varthabharthi


ಸಂಪಾದಕೀಯ

ಉಳುವವನಲ್ಲ, ಉಳ್ಳವನೇ ಭೂಮಿಯ ಒಡೆಯ

ವಾರ್ತಾ ಭಾರತಿ : 17 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ರೈತರ ಪ್ರತಿಭಟನೆ ದೇಶಾದ್ಯಂತ ಬೇರೆ ಬೇರೆ ರೂಪಗಳಲ್ಲಿ ವಿಸ್ತಾರಗೊಳ್ಳುತ್ತಿದೆ. ಆರಂಭದಲ್ಲಿ ಕೇವಲ ರೈತರಿಗೆ ಮತ್ತು ಕೆಲವು ನಿರ್ದಿಷ್ಟ ಕಾನೂನುಗಳ ವಿರುದ್ಧ ಸಂಘಟಿತವಾಗಿದ್ದ ಪ್ರತಿಭಟನೆ ಇದೀಗ ಬರೇ ರೈತರದ್ದಾಗಿ ಉಳಿದಿಲ್ಲ. ಬೇರೆ ಬೇರೆ ವಲಯಗಳ ಕಾರ್ಮಿಕರು, ಬರಹಗಾರರು, ಚಿಂತಕರೂ ಅದರೊಂದಿಗೆ ಕೈ ಜೋಡಿಸಿದ್ದಾರೆ. ರೈತರು ಎದುರಿಸುತ್ತಿರುವ ಬೇರೆ ಬೇರೆ ಸಮಸ್ಯೆಗಳು ಪ್ರತಿಭಟನೆಯೊಳಗೆ ಸೇರುತ್ತಿವೆ. ಈ ನಿಟ್ಟಿನಲ್ಲಿ ಭೂಸುಧಾರಣಾ ಕಾಯ್ದೆಯ ಕುರಿತಂತೆಯೂ ಚರ್ಚೆ ಮುಂದುವರಿದಿದೆ. ಕರ್ನಾಟಕವೂ ಸೇರಿದಂತೆ 11 ರಾಜ್ಯಗಳು ಈ ಕಾನೂನನ್ನು ತಿದ್ದುಪಡಿಗೊಳಿಸಿದ್ದು, ಒಂದು ಕಾಲದಲ್ಲಿ ಉಳುವವರೇ ಭೂಮಿಯ ಒಡೆಯನಾಗಿದ್ದರೆ, ಈಗ ಉಳ್ಳವನೇ ಭೂಮಿಯ ಒಡೆಯನಾಗಲು ಹೊರಟಿದ್ದಾನೆ. ಅಂದಿನ ಇಂದಿರಾಗಾಂಧಿ ಸರಕಾರ ಉಳ್ಳವರಿಂದ ಭೂಮಿಯನ್ನು ಕಿತ್ತು ರೈತರಿಗೆ ಕೊಟ್ಟಿತು. ಇದರಿಂದ ಬೃಹತ್ ಜಮೀನ್ದಾರರು ಮತ್ತು ಮೇಲ್‌ಜಾತಿಯ ಜನರ ದ್ವೇಷವನ್ನು ಕಟ್ಟಿಕೊಂಡಿತು. ಆದರೆ, ಈಗ ಉಳ್ಳವರಿಗೆ ಮತ್ತೆ ಭೂಮಿಯನ್ನು ವಾಪಸ್ ಮಾಡಲು ಸರಕಾರ ನಿರ್ಧರಿಸಿದೆ. ‘ಹಿಂದಿನ ಅನ್ಯಾಯಗಳನ್ನು ತಿದ್ದಲು ನಾವು ಬಂದಿದ್ದೇವೆ’ ಎಂಬ ಮೋದಿಯ ಹೇಳಿಕೆ ಈ ನಿಟ್ಟಿನಲ್ಲಿ ಅರ್ಥಪೂರ್ಣವಾಗಿದೆ. ಕರ್ನಾಟಕ,ಆಂಧ್ರಪ್ರದೇಶ, ಹರ್ಯಾಣ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ,ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ ಹಾಗೂ ಪಶ್ಚಿಮಬಂಗಾಳ ಭೂಸುಧಾರಣಾ ತಿದ್ದುಪಡಿ ಕಾಯ್ದೆ ತಂದಿರುವ 11 ರಾಜ್ಯಗಳಾಗಿವೆ. ಈ ಪೈಕಿ ಆರು ರಾಜ್ಯಗಳು ಕಳೆದ ಮೂರು ವರ್ಷಗಳಲ್ಲಿ ಈ ಕಾನೂನಿಗೆ ತಿದ್ದುಪಡಿಗಳನ್ನು ತಂದಿವೆ.