varthabharthi


ಅನುಗಾಲ

ಕತೆಯ ಸಣ್ಣಕತೆ

ವಾರ್ತಾ ಭಾರತಿ : 11 Feb, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ಕತೆಗಳನ್ನು ಪ್ರಚಾರಗೊಳಿಸುವಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳದ್ದು ದೊಡ್ಡ ಕೊಡುಗೆಯಿದೆ. ಆದ್ದರಿಂದ ಅವುಗಳ ಹೊರತಾಗಿ ಕತೆಗಳು ಪ್ರಸಾರಗೊಳ್ಳುವುದು ಸಾಧ್ಯವಿರಲಿಲ್ಲ; ಸಾಧ್ಯವಿಲ್ಲ. ಆದರೆ ಇವು ಕತೆಗಳಿಗೆ ಗಾತ್ರಮಿತಿಯನ್ನು ಹಾಕುವುದರಿಂದ ಕತೆಯನ್ನು ಹೊರಗಿನ ಒಂದು ಶಕ್ತಿ ಮತ್ತು ಪ್ರಭಾವ ನಿಯಂತ್ರಿಸಿದಂತಾಗಿದೆ. ಕತೆಗಾರರ ಸೃಷ್ಟಿಕ್ರಿಯೆ ಈ ಅಡತಡೆಗಳಿಗೆ ಒಗ್ಗುವುದು ಕಲೆಗೆ ಅಪಚಾರವಲ್ಲವೇ ಎಂದೂ ಯೋಚಿಸಬಹುದು. ಇವನ್ನು ಮೀರಿ ಕತೆಗಳು ಹರಿಯಬಲ್ಲವಾದರೆ ಕತೆಗಳಿಗೊಂದು ಸಿದ್ಧಾಂತವನ್ನು ಜೋಡಿಸಬಹುದು. ಇಲ್ಲವಾದರೆ ಆಧುನಿಕತೆಯ ಭರಾಟೆಯಲ್ಲಿ ಕತೆಯೂ ವ್ಯವಸ್ಥೆಯ ಒಂದು ಭಾಗವಾಗಿ ಮುಂದುವರಿದು ನಿಧಾನಕ್ಕೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ಕತೆಗಳು ದಂತಕತೆಗಳಾಗುವ ಈ ಅಪಾಯವನ್ನು ಮತ್ತು ದುರಂತವನ್ನು ಸಾಹಿತ್ಯ ಕ್ಷೇತ್ರ ಮನಗಾಣುವುದು ಒಳ್ಳೆಯದು.


ಕತೆ ಎಂದರೇನು ಎಂಬ ಕುತೂಹಲಕಾರೀ ಪ್ರಶ್ನೆಗೆ ಕರಾರುವಾಕ್ಕು ಉತ್ತರವನ್ನು ಯಾರೂ ಹೇಳಲಾರರು. ಆದರೆ ಕಳೆದ ಸುಮಾರು ಒಂದು ಶತಮಾನದಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಾದಂಬರಿಗಳು ನೆನಪಿನಲ್ಲಿ ಉಳಿಯುವಷ್ಟು ವಿವರವಾಗಿ ಕತೆಗಳು ನೆನಪಿನಲ್ಲಿ ಉಳಿಯುವುದಿಲ್ಲವಾದರೂ ಕತೆಗಳೂ ಓದಿನ ದೃಷ್ಟಿಯಿಂದ ಇನ್ನುಳಿದ ಪ್ರಕಾರಗಳಾದ ಕಾವ್ಯ, ನಾಟಕ, ವಿಮರ್ಶೆಗಳಿಂದ ಹೆಚ್ಚು ಪ್ರಧಾನ ಭೂಮಿಕೆಯನ್ನು ವಹಿಸಿವೆ. ಕಾದಂಬರಿಗಳಿಗಿಂತ ಆನಂತರ ಕನ್ನಡಕ್ಕೆ ಬಂದ ಕತೆಗಳ ಓದುವಿಕೆಯಲ್ಲಿ ಸಹಜವಾಗಿಯೇ ಕಾದಂಬರಿಗಳನ್ನು ಓದುವಷ್ಟು ಸಮಯವನ್ನು ವ್ಯಯಿಸುವ, ಶ್ರಮವಹಿಸುವ ಅಗತ್ಯವಿಲ್ಲ. ನಾಟಕಗಳನ್ನು ಸಾಹಿತ್ಯ ಕ್ಷೇತ್ರದ ಆಸಕ್ತರಷ್ಟೇ ಸಾಹಿತ್ಯವೆಂದು ಓದುತ್ತಾರೆ; ಉಳಿದವರು ದೃಶ್ಯವೈವಿಧ್ಯವಾಗಿ ನೋಡುತ್ತಾರೆ. ಕಾವ್ಯದ ಆಸಕ್ತಿಯೇ ಬೇರೆ.

