varthabharthi


ಸಿನಿಮಾ

ಹೆಣ್ಣಿನ ಬದುಕಿನ ನಿತ್ಯದ ಸಂಗತಿಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ 'ದಿ ಗ್ರೇಟ್ ಇಂಡಿಯನ್ ಕಿಚನ್'

ವಾರ್ತಾ ಭಾರತಿ : 14 Feb, 2021
ಸೌಮ್ಯ ಕೋಡೂರು

ಹೆಣ್ಣು ಬದುಕಿನಲ್ಲಿ ನಿತ್ಯ ನಡೆಯುವ ‘ಸಾಮಾನ್ಯ ಸಂಗತಿಗಳು’ ಎನ್ನಿಸಿಬಿಟ್ಟಿರುವ ವಿವರಗಳನ್ನೇ ನಿರ್ದೇಶಕ ಜಿಯೋಬೇಬಿ ಅತ್ಯಂತ ಸೂಕ್ಷ್ಮವಾಗಿ ಜೋಡಿಸಿ ತಾರ್ಕಿಕವಾಗಿ ಹೆಣೆದು ಸಿನೆಮಾರೂಪದಲ್ಲಿ ಕೊಟ್ಟಿದ್ದಾರೆ. ಕುಟುಂಬ ವ್ಯವಸ್ಥೆಯು ಸಮಾಜದ ಮೂಲ ಘಟಕವಾಗಿದ್ದು, ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಹೇಗೆ ಜಟಿಲಗೊಳ್ಳುತ್ತ ಮೌಢ್ಯದ ಕೂಪಕ್ಕೆ ತಳ್ಳುತ್ತವೆ ಎಂಬುದನ್ನು ಚಿತ್ರ ಹಿಡಿದಿಡುವ ಪ್ರಯತ್ನ ಮಾಡಿದೆ.ಲಾಕ್‌ಡೌನೋತ್ತರ ಕಾಲಘಟ್ಟದ ಜನಪ್ರಿಯ ಪರದೆ ಒಟಿಟಿ. ಇತ್ತೀಚೆಗೆ ಈ ಕಿರುಪರದೆಯಲ್ಲಿ ತೆರೆಕಂಡ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಗ್ರೇಟ್ ಇಂಡಿಯಾದ ಹೆಣ್ಣುಗಳ ಬದುಕಿನ ನಿತ್ಯದ ಸಂಗತಿಗಳನ್ನು ನಿರ್ದೇಶಕ ಜಿಯೋ ಬೇಬಿ ಮಲಯಾಳಂ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕಿರುಚಿತ್ರ. ಚಿತ್ರ ನೋಡಿದ ಮೇಲೆ ಇತ್ತೀಚೆಗೆ ನೋಡಿದ್ದ 2 ಜಾಹೀರಾತುಗಳೊಂದಿಗೂ ಮನಸ್ಸು ಕನೆಕ್ಟ್ ಆಯಿತು. Share the load ಎಂಬ ಟ್ಯಾಗ್‌ಲೈನಡಿಯಲ್ಲಿ ಪ್ರಸಾರವಾಗುವ Ariel ಪೌಡರ್ ಕಂಪೆನಿಯ ತಾಯಿ-ಮಗನ ಜಾಹೀರಾತೊಂದು, ಬಟ್ಟೆ ಮತ್ತು ವಿಚಾರ ಎರಡರಿಂದಲೂ ನಿನ್ನೆಯ ಕೊಳೆಯನ್ನು ತೆಗೆಯಬೇಕೆಂಬ ಸಂದೇಶ ಹೊತ್ತ wheel ಸೋಪಿನದ್ದು ಮತ್ತೊಂದು. ಸಿನೆಮಾ ನೋಡುವಾಗ ಪ್ರಸಾರವಾಗುವ ಜಾಹೀರಾತುಗಳಿಗೂ ಸಿನೆಮಾ ಕತೆಗೂ ಸಂಬಂಧವಿರಬೇಕಾದದ್ದು ಅಗತ್ಯವಿಲ್ಲದಿದ್ದರೂ, ಇತ್ತೀಚೆಗೆ ಕೆಲವು ಕಂಪೆನಿಗಳಾದರೂ ಸಾಮಾಜಿಕ ಕಳಕಳಿಯನ್ನೊಳಗೊಂಡ ಪರಿಕಲ್ಪನೆಗಳೊಂದಿಗೆ ತಮ್ಮ ಮಾರುಕಟ್ಟೆಯನ್ನು ಹಿಗ್ಗಿಸಿಕೊಳ್ಳುವ ಪ್ರಯತ್ನವನ್ನು ಶ್ಲಾಘಿಸಲೇಬೇಕು. ಇಲ್ಲಿ ಹೆಸರಿಸಿದ ಜಾಹೀರಾತುಗಳಿಗೂ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಸಿನೆಮಾಕ್ಕೂ ಪರಸ್ಪರ ಸಂಬಂಧಗಳಿವೆ.

