varthabharthi


ಸಂಪಾದಕೀಯ

ಯಾವುದು ದೇಶದ್ರೋಹ?

ವಾರ್ತಾ ಭಾರತಿ : 16 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ದೇಶಕ್ಕೆ ಸ್ವಾತಂತ್ರ್ಯ ದೊರೆತು ಎಪ್ಪತ್ತು ವರ್ಷಗಳ ನಂತರ ನಮ್ಮ ದೇಶದ ಪ್ರಜಾಪ್ರಭುತ್ವ ಅಪಾಯದ ಅಂಚಿಗೆ ಬಂದು ನಿಂತಿದೆ. ಸರಕಾರದ ನೀತಿಗಳಿಗೆ ಪ್ರತಿರೋಧವೇ ಇರಬಾರದು ಎಂಬ ನಿಲುವು ತಾಳಿದ ಕೇಂದ್ರದ ಅಧಿಕಾರ ಸೂತ್ರ ಹಿಡಿದ ಪಕ್ಷ, ಭಿನ್ನಾಭಿಪ್ರಾಯವನ್ನು ದೇಶದ್ರೋಹ ಎಂದು ಪರಿಗಣಿಸಲ್ಪಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ದೇಶವೆಂದರೆ ಏನು? ದೇಶದ್ರೋಹ ಅಂದರೆ ಯಾವುದು ಎಂಬ ಬಗ್ಗೆ ಜಿಜ್ಞಾಸೆ ನಡೆಸಬೇಕಾಗಿದೆ. ನಮ್ಮನ್ನಾಳುತ್ತಿರುವ ಕೇಂದ್ರ ಸರಕಾರದ ದೃಷ್ಟಿಯಲ್ಲಿ ಶಾಂತಿಯುತವಾಗಿ ನಡೆಯುತ್ತಿರುವ ಚಳವಳಿಗಳನ್ನು ಬೆಂಬಲಿಸುವುದು ದೇಶದ್ರೋಹವಾಗಿದೆ. ಅನ್ಯಾಯ, ಅಸಮಾನತೆ ವಿರುದ್ಧ ಧ್ವನಿಯೆತ್ತುವುದು ಕೂಡ ಅಪರಾಧವಾಗಿದೆ. ಇಂತಹ ‘ಅಪರಾಧ’ ಮಾಡಿದ ಬೆಂಗಳೂರಿನ ಇಪ್ಪತ್ತೊಂದು ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿಯವರನ್ನು ದಿಲ್ಲಿ ಪೊಲೀಸರು ಬಂಧಿಸಿ ರಾತ್ರೋರಾತ್ರಿ ಎತ್ತಿಹಾಕಿಕೊಂಡು ಹೋಗಿದ್ದಾರೆ. ಈಕೆ ಮಾಡಿದ ಅಪರಾಧವೆಂದರೆ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಚಳವಳಿಯನ್ನು ಹೇಗೆ ಬೆಂಬಲಿಸಬೇಕೆಂಬುದನ್ನು ವಿವರಿಸುವ ‘ಟೂಲ್ ಕಿಟ್’ನ್ನು ಸಿದ್ಧಪಡಿಸಿರುವುದು. ‘ಈ ಟೂಲ್ ಕಿಟ್’ನ್ನು ಸ್ವೀಡನ್‌ನ ಹೆಸರಾಂತ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ ಬರ್ಗ್ ಸೇರಿದಂತೆ ಹಲವು ಗಣ್ಯರು ಹಂಚಿಕೊಂಡಿದ್ದರು.

