varthabharthi


ವಿಶೇಷ-ವರದಿಗಳು

ಪ್ರತಿಭಟನಾಕಾರರನ್ನು ಅವಮಾನಿಸುವುದು ಗಡಿಯಲ್ಲಿರುವವರಿಗೂ ನೋವನ್ನುಂಟು ಮಾಡುತ್ತದೆ

​ಪ್ರತಿಯೊಬ್ಬ ಯೋಧನೂ ಸಮವಸ್ತ್ರದಲ್ಲಿರುವ ರೈತನೇ ಆಗಿದ್ದಾನೆ

ವಾರ್ತಾ ಭಾರತಿ : 12 Feb, 2021
ಮೇ.ಜ.ಯಶ್ ಮೋರ್-theprint.in

ಪ್ರತಿಯೊಬ್ಬ ಯೋಧನೂ ಸಮವಸ್ತ್ರದಲ್ಲಿರುವ ರೈತನೇ ಆಗಿರುವುದರಿಂದ ಇಂದು ರೈತರು ಮತ್ತು ಯೋಧರ ಗೌರವ ಅಪಾಯದಲ್ಲಿದೆ. ರೈತರ ಪ್ರತಿಭಟನೆಯು ದಿಲ್ಲಿಗೆ ಸ್ಥಳಾಂತರಗೊಂಡ ಬಳಿಕ ಭಾರೀ ಸಂಖ್ಯೆಯಲ್ಲಿ ನಿವೃತ್ತ ಯೋಧರು ಸಿಂಘು ಗಡಿಯಲ್ಲಿನ ಪ್ರತಿಭಟನಾಕಾರರನ್ನು ಸೇರಿಕೊಂಡಿದ್ದಾರೆ.  ಆದರೆ ತಮ್ಮನ್ನು ಖಲಿಸ್ತಾನಿ ಬೆಂಬಲಿಗರು ಮತ್ತು ದೇಶವಿರೋಧಿಗಳು ಎಂದು ಬಿಂಬಿಸುತ್ತಿರುವುದು ಖಂಡಿತವಾಗಿ ಅವರ ಭಾವನೆಗಳಿಗೆ ನೋವನ್ನುಂಟು ಮಾಡಿರಬೇಕು. ಇದೇ ಮೊದಲ ಬಾರಿಗೆ ಡಿ.16ರಂದು ವಿಜಯ ದಿವಸವನ್ನು ಮಾಜಿ ಯೋಧರು ಸಿಂಘು ಗಡಿಯಲ್ಲಿ ಆಚರಿಸಿದ್ದಾರೆ.
 
ಯುದ್ಧಗಳಲ್ಲಿ ಭಾಗವಹಿಸಿದ್ದ ಹಲವಾರು ಮಾಜಿ ಯೋಧರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ತಮ್ಮ ಪದಕಗಳನ್ನು ರಾಷ್ಟ್ರಪತಿಗಳಿಗೆ ಮರಳಿಸಲು ಸಜ್ಜಾಗಿದ್ದರು. ಭಾರತದಲ್ಲಿ ರೈತರು ಮತ್ತು ಯೋಧರು ಒಂದೇ ನಾಣ್ಯದ ಎರಡು ಮುಖಗಳಾಗಿದ್ದಾರೆ. ತಲೆಮಾರುಗಳಿಂದಲೂ ಪಂಜಾಬ,ಹರ್ಯಾಣ,ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿಯ ಗ್ರಾಮೀಣ ಕುಟುಂಬಗಳು ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸುತ್ತಿವೆ. ಹಾಲಿ ಸೇವೆಯಲ್ಲಿರುವ ಕೆಲವು ಯೋಧರು ರಜೆ ಹಾಕಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ವರದಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಸಮಸ್ಯೆಯು ಗಂಭೀರವಾಗಿದೆ ಮತ್ತು ಸರಕಾರ ಹಾಗೂ ಸಶಸ್ತ್ರ ಪಡೆಗಳು ಅದನ್ನು ಮುಚ್ಚಿಡಲು ಸಾಧ್ಯವಿಲ್ಲ.