ಚಲನಚಿತ್ರದ ಪರಿಭಾಷೆಯಲ್ಲಿ ನಾಯಕನೆಂದೇ ಕರೆಯಬೇಕಾದ ಪಾತ್ರವೊಂದು ಸಮಾಜಶಾಸ್ತ್ರ ಬೋಧಿಸುವವ. ಕುಟುಂಬದ ಬಗ್ಗೆ, ಅದರ ಕರ್ತವ್ಯಗಳ ಬಗ್ಗೆ ಉಪನ್ಯಾಸ ಕೊಡುವ ಈತ ತನ್ನದೇ ಕೌಟುಂಬಿಕ ವಲಯದೊಳಗೆ ಗಂಡು-ಹೆಣ್ಣಿನ ಪಾರಂಪರಿಕ ಯಜಮಾನ-ಅಧೀನ ನೆಲೆಯನ್ನೇ ಬಯಸುವವ. ‘‘ನೂಲಿನಂತೆ ಸೀರೆ, ತಂದೆಯಂತೆ ಮಗ’’ ಎಂದಿಲ್ಲಿ ಎಡಿಟ್ ಮಾಡಿಕೊಳ್ಳಲು ಅವಕಾಶವಿದೆ. ಈತನ ತಾಯಿ ಉನ್ನತ ಶಿಕ್ಷಣವನ್ನು ಪಡೆದದ್ದಾಗಿಯೂ ನಾಯಕನೆಂಬ ಪಾತ್ರದ ತಂದೆಯ ಆದೇಶದ ಮೇರೆಗೆ ತನ್ನ ಬದುಕನ್ನು ಸಂಸಾರಕ್ಕಾಗಿ ‘ತ್ಯಾಗ ಮಾಡಿದ ಸಂಸ್ಕಾರವಂತ ಹೆಣ್ಣು’. ಹೊತ್ತೊತ್ತಿಗೆ ಬೇಯಿಸಿ ಹಾಕುವ ಏಕತಾನತೆಯ ಮನೆಕೆಲಸವನ್ನು ಹಲವು ವರ್ಷಗಳಿಂದ ಅದೇ ಭಯಮಿಶ್ರಿತ ಮುತುವರ್ಜಿಯಿಂದ ಮಾಡಿಕೊಂಡು ಬಂದಿರುವ, ಗಂಡನಿಗೆ ಟೂತ್ ಬ್ರಶ್‌ನಿಂದ ಹಿಡಿದು ಚಪ್ಪಲಿಯವರೆಗೆ ಕುಳಿತಲ್ಲಿಗೇ ಸೇವೆ ಒದಗಿಸುವ ಇತ್ಯಾದಿ ಸನ್ನಿವೇಶಗಳನ್ನು ನಿರ್ದೇಶಕ ಮೇಲಿಂದ ಮೇಲೆ ತೋರಿಸುವ ಮೂಲಕ ಜಗತ್ತಿನ ಹೆಣ್ಣುಗಳ ಅಥವಾ ಹೆಣ್ಣು ಜಗತ್ತಿನ ಬಹುತೇಕ monotonus ಕ್ರಮವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಈ ಏಕತಾನತೆಯ ಬದುಕಿನ ರೀತಿಯಿಂದ ತಾನಂತೂ ಪಾರಾಗಲು ಸಾಧ್ಯವಾಗದ್ದಕ್ಕಾಗಿ, ಸೊಸೆ ಕೆಲಸಕ್ಕೆ ಹೋಗಬೇಕೆಂದು ಬಯಸಿದಾಗ ಅದಕ್ಕೆ ಮಗ-ಗಂಡ ಒಪ್ಪದ ಸಂದರ್ಭದಲ್ಲೂ ಆಕೆಯನ್ನು ಪ್ರೋತ್ಸಾಹಿಸುವುದು, ಆದರೆ ತನ್ನ ಬೆಂಬಲವನ್ನು ಅವರಿಬ್ಬರು ತಿಳಿಯದಂತೆ ಬಚ್ಚಿಡಲು ಹೇಳುವುದು ಇಲ್ಲಿ ಮುಖ್ಯ. ವ್ಯವಸ್ಥೆಯ ಸುಧಾರಣೆಯನ್ನು, ಬದಲಾವಣೆಯನ್ನು ಸಾಧ್ಯವಾಗಿಸುವಲ್ಲಿ ಅತ್ತೆಯ ವಿಫಲತೆ, ಯಥಾಪ್ರಕಾರದ ಬದುಕನ್ನೇ ಬದುಕುವಂತೆ ಇಲ್ಲಿನ ಅತ್ತೆಯ ಪಾತ್ರ ಚಿತ್ರಿತವಾಗಿದೆ. ಹಿಂದೆ ಹೇಳಿದ ಜಾಹೀರಾತೊಂದರಲ್ಲಿ ಅಳಿಯ ಮಗಳಿಗೆ ಮನೆಕೆಲಸಗಳಲ್ಲಿ ಕೈಜೋಡಿಸಬೇಕೆಂದು ಬಯಸುವ ತಾಯಿ, ಕಣ್ಣೆದುರಿಗೇ ಅಸ್ತವ್ಯಸ್ತವಾಗಿರುವ ಮಗನ ಕೋಣೆಯನ್ನು ನೋಡುತ್ತಾ ಮಗನನ್ನು ಮನೆಕೆಲಸದಲ್ಲಿ ಭಾಗಿಯಾಗುವಂತೆ ಮಾಡುವುದು ‘ಮಕ್ಕಳಿಗೆ’ ಮನೆಯೇ ಮೊದಲ ಪಾಠಶಾಲೆಯಾಗಬೇಕು ಎನ್ನುವಂತಿದೆ. ಇದಕ್ಕೆ ಪೂರಕವೆಂಬಂತೆ ಈ ಚಿತ್ರದ ಕೊನೆಯಲ್ಲಿ ಗಂಡನ ಮನೆ ಬಿಟ್ಟು ಬಂದ ನಾಯಕಿ ಆಗ ತಾನೇ ಬರುವ ಆಕೆಯ ತಮ್ಮ ತನ್ನ ತಾಯಿಯ ಬಳಿ ಕುಡಿಯುವ ನೀರು ಕೇಳಿದಾಗ, ತಾಯಿ ತನ್ನ ಮತ್ತೊಬ್ಬ ಮಗಳಿಗೆ ಆ ಕೆಲಸವನ್ನು ಹೇಳಿದಾಗ ನಾಯಕಿ ‘‘ನೀನೇ ಯಾಕೆ ನೀರು ತೆಗೆದುಕೊಳ್ಳಬಾರದು’’ ಎಂದು ಕಿರುಚಿಕೊಳ್ಳುವಾಗಿನ ಆಕ್ರೋಶ ಗಂಡನ ಮನೆಯಲ್ಲಿ ಆಕೆ ಅನುಭವಿಸಿದ ಹತಾಶೆಯಂತೆ ಕೇಳಿಸುತ್ತದೆ.