ಈ ದೇಶದಲ್ಲಿ ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ಒಂದೆಡೆ ಸಾಮಾಜಿಕ ಜಾಲತಾಣದಲ್ಲಿ ಗ್ರೆಟಾ ಮತ್ತು ಇತರರು ಟೂಲ್ ಕಿಟ್ ಹಂಚಿಕೊಂಡರೆಂದು ದಿಶಾ ರವಿಯೆಂಬ ಯುವತಿಯನ್ನು ನಡುರಾತ್ರಿಯಲ್ಲಿ ಬಂಧಿಸಿ ಹೊತ್ತೊಯ್ಯುತ್ತಾರೆ (ಇದಕ್ಕೆ ಕರ್ನಾಟಕದ ಪೊಲೀಸರ ಅನುಮತಿ ಪಡೆದಿದ್ದಾರೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ). ಇನ್ನೊಂದೆಡೆ ಭಯೋತ್ಪಾದಕ ಕೃತ್ಯದ ಆರೋಪಿ ಮಾಜಿ ಡಿವೈಎಸ್‌ಪಿ ದವಿಂದರ್ ಸಿಂಗ್ ಎಂಬವರು ಜಾಮೀನು ಪಡೆದು ಹೊರಗೆ ಬರುತ್ತಾರೆ. ಇಂತಹ ನೂರಾರು, ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಭಯೋತ್ಪಾದನೆ, ಬಾಂಬ್ ಸ್ಫೋಟದ ಆರೋಪದ ಮೇಲೆ ಬಂಧಿಸಲ್ಪಟ್ಟ ಸಾಧ್ವಿಯೊಬ್ಬರನ್ನು ಬಿಡುಗಡೆ ಮಾಡಿ ಲೋಕಸಭೆಗೆ ಆರಿಸಿತರಬಹುದು, ಆಕೆ ಗಾಂಧಿ ಹತ್ಯೆಯನ್ನು ಸಮರ್ಥಿಸಿದ ನಂತರವೂ ತನ್ನ ಸ್ಥಾನ ಮಾನ ಉಳಿಸಿಕೊಳ್ಳಬಹುದು. ಆದರೆ ವರವರರಾವ್ ಅವರಂತಹ ಹೆಸರಾಂತ ಕವಿ, ಅಂಬೇಡ್ಕರ್ ಬಗ್ಗೆ ಅಧ್ಯಯನ ಮಾಡಿ ಹಲವಾರು ಪುಸ್ತಕಗಳನ್ನು ಬರೆದ ಆನಂದ್ ತೇಲ್ತುಂಬ್ಡೆ ಅವರಂತಹ ಚಿಂತಕ, ಸುಧಾ ಭಾರದ್ವಾಜ್‌ರಂತಹ ಮಾನವ ಹಕ್ಕುಗಳ ಸಂಘಟನೆಯ ನಾಯಕಿ ಹಾಗೂ ನ್ಯಾಯವಾದಿ ಸೇರಿದಂತೆ ಹಲವಾರು ಜನರನ್ನು ದೇಶದ್ರೋಹದ ಸುಳ್ಳು ಆರೋಪ ಹೊರಿಸಿ ಜೈಲಿಗೆ ತಳ್ಳುವುದು, ರೋನಾ ವಿಲ್ಸನ್ ಅಂತಹವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅವರ ಮೊಬೈಲ್ ಮತ್ತು ಕಂಪ್ಯೂಟರ್‌ನಲ್ಲಿ ತೂರಿಸುವುದು ಇವೆಲ್ಲ ತುರ್ತು ಪರಿಸ್ಥಿತಿ ಘೋಷಣೆ ಮಾಡದೆಯೂ ಈ ದೇಶದಲ್ಲಿ ನಡೆದಿವೆ.