ವಿಮರ್ಶೆಯೆಂಬುದಂತೂ ಓದಿನ ವಸ್ತುವಿನ ಕುರಿತ ಪಕ್ಕವಾದ್ಯದಂತಿದ್ದರೂ ಒಂದಿಷ್ಟಾದರೂ ತಜ್ಞತೆಯನ್ನು ಬಳಸುವ ಕ್ಷೇತ್ರ. ಸಾವಿರಾರು ಸಂಖ್ಯೆಯ ಕತೆಗಳು ಕನ್ನಡ ಮತ್ತು ಇತರ ಭಾಷೆಗಳಲ್ಲಿ ಬಂದಿದ್ದರೂ ಅವನ್ನು ಕತೆ, ಸಣ್ಣಕತೆ, ಕಿರುಗತೆ, ಚಿಕ್ಕ ಕತೆ, ಹನಿಗತೆ, ಅತಿ ಸಣ್ಣಕತೆ ಎಂದೆಲ್ಲ ಪ್ರತ್ಯೇಕಿಸುವುದು ಒಂದು ಬಗೆಯ ಕೃತಕ ವಿಧಾನವಾದರೂ ಅದು ಒಂದು ವಿಮರ್ಶಾ ಕ್ಷೇತ್ರವಾಗಿದೆ. ಕತೆಗಾರರಿಗಲ್ಲವಾದರೂ ವಿಮರ್ಶಕರಿಗೆ ಅದೊಂದು ಸವಾಲೇ ಆಗಿದೆ. ಇವುಗಳ ಪೈಕಿ ಸಣ್ಣಕತೆಯೆಂಬುದು ಪ್ರಧಾನವಾಗಿ ಬಳಕೆಯಲ್ಲಿದೆ. ದೇಶೀಯವಾಗಿ ಪಂಚತಂತ್ರ, ಕಥಾಸರಿತ್ಸಾಗರ ಮುಂತಾದ ಕೃತಿಗಳು ಕತೆಗಳೇ. ಆಧುನಿಕ ಸಾಹಿತ್ಯವನ್ನು ಗಮನಿಸಿದರೆ ಲಯಬದ್ಧ ಗದ್ಯವು ಪದ್ಯದಂತೆ ಪರಿಣಾಮವನ್ನು ಬೀರುವುದು ಗೊತ್ತಾಗುತ್ತದೆ. ಕತೆಯಂತೆ ಓದಿಸಿಕೊಳ್ಳಬಲ್ಲ ಕಥನ ಕಾವ್ಯವು ಇದಕ್ಕೆ ಒಂದು ನಿದರ್ಶನ.

ಆಧುನಿಕ ಸಾಹಿತ್ಯದಲ್ಲಿ ಕತೆಗಳ ವ್ಯಾಖ್ಯಾನ, ನಿರೂಪಣೆಗಳಿಗೆ ಪಾಶ್ಚಾತ್ಯ ಸಾಹಿತ್ಯವನ್ನು ಅವಲಂಬಿಸುವುದು ಮತ್ತು ಕತೆಗಳ ಬಗ್ಗೆ ಏನೇ ಹೇಳಬೇಕಾದರೂ ಒಂದಷ್ಟು ಪಾಶ್ಚಾತ್ಯ ಬರಹಗಾರರನ್ನು, ಅವರ ಚಿಂತನೆಗಳನ್ನು, ಉಲ್ಲೇಖಿಸುವುದು, ಅನಿವಾರ್ಯವಲ್ಲದಿದ್ದರೂ ರೂಢಿಯಾಗಿದೆ. ಆದರೆ ಕತೆಗಳು ಗಾತ್ರದಲ್ಲಿ, ಪಾತ್ರದಲ್ಲಿ ಈ ಭಿನ್ನ ಪ್ರಕಾರಗಳಲ್ಲಿ ಎಲ್ಲಿ ಹೊಂದುತ್ತವೆಯೆಂಬ ಬಗ್ಗೆ ಅಧ್ಯಯನ ನಡೆದಿಲ್ಲ. ಕತೆಗಳ ಬಗ್ಗೆ ಬರೆಯುವುದು ಸಾಹಿತ್ಯ ವಿಮರ್ಶೆಯ ಸಾಲಿಗೆ ಸೇರುತ್ತದೆ. ಇವು ಕತೆಗಳೇಕೆ ಆಗುತ್ತವೆ/ಆಗಿವೆ, ಕತೆಗಳಲ್ಲಿ ಇವು ಮೇಲೆ ಹೇಳಿದ ಯಾವ ಪ್ರವರ್ಗಕ್ಕೆ ಸೇರುತ್ತವೆ ಎಂಬುದು ಸಾಹಿತ್ಯದಲ್ಲಿನ ಕನಿಷ್ಠ ಅರ್ಹತೆಗೆ ಸಂಬಂಧಿಸಿದ್ದು ಮಾತ್ರವಲ್ಲ, ಸಾಹಿತ್ಯ ಮೀಮಾಂಸೆಗೆ ಸಂಬಂಧಿಸಿದ ವಿಚಾರವೂ ಹೌದು. ಈ ಬಗ್ಗೆ ಕನ್ನಡದಲ್ಲಿ ಸ್ಪಷ್ಟವಾಗಿ ಹೇಳಿದವರು ವಿರಳ. ಕತೆಗಳ, ಸಣ್ಣಕತೆಗಳ ಸಂಗ್ರಹಗಳನ್ನು ಸಂಪಾದಿಸಿದ ಬಹುತೇಕ ಹಿರಿಯ ಕಿರಿಯ ಸಾಹಿತಿಗಳು ತಮ್ಮ ಆಯ್ಕೆಗೆ ನೀಡಿದ ಕಾರಣಗಳು ಪೂರ್ವನಿಗದಿತ ಮತ್ತು ಪೂರ್ವನಿರ್ಧರಿತ ಮಾತ್ರವಲ್ಲ ಕೆಲವೊಮ್ಮೆ ನೆಪಗಳಾಗಿಯೂ ಕಾಣುವುದು ಚೋದ್ಯವಲ್ಲ.

ಶ್ರೀನಿವಾಸ ವೈದ್ಯರ ‘ಗಂಡಭೇರುಂಡ ಹರಟೆ’/ನಗೆಲೇಖನವೆಂದೇ ಪ್ರಕಟವಾಗಿದ್ದರೂ ಅದು ಅತ್ಯುತ್ತಮ ಕತೆಯಾಗಿ ಓದಿಸಿಕೊಳ್ಳುವುದು ಸುಳ್ಳಲ್ಲ. (ಕೆ.ವಿ.ಸುಬ್ಬಣ್ಣನವರು ಈ ವಿಚಾರವನ್ನು ನಮೂದಿಸಿದ್ದಾರೆ.) ಒಳ್ಳೆಯ ಲಲಿತ ಪ್ರಬಂಧವೂ ಕೆಲವೊಮ್ಮೆ ಕತೆಯಂತಹ ಪ್ರಭಾವವನ್ನು ಬೀರುತ್ತದೆ. ಕನ್ನಡದಲ್ಲಿ ಕೆ. ನರಸಿಂಹ ಮೂರ್ತಿಯವರು ಸಂಪಾದಿಸಿ, ಕನ್ನಡ ಸಾಹಿತ್ಯ ಪರಿಷತ್ತು 1950ರ ದಶಕದಲ್ಲಿ ಪ್ರಕಟಿಸಿದ ‘ಅತ್ಯುತ್ತಮ ಸಣ್ಣಕತೆಗಳು’ ಎಂಬ ಕೃತಿಯಲ್ಲಿಯೂ ಈ ಕುರಿತು ಹೆಚ್ಚಿನ ಮಾಹಿತಿಯಿಲ್ಲ. ಆನಂತರ ಗಿರಡ್ಡಿ ಗೋವಿಂದರಾಜ, ಎಸ್.ದಿವಾಕರ, ಬೊಳುವಾರು ಮಹಮದ್ ಕುಂಞಿ, ವೀಣಾ ಶಾಂತೇಶ್ವರ, ಹೀಗೆ ಅನೇಕರು ತಮ್ಮ ತಮ್ಮ ಆಸಕ್ತಿಗೆ ತಕ್ಕಂತೆ ಪ್ರಾತಿನಿಧಿಕ ಕಥಾಸಂಕಲನಗಳನ್ನು ತಂದಿದ್ದಾರೆ. ಧಾರವಾಡದ ಮನೋಹರ ಗ್ರಂಥಮಾಲಾದವರೂ ಇಂತಹ ಸಂಕಲನಗಳನ್ನು ಪ್ರಾಯೋಜಿಸಿದ್ದಾರೆ. ಇವೆಲ್ಲವೂ ಕನ್ನಡದ ಪ್ರಾತಿನಿಧಿಕ ಉತ್ತಮ ಕತೆಗಳನ್ನು ಹೊಂದಿವೆಯೆಂಬ ಕಾರಣಕ್ಕೆ ಮೌಲಿಕವಾಗಿವೆ. ಆದರೆ ಮೂಲತಃ ಕತೆಗಳ ವೈವಿಧ್ಯದಲ್ಲಿ ಇವು ಯಾವ ಕ್ಷೇತ್ರಕ್ಕೆ ಸಲ್ಲುತ್ತವೆ ಎಂಬುದನ್ನು ವಿಷದವಾಗಿ ಹೇಳದೇ ಉಳಿದವು.