ಗಮನಿಸಲೇಬೇಕಾದ ಮತ್ತೊಂದು ಸಂಗತಿಯೆಂದರೆ ಹೆಣ್ಣಿಗೆ ಹೆಣ್ಣೇ ಶತ್ರುವೆಂದು ನಂಬಿಸಲಾಗಿರುವ ಬಹುತೇಕ ಸಿನೆಮಾಗಳ ಸಂವಿಧಾನವನ್ನು ಇಲ್ಲಿಯ ಅತ್ತೆಯ ಪಾತ್ರ ಮೀರುವಂತೆ ಹೇಳಹೊರಟಿರುವುದು. ಹಿಂದೆ ಹೇಳಿದ ಸೋಪ್ ಕಂಪೆನಿಯ ಜಾಹೀರಾತಿನ ಅತ್ತೆ ಸೊಸೆಗೆ ‘‘ಓದಿಕೊಂಡ ಮಾತ್ರಕ್ಕೆ ಗಂಡನಿಗೇ ಬುದ್ದಿ ಕಲಿಸ್ತೀಯಾ’’ ಅನ್ನುವಲ್ಲಿನ ಅತ್ತೆಯ ಮಾಡೆಲ್ ಇಲ್ಲಿಲ್ಲ. ಬಟ್ಟೆ ಮತ್ತು ವಿಚಾರ ಎರಡರಿಂದಲೂ ನಿನ್ನೆಯ ಕೊಳೆಯನ್ನು ತೆಗೆಯಬೇಕೆಂಬ ಆಲೋಚನೆ ಅತ್ತೆಯಲ್ಲಿಯೂ ಇದೆ. ಹಾಗಾಗಿಯೇ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನಕ್ಕೆ, ಮಿಕ್ಸಿಯಲ್ಲಿ ರುಬ್ಬಿದ ಚಟ್ನಿಗೆ, ವಾಷಿಂಗ್ ಮೆಷಿನ್‌ನಲ್ಲಿ ಒಗೆಯುವ ಬಟ್ಟೆಗಳಿಗೆ ಒಗ್ಗಿಸಿಕೊಳ್ಳುವಂತೆ ಗಂಡನಿಗೆ ಹೇಳುವ ಪ್ರಯತ್ನವನ್ನಾದರೂ ಮಾಡುತ್ತಾಳೆ. ಚಿತ್ರದ ಕೇಂದ್ರ ಪಾತ್ರ ನಾಯಕಿ. ಆಕೆಯ ಮುಟ್ಟಿನ ದಿನಗಳಲ್ಲಿ ಆಕೆ ಎದುರಿಸುವ ಅವಮಾನಗಳು ಇಡೀ ಚಿತ್ರದ ಕೇಂದ್ರವಸ್ತು. ಮುಟ್ಟಾಗಿ ಹೊರಗೆ ಕೂರಬೇಕಾದ ಪರಿಸ್ಥಿತಿಯಲ್ಲಿ ಮನೆಕೆಲಸಕ್ಕಾಗಿ ಬರುವ ಉಷಾ ಹಾಗೂ ನಾಯಕಿಯ ನಡುವೆ ನಡೆಯುವ ಸಂಭಾಷಣೆಗಳನ್ನು ಹೆಣ್ಣಿನ ಆರ್ಥಿಕ ಅಗತ್ಯಗಳ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಬೇಕು. ಉಷಾ ಹೇಳುವ-ತಿಂಗಳಿನಲ್ಲಿ ಮೂರು-ನಾಲ್ಕು ದಿನ ತಾನು ಹೊರಗೆ ಕೂತರೆ ತನ್ನ ಮನೆಯ ಕೆಲಸದ ಜೊತೆಗೆ ಸಂಸಾರ ನಡೆಯುವುದಾದರೂ ಹೇಗೆ? ಮನೆಕೆಲಸಗಳಿಗೆ ಹೋಗುವ ಹೆಣ್ಣು ತಿಂಗಳಿಗೆ 3-4 ದಿನ ರಜೆ ಹಾಕಿದರೆ ಆಗುವ ನಷ್ಟವನ್ನು ಕಟ್ಟಿಕೊಡುವವರು ಯಾರು? ಹಾಗಾಗಿ ಆಕೆಯ ತರ್ಕ ಇಷ್ಟೇ ಮುಟ್ಟಾದದ್ದನ್ನು ಹೇಳಿದರೆ ತಾನೇ ಗೊತ್ತಾಗುವುದು, ಹೇಳದಿದ್ದರಾಯಿತು ಅಷ್ಟೇ ಎನ್ನುವುದು. ಆರ್ಥಿಕವಾಗಿ ಸ್ಥಿತಿವಂತರಾದವರಷ್ಟೇ ಈ ಸೋಗಿನ ಬದುಕು ನಡೆಸಲು ಸಾಧ್ಯ.

