varthabharthi


ಸಂಪಾದಕೀಯ

ತಿಂಗಳಿಗೆ 60,000 ರೂ. ದುಡಿವ ನವ ಭಾರತದ ಬಡವರು!

ವಾರ್ತಾ ಭಾರತಿ : 18 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮೀಸಲಾತಿ ಎನ್ನುವುದು ಭಾರತದ ಪಾಲಿಗೆ ‘ಸನಾತನ’ವಾದುದು. ಸಂವಿಧಾನ ರಚನೆಗೆ ಮೊದಲೇ, ಮೊಗಲರು, ಬ್ರಿಟಿಷರು ಆಗಮಿಸುವುದಕ್ಕೆ ಮುಂಚೆಯೇ ಇಲ್ಲಿ ಮೀಸಲಾತಿ ಜಾರಿಯಲ್ಲಿತ್ತು. ಕೆಲವು ಕೆಲಸಗಳನ್ನು ಕೆಲವು ನಿರ್ದಿಷ್ಟ ಜಾತಿಗಳಿಗೆ ಮೀಸಲಾತಿಯ ಮೂಲಕ ಆದ್ಯತೆಯ ಮೇಲೆ ನೀಡಲಾಗುತ್ತಿತ್ತು. ಬ್ರಾಹ್ಮಣರಿಗೆ ಪೂಜೆ, ಅರ್ಚನೆ, ರಾಜಕಾರ್ಯಗಳಲ್ಲಿ ಸಂಪೂರ್ಣ ಮೀಸಲಾತಿ, ಕ್ಷತ್ರಿಯರಿಗೆ ಭೂ ಒಡೆತನದಲ್ಲಿ ಸಂಪೂರ್ಣ ಮೀಸಲಾತಿ, ವೈಶ್ಯರಿಗೆ ವ್ಯಾಪಾರ ವಹಿವಾಟಿನಲ್ಲಿ ಪೂರ್ಣ ಮೀಸಲಾತಿ ತಲೆ ತಲಾಂತರಗಳಿಂದ ಜಾರಿಯಲ್ಲಿತ್ತು. ದುಡಿಮೆಯ ಕ್ಷೇತ್ರದಲ್ಲಿ ಶೂದ್ರರಿಗೆ ಪೂರ್ಣ ಪ್ರಮಾಣದ ಮೀಸಲಾತಿಯನ್ನು ಒದಗಿಸಲಾಗಿತ್ತು. ದಲಿತರಿಗೆ ಶುಚೀಕರಣದ ಕ್ಷೇತ್ರದಲ್ಲಷ್ಟೇ ಪೂರ್ಣ ಮೀಸಲಾತಿ. ಯಾವ ಕಾರಣಕ್ಕೂ ಆ ಹಕ್ಕುಗಳನ್ನು ಅವರಿಂದ ಬ್ರಾಹ್ಮಣರಾಗಲಿ, ಕ್ಷತ್ರಿಯರಾಗಲಿ ಕಿತ್ತುಕೊಳ್ಳುವಂತಿಲ್ಲ ಮತ್ತು ಈ ಮೀಸಲಾತಿಯನ್ನು ಬಳಿಕ ಸ್ವಾತಂತ್ರ ಪೂರ್ವದಲ್ಲಿ ಹಿಂದೂ ಮಹಾ ಸಭಾ, ಸ್ವಾತಂತ್ರೋತ್ತರದಲ್ಲಿ ಆರೆಸ್ಸೆಸ್ ಪ್ರತಿಪಾದಿಸಿಕೊಂಡು ಬಂದಿವೆ. ಗೋಳ್ವಾಲ್ಕರ್ ಅವರ ಚಿಂತನೆಗಳ ಕೃತಿಗಳಲ್ಲಿ ಇವುಗಳಿಗೆ ಆಧಾರಗಳಿವೆ ಮತ್ತು ಈ ಮೀಸಲಾತಿಯನ್ನು ಇಂದಿಗೂ ವೈಜ್ಞಾನಿಕವಾಗಿ ಸಮರ್ಥಿಸುವ ಜನರು ಪಂಡಿತ ವಲಯದಲ್ಲಿದ್ದಾರೆ. ಸ್ವಾತಂತ್ರಾನಂತರ ರಚನೆಯಾದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ಸಮಾನವಾಗಿ ನೀಡಿತು. ಆದರೆ ಜಾತಿ ಕಾರಣಕ್ಕಾಗಿ ಸಾಮಾಜಿಕವಾಗಿ ಹಿಂದುಳಿದ ದುರ್ಬಲ ಸಮುದಾಯಗಳನ್ನು ಗುರುತಿಸಿ ಅವರನ್ನು ಮೇಲೆತ್ತುವುದಕ್ಕಾಗಿ ಮೀಸಲಾತಿ ನೀಡುವುದು ಅನಿವಾರ್ಯವಾಯಿತು. ಹತ್ತು ಮಕ್ಕಳಲ್ಲಿ ಕ್ಷಯ ಪೀಡಿತ ಮಗುವಿಗೆ ಎರಡು ತುತ್ತು ಹೆಚ್ಚು ಎತ್ತಿಡುವಂತೆ, ಈ ಮೀಸಲಾತಿಯನ್ನು ಜಾರಿಗೊಳಿಸಲಾಯಿತು.

ಆದರೆ ಇಂದು ಮೇಲ್‌ಜಾತಿಯ ಬಡವರಿಗೆ 10 ಶೇಕಡ ಮೀಸಲಾತಿಯನ್ನು ಘೋಷಿಸುವ ಮೂಲಕ ಇಡೀ ಮೀಸಲಾತಿ ಉದ್ದೇಶವನ್ನೇ ಅಪಮೌಲ್ಯಗೊಳಿಸಲಾಗಿದೆ. ಈ ದೇಶದಲ್ಲಿ ಬಡವರನ್ನು ಮೇಲೆತ್ತುವುದಕ್ಕಾಗಿ ನೂರಾರು ಯೋಜನೆಗಳಿವೆ. ಎಲ್ಲ ಜಾತಿ, ಧರ್ಮಗಳಲ್ಲಿರುವ ಬಡವರಿಗಾಗಿ ಈ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಬಿಪಿಎಲ್ ಕಾರ್ಡ್‌ಗಳನ್ನು ಸರಕಾರ ಜಾತಿ ಆಧಾರದ ಮೇಲೆ ಹಂಚುವುದಿಲ್ಲ. ವಿಪರ್ಯಾಸವೆಂದರೆ, ಮೇಲ್‌ಜಾತಿಯಲ್ಲಿರುವ ಬಡವರನ್ನಷ್ಟೇ ಗುರುತಿಸಿ ಅವರಿಗೆ ಮೀಸಲಾತಿ ಘೋಷಿಸುವುದೆಂದರೆ, ಕೆಳಜಾತಿಯ ಬಡವರನ್ನು ಇನ್ನಷ್ಟು ಆಳವಾದ ಬಡತನದೆಡೆಗೆ ತಳ್ಳುವುದು ಎಂದು ಅರ್ಥ. ಮೀಸಲಾತಿಯಿಂದಾಗಿ ಕೆಳಜಾತಿಯ ಜನರು ಎಲ್ಲ ಕ್ಷೇತ್ರಗಳಲ್ಲಿ ಪೂರ್ಣ ಪ್ರಾತಿನಿಧ್ಯ ಪಡೆದು, ಮೇಲ್‌ಜಾತಿಯ ಬಡವರು ಅವಕಾಶಗಳನ್ನು ಕಳೆದುಕೊಂಡಿದ್ದರೆ ‘ಮೇಲ್‌ಜಾತಿ ಬಡವರ ಮೀಸಲಾತಿ’ಗೆ ಅರ್ಥವಿತ್ತು. ಇಂದಿಗೂ ಈ ದೇಶದ ರಾಜಕೀಯ, ಔದ್ಯಮಿಕ ಕ್ಷೇತ್ರಗಳಲ್ಲಿ, ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಮೇಲ್‌ಜಾತಿಯ ಜನರೇ ದೊಡ್ಡ ಮಟ್ಟದಲ್ಲಿ ಪ್ರಾತಿನಿಧ್ಯಗಳನ್ನು ಹೊಂದಿದ್ದಾರೆ. ಹೀಗಿರುವಾಗ, ಮೇಲ್‌ಜಾತಿಯ ಬಡವರಿಗೆ ಮೀಸಲಾತಿಯನ್ನು ಯಾವ ಆಧಾರದಲ್ಲಿ, ಯಾಕಾಗಿ ನೀಡಲಾಯಿತು? ಈ ಪ್ರಶ್ನೆಯನ್ನು ಎನ್‌ಡಿಎ ಸರಕಾರದೊಳಗಿದ್ದ ಪಾಸ್ವಾನ್, ಅಠವಳೆಯಂತಹ ದಲಿತನಾಯಕರಾದರೂ ಕೇಳಬೇಕಾಗಿತ್ತು. ಮೇಲ್‌ಜಾತಿಯ ಬಡವರಿಗೆ ಮೀಸಲಾತಿ ಬೇಕು ಎಂದು ಯಾವುದೇ ಚಳವಳಿ, ಹೋರಾಟಗಳು ನಡೆದಿರಲಿಲ್ಲ. ಯಾರೂ ಬೀದಿಗಿಳಿದು ಪ್ರತಿಭಟಿಸಿರಲಿಲ್ಲ. ಯಾವ ಒತ್ತಡಗಳು ಇಲ್ಲದೆ ಇದ್ದರೂ, ಸರಕಾರ ಇದನ್ನು ಜಾರಿಗೆ ತಂದಿತು. ಅದರ ಅರ್ಥ, ಈ ನವ ಮೀಸಲಾತಿ ಗೆ ಯಾವುದೇ ಸಂಘಟನಾತ್ಮಕ ಆಂದೋಲನ ನಡೆದಿರಲಿಲ್ಲ ಎಂದೇನಲ್ಲ. ಆರೆಸ್ಸೆಸ್ ನೇತೃತ್ವದಲ್ಲಿ ಸ್ವಾತಂತ್ರಾನಂತರ ನಡೆದ ಎಲ್ಲ ಆಂದೋಲನಗಳು, ಚಳವಳಿಗಳು ಮೇಲ್‌ಜಾತಿಯ ಹಿತಾಸಕ್ತಿಗಳನ್ನು ಈಡೇರಿಸುವುದಕ್ಕಾಗಿ ನಡೆದಿದೆ. ಬಿಜೆಪಿ ಹುಟ್ಟಿದ್ದು, ಆರೆಸ್ಸೆಸ್‌ನ ರಾಜಕೀಯ ಚಿಂತನೆಗಳನ್ನು ಅಧಿಕೃತವಾಗಿ ಜಾರಿಗೊಳಿಸುವುದಕ್ಕಾಗಿ. ಈ ಕಾರಣದಿಂದಲೇ, ಬಿಜೆಪಿ ಸರಕಾರ ಮೇಲ್‌ಜಾತಿಯ ಬಡವರಿಗೆ ಮೀಸಲಾತಿ ಜಾರಿಗೊಳಿಸಿತು. ಶೋಷಿತ ಸಮುದಾಯವನ್ನೇ ಬಳಸಿಕೊಂಡು ಅಧಿಕಾರಕ್ಕೇರಿದ ಬಿಜೆಪಿ, ತಮ್ಮ ಬೆನ್ನಿಗಿರಿದಿರುವುದು ಮೀಸಲಾತಿಯಿಂದ ಅಲ್ಪಸ್ವಲ್ಪ ತಲೆಯೆತ್ತುತ್ತಿರುವ ದುರ್ಬಲ ಸಮುದಾಯಗಳಿಗೆ ಇನ್ನೂ ಅರ್ಥವಾಗಿಲ್ಲ. ಆದುದರಿಂದಲೇ, ಮೇಲ್‌ಜಾತಿಯ ಬಡವರ ಮೀಸಲಾತಿಯನ್ನು ಯಾವ ಪ್ರತಿಭಟನೆಯೂ ಇಲ್ಲದೆ ಅವುಗಳು ಒಪ್ಪಿಕೊಂಡಿವೆ ಮತ್ತು ಆ ಸಮ್ಮತಿಯ ಮೂಲಕ ಮೀಸಲಾತಿಯೆನ್ನುವುದು ತನ್ನ ಉದ್ದೇಶ, ಅರ್ಥವನ್ನು ಸಂಪೂರ್ಣ ಕಳೆದುಕೊಂಡು ಬಿಟ್ಟಿತು. ಕಳೆದ ಆರು ದಶಕಗಳಿಂದ ಮೀಸಲಾತಿಯನ್ನು ತಳಸ್ತರದ ಜನರಿಗೆ ತಲುಪದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದ ಮೇಲ್‌ಜಾತಿಯ ಆಡಳಿತಶಾಹಿ ವರ್ಗ, ಕಟ್ಟಕಡೆಗೆ ಮೇಲ್‌ಜಾತಿಯನ್ನೇ ಶೋಷಿತ ಸಮುದಾಯವಾಗಿ ಬಿಂಬಿಸಿ ಅವರೆಡೆಗೆ ಮೀಸಲಾತಿಯ ಒರತೆಯನ್ನು ತಿರುಗಿಸುವಲ್ಲಿ ಯಶಸ್ವಿಯಾಯಿತು. ಈವರೆಗೆ ಮೀಸಲಾತಿಯನ್ನು ಟೀಕಿಸುತ್ತಲೇ ಬಂದಿದ್ದ ಆರೆಸ್ಸೆಸ್ ಮತ್ತು ಮೇಲ್‌ಜಾತಿ ಚಿಂತಕರು ಇದೀಗ ಈ ‘ಬಡವರಿಗಾಗಿ 10 ಶೇಕಡ ಮೀಸಲಾತಿ’ಯ ಕುರಿತಂತೆ ಜಾಣ ವೌನವನ್ನು ತಾಳಿದ್ದಾರೆೆ. ಇದನ್ನು ಪ್ರಶ್ನಿಸಿದರೆ ಎಲ್ಲಿ ನಮಗೆ ಸಿಕ್ಕಿರುವ ಮೀಸಲಾತಿ ಪ್ರಶ್ನೆಗೊಳಗಾಗುತ್ತದೆಯೋ ಎಂಬ ಭಯದಲ್ಲಿ ಶೂದ್ರ, ದಲಿತ ವರ್ಗವೂ ಅನಿವಾರ್ಯವಾಗಿ ವೌನಕ್ಕೆ ಶರಣಾಗಿದೆ. ಇಷ್ಟಕ್ಕೂ ಮೇಲ್‌ಜಾತಿ ಬಡವರೆಂದರೆ ಯಾರು ? ಬಿಪಿಎಲ್ ಕಾರ್ಡ್‌ದಾರರಿಗೆ ಬೈಕ್ ಇರಬಾರದು ಎಂದು ತರ್ಕಿಸುವ ಸರಕಾರ, ಮೇಲ್‌ಜಾತಿಯ ಬಡವರೆಂದು ಯಾರನ್ನು ಕರೆಯುತ್ತಿದೆ? ವಾರ್ಷಿಕವಾಗಿ 8 ಲಕ್ಷ ಅಂದರೆ ಮಾಸಿಕವಾಗಿ 60 ಸಾವಿರ ರೂಪಾಯಿಗೂ ಅಧಿಕ ದುಡಿಯುವವನು ಮೇಲ್‌ಜಾತಿಯಲ್ಲಿ ಬಡವನೆಂದು ಪರಿಗಣನೆಗೆ ಒಳಗಾಗುತ್ತಾನೆ. ಅಷ್ಟೇ ಅಲ್ಲ, 5 ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದಾತನೂ ಮೇಲ್‌ಜಾತಿಗಳಲ್ಲಿ ಬಡವನೇ ಆಗಿರುತ್ತಾನೆ. ಒಂದು ಸಾವಿರ ಚದರ ಅಡಿ ಒಳಗೆ ಮನೆಯನ್ನು ಹೊಂದಿದಾತನೂ ಬಡವನೆ. ಹೀಗೆ, ಕೆಳಜಾತಿ ಮತ್ತು ಮೇಲ್‌ಜಾತಿಯ ಬಡವರ ನಡುವೆಯೂ ಈ ‘ಮೀಸಲಾತಿ’ ಒಂದು ಅಂತರವನ್ನು ಸೃಷ್ಟಿಸಿ ಬಿಟ್ಟಿತು. ಇದೀಗ ಆರೆಸ್ಸೆಸ್ ಇನ್ನೊಂದು ಹೊಸ ತಂತ್ರ ಹೆಣೆದಿದೆ. ಬಲಾಢ್ಯ ಶೂದ್ರ ವರ್ಗವನ್ನು ಸಂಘಟಿಸಿ, ಅವರಿಂದ ಹಿಂದುಳಿದ ವರ್ಗ ಮತ್ತು ದಲಿತರ ಮೀಸಲಾತಿಯ ಪಾಲನ್ನು ಕೇಳಲು ಕುಮ್ಮಕ್ಕು ನೀಡುತ್ತಿರುವುದು. ಈ ಕೃತ್ಯದಲ್ಲಿ ಈಗಾಗಲೇ ಉತ್ತರ ಭಾರತದಲ್ಲಿ ಯಶಸ್ವಿಯಾಗಿರುವ ಆರೆಸ್ಸೆಸ್, ಕರ್ನಾಟಕದಲ್ಲೂ ಈಶ್ವರಪ್ಪನಂತಹ ಶೂದ್ರರನ್ನೇ ಬಳಸಿಕೊಂಡು ಮೀಸಲಾತಿಗಾಗಿ ಒತ್ತಾಯಿಸುತ್ತಿದೆ. ಮೀಸಲಾತಿಯನ್ನು ವಿರೋಧಿಸುತ್ತಾ, ನಾವೆಲ್ಲ ಹಿಂದೂ-ಒಂದು ಎಂಬ ಮಂತ್ರ ಜಪಿಸುತ್ತಾ ಬಂದ ಆರೆಸ್ಸೆಸ್, ಏಕಾಏಕಿ ಶೂದ್ರರನ್ನು ಮೀಸಲಾತಿಗಾಗಿ ಎತ್ತಿ ಕಟ್ಟುತ್ತಿರುವ ಉದ್ದೇಶವೇ ದಲಿತರ ಮೀಸಲಾತಿಯನ್ನು ಇನ್ನಷ್ಟು ದುರ್ಬಲಗೊಳಿಸುವುದು. ಹಿಂದುಳಿದ ವರ್ಗ ಮತ್ತು ದಲಿತರಿಗೆ ಈಗಾಗಲೇ ಸಿಕ್ಕಿರುವ ಅಲ್ಪಸ್ವಲ್ಪ ಲಾಭಗಳನ್ನು ಇಲ್ಲವಾಗಿಸಿ ಅವರನ್ನು ಇನ್ನಷ್ಟು ಕೆಳಗೆ ತಳ್ಳುವುದು. ಶೋಷಿತ ಸಮುದಾಯ ಆರೆಸ್ಸೆಸ್‌ನ ವಿಸ್ಮತಿಯಿಂದ ಹೊರಬಂದು, ಸಂಘಟಿತ ಹೋರಾಟವನ್ನು ನಡೆಸಿ ಮೇಲ್‌ಜಾತಿಯ ಬಡವರ ಮೀಸಲಾತಿಯನ್ನು ರದ್ದುಗೊಳಿಸುವುದಕ್ಕೆ ಒತ್ತಾಯ ಮಾಡದೇ ಇದ್ದರೆ, ಶೀಘ್ರದಲ್ಲೇ ಭಾರತದಲ್ಲಿ ಮನು ಮಹರ್ಷಿಯ ಮೀಸಲಾತಿ ಮತ್ತೆ ಜಾರಿಗೆ ಬರಲಿದೆ. ಇದರಲ್ಲಿ ಎರಡು ಮಾತಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)