ನನ್ನ ಅರಿವಿನಲ್ಲಿ ಕತೆಗಳ ಬಗ್ಗೆ ದೀರ್ಘ ಅಧ್ಯಯನ ಮಾಡಿದವರಲ್ಲಿ ಕುರ್ತಕೋಟಿಯವರೇ ಮೊದಲಿಗರಿರಬಹುದು. 1960ರ ದಶಕದ ಅವರ ಯುಗಧರ್ಮ ಹಾಗೂ ಸಾಹಿತ್ಯದರ್ಶನ ಕೃತಿಯಲ್ಲಿ ಈ ಬಗ್ಗೆ ಒಂದು ಬೃಹತ್ ಅಧ್ಯಾಯವೇ ಇದೆ. ಆದರೆ ಕುರ್ತಕೋಟಿಯವರು ಬಳಸಿದ ಪದ ಸಣ್ಣ ಕತೆ. ಇದು ಈ ವಿಷಯದ ಕುರಿತು ಅವರ ಚರ್ಚೆಗೆ ವ್ಯಾಪ್ತಿಗಿಂತ ಹೆಚ್ಚಾಗಿ ಒಂದು ಮಿತಿಯನ್ನು ಹಾಕಿದೆ. ಅವರೇ ಹೇಳುವಂತೆ ‘‘ಸಣ್ಣಕತೆಯ ತಂತ್ರ, ವ್ಯಾಪ್ತಿ, ಬರವಣಿಗೆಯ ರೀತಿ, ಅದರ ಒಟ್ಟಂದದ ಪರಿಣಾಮ ಹಾಗೂ ಅದು ತೊಡಬಹುದಾದ ಅನೇಕ ರೂಪಗಳು..’’ ಕುರಿತು ಚರ್ಚಿಸಿ ಸಣ್ಣಕತೆಯ ‘‘ಬರವಣಿಗೆ ತಿಳಿದುಕೊಂಡಷ್ಟು ಸುಲಭವಾಗಿಲ್ಲವೆಂದು ಮನವರಿಕೆ ಮಾಡಿಕೊಟ್ಟಿದ್ದರೂ ಇಂದು ಸಣ್ಣ ಕತೆಯ ಬರವಣಿಗೆ ತೀರ ಹಗುರಾಗಿಬಿಟ್ಟಿದೆ’’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದು ಅವರು ಓದಿದ ಮತ್ತು ವಿಮರ್ಶೆಗೆ ಆರಿಸಿಕೊಂಡ ಕತೆಗಳ ಕುರಿತ ಅಭಿಪ್ರಾಯವಾಗಿದೆಯೇ ವಿನಾ ಕತಾಮೀಮಾಂಸೆಯಲ್ಲ. ಮುಂದೆ ಅನೇಕರು ಮತ್ತು ಪ್ರಮುಖವಾಗಿ ಜಿ.ಎಸ್.ಆಮೂರ ಮುಂತಾದ ವಿಮರ್ಶಕರು ಈ ನಿಟ್ಟಿನಲ್ಲಿ ಬರೆದರಾದರೂ ಎಲ್ಲವೂ ಸಣ್ಣಕತೆಗಳ ಕುರಿತಾಯಿತೇ ಹೊರತು ಕತಾಪ್ರಕಾರದ ವೈವಿಧ್ಯದ ಕುರಿತಲ್ಲ. ಆದರೆ ಆಮೂರರು ‘‘ಕಥೆ ಎಂದರೇನು ಎನ್ನುವುದು ಸ್ಪಷ್ಟವಾಗದೇ ಸಣ್ಣ ಕತೆಯ ಸ್ವರೂಪವನ್ನು ತಿಳಿಯಲಾಗುವುದಿಲ್ಲ’’ ಎಂಬ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಹಾಗೆಯೇ ಜಾನಪದ ಕಥೆಗಳನ್ನು ಉಲ್ಲೇಖಿಸುತ್ತ ‘‘ನಮ್ಮ ಜಾನಪದ ಪರಂಪರೆಯಲ್ಲಿ ಕಥೆಯ ಸಾಹಿತ್ಯ ರಾಶಿ ರಾಶಿಯಾಗಿ ಸಿಗುವುದು, ಅಜ್ಜಿ ಹೇಳುವ ಕತೆಗಳನ್ನು ಮೊದಲು ಮಾಡಿ, ವೇದಾಂತ ತತ್ವವನ್ನು ಬೋಧಿಸುವ ಪೌರಾಣಿಕ ಕಥೆಗಳವರೆಗೆ ಕಥಾ ಜಾತಿಯ ವಿವಿಧ ಸ್ವರೂಪಗಳು ಅದರಲ್ಲಿ ನೋಡಲು ದೊರೆಯುವವು.’’ ಎಂದಿದ್ದಾರೆ.

