varthabharthi


ವಿಶೇಷ-ವರದಿಗಳು

"ಪಕ್ಕದ ಕೊಠಡಿಯಿಂದ ಹನುಮಾನ್‌ ಚಾಲೀಸ ಪಠಣ ಕೇಳುತ್ತಿತ್ತು, ನಾನು ನಮಾಝ್‌ ನಿಂದ ದಿನ ಆರಂಭಿಸುತ್ತಿದ್ದೆ"

ಕ್ರಿಕೆಟಿಗೆ ಸೋಂಕು ಅಂಟಿಸಬೇಡಿ, ಕ್ರೀಡೆಯ ಹಾದಿಯಲ್ಲಿ ಧರ್ಮ ಯಾವಾಗ ಅಡ್ಡ ಬಂತು?

ವಾರ್ತಾ ಭಾರತಿ : 13 Feb, 2021
ಮುಹಮ್ಮದ್‌ ಕೈಫ್‌ (ಕ್ರಿಕೆಟಿಗ)- IndianExpress

ನಿನ್ನೆಯ ದಿನ ನನಗೆ ಕಾನ್ಪುರ್ ಹಾಸ್ಟೆಲ್ ದಿನಗಳ ಹಾಗೂ ನಾವು ಗೆದ್ದಿದ್ದ 1996 ಅಂಡರ್-15 ವಿಶ್ವ ಕಪ್ ಪಂದ್ಯಾವಳಿಯ ಸಹ ಆಟಗಾರ ಭುವನ್ ಚಂದ್ರ ಹರ್ಬೋಲ ಅವರಿಂದ ಕರೆ ಬಂದಿತ್ತು. ಆದರೆ ಈ ಬಾರಿ ಹಿಂದಿನ ಸಂತೋಷದ ದಿನಗಳನ್ನು ನೆನಪಿಸುವ ಇಚ್ಛೆ ಅವರಿಗಿರಲಿಲ್ಲ. "ವಸೀಂ ಜಾಫರ್ ಕಾ ನ್ಯೂಸ್ ಪಢಾ?" ಅದೊಂದು ನೋವುಭರಿತ ಸಂಭಾಷಣೆಯಾಗಿತ್ತು. ಫೋನ್ ಕೆಳಕ್ಕಿರಿಸಿದಾಗ ನನ್ನ ಮನಸ್ಸು ಹಾಸ್ಟೆಲ್ ದಿನಗಳತ್ತ ಹೊರಳಿತು.

ಕಾರಿಡಾರ್ ಸುತ್ತಲಿನ ಸಣ್ಣ ಕೊಠಡಿಗಳಲ್ಲಿ ನಾವು ಐದು ಮಂದಿ ಇರುತ್ತಿದ್ದೆವು. ಹರ್ಬೋಲ ಅವರ ಕೊಠಡಿ ಎದುರಿನ ಭಾಗದಲ್ಲಿ ನನ್ನ ಕೊಠಡಿ ಇತ್ತು. ಒಂದು ಹಾಸಿಗೆ ಹಾಗೂ ಕಪಾಟು ಇಡುವಷ್ಟೇ ಜಾಗ ಅಲ್ಲಿತ್ತು. ಪ್ರತಿ ದಿನ ಬೆಳಿಗ್ಗೆ  ಅವರ ಕೊಠಡಿಯಿಂದ ಅಗರಬತ್ತಿ ಸುವಾಸನೆ ಹೊರಹೊಮ್ಮುತ್ತಿತ್ತು ಹಾಗೂ  ಹನುಮಾನ್ ಚಾಲಿಸಾ ಪಠಿಸುತ್ತಿರುವುದು ಕೇಳಿಸುತ್ತಿತ್ತು. ನನ್ನ ಕೊಠಡಿಯಲ್ಲಿ  ನಾನು ನಮಾಜ್‍ನಿಂದ ದಿನದ ಆರಂಭ ಮಾಡುತ್ತಿದ್ದೆ.  ಕಾನ್ಪುರ್‍ನಲ್ಲಿ ಕಳೆದ ಆ ಚಳಿಗಾಲದ ಮುಂಜಾನೆಯ  ದಿನಗಳನ್ನು ದೇವರನ್ನು ಸ್ಮರಿಸಿ  ಆರಂಭಿಸುತ್ತಿದ್ದೆವು. ಮುಂದೆ ನಾನು ವೃತ್ತಿಪರ ಆಟಗಾರನಾದರೆ ಆತ  ಒಬ್ಬ ಪೊಲೀಸ್ ಅಧಿಕಾರಿಯಾದ ಹಾಗೂ ನಮ್ಮ ಸ್ನೇಹ ಮುಂದುವರಿದಿತ್ತು.