ರೈತರನ್ನು ಗುರಿಯಾಗಿಸಿಕೊಂಡು ಮಾಧ್ಯಮಗಳ ಅಪಪ್ರಚಾರ

ಮಾಧ್ಯಮಗಳ ಒಂದು ವರ್ಗವು ರೈತರನ್ನು ಖಲಿಸ್ತಾನಿ ಬೆಂಬಲಿಗರು ಎಂದು ಬಿಂಬಿಸಲು ಅಪಪ್ರಚಾರವನ್ನು ಆರಂಭಿಸಿದೆ. ರೈತ ಸಂಘಟನೆಗಳಲ್ಲಿ ‘ನಗರ ನಕ್ಸಲರು ’ ಮತ್ತು ‘ತುಕ್ಡೆ ತುಕ್ಡೆ ಗ್ಯಾಂಗ್ ’ ಇತ್ಯಾದಿಗಳು ಸೇರಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದ ನಂತರ ಮಾಧ್ಯಮಗಳ ಈ ಕಥನ ಆರಂಭಗೊಂಡಿತ್ತು. ಪಾಕಿಸ್ತಾನದ ಐಎಸ್ಐ ಮತ್ತು ಚೀನಾ ಪ್ರತಿಭಟನೆಗೆ ಆರ್ಥಿಕ ನೆರವನ್ನುಒದಗಿಸುತ್ತಿವೆ ಎಂದು ಹಲವರು ದೂರತೊಡಗಿದ್ದರು. ಪ್ರತಿಭಟನಾ ಸ್ಥಳದಲ್ಲಿ ಧರಣಿ ಕುಳಿತಿದ್ದ ರೈತರ ಸ್ವರೂಪದ ಬಗ್ಗೆ ಪ್ರಶ್ನೆಗಳು ಕೇಳಿಬರತೊಡಗಿದ್ದವು. ಇಂಗ್ಲೀಷ್ ಮಾತನಾಡುವ,ಪಾಶ್ಚಾತ್ಯ ಉಡುಪುಗಳನ್ನು ಧರಿಸಿರುವ,ಪಿಝ್ಝಾ ತಿನ್ನುವವರು ರೈತರಾಗಿರಲು ಸಾಧ್ಯವೇ ಎಂದು ಪ್ರಶ್ನಿಸಲಾಗಿತ್ತು. ವಿಷಾದದ ವಿಷಯವೆಂದರೆ ಆಡಳಿತ ಬಿಜೆಪಿಯ ಹಲವಾರು ಮುಖಂಡರು ಈ ಅಪಪ್ರಚಾರದ ಮುಂಚೂಣಿಯಲ್ಲಿದ್ದರು.
 
ಇದು ರೈತರ ಮರ್ಯಾದೆ ಮತ್ತು ಪ್ರತಿಷ್ಠೆಯ ಮೇಲೆ ನೇರ ಪ್ರಹಾರವನ್ನುಂಟು ಮಾಡಿತ್ತು. ಅನ್ನದಾತನೆಂಬ ಭಾರತೀಯ ರೈತನ ಹೆಗ್ಗಳಿಕೆಗೇ ಏಟು ನೀಡಲಾಗಿತ್ತು. ಪ್ರತಿಭಟನಾ ಸ್ಥಳಗಳಲ್ಲಿಯ ಲಂಗರ್ (ಸಾಮೂಹಿಕ ಭೋಜನ ವ್ಯವಸ್ಥೆ)ಗಳಲ್ಲಿ ಉತ್ತಮ ಆಹಾರದ ಲಭ್ಯತೆ ಸೇರಿದಂತೆ ಎಲ್ಲ ಬಗೆಯ ವಿಷಯಗಳು ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗಳಿಗೆ ಗುರಿಯಾಗಿದ್ದವು. ಆಂದೋಲನಕ್ಕೆ ಮಸಿ ಹಚ್ಚಲು ರೈತ ಸಮುದಾಯವನ್ನು ಅವಮಾನಿಸುವ ನೇರ ಗುರಿಯೊಂದಿಗೆ ಅಪಪ್ರಚಾರ ಅರಂಭಗೊಂಡಿತ್ತು.

