varthabharthi


ಸಂಪಾದಕೀಯ

ಕುಟುಂಬ ಸಂಘಟನೆಯ ಮೌಲ್ಯಕ್ಕೆ ಧಕ್ಕೆ ತರುತ್ತಿರುವ ದೌರ್ಜನ್ಯಗಳು

ವಾರ್ತಾ ಭಾರತಿ : 13 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಕುಟುಂಬ ಎನ್ನುವುದು ಸಮಾಜ ಕಂಡುಕೊಂಡ ಅತ್ಯುತ್ತಮವಾದ ಸಂಘಟನೆ. ಪ್ರಕೃತಿಯೂ ಈ ಸಂಘಟನೆಗೆ ಅತ್ಯಂತ ಪೂರಕವಾಗಿರುವುದರಿಂದ, ಕುಟುಂಬ ವ್ಯವಸ್ಥೆಯನ್ನು ನಾವು ಅತ್ಯಂತ ಪ್ರಾಚೀನ ಸಂಘಟನೆಯೆಂದು ಗುರುತಿಸುತ್ತೇವೆ. ಕುಟುಂಬದಲ್ಲಿ ಗಂಡು-ಹೆಣ್ಣು ಎರಡು ಚಕ್ರಗಳು. ಯಾವುದು ಕೆಸರಲ್ಲಿ ಹೂತರೂ ಅದರಿಂದ ಕುಟುಂಬಕ್ಕೇ ತೊಂದರೆ. ಗಂಡು-ಹೆಣ್ಣು ಪರಸ್ಪರ ರಾಜಿಯಲ್ಲಿ ಮುಂದೆ ಸಾಗಿದರೆ ಮಾತ್ರ ಈ ಸಂಘಟನೆ ಉಳಿಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಿ ಎಂಬ ಪ್ರಶ್ನೆ ಬಂದಾಗ, ಅದು ನೇರವಾಗಿ ಮಹಿಳೆಯನ್ನಷ್ಟೇ ಗುರಿಯಾಗಿಸಿಕೊಂಡಿರುತ್ತದೆ. ಆದುದರಿಂದ ಶೇ. 90ರಷ್ಟು ಕುಟುಂಬಗಳು ಉಳಿದಿರುವುದು ಹೆಣ್ಣಿನ ಅಪಾರ ತಾಳ್ಮೆಯಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ರೀತಿಯಲ್ಲಿ ಕುಟುಂಬದೊಳಗೆ ನಡೆಯುವ ದೌರ್ಜನ್ಯಗಳಿಗೆ ನಮ್ಮ ಸಮಾಜ ತಲೆ ತಲಾಂತರಗಳಿಂದ ಮಾನ್ಯತೆಯನ್ನು ನೀಡುತ್ತಾ ಬಂದಿದೆ. ದುರಂತದಲ್ಲಿ ಪರ್ಯಾವಸಾನವಾದಾಗ ಮಾತ್ರ ಕುಟುಂಬದೊಳಗೆ ನಡೆಯುವ ದೌರ್ಜನ್ಯ ಸಮಾಜದ ಮುನ್ನೆಲೆಗೆ ಬರುತ್ತದೆ. ಇಲ್ಲವಾದರೆ ಸದ್ದಿಲ್ಲದೆ ಮುಚ್ಚಿ ಹೋಗುತ್ತದೆ.

ಹೆಣ್ಣನ್ನು ದೇವತೆಗೆ ಹೋಲಿಸುವ ಭಾರತದಲ್ಲಿ, ಕೌಟುಂಬಿಕ ಹಿಂಸಾಚಾರವು ಆಳವಾಗಿ ಬೇರೂರಿದೆ ಹಾಗೂ ವ್ಯಾಪಕವಾಗಿ ಪ್ರಚಲಿತದಲ್ಲಿದೆ ಎಂಬುದು ಆಘಾತಕಾರಿಯಾದರೂ ವಾಸ್ತವವಾಗಿದೆ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಪೈಕಿ ಬಹುತೇಕ (ಶೇ.39.9) 4.05 ಲಕ್ಷ ಪ್ರಕರಣಗಳು ಭಾರತೀಯ ದಂಡಸಂಹಿತೆಯ ಸೆಕ್ಷನ್ 498ಎ ಅಡಿ ದಾಖಲಾಗಿವೆ. ಪತಿ ಹಾಗೂ ಆತನ ಬಂಧುಗಳಿಂದ ಮಹಿಳೆಯ ಮೇಲೆ ಎಸಗುವ ಕ್ರೌರ್ಯದ ಪ್ರಕರಣಗಳನ್ನು ಈ ಸೆಕ್ಷನ್ ನಿರ್ವಹಿಸುತ್ತದೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 498ಎ ಕ್ರಿಮಿನಲ್ ಕಾನೂನಾಗಿದ್ದು ಅದು ವಿವಾಹಿತ ಮಹಿಳೆಯನ್ನು ಆಕೆಯ ಪತಿ ಹಾಗೂ ಆತನ ಬಂಧುಗಳ ಕ್ರೌರ್ಯದಿಂದ ರಕ್ಷಿಸುತ್ತದೆ. ಆದರೂ ಮಹಿಳೆಯರ ಮೇಲೆ ಎಸಗುವ ಅಪರಾಧ ಪ್ರಕರಣಗಳಲ್ಲಿ ಅತಿ ದೊಡ್ಡ ಪಾಲು ಪಡೆದಿರುವುದರ ಹೊರತಾಗಿಯೂ ಕೌಟುಂಬಿಕ ಹಿಂಸೆಯ ಪ್ರಕರಣಗಳು ಹೆಚ್ಚಾಗಿ ವರದಿಯಾಗದೆಯೇ ಹೋಗುತ್ತವೆ.

ಮುಜುಗರ, ಆರ್ಥಿಕ ಅವಲಂಬನೆ, ಪ್ರತೀಕಾರದ ಭೀತಿ, ಅಧಿಕಾರಶಾಹಿಯ ವಿಳಂಬಗತಿಯ ಕಾರ್ಯವಿಧಾನ, ಅಲ್ಲದೆ ಸಂತ್ರಸ್ತೆಯನ್ನೇ ದೂಷಿಸುವಂತಹ ಸಾಮಾಜಿಕ ವ್ಯವಸ್ಥೆ ಇತ್ಯಾದಿ ಅಂಶಗಳು ಇದಕ್ಕೆ ಕಾರಣವಾಗಿವೆ. ಹೆಚ್ಚಿನ ದೌರ್ಜನ್ಯಗಳಲ್ಲಿ ಪುರುಷನ ಜೊತೆಗೆ ಮಹಿಳೆಯರೂ ಕೈಜೋಡಿಸುವುದು ಇನ್ನೊಂದು ವಿಪರ್ಯಾಸವಾಗಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ದೇಶಾದ್ಯಂತ ಎಲ್ಲಾ ರಾಜ್ಯಗಳ ಅಪರಾಧ ಪ್ರಕರಣಗಳ ಅಂಕಿಅಂಶಗಳನ್ನು ಕೋಡೀಕರಿಸುತ್ತದೆ. ಕೌಟುಂಬಿಕ ಹಿಂಸಾಚಾರದ ಪ್ರಕರಣಗಳಿಗೆ ಸಂಬಂಧಿಸಿದ ಭಾರತೀಯ ದಂಡಸಂಹಿತೆಯ 498ಎ ಸೆಕ್ಷನ್‌ನಡಿ ಮಹಿಳೆಯರು ಸಲ್ಲಿಸಿದ ದೂರಿನನ್ವಯ ದಾಖಲಾದ ಪ್ರಕರಣಗಳ ಸಂಖ್ಯೆ ಲಕ್ಷವನ್ನು ದಾಟಿದೆ. ಇನ್ನೊಂದೆಡೆ, ಇತ್ತೀಚೆಗೆ ನಡೆಸಲಾದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್-5) (2019-2020)ಯು ಒಂದು ಸ್ವತಂತ್ರ, ವಿಶ್ವಸನೀಯ ಹಾಗೂ ರಾಷ್ಟ್ರೀಯವಾಗಿ ಪ್ರಾತಿನಿಧಿಕವಾದ ದತ್ತಾಂಶ ಮೂಲವಾಗಿದೆ. ಈ ಸಮೀಕ್ಷೆಯು ಪತಿ ಹಾಗೂ ಆತನ ಬಂಧುಗಳಿಂದ ಹಿಂಸಾಚಾರಕ್ಕೆ ಒಳಗಾದ ಮಹಿಳೆಯರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ.

ಐದನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯು ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವು ಅತ್ಯಂತ ವ್ಯಾಪಕವಾಗಿದೆಯೆಂಬ ಕಟುಸತ್ಯವನ್ನು ತೆರೆದಿಟ್ಟಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕದ ಶೇ.44ರಷ್ಟು ಮಹಿಳೆಯರು ತಾವು ಪತಿಮನೆಯಲ್ಲಿ ಹಿಂಸೆಯನ್ನು ಅನುಭವಿಸಿರುವುದಾಗಿ ಹೇಳಿದ್ದಾರೆ. ಬಿಹಾರ (ಶೇ.40), ಮಣಿಪುರ (ಶೇ.39.6), ತೆಲಂಗಾಣ (36.9 ಶೇ.), ಅಸ್ಸಾಂ (32 ಶೇ.), ಆಂಧ್ರಪ್ರದೇಶ (ಶೇ.30), ಲಕ್ಷದ್ವೀಪ ( 1.3 ಶೇ.), ನಾಗಾಲ್ಯಾಂಡ್ (6.4 ಶೇ.), ಗೋವಾ (8.3 ಶೇ.) ಹಾಗೂ ಹಿಮಾಚಲ ಪ್ರದೇಶದಲ್ಲಿ (8.3 ಶೇ.) ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ವರದಿಯಾಗಿವೆ. ಭಾರತೀಯ ದಂಡಸಂಹಿತೆಯ ಸೆಕ್ಷನ್ 498ಎ ಅಡಿ ದೂರುಗಳನ್ನು ದಾಖಲಿಸಿದ ಮಹಿಳೆಯರ ಪ್ರಮಾಣವನ್ನು ಹೋಲಿಸಿದರೆ 14 ರಾಜ್ಯಗಳಲ್ಲಿ ಕೌಟುಂಬಿಕ ಹಿಂಸಾಚಾರದ ಪ್ರಕರಣಗಳನ್ನು ವ್ಯವಸ್ಥಿತವಾಗಿ ವರದಿ ಮಾಡದೆ ಇರುವುದು ಬೆಳಕಿಗೆ ಬಂದಿದೆ. ಲಕ್ಷದ್ವೀಪ ಹಾಗೂ ನಾಗಾಲ್ಯಾಂಡ್‌ನಲ್ಲಿ ಸೆಕ್ಷನ್ 498 ಎ ಅಡಿ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ. ಬಿಹಾರ, ಕರ್ನಾಟಕ ಹಾಗೂ ಮಣಿಪುರಗಳಲ್ಲಿ ಗರಿಷ್ಠ ಸಂಖ್ಯೆಯ ಕೌಟುಂಬಿಕ ಪ್ರಕರಣಗಳು ವರದಿಯಾಗದೆ ಇರುವುದನ್ನು 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು ವರದಿ ಮಾಡಿದೆ. ಆ ರಾಜ್ಯಗಳಲ್ಲಿ ಶೇ.40 ಅಥವಾ ಅದಕ್ಕಿಂತಲೂ ಅಧಿಕ ಸಂಖ್ಯೆಯ ಕೌಟುಂಬಿಕ ಹಿಂಸಾಚಾರದ ಘಟನೆಗಳು ನಡೆದಿದ್ದರೂ, ಅಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಕೇವಲ 8 ಶೇ. ಮಾತ್ರ.

ಕುತೂಹಲಕರವೆಂದರೆ ಕೌಟುಂಬಿಕ ಹಿಂಸಾಚಾರವು ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಅಕ್ರಮವಾದುದೆಂಬುದನ್ನು ಪುರುಷರು ಹಾಗೂ ಮಹಿಳೆಯರಿಗೆ ಅರಿವಿದೆ. ಆದರೂ ತಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕೌಟುಂಬಿಕ ಹಿಂಸೆಯ ಪ್ರಕರಣಗಳನ್ನು ಕಂಡೂಕಾಣದಂತಿರುತ್ತಾರೆ. ನಮ್ಮ ಸಾಮಾಜಿಕ ಆಚಾರವಿಚಾರಗಳು ಕೌಟುಂಬಿಕ ಹಿಂಸಾಚಾರವನ್ನು ಒಂದು ಸಹಜ ಪ್ರವೃತ್ತಿಯೆಂಬಂತೆ ಕಾಣುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಈ ಬಗ್ಗೆ ಪುರುಷರಲ್ಲಿ ಜಾಗೃತಿಯನ್ನು ಮೂಡಿಸುವ ಕೆಲಸ ವ್ಯಾಪಕವಾಗಿ ನಡೆಯುತ್ತಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಾಥಮಿಕ ಹಂತವನ್ನು ಮಕ್ಕಳು ಮನೆಯಲ್ಲೇ ಕಲಿಯುತ್ತಾರೆ. ಕೌಟುಂಬಿಕ ದೌರ್ಜನ್ಯಗಳು ಮಕ್ಕಳ ಮನಸ್ಸಿನ ಮೇಲೆ ಬೀರುವ ಪರಿಣಾಮ ಅಗಾಧವಾದುದು. ಭವಿಷ್ಯದಲ್ಲಿ ಇದರ ಫಲವನ್ನು ಸಮಾಜ ಉಣ್ಣಬೇಕಾಗುತ್ತದೆ. ಕೇಂದ್ರ ಸರಕಾರವು ಸಿಲೆಬ್ರಿಟಿಗಳನ್ನು ಬಳಸಿಕೊಂಡು ಮಾಧ್ಯಮಗಳಲ್ಲಿ ಸರಣಿ ಪ್ರಚಾರಗಳನ್ನು ಮಾಡುವ ಮೂಲಕ ಶೌಚಾಲಯ ಬಳಕೆಯ ಮಹತ್ವದ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಭಾರೀ ಯಶಸ್ಸನ್ನು ಕಂಡಿತ್ತು.