ಹೀಗೆ ಕತೆಗಳ ಒಂದಕ್ಕಿಂತ ಹೆಚ್ಚು ವೈವಿಧ್ಯಗಳನ್ನು ಉಲ್ಲೇಖಿಸುವ ಮೂಲಕ ಕತೆಗಳು ಹೀಗೆಯೇ ಇರುತ್ತವೆ, ಇರಬೇಕು ಎಂಬ ಕಲ್ಪನೆಯ ಮತ್ತು ಕೆಲವೊಮ್ಮೆ ಉಡಾಫೆಯ ಕುದುರೆಗೆ ಲಗಾಮು ಹಾಕಿದ್ದಾರೆ. ಕತಾಮೀಮಾಂಸೆಯ ಚರ್ಚೆಯ ದೃಷ್ಟಿಯಿಂದ ಆಮೂರರು ಕುರ್ತಕೋಟಿಯವರಿಗಿಂತ ಹೆಚ್ಚು ನಿರ್ದುಷ್ಟವಾಗಿದ್ದಾರೆ. ಭಾಮಹ ಮತ್ತು ದಂಡಿಗಳನ್ನು ಉಲ್ಲೇಖಿಸಿ ಕಥಾ ಹಾಗೂ ಆಖ್ಯಾಯಿಕೆಗಳೆಂಬ ಕಥನ ಸಾಹಿತ್ಯದ ಎರಡು ಪ್ರಭೇದಗಳನ್ನು ಗುರುತಿಸಿದ್ದಾರೆ. (‘ವಿಮರ್ಶೆಯ ಪರಿಭಾಷೆ’ ಕೃತಿಯಲ್ಲೂ ಇದನ್ನು ಗುರುತಿಸಿದೆ.) ಇಂತಹ ವಿವರಣೆಗಳ ಅನುಕೂಲವೆಂದರೆ ಇವುಗಳ ಬೆಳಕಿನಲ್ಲೂ ಆಧುನಿಕ ಕತೆಗಳನ್ನು ವರ್ಗೀಕರಿಸಬಹುದು ಮತ್ತು ಲಾಕ್ಷಣೀಕರಿಸಬಹುದು. ಈ ನೆಲೆಯಲ್ಲಿ ಮಾಸ್ತಿಯವರ ಅನೇಕ ಕತೆಗಳನ್ನು ಆಖ್ಯಾಯಿಕೆಗಳಾಗಿ ಗುರುತಿಸಬಹುದು. ನಂದೀಶ್ವರ ದಂಡೆಯವರು ಸಂಪಾದಿಸಿದ ‘ಸಣ್ಣಕತೆ ಎಂದರೇನು’ (2015) ಎಂಬ ಕೃತಿ ಕನ್ನಡದ ಖ್ಯಾತ ವಿಮರ್ಶಕ ಮತ್ತು ಕತೆಗಾರರ ಪ್ರಕಟಿತ ಲೇಖನಗಳನ್ನೊಳಗೊಂಡಿದೆ. ತೀ.ನಂ.ಶ್ರೀ., ಚಿತ್ತಾಲ, ಆಮೂರ, ಗಿರಡ್ಡಿ, ಅಮರೇಶ ನುಗಡೋಣಿ, ಎಸ್.ಪ್ರಸಾದಸ್ವಾಮಿಯವರ ಲೇಖನಗಳೊಂದಿಗೆ ಸಂಪಾದಕರ ಅಭಿಮತವಿದೆ. ಆದರೆ ಇವೆಲ್ಲ ಕತೆಯನ್ನು ಪೂರ್ವಸ್ಥಾಪಿಸಿಕೊಂಡು ಚರ್ಚಿಸಿವೆ; ಕತೆಗಳ ಲಕ್ಷಣ ಮತ್ತು ಅವುಗಳೊಳಗಿನ ವೈವಿಧ್ಯ, ವೈಶಿಷ್ಟ್ಯ, ಭಿನ್ನತೆ ಇವುಗಳ ಕುರಿತು ಚರ್ಚೆಯಿಲ್ಲ. ಆಗಲೇ ಪ್ರಕಟವಾದ ಲೇಖನಗಳನ್ನು ಒಂದೆಡೆ ಸೇರಿಸಿದ್ದರಿಂದ ಹೀಗಾಗಿರಬಹುದು. ಹುತ್ತವ ಬಡಿದರೂ ಹಾವು ಸಾಯಲಿಲ್ಲ ಎಂಬಂತೆ ಕತೆಗಳ ಒಳಗೆ ಇವು ಗಿರಕಿ ಹೊಡೆದಿವೆ; ಹೊರಗಿನಿಂದ ರೂಪ-ಸ್ವರೂಪಗಳ ಭಾವಚಿತ್ರವಿಲ್ಲ. ಟಿ.