ರೈತರ ವಂಶ ಪರಂಪರೆ

ಹರ್ಯಾಣ,ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದ ಜಾಟರು ಹಾಗೂ ಪಂಜಾಬಿನ ಜಾಟ ಸಿಕ್ಖರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರತಿಭಟನಾನಿರತ ರೈತರಲ್ಲಿ ಸಾಮಾನ್ಯವಾಗಿರುವ ಕೆಲವು ಅಂಶಗಳಿವೆ ಮತ್ತು ಅವರ ಐತಿಹಾಸಿಕ ವಂಶ ಪರಂಪರೆಯು ಅವುಗಳ ಭಾಗವಾಗಿದೆ. ಅವರು ಘನತೆ,ಗೌರವ ಮತ್ತು ಪ್ರತಿಷ್ಠೆಗಳಿಗೆ ಅತ್ಯಂತ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಅವರು ತಮ್ಮ ಬಗ್ಗೆ ಅತೀವ ಹೆಮ್ಮೆಯುಳ್ಳ ಜನರಾಗಿದ್ದು,ಕೀಳಾಗಿ ನೋಡಲ್ಪಡಲು ಅಥವಾ ಯಾವುದೇ ರಾಷ್ಟ್ರವಿರೋಧಿ ಒಳಸಂಚಿನ ಭಾಗವಾಗಿದ್ದೇವೆ ಎಂಬ ಆರೋಪಕ್ಕೆ ಗುರಿಯಾಗಲು ಬಯಸುವುದಿಲ್ಲ. ಇದು ಅವರ ಡಿಎನ್ಎಯಲ್ಲಿಯೇ ಇದೆ.

ಈಗ ನಾವು ನೋಡುತ್ತಿರುವ ಕೀಳುಮಟ್ಟದ ಅಪಪ್ರಚಾರವು ರೈತರನ್ನು ತೀವ್ರವಾಗಿ ಮನನೋಯಿಸಲು ಆರಂಭಗೊಂಡಿದೆ. ತಮ್ಮ ಕುಟುಂಬಗಳಿಂದ ದೂರವಾಗಿ ರಸ್ತೆಬದಿಗಳಲ್ಲಿ ಕೊರೆಯುವ ಚಳಿಯಲ್ಲಿ ನಲುಗುತ್ತಿರುವ ರೈತರ ಭಾವನೆಗಳನ್ನು ಲೆಕ್ಕಿಸದೆ ಆರೋಪಗಳ ಮೇಲೆ ಆರೋಪಗಳನ್ನು ಮಾಡಲಾಗುತ್ತಿದೆ.
 

ನಾವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೇವೆಯೇ?

ರೈತರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿಕೊಂಡಿರುವವರು ಅದೇ ಜನರು ದೇಶವನ್ನು ರಕ್ಷಿಸುತ್ತಿದ್ದಾರೆ,ಅವೇ ಕುಟುಂಬಗಳ ಮಕ್ಕಳು ತಲೆಮಾರುಗಳಿಂದಲೂ ಸೇನೆಯಲ್ಲಿ ಹೆಮ್ಮೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎನ್ನುವುದನ್ನು ಮರೆತಿದ್ದಾರೆ. ನಾವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೇವೆಯೇ? ಒಂದು ದೇಶವಾಗಿ ನಾವು ತಲೆಮಾರುಗಳಿಂದಲೂ ರೈತರು ಮತ್ತು ಯೋಧರನ್ನು ಒಳಗೊಂಡಿರುವ ಸಮುದಾಯಗಳ ಭಾವನೆಗಳಿಗೆ ನೋವನ್ನುಂಟು ಮಾಡಬಹುದೇ? ಇಂತಹ ನಕಾರಾತ್ಮಕ ಚಿತ್ರಣವು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವ ಯುವಯೋಧರ ಮನಸಿನ ಮೇಲೆ ಯಾವ ಪರಿಣಾಮವನ್ನುಂಟು ಮಾಡಬಹುದು? ‘ಜೈ ಜವಾನ್ ಜೈ ಕಿಸಾನ್ ’ಎನ್ನುವ ಘೋಷಣೆ ಕೇವಲ ತೋರಿಕೆಯದ್ದಾಗಿರುವಂತೆ ಕಂಡು ಬರುತ್ತಿದೆ.

