varthabharthi


ಅನುಗಾಲ

ವಿಮರ್ಶೆಯ ವಿಮರ್ಶೆ

ವಾರ್ತಾ ಭಾರತಿ : 18 Feb, 2021
ಬಾಲಸುಬ್ರಹ್ಮಣ್ಯ ಕಂಜರ್ಪಣೆ

ವಿಮರ್ಶಕರನ್ನು ಸಾಮಾನ್ಯವಾಗಿ ಯಾವ ಸೃಜನಶೀಲ ಲೇಖಕರೂ ಎದುರುಹಾಕಿಕೊಳ್ಳುವುದಿಲ್ಲ. ಒಳ್ಳೆಯ ವಿಮರ್ಶಕರನ್ನು ಸಮಾಜ ಸದಾ ಗೌರವಿಸುತ್ತದೆ. ಆದರೆ ಪ್ರಶಸ್ತಿಗಳ ಈ ಅತ್ಯಾಧುನಿಕ ಯುಗದಲ್ಲಿ ಜನಪ್ರಿಯತೆಯನ್ನು ಪಡೆದು ಮನೆಮಾತಾಗುವ ಉದ್ದೇಶ ಎಲ್ಲರಿಗೂ ಇದೆ. ಆದ್ದರಿಂದ ಕೆಲವು ಕೃತಿಗಳಿಗೆ ಮುನ್ನುಡಿ ಮಾತ್ರವಲ್ಲ, ಹಿಂದೆ, ಮುಂದೆ, ಮೇಲೆ, ಕೆಳಗೆ, ಒಳಗೆ, ಹೊರಗೆ ಅನೇಕ ವಿಮರ್ಶಕರ ಪ್ರಕಟನಾಪೂರ್ವ ಅಭಿಪ್ರಾಯವಿರುತ್ತದೆ. ಕೆಲವರು ಪ್ರಶಸ್ತಿ, ಪುರಸ್ಕಾರ, ಪ್ರಸಿದ್ಧಿ, ಪ್ರತಿಷ್ಠೆಗಾಗಿ ಇದನ್ನು ಬಯಸುತ್ತಾರೆ. ಹೀಗೆ ಈ ಉಡುಗೊರೆ ಭಾರದಿಂದಲೇ ಕೆಲವು ಕೃತಿಗಳು ಲಿಫ್ಟಿನಲ್ಲಿ ಮೇಲ್ಮಾಳಿಗೆ ತಲುಪಿ ಇತರರಿಗಿಂತ ಮೊದಲು ಉನ್ನತ ಸ್ಥಾನವನ್ನು ಅಲಂಕರಿಸುತ್ತವೆ.

ಒಳ್ಳೆಯ ಮತ್ತು ಶ್ರೇಷ್ಠವಾದ ವಿಚಾರಗಳು ಯಾವಾಗಲೂ ವಿವಾದಾಸ್ಪದವಾಗುತ್ತವೆ; ಚರ್ಚೆಗೊಳಗಾಗುತ್ತವೆ. 27, ಜನವರಿ 1991ರ ಲಂಕೇಶ್ ಪತ್ರಿಕೆಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ‘ವಿಮರ್ಶೆಯ ವಿಮರ್ಶೆ’ ಎಂಬ ಟಿಪ್ಪಣಿಯ ಸ್ವರೂಪದ ಪುಟ್ಟ ಲೇಖನವನ್ನು ಬರೆದರು. ಮುಂದೆ 2009ರಲ್ಲಿ ಪ್ರಕಟವಾದ ಅವರ 25 ಲೇಖನಗಳ 191 ಪುಟಗಳ ಕೃತಿಗೆ ಈ ಟಿಪ್ಪಣಿಯ ಶೀರ್ಷಿಕೆಯನ್ನೇ ನೀಡಿದ್ದನ್ನು ಗಮನಿಸಿದರೆ ಈ ಲೇಖನದ ಚಿಂತನೆಯ ಹರಹು ಗೊತ್ತಾಗುತ್ತದೆ. ವಿಮರ್ಶೆಯ ಕುರಿತಾದ ತೇಜಸ್ವಿಯವರ ಲೇಖನದ ಕುರಿತು ಗಹನವಾದ, ಗಂಭೀರವಾದ ಚರ್ಚೆಯಾಗಲೇ ಇಲ್ಲ. ಹಾಗೆ ನೋಡಿದರೆ 2012ರಲ್ಲಿ ಪ್ರಕಟವಾದ 766 ಪುಟಗಳ, ಅವರ ಕೃತಿಗೆ ಹೊಸ ವಿಚಾರಗಳು ಎಂಬ ಹೆಸರಿಡಲಾಗಿತ್ತು. ಈ ಕೃತಿಯಲ್ಲಿ ಸಾಹಿತ್ಯವನ್ನು ಒಳಗೊಂಡಂತೆ (ಭಾಷೆ ಮತ್ತು ಸಾಹಿತ್ಯ ವಿಮರ್ಶೆ ಎಂಬ 20 ಲೇಖನಗಳನ್ನೊಳಗೊಂಡ ಒಂದು ಅಧ್ಯಾಯವೇ ಇದೆ!) ಬದುಕಿನ ಎಲ್ಲ ವಿಚಾರಗಳ ಕುರಿತೂ ವಿಮರ್ಶೆಯಿದೆ. ಇದೂ ನಮ್ಮ ಬಹಳಷ್ಟು ಸಾಹಿತ್ಯ ವಿಮರ್ಶಕರ ಗಮನ ಸೆಳೆದಂತಿಲ್ಲ. ಇದರರ್ಥ ತೇಜಸ್ವಿಯವರು ಗಂಭೀರವಾದ ವಿಚಾರವನ್ನು ಮಂಡಿಸಲಿಲ್ಲವೆಂದಲ್ಲ. ಕನ್ನಡದಲ್ಲಿ ಅವರಷ್ಟು ಮತ್ತು ಲಂಕೇಶರಷ್ಟು ಸರಳವಾಗಿ, ಪರಿಣಾಮಕಾರಿಯಾಗಿ ವಿಮರ್ಶೆಯ ಸಿದ್ಧಾಂತಗಳನ್ನು ಮಂಡಿಸಿದವರು ವಿರಳ. ಆದರೆ ಅದನ್ನು ನಿಭಾಯಿಸುವ ಇಚ್ಛಾಶಕ್ತಿಯ ವಿಮರ್ಶಕರು ಬಂದಿಲ್ಲ.

ಇತ್ತೀಚೆಗೆ ಅಗಲಿದ ಹಿರಿಯ ವಿಮರ್ಶಕ ಜಿ. ಎಸ್. ಆಮೂರ ಅವರ ಬದುಕು-ಬರಹದ ಕುರಿತಂತೆ ‘ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು’ ಮಾಲೆಯಲ್ಲಿ ನಾನು ಬರೆದ (2009) ಪುಸ್ತಕದ ಮೊದಲ ಮಾತಿನಲ್ಲಿ ನಾನು ‘‘ಕವಿಯ ಬಗ್ಗೆ ಬರೆಯುವಷ್ಟು ನಿರ್ಭೀತಿಯಲ್ಲಿ ವಿಮರ್ಶಕರ ಬಗ್ಗೆ ಬರೆಯುವಂತಿಲ್ಲ. ಏಕೆಂದರೆ ನಾನು ಮಾಡುತ್ತಿರುವುದು ವಿಮರ್ಶೆಯ ವಿಮರ್ಶೆ; ವಿಮರ್ಶಕರ ವಿಮರ್ಶೆ. ಈ ಒಂದಕ್ಕಿಂತ ಹೆಚ್ಚುಸುತ್ತಿನ ಕೋಟೆಯಲ್ಲಿ ಪ್ರವೇಶಿಸುವುದು ಸುಲಭ, ಹೊರಬರುವುದು ಕಷ್ಟ. ಟೀಕೆಗೆ ಟೀಕೆ ಎದುರಾದರೆ?’’ ಎಂದು ಬರೆದಿದ್ದೆ. ಇಲ್ಲಿ ‘ಕವಿ’ ಎಂದು ನಾನು ಉಲ್ಲೇಖಿಸಿರುವುದಕ್ಕೆ ಕಾರಣವೆಂದರೆ ಅದಕ್ಕೆ ಪೂರ್ವದಲ್ಲಿ ನಾನು ಇದೇ ಸರಣಿಯಲ್ಲಿ ಅಡಿಗರ ಕುರಿತು ಬರೆದಿದ್ದೆ. ಆದರೆ ‘ಕವಿ’ ಎಂಬ ಪದ ಗದ್ಯ, ನಾಟಕ ಹೀಗೆ ಎಲ್ಲ ಸೃಜನಶೀಲ ಲೇಖಕರಿಗೂ ಅನ್ವಯಿಸುತ್ತದೆ. ಆನಂತರ 2020ರಲ್ಲಿ ಇನ್ನೊಬ್ಬ ವಿಮರ್ಶಕ ಟಿ.ಪಿ.ಅಶೋಕ ಅವರ ಕುರಿತು ಬರೆಯುವಾಗಲೂ ಇದೇ ಸಂಶಯವನ್ನು ವ್ಯಕ್ತಪಡಿಸಿದೆ. ಜೊತೆಗೇ ಸಂಸ್ಕೃತ ಕವಿ ರಾಜಶೇಖರ ಹೇಳಿದ, ‘‘ವಿಮರ್ಶಕನಾದವನು ಶಿವನಂತೆ ಇರಬೇಕು. ಅವನು ಸಮುದ್ರಮಂಥನದಿಂದ ಬಂದ ಚಂದ್ರನನ್ನು ತಲೆಯಮೇಲಿಟ್ಟುಕೊಂಡು ಮೆರೆಸಿದ. ಆದರೆ ವಿಷವನ್ನು ಕಂಠದಲ್ಲಿ ಧರಿಸಿದ.’’ ಎಂಬುದನ್ನು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ವಿಮರ್ಶೆಯ ಕುರಿತು ಹೆಚ್ಚು ವಿಮರ್ಶೆಯಾಗಲೀ ವಿಮರ್ಶಾ ಸಿದ್ಧಾಂತವಾಗಲೀ, ವಿಮರ್ಶಾ ಮೀಮಾಂಸೆಯಾಗಲೀ ಬಾರದಿರುವುದನ್ನು ಗಮನಿಸಿದ್ದೇನೆ. ವಿಮರ್ಶಕರು ವಿಮರ್ಶೆಯ ವಿಧಿ-ವಿಧಾನಗಳ ಬಗ್ಗೆ, ಅದಕ್ಕೊಂದು ರೀತಿ-ನೀತಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ಕೃತಿವಿಮರ್ಶೆ ಮತ್ತು ಕೆಲವೊಮ್ಮೆ ಕೃತಿಕಾರನ ವಿಮರ್ಶೆಯಲ್ಲಿ ತೊಡಗಿದ್ದಾರೆ.

