varthabharthi


ವಿಶೇಷ-ವರದಿಗಳು

ಕಲ್ಲಡ್ಕ ಈಗ ಅಪಘಾತಗಳ ಕೇಂದ್ರ!

ವಾರ್ತಾ ಭಾರತಿ : 9 Feb, 2021
ಇಬ್ರಾಹೀಂ ಬಾತಿಶ್ ಗೋಳ್ತಮಜಲು

ಮಂಗಳೂರು: ಮೂರು ದಿನಗಳ ಅಂತರದಲ್ಲಿ ಹಲವು ರಸ್ತೆ ಅಪಘಾತಗಳು. 7 ಸಾವು, 8 ಜನರಿಗೆ ಗಾಯ? ಇದು ಕಳೆದ 72 ಗಂಟೆಗಳಲ್ಲಿ ವಿವಿಧೆಡೆ ನಡೆದ ಅಪಘಾತ ಮತ್ತು ಅದರ ಸಂತ್ರಸ್ತರ ವಿವರ. ಇದರಲ್ಲಿ ಕಲ್ಲಡ್ಕದಲ್ಲಿ ನಡೆದ 2 ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಒಂದು ಕಲ್ಲಡ್ಕ ಕೆಳಗಿನ ಪೇಟೆ ಯಲ್ಲಿ ಸಂಭವಿಸಿದ್ದರೆ, ಮತ್ತೊಂದು ಪ್ರಕರಣದಲ್ಲಿ ಕಲ್ಲಡ್ಕದ ಸಮೀಪದಲ್ಲಿರುವ ಪೂರ್ಲಿಪ್ಪಾಡಿಯಲ್ಲಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಂದು ಪ್ರಕರಣದಲ್ಲಿ ತಂಗಿಯ ನಿಶ್ಚಿತಾರ್ಥಕ್ಕೆಂದು ಸಾಮಗ್ರಿ ಗಳನ್ನು ತರಲು ಹೋದಾಗ ಅಪಘಾತವೊಂದರಲ್ಲಿ ಯುವಕ ಮೃತಪಟ್ಟಿದ್ದಾರೆ. ಈ ಘಟನೆ ಕಲ್ಲಡ್ಕವನ್ನೇ ಮೌನವಾಗಿಸಿದೆ.

ಕಲ್ಲಡ್ಕದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಮಂಗಳೂರಿನಿಂದ ಬೆಂಗಳೂರು, ಮೈಸೂರು, ಪುತ್ತೂರು, ಉಪ್ಪಿನಂಗಡಿ, ವಿಟ್ಲ, ಕಾಸರಗೋಡುಗಳಿಗೆ ತೆರಳುವ ವಾಹನಗಳು ಸಂಚರಿಸುತ್ತವೆ. ಕಾರುಗಳು, ದ್ವಿಚಕ್ರ ವಾಹನಗಳು ಮಾತ್ರವಲ್ಲದೆ, ಘನ ವಾಹನಗಳಾದ ಲಾರಿಗಳು, ಟ್ಯಾಂಕರ್‌ಗಳು, ಬಸ್ ಗಳು, ಕಂಟೈನರ್ ಲಾರಿಗಳು, ಟಿಪ್ಪರ್‌ಗಳು ನೂರಾರು ಸಂಖ್ಯೆಯಲ್ಲಿ ಪ್ರತಿದಿನ ಓಡಾಡುತ್ತವೆ. ಕಲ್ಲಡ್ಕ ಪಟ್ಟಣವನ್ನೇ ಗಮನಿಸುವುದಾದರೆ ಮಂಗಳೂರಿನಿಂದ ಬೆಂಗಳೂರು, ಮೈಸೂರಿನ ಕಡೆಗೆ ಸಾಗುವ ವಾಹನಗಳು ನೇರ ರಸ್ತೆಯಲ್ಲಿ ಸಾಗಿದರೆ, ಕಾಸರಗೋಡು, ವಿಟ್ಲ ಮತ್ತು ವಿಟ್ಲದ ದಾರಿಯಲ್ಲಿ ಸಿಗುವ ಹಲವು ಊರುಗಳಿಗೆ ತೆರಳುವ ವಾಹನಗಳು ಕಲ್ಲಡ್ಕದಿಂದ ಬಲಕ್ಕೆ ತಿರುಗಬೇಕಾಗಿದೆ. ಮೊದಲೇ ಬಸ್‌ಗಳು, ಲಾರಿಗಳು, ಟ್ಯಾಂಕರ್‌ಗಳ ದಟ್ಟಣೆಯಿಂದ ರಸ್ತೆಯಲ್ಲಿ ಸಾಗುವುದೇ ದುಸ್ಸಾಹಸವಾದರೆ, ಈ ವಾಹನ ನಿಬಿಡ ರಸ್ತೆಯಲ್ಲಿ ಮಂಗಳೂರಿನ ರಸ್ತೆಯಿಂದ ವಿಟ್ಲ ರಸ್ತೆಗೆ ಹೋಗಲು ಸವಾರರು ಜೀವವನ್ನು ಕೈಯಲ್ಲಿ ಹಿಡಿದು ವಾಹನವನ್ನು ಬಲಕ್ಕೆ ತಿರುಗಿಸಬೇಕಾದ ಅನಿವಾರ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ, ನೂರಾರು ಸಂಖ್ಯೆಯ ಬಸ್, ಲಾರಿಗಳು ಸಂಚರಿಸುವ ಕಲ್ಲಡ್ಕ ಮುಖ್ಯ ಪೇಟೆಯಲ್ಲಿ ಸರ್ಕಲ್ ಇಲ್ಲದಿರುವುದು, ವಾಹನಗಳ ವೇಗಕ್ಕೆ ಕಡಿವಾಣ ಹಾಕದೇ ಇರುವುದು ಅಪಘಾತ ಹೆಚ್ಚಾಗಲು ಪ್ರಮುಖ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಇತ್ತೀಚಿನ ಕೆಲ ದಿನಗಳಿಂದ ಇಲ್ಲಿ ಸಂಭವಿಸಿದ ಅಪಘಾತ ಗಳಿಂದ ನಾಲ್ವರು ಮೃತಪಟ್ಟಿದ್ದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮೆಲ್ಕಾರ್ ಮತ್ತು ಮಾಣಿಯ ಮಧ್ಯದಲ್ಲಿರುವ ಕಲ್ಲಡ್ಕ ಪ್ರಮುಖ ವಾಣಿಜ್ಯ ಚಟುವಟಿಕೆಗಳು ನಡೆಯುವ ನಗರವಾಗಿದೆ. ಒಕ್ಕೆತ್ತೂರು, ವೀರಕಂಭ, ಎರ್ಮೆಮಜಲು, ಗೋಳ್ತಮಜಲು, ಮಾಣಿಮಜಲು, ಬಲ್ಲೆಕೋಡಿ, ಮದಕ, ಸಾಲೆತ್ತೂರು, ಬೋಳಂತೂರು, ಕುದ್ರೆಬೆಟ್ಟು ಮುಂತಾದ ಊರುಗಳ ಜನರು ತಮ್ಮ ದಿನನಿತ್ಯದ ಅವಶ್ಯಕತೆಗಳಿಗಾಗಿ ಕಲ್ಲಡ್ಕವನ್ನೇ ಆಶ್ರಯಿಸಿದ್ದಾರೆ. ಇಷ್ಟೊಂದು ಜನರು ಆಶ್ರಯಿಸಿ ಕೊಂಡಿರುವ ಜನನಿಬಿಡ, ವಾಹನದಟ್ಟಣೆ ಇರುವ ಕಲ್ಲಡ್ಕ ದಲ್ಲಿ ರಸ್ತೆ ಸರಿಯಾಗಿಲ್ಲ ಎಂದು ಈ ಹಿಂದಿನಿಂದಲೇ ಜನರು ದೂರುತ್ತಿದ್ದರು. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ಕಿವಿಗೊಟ್ಟಿಲ್ಲ ಎನ್ನುವ ಆರೋಪಗಳಿವೆ.

