varthabharthi


ಸಂಪಾದಕೀಯ

ಪ್ರೀತಿ ಮತ್ತು ದ್ರೋಹಕ್ಕೆ ಸಾಕ್ಷಿಯಾದ ಫೆ. 14

ವಾರ್ತಾ ಭಾರತಿ : 15 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಫೆಬ್ರವರಿ 14ನ್ನು ಪ್ರೇಮಿಗಳ ದಿನವೆಂದು ಕೆಲವು ಯುವ ಮನಸ್ಸುಗಳು ಹಲವು ದಶಕಗಳಿಂದ ಆಚರಿಸಿಕೊಂಡು ಬರುತ್ತಿವೆ. ಇದೇ ಸಂದರ್ಭದಲ್ಲಿ ಈ ಆಚರಣೆಯನ್ನು ದ್ವೇಷಿಸುವ ಮೂಲಕವೂ ಫೆ. 14ನ್ನು ಕೆಲವು ಸಂಘಟನೆಗಳು ಆಚರಿಸುತ್ತಾ ಬಂದಿವೆ. ಹೀಗೆ ಭಾರತದಲ್ಲಿ ಏಕ ಕಾಲದಲ್ಲಿ ಪ್ರೇಮ ಮತ್ತು ದ್ವೇಷಗಳಿಗೆ ಈ ದಿನ ಸಾಕ್ಷಿಯಾಗುತ್ತಾ ಬಂದಿದೆ. ಇದೇ ಸಂದರ್ಭದಲ್ಲಿ, ಈ ದಿನವನ್ನೇ ‘ದ್ರೋಹದ ದಿನ’ವಾಗಿ ಬದಲಿಸಿದ ಹೆಗ್ಗಳಿಕೆ ನಮ್ಮ ವ್ಯವಸ್ಥೆಗೆ ಸೇರಿದೆ. ಹೌದು, ಈ ದೇಶವನ್ನು ಅಧಮ್ಯವಾಗಿ ಪ್ರೀತಿಸುತ್ತಿದ್ದ ಸುಮಾರು 40ಕ್ಕೂ ಅಧಿಕ ಯೋಧರನ್ನು ಅತ್ಯಂತ ಸುಲಭವಾಗಿ ಉಗ್ರಗಾಮಿಗಳ ಬಾಯಿಗೆ ಒಪ್ಪಿಸಿದ ದಿನವೂ ಫೆ. 14. ಪುಲ್ವಾಮಾ ದಾಳಿಗೆ ಇಂದಿಗೆ ಎರಡು ವರ್ಷ ಸಂದಿದೆ.

‘ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ದೇಶ ಮರೆತಿಲ್ಲ’ ಎಂದು ಪ್ರಧಾನಿ ಮೋದಿಯವರು ಹೇಳಿಕೆ ನೀಡಿದ್ದಾರೆ. ಆದರೆ ಪುಲ್ವಾಮಾದಲ್ಲಿ ನಮ್ಮ ಯೋಧರಿಗೆ ದ್ರೋಹ ಬಗೆದವರನ್ನೂ ದೇಶ ಮರೆತಿಲ್ಲ ಎನ್ನುವುದನ್ನು ಜನರು ಪ್ರಧಾನಿಗೆ ನೆನಪಿಸಬೇಕಾಗಿದೆ. ಪುಲ್ವಾಮ ದಾಳಿಯನ್ನು ಸಂಘಟಿಸಿದವರು ಯಾರು? ನಮ್ಮದೇ ನೆಲದೊಳಗೆ ಒಬ್ಬ ಉಗ್ರ ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕಗಳೊಂದಿಗೆ ಎಲ್ಲಾ ತನಿಖಾ ಕೇಂದ್ರಗಳನ್ನು ದಾಟಿ ಜವಾನರಿರುವ ವಾಹನದೆಡೆಗೆ ಸಾಗಿ ಅವರನ್ನು ಕೊಂದು ಹಾಕುತ್ತಾನೆ ಎಂದಾದರೆ ಇಲ್ಲಿ ಸಂಭವಿಸಿದ ಭದ್ರತಾ ವೈಫಲ್ಯಕ್ಕೆ ಯಾರು ಹೊಣೆ? ಸೇನಾ ವಾಹನದ ಮೇಲೆ ಅಷ್ಟು ಸ್ಫೋಟಕಗಳ ಜೊತೆಗೆ ಸಾಗಿ ವಾಹನದ ಮೇಲೆ ದಾಳಿ ನಡೆಸಬೇಕಾದರೆ ಆತನಿಗೆ ಆ ವಾಹನದ ಬಗ್ಗೆ ಪೂರ್ವ ಮಾಹಿತಿಗಳಿರಬೇಕು. ಈ ಮಾಹಿತಿಯನ್ನು ನೀಡಿದವರು ಯಾರು? ಉಗ್ರರಿರುವುದೇ ಸಾಯುವುದಕ್ಕೆ. ಆದರೆ ಯೋಧರಿರುವುದು ಸಾಯುವುದಕ್ಕಲ್ಲ, ಈ ದೇಶವನ್ನು ರಕ್ಷಿಸುವುದಕ್ಕೆ.

ಒಂದು ವೇಳೆ, ಈ ದೇಶವನ್ನು ರಕ್ಷಿಸುವ ಸಂದರ್ಭದಲ್ಲಿ ಅವರ ಮೇಲೆ ದಾಳಿ ನಡೆದು ಹುತಾತ್ಮರಾಗಿದ್ದರೆ ವಿವಾದವಾಗುತ್ತಿರಲಿಲ್ಲವೇನೋ. ಆದರೆ ನೇರವಾಗಿ ಏಕಾಂಗಿ ಉಗ್ರನೊಬ್ಬ ಸೈನಿಕರ ಮೇಲೆ ತಾನಾಗಿಯೇ ದಾಳಿ ನಡೆಸಿದ್ದಾನೆ. ದಾಳಿಯ ಅರಿವೇ ಇಲ್ಲದ ಯೋಧರು ಅಸಹಾಯಕರಾಗಿ ಕ್ಷಣದಲ್ಲೇ ಭಸ್ಮವಾಗಿದ್ದಾರೆ. ದೇಶ ಮೊತ್ತಮೊದಲಾಗಿ ಮಾಡ ಬೇಕಾಗಿದ್ದು, ಭದ್ರತಾ ವೈಫಲ್ಯಕ್ಕೆ ಯಾರೆಲ್ಲ ಕಾರಣರಾಗಿದ್ದಾರೆಯೋ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು. ಆದರೆ ಆ ಕಡೆಗೆ ಕಣ್ಣೇ ಹಾಯಿಸದೇ, ಎಲ್ಲವನ್ನು ಪಾಕಿಸ್ತಾನದ ತಲೆಗೆ ಕಟ್ಟಿ ಸರಕಾರ ಹೊಣೆಗಾರಿಕೆಯಿಂದ ಪಾರಾಯಿತು.

 ಸೈನಿಕರ ಮೇಲೆ ನಡೆದ ದಾಳಿ ಆ ಸ್ಫೋಟಕ್ಕೆ ಮುಗಿಯಲಿಲ್ಲ. ಆನಂತರವೂ ಬೇರೆ ಬೇರೆ ರೂಪಗಳಲ್ಲಿ ದಾಳಿ ಮುಂದುವರಿಯಿತು. ಒಬ್ಬ ಟಿವಿ ಮುಖ್ಯಸ್ಥ ಆ ದಾಳಿಯನ್ನು ಸಂಭ್ರಮಿಸಿರುವುದು ಇತ್ತೀಚೆಗೆ ಬೆಳಕಿಗೆ ಬಂತು. 40 ಕ್ಕೂ ಅಧಿಕ ಮಂದಿ ಯೋಧರ ಸಾವನ್ನು ತನ್ನ ಟಿಆರ್‌ಪಿಗೆ ಬಳಸಿಕೊಂಡು ಸಂಭ್ರಮಿಸುವ ಕ್ರೌರ್ಯ, ಯಾವುದೇ ಉಗ್ರ ಪ್ರದರ್ಶಿಸುವ ಕ್ರೌರ್ಯಕ್ಕಿಂತ ಕಡಿಮೆಯಿಲ್ಲ. ಈ ಮೃತ ಸೈನಿಕರ ಮೇಲೆ ಇನ್ನಷ್ಟು ದಾಳಿಗಳು ನಡೆದಿರುವುದು ರಾಜಕಾರಣಿಗಳಿಂದ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸೇನಾ ಧಿರಿಸುಗಳನ್ನು ಕೆಲವು ನಾಯಕರು ಧರಿಸಿಕೊಂಡರು. ಮೃತರ ಹೆಸರಿನಲ್ಲಿ ಮತಯಾಚನೆಗಿಳಿದರು. ಇದೇ ಸಂದರ್ಭದಲ್ಲಿ ಸರಕಾರ ಮತ್ತೊಮ್ಮೆ ‘ಸರ್ಜಿಕಲ್ ಸ್ಟ್ರೈಕ್’ ಎನ್ನುವ ನಾಟಕೀಯ ಕಾರ್ಯಚರಣೆಯನ್ನು ಮಾಧ್ಯಮಗಳ ಮೂಲಕ ಬಳಸಿಕೊಂಡು, ಪುಲ್ವಾಮಾ ಸೈನಿಕರ ಸಾವಿಗೆ ನ್ಯಾಯ ಸಿಕ್ಕಿತು ಎಂದು ಘೋಷಿಸಿಕೊಂಡಿತು.