ಕನ್ನಡ ಸಾಹಿತ್ಯದ ವಿಮರ್ಶೆಯ ವಿಮರ್ಶೆ ಅಷ್ಟಾಗಿ ನಡೆದಿಲ್ಲ. ಇದಕ್ಕೆ ನವ್ಯದ ಮತ್ತು ಆನಂತರದ ಕಾಲದಲ್ಲಿ ವಿಮರ್ಶೆಯ ವಿಧಾನ ಕೃತಿನಿಷ್ಠೆಯಿಂದ ವ್ಯಕ್ತಿನಿಷ್ಠೆಗೆ ಹೊರಳುತ್ತಿರುವುದೇ ಕಾರಣವಿರಬಹುದೆಂದು ಭಾಸವಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದ ಆರಂಭದ ಕಾಲದಲ್ಲಿ ವಿಮರ್ಶಕರು ಎಂಬ ಪ್ರತ್ಯೇಕ ವರ್ಗವಿರಲಿಲ್ಲ. ಅದು ಸಾಹಿತ್ಯದ ಮುಖ್ಯಧಾರೆಯೆನಿಸದೆ ಕೆಲವು ರಾಗ-ತಾಳಗಳ ಸಂದರ್ಭದಲ್ಲಷ್ಟೇ ಬಳಸಲ್ಪಡುವ ಪಕ್ಕವಾದ್ಯದಂತಿತ್ತು. ಕನ್ನಡ ಸಾಹಿತ್ಯದ ಚತುರ್ವೇದಗಳೆಂದು ಪರಿಗಣಿಸಲ್ಪಟ್ಟ ಕಾವ್ಯ, ನಾಟಕ, ಕತೆ, ಕಾದಂಬರಿಗಳೊಂದಿಗೆ ಪಂಚಮವೇದವಾಗಿ ವಿಮರ್ಶೆ ಸೇರಿಕೊಂಡದ್ದು ಆಧುನಿಕತೆಯ ಬೆಳವಣಿಗೆ. ನವೋದಯ ಮತ್ತು ನವೋದಯ ಪೂರ್ವದಲ್ಲಿ ಸಮಕಾಲೀನ ಸಾಹಿತ್ಯದ ಕುರಿತು ನಡೆದ ವಿಮರ್ಶೆಗಿಂತಲೂ ಹೆಚ್ಚಾಗಿ ಅಳಿದು ಹೋದ ಸಾಹಿತಿಗಳು ಉಳಿಸಿಹೋದ ಸಾಹಿತ್ಯದ ಕುರಿತು ವಿಮರ್ಶೆ ನಡೆಯುತ್ತಿತ್ತು ಅಥವಾ ಅಧ್ಯಯನದ ರೂಪದಲ್ಲಿ ಪ್ರಕಟವಾದ ಪ್ರಬಂಧಗಳಲ್ಲಿ ವಿಮರ್ಶೆಯಿರುತ್ತಿತ್ತು. ಪಂಪ-ರನ್ನ-ಕುಮಾರವ್ಯಾಸರ ಕುರಿತು ಈ ಕಾರಣಕ್ಕಾಗಿಯೇ ನಮಗೆ ಮುಳಿಯ, ಬಿಎಂಶ್ರೀ, ಎಸ್.ವಿ.ರಂಗಣ್ಣ, ಕುವೆಂಪು ಮುಂತಾದ ಅನೇಕರ ಲೇಖನಗಳು ದಕ್ಕಿವೆ. 1931ರಲ್ಲಿ ಬಂದ ಕುವೆಂಪು ಅವರ ‘ಸರೋವರದ ಸಿರಿಗನ್ನಡಿಯಲ್ಲಿ’, 1934ರಲ್ಲಿ ಪ್ರಕಟವಾದ ಎಸ್.ವಿ.