ಇಲ್ಲಿ ಜನಸಾಮಾನ್ಯರು ಮಾತ್ರವಲ್ಲ, ನೂರಾರು ಸಂಖ್ಯೆಯ ವಿದ್ಯಾರ್ಥಿಗಳೂ ಇದ್ದಾರೆ. ಹಲವು ಶಿಕ್ಷಣ ಸಂಸ್ಥೆ ಗಳಿದ್ದು, ಮಕ್ಕಳು ಶರವೇಗದಿಂದ ಸಾಗುವ ವಾಹನಗಳ ನಡುವೆ ರಸ್ತೆ ದಾಟಬೇಕಾದ ಅನಿವಾರ್ಯತೆ ಇದೆ. ಆಸ್ಪತ್ರೆ, ಕ್ಲಿನಿಕ್‌ಗಳಿದ್ದು, ರೋಗಿಗಳು, ಹಿರಿಯರು ಕೂಡ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾ.ಹೆದ್ದಾರಿಯಾದ ಕಾರಣ ‘ಹಂಪ್’ಗಳನ್ನು ಅಳವಡಿ ಸಲು ಸಾಧ್ಯವಿಲ್ಲ ಎನ್ನುವ ನಿಯಮವಿದೆ. ಆದರೆ ಕೆ.ಸಿ.ರೋಡ್‌ನಿಂದ ಡಿವೈಡರ್ ಆರಂಭವಾದರೆ ಮತ್ತು ಕಲ್ಲಡ್ಕ ದಲ್ಲಿ ಸರ್ಕಲ್ ಒಂದು ನಿರ್ಮಾಣವಾದರೆ ಈ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಫ್ಲೈ ಓವರ್ ನಿರ್ಮಾಣ ಮತ್ತು ರಸ್ತೆ ವಿಸ್ತರಣೆಯ ಯೋಜನೆ ಇರುವುದರಿಂದ ಮಾಡಲೇಬೇಕಾದ ಈ ಎರಡೂ ಕಾಮಗಾರಿಗಳು ಕಾರ್ಯಗತಗೊಂಡಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಕಲ್ಲಡ್ಕ ಬೇರೆ ಬೇರೆ ಕಾರಣಗಳಿಂದ ಸುದ್ದಿಯಾಗಿರಬಹುದು, ರಾಜಕಾರಣಿಗಳ ಗಮನಸೆಳೆದಿರಬಹುದು. ಆದರೆ ಹೆಚ್ಚುತ್ತಿರುವ ಅಪಘಾತಗಳು, ಸಾವುಗಳು ಜನಪ್ರತಿನಿಧಿಗಳ ಗಮನಸೆಳೆಯಲಿ. ಇನ್ನಾದರೂ ಬಹುಜನರು ಆಶ್ರಯಿಸಿಕೊಂಡಿರುವ, ವಾಹನದಟ್ಟಣೆ ಯಿಂದ ಕೂಡಿರುವ ನಗರದಲ್ಲಿ ಸರಿಯಾದ ರಸ್ತೆ, ವಾಹನಗಳ ವೇಗ ಮಿತಿ ನಿರ್ಧರಿಸುವ ವ್ಯವಸ್ಥೆ, ಡಿವೈಡರ್‌ಗಳು ನಿರ್ಮಾಣವಾಗಲಿ. ಆ ಮೂಲಕ ವಾಹನ ಸವಾರರ ಪ್ರಾಣ ಉಳಿಯಲಿ ಎನ್ನುವುದು ಜನರ ಆಗ್ರಹ.