ಹಾಗೆಂದ ಮಾತ್ರಕ್ಕೆ ಮುಟ್ಟಿನ ಕುರಿತ ಮೂಢ ಆಚರಣೆಗಳು ಬೇರೆಯವರಲ್ಲಿ ಇಲ್ಲ ಎಂದಲ್ಲ. ಅದು ಬೇರೊಂದು ಬಗೆಯ ಚರ್ಚೆ. ಡ್ಯಾನ್ಸ್ ಕಲಿಕೆಯಲ್ಲಿ ಅಪಾರ ಆಸಕ್ತಿಯಿದ್ದ ನಾಯಕಿಗೆ ಡ್ಯಾನ್ಸ್ ಟೀಚರ್ ಆಗುವ, ಆ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸುವ ಹಂಬಲವಿದ್ದವಳಿಗೆ ಮದುವೆ ಅಡ್ಡಿಯಾಗಬಹುದೆಂಬ ಕಲ್ಪನೆಯೇ ಆರಂಭದಲ್ಲಿ ಇರುವುದಿಲ್ಲ. ಮದುವೆಯಾಗಿ ಬಂದ ಮರುದಿನದಿಂದಲೇ ‘ತನ್ನ ಮನೆ’ಯ ಕೆಲಸಕಾರ್ಯಗಳಲ್ಲಿ ಸಂತೋಷದಿಂದಲೇ ತೊಡಗಿಕೊಂಡರೂ, ಡೈನಿಂಗ್ ಟೇಬಲ್ ಕ್ಲೀನ್ ಮಾಡುವಾಗ, ಪಾತ್ರೆ ತೊಳೆಯುವ ಸಿಂಕಲ್ಲಿ ನೀರು ಕಟ್ಟಿಕೊಂಡು ಅದರೊಳಗೆ ಕೈ ಹಾಕಬೇಕಾದಾಗ, ಸಿಂಕ್ ನೀರು ಹೋಗುವ ಪೈಪು ಸೋರುವಾಗ, ಕಸದ ಬುಟ್ಟಿಯನ್ನು ಚೆಲ್ಲುವಾಗ, ಮೀನುಸಾರಿನ ಪಾತ್ರೆ ತೊಳೆದ ಕೈ ವಾಸನೆ ಹಾಗೆ ಉಳಿದಾಗ, ಪ್ರಣಯವೇ ಇಲ್ಲದ ಮಿಲನವಾದಾಗ ಆಗುವ ‘ಅ-ಸಹ್ಯ’ಗಳು ಆದಾಗ ತಾನೇ ಮದುವೆಯಾಗಿ ಬಂದ ಬಹುತೇಕ ಹೆಣ್ಣುಗಳು ಅನುಭವಿಸಿದ, ಕಡ್ಡಾಯವಾಗಿ ಅನುಭವಿಸಲೇಬೇಕಾದ ನಿಯಮಗಳು. ಈ ಅಸಹ್ಯದ ಸಂಗತಿಗಳು ಕೆಲವೇ ದಿನಗಳಲ್ಲಿ ನಿತ್ಯ ಬದುಕಿನಲ್ಲಿ ಸಹ್ಯವಾಗುವುದು ಎಲ್ಲಾ ಹೆಣ್ಣುಗಳ ಇದುವರೆಗೂ ಬದುಕಿಗೆ ಸಾಕ್ಷಿಯಾಗಿ ಬಿಡುತ್ತವೆ.