ಕರ್ನಾಟಕ ಹಾಗೂ ಗುಜರಾತ್ ರಾಜ್ಯಗಳಲ್ಲಿ ಭೂಮಾಲಕ ಹಾಗೂ ಭೂರಹಿತ ಕೃಷಿಕರು ಭೂಸುಧಾರಣಾ ಕಾನೂನುಗಳಿಗೆ ತಿದ್ದುಪಡಿ ವಿರೋಧಿಸಿ ಭಾರೀ ಪ್ರತಿಭಟನೆಗಳನ್ನು ನಡೆಸಿದ್ದರು. ಈ ತಿದ್ದುಪಡಿಗಳನ್ನು ಹಿಂದೆಗೆದುಕೊಂಡು, ಹೆಚ್ಚುವರಿ ಜಮೀನನ್ನು ಭೂರಹಿತರಿಗೆ ಆದ್ಯತೆಗೆ ಅನುಗುಣವಾಗಿ ವಿತರಿಸಬೇಕೆಂದು ಅವರು ಆಗ್ರಹಿಸಿದ್ದರು. ಪ್ರತಿಭಟನೆಗಳ ನಡುವೆಯೇ ತಿದ್ದುಪಡಿಯಾಯಿತು. ಭಾರತದ ಭೂಸುಧಾರಣಾ ಕಾನೂನುಗಳಿಗೆ ಸುದೀರ್ಘವಾದ ಇತಿಹಾಸವಿದೆ. 1960ರ ದಶಕದಿಂದ ಮೊದಲ್ಗೊಂಡು, ಭಾರತದಲ್ಲಿ ಭೂ ಮಾಲಕರಿಂದ ಆಗಿರುವ ಐತಿಹಾಸಿಕ ಅಸಮಾನತೆಯನ್ನು ನಿವಾರಿಸಲು 21 ರಾಜ್ಯಗಳು ಭೂಸುಧಾರಣಾ ಕಾನೂನುಗಳನ್ನು ಜಾರಿಗೊಳಿಸಿವೆ. ಓರ್ವ ವ್ಯಕ್ತಿ ಅಥವಾ ನಿಗಮ ಎಷ್ಟು ಪ್ರಮಾಣದ ಭೂಮಿಯನ್ನು ಹೊಂದಬಹುದು ಎಂಬ ಬಗ್ಗೆ ಈ ಕಾನೂನುಗಳು ಮಿತಿಯೊಂದನ್ನು ರೂಪಿಸಿವೆ. ಓರ್ವ ವ್ಯಕ್ತಿ ಅಥವಾ ಸಂಸ್ಥೆ ಎಷ್ಟು ಜಮೀನನ್ನು ಹೊಂದಬಹುದು ಎಂಬ ಬಗ್ಗೆ ಮಿತಿಯನ್ನು ನಿಗದಿಪಡಿಸಿದೆ ಹಾಗೂ ಹೆಚ್ಚುವರಿ ಜಮೀನನ್ನು ಭೂರಹಿತರಿಗೆ ನೀಡುವುದಕ್ಕೂ ಅವಕಾಶ ಕಲ್ಪಿಸುತ್ತದೆ.ಭೂಸುಧಾರಣಾ ಕಾಯ್ದೆಗಳ ಗುರಿಗಳನ್ನು ಸಾಧಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲವಾದರೂ, ಅವುಗಳ ಮೂಲಕ ರೈತರ ಜಮೀನುಗಳಿಗೆ ದೊರೆತಿದ್ದ ಭದ್ರತೆಯನ್ನು ನೂತನ ತಿದ್ದುಪಡಿಗಳು ತಿರುವುಮುರುವುಗೊಳಿಸಿವೆ. 2013ರ ರಾಷ್ಟ್ರೀಯ ಭೂಸುಧಾರಣಾ ನೀತಿಯು ಓರ್ವ ವ್ಯಕ್ತಿ ಅಥವಾ ಸಂಸ್ಥೆಯು ಹೊಂದಬಹುದಾದ ಜಮೀನಿನ ಗರಿಷ್ಠ ಮಿತಿಯನ್ನು ಹಾಗೂ ಹೆಚ್ಚುವರಿ ಜಮೀನನ್ನು ಭೂರಹಿತ ಕಾರ್ಮಿಕರಿಗೆ ವಿತರಿಸುವುದನ್ನು ಪುನರುಚ್ಚರಿಸಿತ್ತು.