ಸಾಮಾಜಿಕ ಮಾಧ್ಯಮಗಳು ಇಂದು ನಮ್ಮ ಬದುಕುಗಳಲ್ಲಿ ಹಾಸುಹೊಕ್ಕಾಗಿವೆ ಹೆಚ್ಚಿನ ಯೋಧರು ಸ್ಮಾರ್ಟ್ಫೋನ್ಗಳನ್ನು ಹೊಂದಿರುವುದರಿಂದ ಮತ್ತು ಅವರಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಇರುವುದರಿಂದ ಸಾಮಾಜಿಕ ಮಾಧ್ಯಮಗಳಿಂದ ಸೇನೆಯನ್ನು ಪ್ರತ್ಯೇಕಿಸುವಂತಿಲ್ಲ. ವಾಸ್ತವದಲ್ಲಿ ತಂತ್ರಜ್ಞಾನವು ನಮ್ಮ ಸಮಾಜವನ್ನು ಎಷ್ಟೊಂದು ಸಮವಾಗಿಸಿದೆಯೆಂದರೆ ಒಂದೇ ಕಾಲದಲ್ಲಿ ಒಂದೇ ವಿಷಯ ಗ್ರಾಮೀಣ ಮತ್ತು ನಗರ ಭಾರತದಲ್ಲಿ ಲಭ್ಯವಾಗುತ್ತಿದೆ.

ಟಿಕ್ರಿ,ಗಾಝಿಪುರ ಮತ್ತು ಸಿಂಘು ಗಡಿಗಳಲ್ಲಿ ಮೊಕ್ಕಾಂ ಹೂಡಿರುವ ನಿವೃತ್ತ ಯೋಧರು ಸೇವಾ ನಿಯಮಗಳಿಗೆ ವಿರುದ್ಧವಾಗಿದ್ದರೂ ತಮ್ಮ ಪದಕಗಳನ್ನು ಬಹಿರಂಗವಾಗಿಯೇ ಧರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರ ಮಕ್ಕಳು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಯಾವ ಸಂದೇಶ ರವಾನೆಯಾಗುತ್ತಿದೆ?

ಜೈ ಜವಾನ್ ಜೈ ಕಿಸಾನ್

ಈ ಪ್ರದೇಶಗಳ ಹೆಚ್ಚಿನ ಯೋಧರು ಜಾಟ್,ಸಿಖ್,ರಾಜಪುತಾನಾ ರೈಫಲ್ಸ್,ಗ್ರೆನೇಡಿಯರ್ಸ್,ರಾಜಪೂತ ರೆಜಿಮೆಂಟ್ಸ್,ಆರ್ಮರ್ಡ್ ಮತ್ತು ಆರ್ಟಿಲರಿ ಯುನಿಟ್ಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಅವರ ಬಂಧುಗಳನ್ನು ಪ್ರತ್ಯೇಕತಾವಾದಿ ಗುಂಪುಗಳ ಸದಸ್ಯರು ಮತ್ತು ಶತ್ರುರಾಷ್ಟ್ರಗಳ ಸೂಚನೆಯ ಮೇರೆಗೆ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರು ಎಂದು ಆರೋಪಿಸಿದರೆ ಅದು ಈ ಯೋಧರಿಗೂ ಅವಮಾನವನ್ನುಂಟು ಮಾಡುತ್ತದೆ. ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸ್ಆ್ಯಪ್ ಗುಂಪುಗಳಲ್ಲಿ ರೈತಪರ ಮತ್ತು ರೈತವಿರೋಧಿ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ. ಕೆಲವು ಶುದ್ಧ ಅಪಪ್ರಚಾರವಾಗಿದ್ದರೆ ಕೆಲವು ಅರೆಸತ್ಯವನ್ನಾಧರಿಸಿವೆ.