 ದೇಶದ ಕೃಷಿ ಮಾರುಕಟ್ಟೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಮಡಿಲಿಗೆ ಹಾಕುವ ಕೃಷಿ ಕಾಯ್ದೆಗಳ ವಿರುದ್ಧ ರಾಜಧಾನಿ ದಿಲ್ಲಿಯಲ್ಲಿ ರೈತರು ಎರಡೂವರೆ ತಿಂಗಳ ಕಾಲ ನಡೆಸಿರುವ ಶಾಂತಿಯುತ ಹೋರಾಟಕ್ಕೆ ದೇಶ ವಿದೇಶಗಳಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಹೋರಾಟವನ್ನು ವಿಫಲಗೊಳಿಸಲು ನಡೆದ ಎಲ್ಲ ಸಂಚು, ಒಳಸಂಚುಗಳು ವಿಫಲಗೊಂಡಿವೆ. ಗಣರಾಜ್ಯೋತ್ಸವ ದಿನ ಕಿಡಿಗೇಡಿಗಳಿಗೆ ಕೆಂಪು ಕೋಟೆಯ ಮೇಲೆ ಧ್ವಜ ಹಾರಿಸಲು ಬಿಟ್ಟು ಆ ಅಪವಾದವನ್ನು ರೈತರ ತಲೆಗೆ ಕಟ್ಟುವ ಹುನ್ನಾರವೂ ವಿಫಲಗೊಂಡಿತು. ರೈತರನ್ನು ಒಂದೆಡೆ ಮಾತುಕತೆಗೆ ಕರೆಯುತ್ತಾ ಇನ್ನೊಂದೆಡೆ ಅವರನ್ನು ‘ಆಂದೋಲನ ಜೀವಿಗಳು’ ಎಂದು ಜರೆಯುವುದು, ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವವರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿ ಸೆರೆಮನೆಗೆ ತಳ್ಳುವುದು ಇಲ್ಲಿ ನಿರಂತರವಾಗಿ ನಡೆದಿದೆ. ಇದೀಗ ದೇಶದ ಜನಸಾಮಾನ್ಯರು ಅದರಲ್ಲೂ ಯುವಕರು ರೈತ ಹೋರಾಟವನ್ನು ಬೆಂಬಲಿಸಬಾರದೆಂದು ಬೆದರಿಕೆ ಹಾಕಲು ದಿಶಾ ರವಿಯವರಂತಹ ಪರಿಸರವಾದಿ ಯುವ ಕಾರ್ಯಕರ್ತರನ್ನು ಬಂಧಿಸುವುದು ಇವೆಲ್ಲ ಈ ಸರಕಾರದ ಹತಾಶೆ ಮತ್ತು ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿವೆ.

 ಈಗ ತುರ್ತು ಪರಿಸ್ಥಿತಿ ಜಾರಿಯಲ್ಲಿಲ್ಲ. ಆದರೆ 1976ರಲ್ಲಿ ಅದರ ವಿರುದ್ಧ ಹೋರಾಡಿದ್ದಾಗಿ ಹೇಳಿಕೊಳ್ಳುವವರು ಅಧಿಕಾರದಲ್ಲಿದ್ದಾರೆ. ತುರ್ತು ಪರಿಸ್ಥಿತಿಯನ್ನು ಜಾರಿ ಗೊಳಿಸದೆಯೂ ಭಿನ್ನಾಭಿಪ್ರಾಯ ಮತ್ತು ಪ್ರತಿರೋಧವನ್ನು ಹತ್ತಿಕ್ಕಲು ತುರ್ತು ಪರಿಸ್ಥಿತಿಯ ದಿನಗಳಿಗಿಂತ ಅತ್ಯಂತ ಕರಾಳ ದುಸ್ಸಾಹಸಕ್ಕೆ ಸರಕಾರ ಕೈ ಹಾಕುತ್ತಿದೆ. ಬಹುತೇಕ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು ನಿಷ್ಕ್ರಿಯಗೊಳಿಸಲಾಗಿರುವ ಈ ದಿನಗಳಲ್ಲಿ ಅಮಾಯಕ ಪ್ರಜೆಗಳಿಗೆ ನ್ಯಾಯ ಎಂಬುದು ಮರೀಚಿಕೆಯಾಗಿದೆ. ಬಹು ದೊಡ್ಡ ಕಾರ್ಪೊರೇಟ್ ಲಾಬಿ ಸರಕಾರದ ಮೇಲೆ ಹಿಡಿತವಿಟ್ಟುಕೊಂಡಂತೆ ಕಾಣುತ್ತದೆ. ಕಂಡ ಕಂಡಲ್ಲಿ ಮಾಡುತ್ತಿರುವ ಬಂಧನಗಳನ್ನು ನೋಡಿದರೆ ದೇಶವೇ ದೊಡ್ಡ ಬಂದಿಖಾನೆಯಾಗುವ ಆತಂಕ ಎದುರಾಗಿದೆ. ಇದು ಬಹಳ ದಿನ ನಡೆಯುವುದಿಲ್ಲ. ಜಗತ್ತಿನ ಯಾವುದೇ ದೇಶದಲ್ಲಿ ಜನತೆಯ ಧ್ವನಿಯನ್ನು ದಮನ ನೀತಿಯಿಂದ ಕೆಲ ಕಾಲ ಹತ್ತಿಕ್ಕಿಡುವ ಉದಾಹರಣೆಗಳು ಸಿಗುತ್ತವೆ. ಆದರೆ ಅದಕ್ಕಾಗಿ ಅಂತಹ ಸರಕಾರಗಳು ಭಾರೀ ಬೆಲೆ ತೆತ್ತಿವೆ ಎಂಬುದನ್ನು ಮರೆಯಬಾರದು. ಕೇಂದ್ರ ಸರಕಾರ ಈ ತಾನಾಶಾಹಿ ನೀತಿಯನ್ನು ಕೈ ಬಿಟ್ಟು ರೈತರ ಶಾಂತಿಯುತ ಹೋರಾಟಕ್ಕೆ ಸ್ಪಂದಿಸಿ ಅವರ ಬೇಡಿಕೆಗಳನ್ನು ಈಡೇರಿಸಲಿ ಮತ್ತು ದಿಶಾ ರವಿಯವರಂತಹ ಯುವ ಪರಿಸರ ಕಾರ್ಯಕರ್ತೆಯನ್ನು ಬಿಡುಗಡೆ ಮಾಡಲಿ.