ಆದರೆ ಕೃಷಿ ಭೂಮಿಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ರಾಜ್ಯ ಸರಕಾರಗಳು ಕೇಂದ್ರ ಸರಕಾರದ ಶಿಫಾರಸಿಗೆ ಅನುಗುಣವಾಗಿ ನಡೆದುಕೊಳ್ಳಬೇಕಾಗಿಲ್ಲ. ಮುಖ್ಯವಾಗಿ ಬಿಜೆಪಿ ಆಡಳಿತವಿರುವ ರಾಜ್ಯಗಳೆಲ್ಲ ಈ ತಿದ್ದುಪಡಿಯನ್ನು ಅತ್ಯುತ್ಸಾಹದಿಂದ ಮಾಡುತ್ತಿವೆ. ಕೇಂದ್ರ ಸರಕಾರದ ಒತ್ತಡಗಳಿಂದಲೇ ರಾಜ್ಯಗಳು ತಿದ್ದುಪಡಿಯನ್ನು ಮಾಡುತ್ತಿವೆ ಎಂಬ ಆರೋಪಗಳಲ್ಲಿ ಹುರುಳಿದೆ. ಬೃಹತ್ ಕೈಗಾರಿಕೆಗಳು ಹಾಗೂ ರಿಯಲ್ ಎಸ್ಟೇಟ್ ಯೋಜನೆಗಳು ಈ ತಿದ್ದುಪಡಿಗಳ ಫಲಾನುಭವಿಗಳೆಂಬುದು ಘೋರ ಸತ್ಯವಾಗಿದೆ. ಇದೀಗ ಹಲವಾರು ರಾಜ್ಯಗಳು, ಬೃಹತ್‌ಕೈಗಾರಿಕೆಗಳಿಗೆ ಹೇರಳವಾದ ಕೃಷಿ ಭೂಮಿಯನ್ನು ಖರೀದಿಸಲು ಹಾಗೂ ಅದನ್ನು ಬೇರೆ ಉದ್ದೇಶಗಳಿಗೆ ಬಳಸಲು ಮುಕ್ತವಾಗಿ ಅನುಮತಿ ನೀಡಿವೆ.

ನೂತನ ತಿದ್ದುಪಡಿಗಳು ಕೃಷಿಕರಲ್ಲದವರಿಗೂ ಕೂಡಾ ಜಮೀನನ್ನು ಖರೀದಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತವೆ ಹಾಗೂ ಅವರನ್ನು ಶೋಷಣೆಯಿಂದ ಬಿಡುಗಡೆಗೊಳಿಸಿವೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಭೂಸುಧಾರಣಾ ಕಾಯ್ದೆಗಳಿಗೆ ಇದೇ ರೀತಿಯ ತಿದ್ದುಪಡಿಗಳನ್ನು ಮಾಡುವ ಮೂಲಕ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಭಾರೀ ಸಂಖ್ಯೆಯಲ್ಲಿ ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಸಫಲವಾಗಿವೆ ಎಂಬ ಕಾರಣವನ್ನು ಕೂಡಾ ಅವರು ನೀಡುತ್ತಾರೆ. ಭೂಸುಧಾರಣಾ ಕಾಯ್ದೆಗಳು ಕನಿಷ್ಠ ಪಕ್ಷ ಕೃಷಿಕರು ತಮ್ಮ ಕೃಷಿಭೂಮಿಯ ಒಡೆತನದ ಬಗ್ಗೆ ನೆಮ್ಮದಿಯಿಂದ ಇರಬಹುದಾಗಿತ್ತು. ಆದರೆ ಈ ತಿದ್ದುಪಡಿಗಳು ರೈತರಿಗೆ ಭೂಒಡೆತನದ ಬಗ್ಗೆ ಅನಿಶ್ಚಿತ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಸರಕಾರ ಬಯಸಿದಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಜಮೀನನ್ನು ಬೃಹತ್ ಕಂಪೆನಿಗಳ ಮಡಿಲಿಗೆ ಒಪ್ಪಿಸಬೇಕಾದಂತಹ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಮಹಾರಾಷ್ಟ್ರ ಸರಕಾರವಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಿಯಲ್ ಎಸ್ಟೇಟ್ ಯೋಜನೆಗಳ ಗರಿಷ್ಠ ಭೂ ಒಡೆತನದ ಮಿತಿಯನ್ನು 24 ಎಕರೆಗಳಿಗೆ ವಿಸ್ತರಿಸಿತ್ತು. ಜೊತೆಗೆ ಬೃಹತ್ ಕಾರ್ಪೊರೇಟ್ ಬಿಲ್ಡರ್‌ಗಳು ಕಟ್ಟಡ ನಿರ್ಮಾಣಕ್ಕೆ ಮುನ್ನ ಜಮೀನನ್ನು ಮೂರು ವರ್ಷಗಳ ಬದಲಿಗೆ ಐದು ವರ್ಷಗಳವರೆಗೂ ಇಟ್ಟುಕೊಳ್ಳಬಹುದಾಗಿದೆ.