ಚೀನಾದೊಂದಿಗೆ ಬೃಹತ್ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ಭಾರತವು ಇಂತಹ ಅಪಪ್ರಚಾರಗಳಿಗೆ ಆಸ್ಪದ ನೀಡಬಹುದೇ? ಎತ್ತರದ ಪ್ರದೇಶಗಳಲ್ಲಿ ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿ ಗಡಿಯನ್ನು ಕಾಯುತ್ತಿರುವ ಯುವಯೋಧರ,ವಿಶೇಷವಾಗಿ ಅವರ ಕುಟುಂಬಗಳು ದಿಲ್ಲಿಯ ಗಡಿಗಳಲ್ಲಿ ಎರಡು ತಿಂಗಳಿಗೂ ಅಧಿಕ ಸಮಯದಿಂದ ಸಂಕಷ್ಟಗಳನ್ನು ಅನುಭವಿಸುತ್ತಿರುವಾಗ,ಅವರ ಮನಸ್ಸುಗಳಲ್ಲಿ ಏನಾಗುತ್ತಿರಬಹುದು?
ಎಷ್ಟಾದರೂ ಯೋಧರೂ ಮನುಷ್ಯರೇ ಮತ್ತು ತಮ್ಮ ಗ್ರಾಮದಲ್ಲಿಯ ಬೆಳವಣಿಗೆಗಳು ಅವರಿಗೂ ಕಳವಳವನ್ನು ಮಾಡುತ್ತವೆ. ನಮ್ಮ ಯೋಧರು ಸದಾ ಪ್ರತಿಭಟನೆಯ ಬಗ್ಗೆ ಚರ್ಚಿಸುತ್ತಿದ್ದರೆ ಏನಾಗಬಹುದು? ಪ್ರತಿಭಟನೆಗಳು ರಾಜಕೀಯ ವಿಷಯವಾಗಿರುವುದರಿಂದ ಸೇನೆಯು ಯಾವುದೇ ಸುತ್ತೋಲೆಯನ್ನು ಹೊರಡಿಸದಿರಬಹುದು. ನಮ್ಮ ಯೋಧರಿಗಾಗಿಯಾದರೂ ಅವರ ಕುಟುಂಬಗಳ ವಿರುದ್ಧ ಅಪಪ್ರಚಾರವನ್ನು ನಿಲ್ಲಿಸೋಣ. ನಿಜಕ್ಕೂ ಯಾವುದೇ ಮೂಲಭೂತವಾದಿ ಶಕ್ತಿಗಳು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದರೆ ಅವರನ್ನು ಪ್ರತ್ಯೇಕಿಸಿ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಿ.

ಒಂದು ರೀತಿಯಲ್ಲಿ 1984ರ ಭೂತಗಳು ನಮ್ಮನ್ನು ಮತ್ತೆ ಕಾಡಿಸಲು ಬರುತ್ತಿವೆ. ನಮ್ಮ ರೈತ ಸಮುದಾಯಗಳ ವಿರುದ್ಧ ಆರೋಪಿಸುವುದು ನಿಲ್ಲಬೇಕು. ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ತನ್ನ ಒಂದು ಸಂದರ್ಶನದಲ್ಲಿ ಇದನ್ನು ಖಂಡಿಸಿದ್ದರು ಕೂಡ. ಆದರೆ ಬಿಜೆಪಿಯ ಹಲವರು ನಾಯಕರು ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ಮುಂದುವರಿಸಿದ್ದಾರೆ.

ಪ್ರತಿಭಟನೆ ಸುದೀರ್ಘ ಕಾಲ ಮುಂದುವರಿಯಲು ಬಿಟ್ಟರೆ ಅದು ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯಿಂದ ರಾಷ್ಟ್ರೀಯ ಭದ್ರತೆ ವಿಷಯಗಳವರೆಗೂ ಸಮಸ್ಯೆಗಳಿಗೆ ಕಾರಣವಾಗಬಹುದು. ನಮ್ಮ ರೈತರು ಮತ್ತು ಯೋಧರ ಘನತೆ ಮತ್ತು ಗೌರವವನ್ನು ಎತ್ತಿ ಹಿಡಿಯೋಣ ಮತ್ತು ಬಿಕ್ಕಟ್ಟಿಗೆ ಗೌರವಯುತ ಪರಿಹಾರವೊಂದನ್ನು ಕಂಡುಕೊಳ್ಳೋಣ. ಭಾರತವು ‘ಜೈ ಜವಾನ್ ಜೈ ಕಿಸಾನ್’ ಎಂದು ಒಕ್ಕೊರಳಿನಿಂದ ಹೇಳಲಿ.

ಕೃಪೆ: theprint.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)