ಪಿ.ಅಶೋಕ ಅವರ ‘ಅತಿ ಸಣ್ಣಕತೆ’ (ಸ್ವರೂಪ, ಸಿದ್ಧಿ ಮತ್ತು ಸಾಧ್ಯತೆ) ಎಂಬ ಕೃತಿ ಪ್ರಕಟವಾಗಿದೆ (2020). ಇದು ಸಣ್ಣಕತೆಗಳ ಇನ್ನಷ್ಟು ಸಂಕ್ಷಿಪ್ತ ರೂಪವನ್ನು ವಸ್ತುವಾಗಿಟ್ಟುಕೊಂಡರೂ ಒಟ್ಟು ಕತಾ ಪ್ರಕಾರಗಳ ಕುರಿತು ಇತರ ಕೃತಿಗಳಿಗಿಂತ ಹೆಚ್ಚು ಗಮನ ಹರಿಸಿದೆ.

ಗಾತ್ರ ಪಾತ್ರಗಳಲ್ಲಿ ಯಾವುದು ಕತೆ, ಸಣ್ಣಕತೆ, ಅತಿಸಣ್ಣ, ಹನಿಗತೆ ಇತ್ಯಾದಿಯಾಗುವುದಿಲ್ಲ ಎಂದು ಅವರು ಗುರುತಿಸುತ್ತಾರೆ. ಹೀಗಾಗಿ ಅವರು ಉದಾಹರಿಸುವ ಕೃತಿಗಳಲ್ಲಿ ಒಂದೇ ವಾಕ್ಯದ ಕತೆಯೂ ಇದೆ; ನೀಳ್ಗತೆಯೂ ಇದೆ. ನಮ್ಮ ಜಾನಪದ ಮತ್ತು ಪೌರಾಣಿಕ ಸಾಹಿತ್ಯಗಳಿಗಿಂತ ಹೆಚ್ಚಾಗಿ ಅವರು ಝೆನ್ ಮತ್ತು ಜಾಗತಿಕ ಕತಾಸಾಹಿತ್ಯವನ್ನು ಚರ್ಚಿಸಿ ಕಾರಣಗಳನ್ನೂ ನೀಡಿದ್ದಾರೆ. ಹಾಗೆಯೇ ಸಾದತ್‌ಹಸನ್‌ಮಾಂಟೋ ಅವರ ಕತೆಗಳನ್ನು ವಿಶ್ಲೇಷಿಸಿದ್ದಾರೆ. ಕನ್ನಡದ ಕಡೆಗೆ ಹೊರಳಿ, ಶ್ರೀನಿವಾಸ ಹಾವನೂರ, ಎಸ್.ದಿವಾಕರ, ಕೆ.ವಿ.ಸುಬ್ಬಣ್ಣ ಇವರ ದೃಷ್ಟಿಕೋನಗಳನ್ನು ಅಭ್ಯಸಿಸಿದ್ದಾರೆ. ಆದರೆ ಅವರು ಉಲ್ಲೇಖಿಸಿದ ಎಸ್.ದಿವಾಕರ ಅವರ ‘ಕನ್ನಡದ ಅತಿ ಸಣ್ಣಕತೆಗಳು’ ಕೃತಿಯಲ್ಲಿ ಸೇರಿದ ಕೆಲವು ಕತೆಗಳಾದರೂ ಅತಿ ಸಣ್ಣ ಎಂಬ ವ್ಯಾಖ್ಯೆಗೆ ಹೇಗೆ ಹೊಂದುತ್ತವೆ ಎಂಬ ಬಗ್ಗೆ ಇನ್ನಷ್ಟು ವಿವರಣೆ ಮತ್ತು ಸಮರ್ಥನೆ ಬೇಕಿತ್ತೆಂದು ಅನ್ನಿಸಬಹುದು. ಅತಿ ಸಣ್ಣಕತೆ ಎಂಬ ಶೀರ್ಷಿಕೆಯಿದ್ದರೂ ಇಲ್ಲಿ ಕತೆ ಮತ್ತು ಕಾದಂಬರಿಗಳ, ಕತೆ ಮತ್ತು ಕತೆಗಳಲ್ಲಿನ ಒಳಾಂಗಣಗಳ ನಡುವಣ ಅಂತರವನ್ನು ಚರ್ಚಿಸಲಾಗಿದೆ.