 ಕೈಗಾರಿಕೆಗಳ ಸ್ಥಾಪನೆಗಾಗಿ ಕೃಷಿ ಭೂಮಿಯನ್ನು ಖರೀದಿಸುವಲ್ಲಿ ಯಾವುದೇ ಹಾನಿಯಿಲ್ಲ, ಬದಲಿಗೆ ಇದರಿಂದಾಗಿ ಬೃಹತ್ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಭೂಸುಧಾರಣಾ ಕಾಯ್ದೆಗಳನ್ನು ಬೆಂಬಲಿಸುವವರ ವಾದವಾಗಿದೆ.ಆದರೆ, ಕೈಗಾರಿಕೆಗಳು ಸ್ಥಾಪನೆಯಾದಾಗ ಅವು ಸಾಮಾನ್ಯವಾಗಿ ಪರಿಣಿತಿ ಪಡೆದಿರುವ ಹಾಗೂ ಸ್ಥಳೀಯರಲ್ಲದವರನ್ನೇ ಅಧಿಕ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳುವುದು ಎಲ್ಲೆಡೆ ಕಂಡುಬರುವ ಪ್ರವೃತ್ತಿಯಾಗಿದೆ. ಒಂದು ವೇಳೆ ಸ್ಥಳೀಯರಿಗೆ ಉದ್ಯೋಗ ನೀಡಿದರೂ,ಅವರನ್ನು ಕಡಿಮೆ ವೇತನದ ದೈಹಿಕ ಪರಿಶ್ರಮದ ಕೆಲಸಗಳಿಗೆ ನಿಯೋಜಿಸುತ್ತವೆ.

ಭೂಸುಧಾರಣಾ ಕಾಯ್ದೆಗೆ ತಂದಿರುವ ತಿದ್ದುಪಡಿಗಳಿಂದ ಭಾರೀ ಸಂಖ್ಯೆಯ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಅವೆಲ್ಲವೂ ಬೃಹತ್ ಕಂಪೆನಿಗಳ ಪಾಲಾಗಲಿವೆ. ಭಾರತದ ಜೀವನಾಡಿಯಾಗಿರುವ ಕೃಷಿ ಕ್ಷೇತ್ರವನ್ನೇ ಮುಂಬರುವ ದಿನಗಳಲ್ಲಿ ಈ ತಿದ್ದುಪಡಿಗಳು ದುರ್ಬಲಗೊಳಿಸಲಿವೆ. ಹಾಗಾದಲ್ಲಿ ಕೃಷಿಯನ್ನೇ ನಂಬಿರುವ ಲಕ್ಷಾಂತರ ಕುಟುಂಬಗಳ ಬದುಕು ಅತಂತ್ರವಾಗಲಿದೆ. ಬೆನ್ನೆಲುಬನ್ನು ಕಳೆದುಕೊಂಡ ಭಾರತ, ಆಹಾರಕ್ಕಾಗಿ ಸಂಪೂರ್ಣ ಪರಾವಲಂಬಿಯಾಗಬೇಕಾದ ದಿನಗಳು ಬರಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)