ಕ್ರೀಡೆಯ ಹಾದಿಯಲ್ಲಿ ಧರ್ಮ ಯಾವಾಗ ಅಡ್ಡ ಬಂತು? ನಾನು ಉತ್ತರ ಪ್ರದೇಶದ ತಂಡಗಳು, ದೇಶದ ವಿವಿಧ ವಲಯಗಳು, ಕ್ಲಬ್‍ಗಳು, ಇಂಗ್ಲೆಂಡ್ ಕೌಂಟಿಗಳಿಗೆ ಆಡಿದ್ದೇನೆ ಆದರೆ ಯಾವತ್ತೂ ನನ್ನ ಧರ್ಮವನ್ನು ಯಾರೂ ಬೊಟ್ಟು ಮಾಡಿ ತೋರಿಸಿಲ್ಲ. ನಾನು ರನ್ ಕಡಿಮೆಯಾಗಿರುವ ಬಗ್ಗೆ ಚಿಂತಿಸುತ್ತಿದ್ದೆ, ಉತ್ತಮ ಫಾರ್ಮ್‍ನಲ್ಲಿಲ್ಲದ ಸಹ ಆಟಗಾರರನ್ನು ಹುರಿದುಂಬಿಸುತ್ತಿದ್ದೆ ಹಾಗೂ ಪಂದ್ಯಗಳನ್ನು ಹೇಗೆ ಗೆಲ್ಲುವುದೆಂದು ಯೋಚಿಸುತ್ತಿದ್ದೆ. ಆದರೆ ನನ್ನ ಸಹ ಆಟಗಾರರು ನನ್ನ ಧರ್ಮದ ಬಗ್ಗೆ ಏನು ತಿಳಿದುಕೊಳ್ಳುತ್ತಾರೆಂದು ಅಂದುಕೊಳ್ಳುತ್ತಾ ನಾನು ಯಾವತ್ತೂ ನಿದ್ದೆಗೆ ಜಾರಿಲ್ಲ.

ನಾನು ಅಲಹಾಬಾದ್‍ನವ, ನಮ್ಮ ಮನೆ ಪಂಡಿತರ ಕಾಲನಿಗೆ ಬಹಳ ಹತ್ತಿರವಿತ್ತು. ನಾನಿಲ್ಲೇ ಕ್ರಿಕೆಟ್ ಬಗ್ಗೆ ಪ್ರೀತಿ ಬೆಳೆಸಿದೆ. ನಾವು ಜತೆಯಾಗಿಯೇ ಆಡಿದೆವು. ಸ್ಥಳೀಯ, ಅಕ್ಕಪಕ್ಕದ ಮನೆಗಳ ಎಲ್ಲಾ ಧರ್ಮಗಳಿಗೂ ಸೇರಿದ ಮಕ್ಕಳು ಜತೆಯಾಗಿ ಆಡುತ್ತಿದ್ದರು. ನನ್ನ ವ್ಯಕ್ತಿತ್ವ ಇಂತಹ ವಾತಾವರಣದಲ್ಲಿ  ರೂಪುಗೊಂಡಿತ್ತು. ಈ ಸುಂದರ ಆಟ ಎಲ್ಲಾ ರೀತಿಯ ಎಲ್ಲಾ ಜಾತಿಯ ಎಲ್ಲಾ ಆರ್ಥಿಕ ಹಿನ್ನೆಲೆಯ ಹಾಗೂ ಎಲ್ಲಾ ಧರ್ಮಗಳ ಜನರನ್ನೊಳಗೊಂಡಿದೆ.

 ನಾನು ಟೀಂ ಇಂಡಿಯಾದ ಭಾಗವಾಗಿದ್ದಾಗ ಆಟಗಾರರು  ಉತ್ತರ ಪ್ರದೇಶದವರು, ಬಂಗಾಳದವರು, ಪಂಜಾಬ್‍ನವರು ಅಥವಾ ಹಿಂದು, ಮುಸ್ಲಿಂ ಸಿಖ್, ಕ್ರೈಸ್ತ ಎಂದು ಗುರುತಿಸುತ್ತಿರಲಿಲ್ಲ, ನಾವು  ಭಾರತಕ್ಕಾಗಿ ಆಡುತ್ತಿದ್ದೆವು.

ಜಾಫರ್ ಅವರಿಗೆ  ತಮ್ಮ ಉದ್ದೇಶ ವಿವರಿಸುವುದು ಕಷ್ಟವಾಗಿರಬಹುದು. ನಾವು ಜೀವಿಸುತ್ತಿರುವ ಸಮಯದ ಕುರಿತು ಇದು ಬಹಳಷ್ಟು ಹೇಳುತ್ತಿದೆ-ಇಲ್ಲಿ  ಸೋಶಿಯಲ್ ಮೀಡಿಯಾ ಟ್ರೋಲ್‍ಗಳು ದೇಶ ಒಡೆಯಲು  ಅತ್ಯಂತ ಕೆಟ್ಟ ಕೆಲಸವನ್ನೂ ಮಾಡುತ್ತಾರೆ.

 ಕ್ರಿಕೆಟಿಗರಿಗೆ ನಮ್ಮ  ಗೌರವ ಮತ್ತು ನಿಯತ್ತು ಎಲ್ಲಕ್ಕಿಂತಲೂ ಮಿಗಿಲು. ಯಶಸ್ವೀ ಕ್ರಿಕೆಟ್ ಜೀವನದ ಬಳಿಕ ಕೋಚ್ ಹುದ್ದೆ ವಹಿಸಿದವರಿಗೆ  ಉತ್ತಮ ಆಟಗಾರರನ್ನು ಸೃಷ್ಟಿಸುವ ಹಾಗೂ  ಯಶಸ್ಸು ಮತ್ತು ಏಕತೆ ಮಂತ್ರವಾಗಿರುವ ತಂಡ ಕಟ್ಟುವ ಉದ್ದೇಶವಿರುತ್ತದೆ.

ಪ್ರಾರ್ಥನೆ ಸಂಪೂರ್ಣವಾಗಿ ಒಂದು ವೈಯಕ್ತಿಕ ವಿಚಾರ. ನನ್ನ ಡ್ರೆಸ್ಸಿಂಗ್ ರೂಂನಲ್ಲಿ ನಾನು ಔಪಚಾರಿಕವಾಗಿ ನಮಾಝ್ ಸಲ್ಲಿಸಿದ ನೆನಪಿಲ್ಲ ಆದರೆ ಇಂಗ್ಲೆಂಡ್‍ನ ಮಾಜಿ ಆಟಗಾರ ಗ್ರೇಮ್ ಹಿಕ್ ಅವರು ಯುವ ಆಟಗಾರ ಮೊಯೀನ್ ಆಲಿಗೆ ಪ್ರಾರ್ಥನೆ ಸಲ್ಲಿಸಲು ಅನುವಾಗಲು ತಮ್ಮ ಕಿಟ್  ಬದಿಗೆ ಸರಿಸಿ  ಜಾಗ ಮಾಡಿಕೊಡುತ್ತಿದ್ದರು ಎಂಬ ಬಗ್ಗೆ ಓದಿದ್ದೇನೆ. ನನಗೆ ನನ್ನ ಧರ್ಮ ನನ್ನ ವೈಯಕ್ತಿಕ ವಿಚಾರ ಅದರ ಬಗ್ಗೆ ಡ್ರೆಸ್ಸಿಂಗ್ ರೂಂನಲ್ಲಿ ನಾನು ಚಿಂತಿಸುವುದಿಲ್ಲ, ಆದರೆ ಹಾಗೆ ಯಾರಾದರೂ ಮಾಡಿದರೆ ಹಾಗೂ ಅದನ್ನು ಇತರರ ಮೇಲೆ ಹೇರದೇ ಇದ್ದರೆ ಅದೇನೂ ಅಪರಾಧವಾಗುವುದಿಲ್ಲ.  ಧರ್ಮ ಯಾವತ್ತೂ ಕ್ರೀಡಾಳುಗಳ ನಡುವೆ  ಬರುವುದಿಲ್ಲ. ಅದು ಯಾವತ್ತೂ ಭಾರತೀಯ ಕ್ರಿಕೆಟ್‍ಗೆ ಅಡ್ಡಿಯುಂಟು ಮಾಡಿಲ್ಲ.

ನಾವು ನಮ್ಮನ್ನೇ ಒಡೆಯುವ ಕಾರ್ಯ ನಡೆಸಬಾರದು. ಅದು ಅಪಾಯಕಾರಿ. ನನಗೆ ತಿಳಿದ ಮಟ್ಟಿಗೆ ಕ್ರೀಡೆ, ಪ್ರಮುಖವಾಗಿ ಕ್ರಿಕೆಟ್ ರಂಗದಲ್ಲಿ ಪ್ರತಿಭೆ, ಸಮಾನಾವಕಾಶ, ಆಯ್ಕೆಯ ಸ್ವಾತಂತ್ರ್ಯ ಯಾವತ್ತೂ ಪ್ರಮುಖವಾಗಿದೆ.

ದೇಶದ ವಿವಿಧೆಡೆಗಳಲ್ಲಿ ಬೆಳೆಯುತ್ತಿರುವ ಯುವ ಕ್ರಿಕೆಟಿಗರಿಗೆ ನಾನು ಒಂದು ಮಾತನ್ನು ಹೇಳಬಯಸುತ್ತೇನೆ : ಇಂತಹ ವಿಷಯಗಳಲ್ಲಿ ತಲೆ ಹಾಕಬೇಡಿ. ಪರಿಶುದ್ಧತೆಯಿಂದ ಆಡಿ, ನಿಮಗೆ ಯಶಸ್ಸು ಖಂಡಿತ. ಹಿರಿಯರಾಗಿ ನಮ್ಮ ಮಕ್ಕಳನ್ನು  ನಿರ್ಮಲ ವಾತಾವರಣದಲ್ಲಿ ಈ ಜಗತ್ತಿನಲ್ಲಿ ಹಾಗೂ ನಮ್ಮ ಹೃದಯಗಳಲ್ಲಿ ಇರಿಸಬೇಕು.

ನಾವಿದ್ದ ಸಂದರ್ಭ ಭಾರತೀಯ ತಂಡದ ಘೋಷವಾಕ್ಯ ಇದ್ದಂತೆ 'ನೌ ಆರ್ ನೆವರ್.'

ಕೃಪೆ: indianexpress.com

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)