ಈ ಎಲ್ಲಾ ಅಸಹ್ಯಗಳನ್ನು ಸಹ್ಯವಾಗಿಸಿಕೊಂಡಾಗ್ಯೂ ನಾಯಕಿಯ ತಾಳ್ಮೆತಪ್ಪುವುದು ತನ್ನ ಗಂಡ-ಮಾವ ಅಯ್ಯಪ್ಪಸ್ವಾಮಿಯ ಮಾಲೆ ಹಾಕಿದ ಸಂದರ್ಭದಲ್ಲಿ ಆಕೆ ಮುಟ್ಟಾಗಿ ಹೊರಗೆ ಕೂತಾಗ. ಮನೆಕೆಲಸಕ್ಕಾಗಿ ಬರುವ ಅವಳ ಮಾವನ ತಂಗಿಯಿಂದ ತಿಳಿದ ಮುಟ್ಟಾದ ಹೆಂಗಸು ಪಾಲಿಸಬೇಕಾದ ನಿಯಮಗಳಿಗೂ, ತನ್ನ ತವರಿನಲ್ಲಿ ಈ ದಿನಗಳನ್ನು ಕಳೆದ ರೀತಿಗೂ ವ್ಯತ್ಯಾಸಗಳನ್ನು ಗುರುತಿಸಿಕೊಳ್ಳುವ ಆಕೆ ತಾಯಿಯೊಂದಿಗೂ ಜಗಳವಾಡುತ್ತಾಳೆ. ತಾಯಿಯ ಉತ್ತರವಿಷ್ಟೇ -ಪ್ರತಿಷ್ಠಿತ ಸಂಪ್ರದಾಯಸ್ಥ ಕುಟುಂಬದ ಸೊಸೆ ನೀನು, ಅವರಿಗೆ ಬೇಕಾದ ಹಾಗಿರಬೇಕಾದದ್ದು ನಿನ್ನ ಕರ್ತವ್ಯ ಎಂಬುದು. ಹೊಳೆಯ ತಣ್ಣೀರಲ್ಲಿ ಸ್ನಾನ ಮಾಡಿದ ಪರಿಣಾಮ ನೆಗಡಿಯಾಗಿ ತುಳಸಿ ಕಿತ್ತುಕೊಂಡಾಗ ಅವಳ ಮಾವನ ಪ್ರತಿಕ್ರಿಯೆ, ಆಕಸ್ಮಿಕವಾಗಿ ಗಂಡ ಬೈಕಿನಿಂದ ಬಿದ್ದಾಗ ಮನುಷ್ಯ ಸಹಜ ಕಾಳಜಿಯಲ್ಲಿ ಬಿದ್ದವನನ್ನು ಓಡಿಹೋಗಿ ಎತ್ತಿದಾಗ ‘ಅನಿಷ್ಟ’ ಎಂದು ಬೈಯಿಸಿಕೊಳ್ಳುವಲ್ಲಿ ಆಕೆಯ ಸಹನೆಯ ಕಟ್ಟೆ ಒಡೆಯುತ್ತದೆ. ಇದರೊಂದಿಗೆ ಮಾಲೆ ಧರಿಸುವ ಹಾಗೂ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ವೀಡಿಯೊವೊಂದನ್ನು ಫೇಸ್‌ಬುಕ್‌ನಲ್ಲಿ ಆಕೆ ಹಂಚಿಕೊಂಡದ್ದು, ಅದನ್ನು ಡಿಲೀಟ್ ಮಾಡುವಂತೆ ಗಂಡ, ಮಾವ ಹಾಗೂ ಗುರುಸ್ವಾಮಿಗಳ ತಂಡ ಹೇರುವ ಒತ್ತಾಯ ಆಕೆಗೆ ತನ್ನ ಮುಂದಿನ ಬದುಕಿನ ಕುರಿತ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಿರ್ಣಾಯಕವಾಗುತ್ತವೆ.