ಈ ದೇಶದಲ್ಲಿ ಈಗ ಅಧಿಕಾರದಲ್ಲಿರುವವರನ್ನು ಬಿಟ್ಟು ಉಳಿದವರೆಲ್ಲ ದೇಶದ್ರೋಹದ ಆರೋಪವನ್ನು ಹೊತ್ತು ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿಶಾ ರವಿ ಒಬ್ಬರೇ ಅಲ್ಲ. ಹೆಸರಾಂತ ಪತ್ರಕರ್ತ ರಾಜದೀಪ್ ಸರ್ದೇಸಾಯಿ, ಶಶಿ ತರೂರು ಅಂತಹವರನ್ನೂ ಇವರು ಬಿಡಲಿಲ್ಲ. ಅವರ ಮೇಲೂ ಇದೇ ದೇಶದ್ರೋಹದ ಆರೋಪವನ್ನು ಹೊರಿಸಲಾಗಿದೆ. ಸಾರ್ವಜನಿಕ ಉದ್ಯಮಗಳನ್ನು ಅಗ್ಗದ ಬೆಲೆಗೆ ಮಾರಾಟ ಮಾಡುವುದನ್ನು ಪ್ರಶ್ನಿಸಿದರೆ ದೇಶದ್ರೋಹ. ನೋಟ್‌ಬ್ಯಾನ್ ವಿರೋಧಿಸಿದರೆ ದೇಶದ್ರೋಹ, ದಲಿತರ ಮೇಲಿನ ದೌರ್ಜನ್ಯ ಖಂಡಿಸಿದರೆ ದೇಶದ್ರೋಹ. ರೈತರ ಹೋರಾಟವನ್ನು ಬೆಂಬಲಿಸಿದರೆ ದೇಶ ದ್ರೋಹ, ಅಷ್ಟೇ ಅಲ್ಲ ಇವರ ದೃಷ್ಟಿಯಲ್ಲಿ ಗಾಂಧಿ ದೇಶದ್ರೋಹಿ, ನೆಹರೂ ದೇಶದ್ರೋಹಿ. ಹಾಗಾದರೆ ದೇಶ ಭಕ್ತರು ಯಾರು? ದನ ಸಾಗಾಟದ ಹೆಸರಿನಲ್ಲಿ ಅಮಾಯಕರನ್ನು ಹೊಡೆದು ಸಾಯಿಸುವವರು, ಗಾಂಧಿ ಹಂತಕ ಗೋಡ್ಸೆ ಆರಾಧಕರು, ಅಲ್ಪಸಂಖ್ಯಾತರ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ಮಾಡುವವರು, ಮಾಡಿಸುವವರು ಇಲ್ಲಿ ದೇಶಭಕ್ತರೆಂದು ಕರೆದುಕೊಳ್ಳುತ್ತಿದ್ದಾರೆ. ಇಂತಹ ಹಿಟ್ಲರ್ ಶಾಹಿ ದಮನ ನೀತಿ ಬಹಳ ದಿನ ನಡೆಯುವುದಿಲ್ಲ. ಸರಕಾರ ಇನ್ನಾದರೂ ತನ್ನ ತಪ್ಪುತಿದ್ದಿಕೊಂಡು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತಹ ಆಡಳಿತ ನೀಡಲಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)