ಸರ್ಜಿಕಲ್ ಸ್ಟ್ರೈಕ್ ನಡೆದಿರುವುದೇನೋ ನಿಜ. ಆದರೆ ಅದರಲ್ಲಿ ಪಾಕಿಸ್ತಾನಕ್ಕಾದ ನಾಶ ನಷ್ಟವೆಷ್ಟು? ಎಷ್ಟು ಉಗ್ರರು ಸತ್ತರು? ಎನ್ನುವ ಕುರಿತಂತೆ ಇದುವರೆಗೆ ಯಾವುದೇ ಸ್ಪಷ್ಟ ಮಾಹಿತಿಗಳು ಹೊರ ಬಿದ್ದಿಲ್ಲ. ಗುಡ್ಡ ಗಾಡು ಪ್ರದೇಶಗಳಿಗೆ ಒಂದಿಷ್ಟು ಬಾಂಬುಗಳನ್ನು ಸುರಿಯಲಾಗಿದೆ ಎಂದು ವಿದೇಶಿ ಪತ್ರಿಕೆಗಳು ಬರೆದವು. ಈವರೆಗೆ ಯಾವುದೇ ಪತ್ರಿಕೆಗಳು, ಸರ್ಜಿಕಲ್ ಸ್ಟ್ರೈಕ್‌ನಿಂದ ಇಷ್ಟು ಸಂಖ್ಯೆಯ ಉಗ್ರರು ಸತ್ತಿದ್ದಾರೆ ಎನ್ನುವುದನ್ನು ಸ್ಪಷ್ಟ ಪಡಿಸಿಲ್ಲ. ಇಷ್ಟಕ್ಕೂ ಸೇನಾಧಿಕಾರಿಗಳು ಕೂಡ ಈ ಸಾವು-ನೋವುಗಳ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಈ ದಾಳಿ ನಡೆದ ಬಳಿಕವೂ ಕಾಶ್ಮೀರದಲ್ಲಿ ಉಗ್ರರ ಜೊತೆಗೆ ನಮ್ಮ ಸೈನಿಕರು ಬಡಿದಾಡುತ್ತಲೇ ಇದ್ದಾರೆ. ನರೇಂದ್ರ ಮೋದಿಯವರ ಅವಧಿಯಲ್ಲಿ ಉಗ್ರರ ದಾಳಿಗೆ ನಮ್ಮ ಸೈನಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಬಲಿಯಾಗಿದ್ದಾರೆ ಎನ್ನುವುದನ್ನು ಸರಕಾರಿ ಅಂಕಿ-ಅಂಶಗಳೇ ತಿಳಿಸುತ್ತವೆ. ಹೀಗಿರುವಾಗ, ಸರ್ಜಿಕಲ್ ಸ್ಟ್ರೈಕ್‌ನಿಂದ ‘ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರಿಗೆ ನ್ಯಾಯ’ ಸಿಕ್ಕಿದೆ ಎಂದು ಹೇಳುವುದೇ ಅವರಿಗೆ ಎಸಗುವ ದ್ರೋಹವಾಗಿದೆ. ಈ ಸರ್ಜಿಕಲ್ ಸ್ಟ್ರೈಕ್‌ನ್ನು ಮುಂದಿಟ್ಟು ಬಳಿಕ ಬಿಜೆಪಿ ಮಹಾ ಚುನಾವಣೆಯನ್ನು ಗೆದ್ದಿತು.

ಮುಂಬೈ ದಾಳಿ ಪ್ರಕರಣವನ್ನು ನಾವು ಮತ್ತೊಮ್ಮೆ ಸ್ಮರಿಸಬೇಕಾಗಿದೆ. ಈ ದಾಳಿಯ ಸಂದರ್ಭದಲ್ಲಿ, ಅದಾಗಲೇ ಕೇಸರಿ ಉಗ್ರರ ಜಾಲವನ್ನು ಭೇದಿಸಿದ ಹೇಮಂತ್ ಕರ್ಕರೆ ನೇತೃತ್ವದ ಇಡೀ ತಂಡ ಕೊಲೆಗೀಡಾಯಿತು. ಈ ಸಾವಿನ ಕುರಿತಂತೆ ಹಲವರು ಹಲವು ರೀತಿಯಲ್ಲಿ ಸಂಶಯವನ್ನು ವ್ಯಕ್ತಪಡಿಸಿದ ಕಾರಣಕ್ಕಾಗಿ ಕರ್ಕರೆ ತಂಡದ ಸಾವನ್ನು ಪ್ರತ್ಯೇಕವಾಗಿ ತನಿಖೆ ಮಾಡಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಆದರೆ ಈ ಒತ್ತಾಯ ಜಾರಿಗೆ ಬರಲೇ ಇಲ್ಲ. ಕರ್ಕರೆ ತಂಡದ ತ್ಯಾಗವನ್ನು ಅಪಮಾನಿಸುವ ರೀತಿಯಲ್ಲಿ, ಮಾಲೆಗಾಂವ್ ಸ್ಫೋಟದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್‌ಗೆ ಬಿಜೆಪಿಯಿಂದ ಟಿಕೆಟ್ ನೀಡಿ ಸಂಸತ್‌ನಲ್ಲಿ ತಂದು ಕೂರಿಸಿತು. ಈ ಮೂಲಕ, ಮುಂಬೈ ದಾಳಿಯ ಸಂದರ್ಭದಲ್ಲಿ ಹುತಾತ್ಮರಾದ ಯೋಧರಿಗೆ ಭಾರೀ ಅವಮಾನವನ್ನು ಮಾಡಿತು.