ಘನ ವಾಹನಗಳ ವೇಗಕ್ಕೆ ಬೀಳಲಿ ಕಡಿವಾಣ: ಕಲ್ಲಡ್ಕ ನಗರದಲ್ಲಿ ಸವಾರರಿಗೆ ದೊಡ್ಡ ತಲೆನೋವಾಗಿರುವುದು ಘನ ವಾಹನಗಳು. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಈ ರಸ್ತೆಯಾಗಿ ಲಾರಿ, ಟ್ಯಾಂಕರ್‌ಗಳು, ಕಂಟೈನರ್ ಗಳು ಸಾಗುತ್ತವೆ. ಆದರೆ ಇದರಲ್ಲಿ ಕೆಲವೊಂದು ವಾಹನಗಳು ನಗರ ಎಂಬುದನ್ನೂ ಪರಿಗಣಿಸದೆ ವೇಗ ಮಿತಿಯನ್ನೂ ಮೀರಿ ಚಲಿಸುತ್ತವೆ ಎನ್ನುವ ಆರೋಪಗಳಿವೆ. ಗುಂಡಿ ಬಿದ್ದ ರಸ್ತೆಯನ್ನು ವಿಸ್ತರಣೆ ಮಾಡಿದ ಬಳಿಕ ಈ ವೇಗ ಮಿತಿ ಮೀರಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಈಗ ಸಂಚಾರ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ದ್ವಿಚಕ್ರ ವಾಹನ ಸವಾರರೂ ವೇಗವನ್ನು ನಿಯಂತ್ರಿಸಬೇಕಾಗಿದೆ. ಸರ್ಕಲ್, ಡಿವೈಡರ್ ಗಳ ನಿರ್ಮಾಣವಾದರೆ ಅಪಘಾತಗಳು ಕಡಿಮೆಯಾಗಬಹುದು. ಆದರೆ ಫ್ಲೈ ಓವರ್ ಮತ್ತು ರಸ್ತೆ ವಿಸ್ತರಣೆ ಯೋಜನೆಗಳು ಇರುವ ಕಾರಣ ಇವುಗಳ ನಿರ್ಮಾಣ ಕಷ್ಟಸಾಧ್ಯವಾಗಿದೆ. ಬ್ಯಾರಿಕೇಡ್ ಗಳನ್ನು ಇರಿಸಿರುವ ಕಾರಣ ವಾಹನಗಳ ವೇಗ ನಿಯಂತ್ರಣದಲ್ಲಿದೆ.

 ರಾಜೇಂದ್ರ ಎನ್. ಹೊಳ್ಳ, ಹೊಟೇಲ್ ಮಾಲಕ, ಕಲ್ಲಡ್ಕ

ವೇಗವಾಗಿ ಚಲಿಸುವ ವಾಹನಗಳಿಂದ ಅಪಘಾತಗಳು ಹೆಚ್ಚುತ್ತಿವೆ. ರಸ್ತೆಯ ಇಕ್ಕೆಲಗಳಲ್ಲಿ ಹಂಪ್ ನಿರ್ಮಾಣವಾದರೆ ಹಲವು ಜೀವಗಳನ್ನು ಉಳಿಸಬಹುದು. ಘನ ವಾಹನಗಳ ನಡುವೆ ಸಣ್ಣ ವಾಹನಗಳು ಸಾಗಲು ಪರದಾಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಾಗಿದೆ.

 ಶೇಖ್ ಮುಹಮ್ಮದ್ ಇರ್ಫಾನಿ,

ಖತೀಬರು, ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ

ಜನಸಂಖ್ಯೆ, ಶಾಲೆ- ಕಾಲೇಜು, ಆಸ್ಪತ್ರೆಗಳು, ವಾಹನಗಳು, ವಾಣಿಜ್ಯ ಕೇಂದ್ರಗಳು ಸೇರಿ ಕಲ್ಲಡ್ಕ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆದರೆ ಈ ಬೆಳವಣಿಗೆಯ ಜೊತೆ ರಸ್ತೆ ಅಭಿವೃದ್ಧಿಯಾಗಿಲ್ಲ. ಅದಿನ್ನೂ ಕಿರಿದಾಗಿ ಹಿಂದಿನ ಹಾಗೆಯೇ ಇದೆ. ಅಪಘಾತಗಳಿಗೆ ಕಡಿವಾಣ ಹಾಕಲು ಸರ್ಕಲ್, ಡಿವೈಡರ್ ಅತ್ಯಗತ್ಯ.

 ಅಬ್ದುಲ್ ಹಮೀದ್ ಗೋಳ್ತಮಜಲು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)