 ಮೂಲದಲ್ಲಿ ಕತೆಯು ಶ್ರವ್ಯಕಾವ್ಯದ ಒಂದು ಪ್ರಭೇದ. ಹೇಳುವುದು ಮತ್ತು ಕೇಳುವುದು ಕತೆಯ ಕೆಲಸ. ಕೇಳು ಜನಮೇಜಯ ಎನ್ನುವುದು ಕೂಡಾ ಒಂದು ಕತೆಯನ್ನು ಹೇಳುವ ವಿಧಾನವೇ. ಅದು ಪದ್ಯಪೂರ್ವಕವಾಗಿದೆಯೆಂಬುದಷ್ಟೇ ವ್ಯತ್ಯಾಸ. ಇಂಗ್ಲಿಷಿನ ಸ್ಟೋರಿ, ಟೇಲ್ ಮುಂತಾದ ಪದಗಳಿಗೆ ಸನಿಹದ ಪದವೇ ಕತೆ. ಆದ್ದರಿಂದ ನಾವು ಕತೆಗಳನ್ನು ಪರಿಶೀಲಿಸುವಾಗ ಈ ಮೂಲವಿಗ್ರಹಗಳ ಆಕಾರವನ್ನೇ ಮನಸ್ಸಿನಲ್ಲಿಟ್ಟುಕೊಂಡು ಕನ್ನಡ ಕತೆಗಳನ್ನು ಉತ್ಸವಮೂರ್ತಿಗಳಂತೆ ವೈಭವೀಕರಿಸುತ್ತೇವೆ. ಅದು ವಾಸ್ತವವೇ ಇರಬಹುದು; ಕಲ್ಪನೆಯೇ ಇರಬಹುದು; ಸುಳ್ಳೇ ಇರಬಹುದು. ಆದರೆ ಹೇಳುವ ಜಾಣತನವಿದ್ದರೆ, ಕೇಳಿಸುವ ಗುಣವಿದ್ದರೆ ಅದು ಕತೆಯಾಗುತ್ತದೆ. ಲಿಖಿತರೂಪವನ್ನು ನಾವು ಗುರುತಿಸುತ್ತೇವಾದ್ದರಿಂದ ನಾವು ಶಿಷ್ಟ ವಿವರಣೆಗಳನ್ನು ಬಯಸುತ್ತೇವೆ. ಜಾನಪದದಲ್ಲಿ ಹೇಳುವ ಕಲೆಯಷ್ಟೇ ಮುಖ್ಯವಾಗುತ್ತಿತ್ತು; ಆಧುನಿಕ ಸಾಹಿತ್ಯದ ಬರಹದಲ್ಲಿ ಮೂಡಿಸುವ ಕತೆಗೆ ವಿವರಣೆಗಳು, ತಳಮಳಗಳನ್ನು ಭಾಷೆಯಲ್ಲಿ ಸೃಷ್ಟಿಸುವ ಕಲೆ, ಅಲಂಕಾರಗಳು, ಮತ್ತಿತರ ಕೊಂಬುಗಳು ಪ್ರಧಾನವಾಗುತ್ತವೆ. ಈ ಕಾರಣದಿಂದಾಗಿ ಕತೆ ಅನ್ನುವುದು ಕಾದಂಬರಿಯೊಂದಿಗಿನ ಸಂಬಂಧ ಮತ್ತು ಭಿನ್ನತೆಯಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತದೆ ಎಂದು ಭಾಸವಾಗುತ್ತದೆ.