ಕೋವಿಡ್-19 ಸಾಂಕ್ರಾಮಿಕದ ಆರಂಭದಲ್ಲಿ ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಬಳಕೆಯ ಬಗ್ಗೆಯೂ ಪರಿಣಾಮಕಾರಿ ಪ್ರಚಾರ ನಡೆಸಿತ್ತು. ಇದೀಗ, ಕುಟುಂಬ ಹಿಂಸಾಚಾರದ ದುಷ್ಟ ಪಿಡುಗನ್ನು ತೊಡೆದುಹಾಕಲೂ ಸರಕಾರವು ಇದೇ ರೀತಿಯ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅತಿ ಅಗತ್ಯವಾಗಿದೆ. ಅಷ್ಟೇ ಅಲ್ಲದೆ, ವಿವಾಹಿತ ಪುರುಷರು ತಮ್ಮ ಕುಟುಂಬಿಕರ ಸಮಕ್ಷಮದೊಂದಿಗೆ ತಾವು ತಮ್ಮ ಬಾಳಸಂಗಾತಿಯ ವಿರುದ್ಧ ಕೈಎತ್ತುವುದಿಲ್ಲವೆಂದು ಬಹಿರಂಗವಾಗಿ ಪ್ರತಿಜ್ಞೆಗೈಯುವ ಅಭಿಯಾನಕ್ಕೆ ಸರಕಾರ ಉತ್ತೇಜನ ನೀಡಬೇಕು. ಇಂತಹ ಅಭಿಯಾನಗಳು ಖಂಡಿತವಾಗಿಯೂ ದೇಶದ ಬಹುದೊಡ್ಡ ಸಂಖ್ಯೆಯ ಜನವರ್ಗದ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರುವುದು ಖಂಡಿತ.

ಕೌಟುಂಬಿಕವಾಗಿ ಆದರ್ಶ ಪುರುಷರನ್ನು ಇದರ ಪ್ರಚಾರ ರಾಯಭಾರಿಗಳನ್ನಾಗಿ ಬಳಸಿಕೊಳ್ಳಬೇಕಾಗಿದೆ. ಕೌಟುಂಬಿಕ ಹಿಂಸಾಚಾರದ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಿಸುವಂತಹ ಕ್ರಮಗಳನ್ನು ಸರಕಾರಗಳು ತುರ್ತಾಗಿ ಕೈಗೊಳ್ಳಬೇಕಾಗಿದೆ. ಕೌಟುಂಬಿಕ ಹಿಂಸಾಚಾರವು ಮಾಧ್ಯಮಗಳಲ್ಲಿ, ಶಾಸನಸಭೆಗಳಲ್ಲಿ ಚರ್ಚಾ ವಿಷಯವಾಗಬೇಕಿದೆ. ಹಾಗೆಯೇ ವಿವಿಧ ಧಾರ್ಮಿಕ ಸಂಘಟನೆಗಳೂ ಪುರುಷನ ಹೊಣೆಗಾರಿಕೆಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಯಾಕೆಂದರೆ ‘ಪುರುಷಾಹಂಕಾರ’ಕ್ಕೆ ವಿವಿಧ ಧರ್ಮಗಳ ಕೊಡುಗೆಗಳು ಸಣ್ಣದೇನೂ ಅಲ್ಲ. ಕುಟುಂಬ, ಸಮಾಜದ ನಿಯಂತ್ರಣ ಕಾನೂನಿಗಿಂತ ಧಾರ್ಮಿಕ ವ್ಯಕ್ತಿಗಳ ಕೈಯಲ್ಲಿ ಹೆಚ್ಚಿದೆ. ಆದುದರಿಂದ ಕೌಟುಂಬಿಕವಾಗಿ ಪುರುಷನ ಪುರುಷನ ಹೊಣೆಗಾರಿಕೆಗಳನ್ನು ತಿಳಿಸುವ ಕಡೆಗೆ ಧಾರ್ಮಿಕ ವ್ಯಕ್ತಿಗಳು ಮಹತ್ವವನ್ನು ನೀಡಬೇಕು. ಇದರಿಂದ ಕೌಟುಂಬಿಕ ದೌರ್ಜನ್ಯಗಳನ್ನು ದೊಡ್ಡ ಮಟ್ಟದಲ್ಲಿ ತಡೆಯಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)