ಇಂತಹುದೇ ಅನುಭವವಾಗಿದೆ. ಬಿಜೆಪಿ ರಾಜಕಾರಣಿಯ ಪುತ್ರನೋರ್ವ ನೀಡಿದ್ದ ದೂರಿನ ಮೇರೆಗೆ ಜ.1ರಂದು ಮಧ್ಯಪ್ರದೇಶದ ಇಂದೋರಿನಲ್ಲಿ ಫಾರೂಕಿ ಮತ್ತು ಅವರ ಐವರು ಸಂಗಡಿಗರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸ ವರ್ಷದ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಪ್ರದರ್ಶನ ನೀಡಲಿದ್ದ ಫಾರೂಕಿ ಬಳಸುವ ಅಥವಾ ಬಳಸಬಹುದು ಎಂದು ದೂರುದಾರ ಭಾವಿಸಿದ್ದ ವಿಷಯದ ಬಗ್ಗೆ ದೂರು ಬೆಟ್ಟು ಮಾಡಿತ್ತು. ಅಸಲಿಗೆ ದೂರಿನಲ್ಲಿ ಆರೋಪಿಸಿದ್ದಂತೆ ಹಿಂದು ದೇವತೆಗಳು ಅಥವಾ ಸಚಿವರ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ಫಾರೂಕಿಯವರ ಕಾರ್ಯಕ್ರಮವು ಒಳಗೊಂಡಿತ್ತು ಎನ್ನುವುದಕ್ಕೆ ಸಾಕ್ಷಾಧಾರಗಳೇ ಇರಲಿಲ್ಲ. ಆದರೂ ಪೊಲೀಸರು ಅವರನ್ನು ಬಂಧಿಸಿದ್ದರು. ಫಾರೂಕಿ ಮತ್ತು ಅವರ ಸಂಗಡಿಗರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯಗಳು ಪದೇ ಪದೇ ತಿರಸ್ಕರಿಸಿದ್ದವು. ಓರ್ವ ನ್ಯಾಯಾಧೀಶರಂತೂ ‘ಇಂತಹ ಜನರನ್ನು’ ಬಿಡಲೇಬಾರದು ಎಂದು ಹೇಳಿದ್ದರು. ಕೊನೆಗೂ ಕಳೆದ ಶುಕ್ರವಾರ ಸರ್ವೋಚ್ಚ ನ್ಯಾಯಾಲಯವು ಕೇವಲ ಒಂದೇ ನಿಮಿಷದಲ್ಲಿ ಫಾರೂಕಿಗೆ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ.

ಇವು ಬಿಡಿ ಪ್ರಕರಣಗಳಂತೆ ಕಾಣಬಹುದು, ಆದರೆ ಇವು ವ್ಯಾಪಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತಿವೆ. ಜನ ಪ್ರತಿಭಟನೆಗಳನ್ನು ನಿರೀಕ್ಷಿಸಿ ಸರಕಾರವು ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸುತ್ತಿದೆ. ಕಾಶ್ಮೀರದಲ್ಲಿ ಈ ಅಂಕುಶವನ್ನು, ನಿರ್ದಿಷ್ಟವಾಗಿ ಸ್ಮಾರ್ಟ್‌ಫೋನ್‌ಗಳ ಮೂಲಕ ಅಂತರ್ಜಾಲ ಸೌಲಭ್ಯವನ್ನು ಕಡಿತಗೊಳಿಸುವ ಕ್ರಮವನ್ನು ಮೊದಲು ಪ್ರಯೋಗಿಸಲಾಗಿತ್ತು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಸಿದ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ಜನರನ್ನು ಬಂಧಿಸಲಾಗಿದ್ದು, 213 ದಿನಗಳಷ್ಟು ಸುದೀರ್ಘ ಕಾಲ ಕಾಶ್ಮೀರಿಗಳು ಅಂತರ್ಜಾಲ ಸೌಲಭ್ಯಗಳಿಂದ ವಂಚಿತರಾಗಿದ್ದರು. ಮೇಲ್ನೋಟಕ್ಕೆ ಭದ್ರತಾ ಕಾರಣಗಳಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಮೊಬೈಲ್ ಸಂಪರ್ಕಗಳು ಈಗ ನೇರವಾಗಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿದ್ದು, ತಲೆ ಚಿಟ್ಟು ಹಿಡಿಸುವ 2ಜಿ ಸೇವೆಗೆ ಮಾತ್ರ ಸೀಮಿತವಾಗಿತ್ತು. ಅದೇಕೋ ಸರಕಾರವು ಈಗ ದೊಡ್ಡ ಮನಸ್ಸು ಮಾಡಿ ಪ್ರದೇಶದ ಕೆಲವೆಡೆಗಳಲ್ಲಿ ಮಾತ್ರ 4ಜಿ ಸೇವೆಗೆ ಅನುಮತಿ ನೀಡಿದೆ.

ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ದೇಶಾದ್ಯಂತ ಗುಂಪುಗಳನ್ನು ನಿಯಂತ್ರಿಸಲು ಅಧಿಕಾರಿಗಳು ಈಗ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದನ್ನು ರೂಢಿಸಿಕೊಂಡಿದ್ದಾರೆ. ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆಯನ್ನು ನಡೆಸುತ್ತಿರುವ ರೈತರು ಮತ್ತು ಪೊಲೀಸರು ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಗಂಟೆಗಟ್ಟಲೆ ಕಾಲ ಮೊಬೈಲ್ ನೆಟ್‌ವರ್ಕ್‌ಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. 2020ರಲ್ಲಿ ಸರಕಾರವು ಒಟ್ಟು 8,927 ಗಂಟೆಗಳಷ್ಟು ಕಾಲ ಅಂತರ್ಜಾಲ ನಿರ್ಬಂಧಗಳನ್ನು ಹೇರಿದ್ದು, ಇದರಿಂದಾಗಿ ದೇಶಕ್ಕೆ 2.8 ಶತಕೋಟಿ ಡಾ.ಗಳ ಆರ್ಥಿಕ ನಷ್ಟವುಂಟಾಗಿದೆ ಎಂದು ಇತ್ತೀಚಿನ ವರದಿಯೊಂದು ಅಂದಾಜಿಸಿದೆ.

ಸರಕಾರವು ವ್ಯಕ್ತಿಗಳನ್ನೂ ಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸುತ್ತಿದೆ. ನೂತನ ಉಪಕ್ರಮವೊಂದರಲ್ಲಿ ಅಂತರ್ಜಾಲದಲ್ಲಿ ‘ರಾಷ್ಟ್ರವಿರೋಧಿ ವಿಷಯ’ಗಳನ್ನು ಬೇಟೆಯಾಡಲು ಪೊಲೀಸರೊಂದಿಗೆ ಕೈಜೋಡಿಸುವಂತೆ ‘ಸೈಬರ್ ಸ್ವಯಂಸೇವಕ ’ರನ್ನು ಆಹ್ವಾನಿಸಲಾಗಿದೆ. 2020ನೇ ಸಾಲಿನ ಮೊದಲ ಆರು ತಿಂಗಳುಗಳಲ್ಲಿ ವಿಷಯಗಳನ್ನು ತೆಗೆದುಹಾಕುವಂತೆ ಅಧಿಕೃತ ಬೇಡಿಕೆಗಳಲ್ಲಿ ಶೇ.254ರಷ್ಟು ಏರಿಕೆಯಾಗಿದ್ದು, ಅವುಗಳ ಸಂಖ್ಯೆ 2,700 ದಾಟಿತ್ತು ಎಂದು ಟ್ವಿಟರ್ ವರದಿ ಮಾಡಿದೆ.

ಸರಕಾರದ ಮನವಿಗಳ ಮೇರೆಗೆ ಪ್ರಮುಖ ಪತ್ರಕರ್ತರು ಸೇರಿದಂತೆ ಸುಮಾರು 250 ಖಾತೆಗಳನ್ನು ಟ್ವಿಟರ್ ಸ್ಥಗಿತಗೊಳಿಸಿದ ಬಳಿಕ ಫೆ.1ರಂದು ಟ್ವಿಟರ್ ಬಳಕೆದಾರರು ಪ್ರತಿಭಟನೆಗಳನ್ನು ನಡೆಸಿದ್ದರು. ಟ್ವಿಟರ್ ವಾಕ್‌ಸ್ವಾತಂತ್ರವನ್ನು ಉಲ್ಲೇಖಿಸಿ ಸ್ಥಗಿತಗೊಳಿಸಿದ್ದ ಖಾತೆಗಳನ್ನು ಅವಸರವಸರವಾಗಿ ಕ್ರಿಯಾಶೀಲಗೊಳಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸರಕಾರವು, ಖಾತೆಗಳನ್ನು ಸ್ಥಗಿತಗೊಳಿಸುವಂತೆ ತನ್ನ ಶಾಸನಾತ್ಮಕ ಆದೇಶಗಳ ಉಲ್ಲಂಘನೆಗಾಗಿ ಟ್ವಿಟರ್ ವಿರುದ್ಧ ದಂಡನಾ ಕ್ರಮಗಳನ್ನು ಕೈಗೊಳ್ಳುವ ಬೆದರಿಕೆಯನ್ನೊಡ್ಡಿತ್ತು. ಸರಕಾರವು ಬೆಟ್ಟು ಮಾಡಿದ್ದ ಟ್ವಿಟರ್ ಖಾತೆಗಳು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಹ್ಯಾಷ್‌ಟ್ಯಾಗ್‌ವೊಂದನ್ನು ಶೇರ್ ಮಾಡಿಕೊಂಡಿದ್ದವು, ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಅದರ ಬಳಕೆ ಅನುದ್ದಿಷ್ಟವಾಗಿದ್ದಂತೆ ಕಂಡು ಬಂದಿತ್ತು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹಲವಾರು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಗಣತಂತ್ರ ದಿನದಂದು ದಿಲ್ಲಿಯಲ್ಲಿ ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ರೈತ ಪ್ರತಿಭಟನಾಕಾರನೋರ್ವ ಪೊಲೀಸರು ಹೇಳುವಂತೆ ಅಪಘಾತದಲ್ಲಿ ಮೃತಪಟ್ಟಿದ್ದನೇ ಅಥವಾ ಆತನ ಕುಟುಂಬ ಮತ್ತು ಸ್ವತಂತ್ರ ವೈದ್ಯಕೀಯ ತಜ್ಞರು ನಂಬಿರುವಂತೆ ಪೊಲೀಸರ ಗುಂಡೇಟಿನಿಂದ ಮೃತಪಟ್ಟಿದ್ದನೇ ಎಂಬ ವಿವಾದಕ್ಕೆ ಸಂಬಂಧಿಸಿ ಪ್ರಶ್ನೆಗಳನ್ನೆತ್ತಿದ್ದು ಅವರು ಮಾಡಿದ್ದ ಅಪರಾಧವಾಗಿತ್ತು.