ಕಾದಂಬರಿಯ ವಿಸ್ತಾರ ಕತೆಗೆ ದಕ್ಕುವುದಿಲ್ಲ ಮತ್ತು ದಕ್ಕಿದರೆ ಅದು ಕತೆಯಾಗಿ ಉಳಿಯುವುದಿಲ್ಲ. ಕತೆ ಒಂದು ನಿಗದಿತ ಕಾಲಮಾನದಲ್ಲೇ ನಡೆಯಬೇಕಾಗಿಲ್ಲ. ಆದರೆ ಅದಕ್ಕೆ ಒಂದು ಗೊತ್ತಾದ ಹರಿವಿರಬೇಕು. ಅದು ಸಾಗರವಾಗಲು ಸಾಧ್ಯವಿಲ್ಲ. ಕತೆಯನ್ನು ಮೀರಿದ ಆದರೆ ಕಾದಂಬರಿಯಾಗದ ಕೃತಿಗಳಿಗೆ ನೀಳ್ಗತೆಯೆಂದು ಹೇಳಿದ್ದು ಇದೇ ಅರ್ಥದಲ್ಲಿರಬಹುದು. ಕೊನೆಗೂ ಕತೆಯೆಂದರೇನು ಎನ್ನುವುದು ಒಂದು ಸಾಪೇಕ್ಷ ಸಿದ್ಧಾಂತದಂತಿದೆ. ‘‘ಸಣ್ಣಕತೆ ಹದಿನೈದರಿಂದ ಐವತ್ತು ನಿಮಿಷಗಳೊಳಗಾಗಿ ಓದಿ ಮುಗಿಸುವಂತಿರಬೇಕು’’ ಎಂದು ಎಚ್.ಜಿ.ವೇಲ್ಸ್ ಹೇಳಿದ್ದನ್ನು ಉಲ್ಲೇಖಿಸಲಾಗಿದೆ. ಎಡ್ಗರ್ ಅಲನ್ ಪೋ ಇದನ್ನು ಕೊಂಚ ವಿಸ್ತರಿಸಿದ್ದಾನೆ. ನಮ್ಮಲ್ಲಿ ಕತೆಗಳಿಗೆ ಒಂದೆರಡು ಸಾವಿರ ಪದಗಳ ಗಾತ್ರ ಮಿತಿಯನ್ನು ಹಾಕಿದ್ದು ಪತ್ರಿಕೆಗಳು. (ಈಗ ಅದು ನೂರರ ಪದಗಳಿಗಿಳಿದಂತಿದೆ.) ಕತೆಗಳನ್ನು ಪ್ರಚಾರಗೊಳಿಸುವಲ್ಲಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳದ್ದು ದೊಡ್ಡ ಕೊಡುಗೆಯಿದೆ. ಆದ್ದರಿಂದ ಅವುಗಳ ಹೊರತಾಗಿ ಕತೆಗಳು ಪ್ರಸಾರಗೊಳ್ಳುವುದು ಸಾಧ್ಯವಿರಲಿಲ್ಲ; ಸಾಧ್ಯವಿಲ್ಲ. ಆದರೆ ಇವು ಕತೆಗಳಿಗೆ ಗಾತ್ರಮಿತಿಯನ್ನು ಹಾಕುವುದರಿಂದ ಕತೆಯನ್ನು ಹೊರಗಿನ ಒಂದು ಶಕ್ತಿ ಮತ್ತು ಪ್ರಭಾವ ನಿಯಂತ್ರಿಸಿದಂತಾಗಿದೆ. ಕತೆಗಾರರ ಸೃಷ್ಟಿಕ್ರಿಯೆ ಈ ಅಡತಡೆಗಳಿಗೆ ಒಗ್ಗುವುದು ಕಲೆಗೆ ಅಪಚಾರವಲ್ಲವೇ ಎಂದೂ ಯೋಚಿಸಬಹುದು. ಇವನ್ನು ಮೀರಿ ಕತೆಗಳು ಹರಿಯಬಲ್ಲವಾದರೆ ಕತೆಗಳಿಗೊಂದು ಸಿದ್ಧಾಂತವನ್ನು ಜೋಡಿಸಬಹುದು. ಇಲ್ಲವಾದರೆ ಆಧುನಿಕತೆಯ ಭರಾಟೆಯಲ್ಲಿ ಕತೆಯೂ ವ್ಯವಸ್ಥೆಯ ಒಂದು ಭಾಗವಾಗಿ ಮುಂದುವರಿದು ನಿಧಾನಕ್ಕೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬಹುದು. ಕತೆಗಳು ದಂತಕತೆಗಳಾಗುವ ಈ ಅಪಾಯವನ್ನು ಮತ್ತು ದುರಂತವನ್ನು ಸಾಹಿತ್ಯ ಕ್ಷೇತ್ರ ಮನಗಾಣುವುದು ಒಳ್ಳೆಯದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)