ಪುಲ್ವಾಮಾ ಪ್ರಕರಣದಲ್ಲೂ ಇದು ಮುಂದುವರಿದಿದೆ. ಪುಲ್ವಾಮಾ ದಾಳಿಯ ಬಳಿಕ ಉಗ್ರರೊಂದಿಗೆ ನಂಟನ್ನು ಹೊಂದಿದ್ದ ದೇವಿಂದರ್ ಸಿಂಗ್ ಎಂಬ ಪೊಲೀಸ್ ಹಿರಿಯ ಅಧಿಕಾರಿಯನ್ನು ಸರಕಾರ ಬಂಧಿಸಿತು. ಈತನಿಗೆ ಉಗ್ರರ ಜೊತೆಗಿರುವ ನಂಟಿನ ಕುರಿತಂತೆ ಈ ಹಿಂದೆ ‘ಅಫ್ಝಲ್‌ಗುರು’ ಹೇಳಿಕೆಗಳನ್ನು ನೀಡಿದ್ದ. ಆದರೂ ಈತನನ್ನು ಅಧಿಕಾರದಲ್ಲಿ ಮುಂದುವರಿಯಲು ಸರಕಾರ ಅನುಮತಿ ನೀಡಿತ್ತು. ಕಾಶ್ಮೀರದ ಗುಪ್ತಚರ ಇಲಾಖೆಯಲ್ಲಿ ಈತ ಕೆಲಸ ಮಾಡುತ್ತಿದ್ದ. ಉಗ್ರರರೊಂದಿಗೆ ಸಂಬಂಧದ ಆರೋಪದಲ್ಲಿ ಬಂಧಿತನಾದ ಬಳಿಕವೂ ಈತನಿಗೆ ಸುಲಭದಲ್ಲಿ ಜಾಮೀನು ದೊರಕಿತು. ಈತ ಎಸಗಿದ ದ್ರೋಹಕ್ಕೆ ಮರಣದಂಡನೆ ಶಿಕ್ಷೆಯಾಗಬೇಕಾಗಿತ್ತು. ಆದರೆ ವ್ಯವಸ್ಥೆಯೇ ಇಂಥವರನ್ನು ಸಾಕುತ್ತಿದೆ. ಹೀಗಿರುವಾಗ ಪುಲ್ವಾಮಾದಂತಹ ದಾಳಿಗಳು ನಮ್ಮ ಸೇನೆಯ ಮೇಲೆ ಪದೇ ಪದೇ ನಡೆದರೆ ಅದರಲ್ಲಿ ಅಚ್ಚರಿಯೇನಿದೆ?

ಪುಲ್ವಾಮಾ ದಾಳಿಯ ಹೊಣೆಯನ್ನು ಹೊತ್ತು ಅಂದಿನ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿತ್ತು. ಅಷ್ಟೇ ಅಲ್ಲ, ಅಂತಹದೊಂದು ದುರಂತಕ್ಕೆ ಅವಕಾಶ ನೀಡಿದ ಸರಕಾರ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕಾಗಿತ್ತು. ಎಲ್ಲಿಯವರೆಗೆ ಆ ದುರಂತಕ್ಕಾಗಿ ಸರಕಾರ ಕ್ಷಮೆಯಾಚಿಸುವುದಿಲ್ಲವೋ ಅಲ್ಲಿಯವರೆಗೆ ಮೃತ ಸೈನಿಕರ ಆತ್ಮಗಳು ಪ್ರಧಾನಿಯನ್ನು ಕ್ಷಮಿಸುವುದಿಲ್ಲ. ಅವರ ಸಾವಿಗೆ ನ್ಯಾಯ ದೊರಕುವುದೂ ಇಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)