ಜ್ವಲಂತ ವಿಷಯಗಳ ಕುರಿತು ಮುಕ್ತ ಚರ್ಚೆಗೆ ಕಡಿವಾಣ ಹಾಕುವ ಇನ್ನೊಂದು ಕ್ರಮದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶೈಕ್ಷಣಿಕ ಸಮ್ಮೇಳನಗಳ ಮೇಲೆ ಹೊಸ ನಿಯಮಗಳನ್ನು ಹೇರಿದೆ. ಇಂತಹ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುವ ವಿದೇಶಿಯರ ಮೇಲೆ ಕಟ್ಟುನಿಟ್ಟಿನ ನಿಗಾಯಿರಿಸುವ ವ್ಯವಸ್ಥೆಯೊಂದು ಈಗಾಗಲೇ ಅಸ್ತಿತ್ವದಲ್ಲಿದೆಯಾದರೂ ಈಗ ಭಾರತದ ‘ಆಂತರಿಕ ವಿಷಯಗಳಿಗೆ ಸ್ಪಷ್ಟವಾಗಿ ಸಂಬಂಧಿಸಿದ ’ಆನ್‌ಲೈನ್ ಸಮ್ಮೇಳನಗಳು ಅಥವಾ ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಸರಕಾರದ ಅನುದಾನವನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿವಿಗಳು ಸಚಿವಾಲಯದ ಪೂರ್ವಾನುಮತಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಶೀಘ್ರವೇ ವಿದೇಶಗಳಿಗೆ ಪ್ರಯಾಣಿಸುವುದೂ ಪ್ರೊಫೆಸರ್‌ಗಳಿಗೆ ಕಷ್ಟವಾಗಬಹುದು. ಯಾವುದೇ ಅಂತರ್ಜಾಲದಲ್ಲಿ ‘ರಾಷ್ಟ್ರವಿರೋಧಿ ವಿಷಯ’ ವನ್ನು ಪೋಸ್ಟ್ ಮಾಡಿರುವುದು ಕಂಡು ಬಂದರೆ ಅಂತಹವರಿಗೆ ಪಾಸ್‌ಪೋರ್ಟ್ ನೀಡಲಾಗುವುದಿಲ್ಲ ಎಂದು ಉತ್ತರಾಖಂಡ ಪೊಲೀಸರು ಘೋಷಿಸಿದ್ದಾರೆ. ಬಿಹಾರ ಪೊಲೀಸರೂ ಹಿಂದೆ ಬಿದ್ದಿಲ್ಲ, ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರು ಸರಕಾರಿ ಉದ್ಯೋಗ ಅಥವಾ ಗುತ್ತಿಗೆಯನ್ನು ಮರೆತುಬಿಡಬೇಕು ಎಂದು ಅವರು ಫರ್ಮಾನು ಹೊರಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗಳ ಮೂಲಕವೇ ಸ್ವಾತಂತ್ರವನ್ನು ಗೆದ್ದುಕೊಂಡ ದೇಶದಲ್ಲಿ ಇಂತಹ ವಿವಾದಾತ್ಮಕ ಆದೇಶವು ಹೊರಟಿರುವುದು ವಿಪರ್ಯಾಸವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)