ಹೆಣ್ಣು ಬದುಕಿನಲ್ಲಿ ನಿತ್ಯ ನಡೆಯುವ ‘ಸಾಮಾನ್ಯ ಸಂಗತಿಗಳು’ ಎನ್ನಿಸಿಬಿಟ್ಟಿರುವ ವಿವರಗಳನ್ನೇ ನಿರ್ದೇಶಕ ಜಿಯೋಬೇಬಿ ಅತ್ಯಂತ ಸೂಕ್ಷ್ಮವಾಗಿ ಜೋಡಿಸಿ ತಾರ್ಕಿಕವಾಗಿ ಹೆಣೆದು ಸಿನೆಮಾರೂಪದಲ್ಲಿ ಕೊಟ್ಟಿದ್ದಾರೆ. ಕುಟುಂಬ ವ್ಯವಸ್ಥೆಯು ಸಮಾಜದ ಮೂಲ ಘಟಕವಾಗಿದ್ದು, ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳು ಹೇಗೆ ಜಠಿಲಗೊಳ್ಳುತ್ತ ಮೌಢ್ಯದ ಕೂಪಕ್ಕೆ ತಳ್ಳುತ್ತವೆ ಎಂಬುದನ್ನು ಚಿತ್ರ ಹಿಡಿದಿಡುವ ಪ್ರಯತ್ನ ಮಾಡಿದೆ. ಅಂತರಿಕ್ಷಕ್ಕೆ ಇಂದು ಹೆಣ್ಣು ಜಿಗಿದಿದ್ದರೂ ಮೊದಲು ಅಡುಗೆ ಮನೆಯ, ಮನೆಯ ಇತರ ಕೆಲಸವನ್ನು ಮುಗಿಸಿಯೇ ಹೋಗಬೇಕು ಎನ್ನುವುದು ವಾಸ್ತವ. ಮಹಿಳಾ ಶಿಕ್ಷಣ, ಸಬಲೀಕರಣಗಳು ಹೆಣ್ಣಿಗೆ ಹೊರಗೆ ದುಡಿಯುವ ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ ಎನ್ನುವುದು ಭಾಗಶಃ ಸತ್ಯ. ಹಾಗೆ ದುಡಿಯುವ ಅವಕಾಶ ‘ಕೊಟ್ಟಿರುವುದೇ’ ಗಂಡುಸಮಾಜ ತನ್ನ ಮೇಲೆ ತೋರಿದ ಕರುಣೆ ಎಂಬುದೇ ಇನ್ನೂ ಹಲವು ಹೆಣ್ಣುಗಳಲ್ಲಿರುವ ಭಾವನೆ. ಕೊಡಮಾಡಲ್ಪಟ್ಟಿರುವ ಅವಕಾಶಗಳನ್ನು ಪಡೆಯುವ, ಬಳಸಿಕೊಳ್ಳುವ ಧಾವಂತದಲ್ಲಿ ಮನೆಕೆಲಸವನ್ನು ಜೊತೆಗೇ ಬ್ಯಾಲೆನ್ಸ್ ಮಾಡುವ ಕೌಶಲ್ಯವೊಂದನ್ನು ಹೆಣ್ಣು ಹೊಸದಾಗಿ ಕಲಿತಿದ್ದಾಳೆಯೇ ಹೊರತು ಅದರಿಂದ ವಿನಾಯಿತಿಯಾಗಲಿ, ರಿಯಾಯಿತಿಯಾಗಲಿ, ಗಂಡಿನ ಸಹಭಾಗಿತ್ವವಾಗಲೀ ಲಭ್ಯವಾಗಿಲ್ಲ ಎನ್ನುವುದು ಉಳಿದ ಸತ್ಯ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)