ರಂಗಣ್ಣನವರ ‘ಸಾಮಾನ್ಯ ಚಿತ್ರಕ್ಕೆ ಸುವರ್ಣ ಚೌಕಟ್ಟು’, 1938ರಲ್ಲಿ ಬಂದ ಮಾಸ್ತಿಯವರ ‘ನಾದಲೀಲೆಯ ಮುನ್ನುಡಿ’ ಮುಂತಾದವು ಈ ಮಾದರಿಗೆ ಉದಾಹರಣೆಗಳು. ಉದ್ದೇಶಪೂರ್ವಕವಾಗಿಯಲ್ಲದಿದ್ದರೂ ಆಂಗ್ಲ ವಿಮರ್ಶಾ ಸಿದ್ಧಾಂತಗಳು ಕನ್ನಡದಲ್ಲಿ ಮೂಡಿದ್ದವು. ಎ.ಆರ್.ಕೃಷ್ಣಶಾಸ್ತ್ರಿಗಳು ಕೈಲಾಸಂ ಅವರ ‘ಟೊಳ್ಳುಗಟ್ಟಿ ಅಥ್ವಾ ಮಕ್ಕಳಸ್ಕೂಲ್ ಮನೇಲಲ್ವೇ?’ ಕುರಿತಂತೆ ಬರೆದ ಪ್ರಬಂಧವು ಪ್ರಾಯೋಗಿಕ ವಿಮರ್ಶೆಯ ಅರುಣೋದಯದ ನಿದರ್ಶನವಾಗಿ ಆನಂತರ ಸ್ಥಾನ ಪಡೆಯಿತು. ಮಾಸ್ತಿಯವರು ರಾಮಾಯಣ, ಮಹಾಭಾರತದ ಕುರಿತು ಮಾಡಿದ ವಿಮರ್ಶೆಯಂತೆ ಆಧುನಿಕ ಸಾಹಿತ್ಯದ ಕುರಿತ ಅವರ ವಿಮರ್ಶೆಯಿಲ್ಲ. ಬೇಂದ್ರೆಯವರ ನಾದಲೀಲೆಗೆ ಅವರು ಮುನ್ನುಡಿ ಬರೆದಾಗಲೂ ಅವರ ಒಳನೋಟದೊಂದಿಗೆ ಮಾರ್ಗದ ಸಾಂಪ್ರದಾಯಿಕತೆ ಕಂಡುಬಂದಿದೆ. ಅದೂ ಒಂದು ವಿಮರ್ಶಾ ಹಾದಿ. ‘ಕುಮಾರವ್ಯಾಸನು ಹಾಡಿದನೆಂದರೆ..’ ಅವನ ಹಾಡು ನಮ್ಮನ್ನು ಆ ಯುಗಕ್ಕೆ ಕರೆದೊಯ್ಯುತ್ತದೆಯೆಂದು ಅನಿಸುತ್ತದೆಯೇ ಹೊರತು ಕುಮಾರವ್ಯಾಸನು ನಮ್ಮೆದುರು ಉಡುಪಿ ಕೃಷ್ಣನಂತೆ ಮುಖತಿರುಗಿಸಿ ದರ್ಶನ ನೀಡಿದನೆಂದರ್ಥವಲ್ಲ. ನವೋದಯಕಾಲದಲ್ಲಿ ಮುನ್ನುಡಿಗಳೇ ಕೃತಿಯ ವಿಮರ್ಶೆಗಳಾಗಿದ್ದವು. ಮುಂದೆ ಸಾಹಿತ್ಯ ಪತ್ರಿಕೆಗಳಲ್ಲಿ ಅಧ್ಯಯನಪೂರ್ವಕ ವಿಮರ್ಶೆಗಳು ಪ್ರಕಟವಾದವು. ಪಾಶ್ಚಾತ್ಯ ಸಾಹಿತ್ಯದೊಂದಿಗೆ ಅಲ್ಲಿನ ವಿಮರ್ಶೆಯೂ ಯಾವಾಗ ಕನ್ನಡದ ಮೇಲೆ ಅತಿಯಾದ ಪ್ರಭಾವವನ್ನು ಬೀರಿತೋ ಆಗ ನಮ್ಮಲ್ಲಿ ವಿಮರ್ಶೆಯೆಂಬ ಒಂದು ಪ್ರಕಾರವೇ ಸೃಷ್ಟಿಯಾಯಿತು. ವಿಮರ್ಶಾ ಪಂಡಿತರು ಹುಟ್ಟಿಕೊಂಡರು. ಸಾಹಿತ್ಯದ ಇತರ ಕ್ಷೇತ್ರದವರೂ ವಿಮರ್ಶೆ ಬರೆಯವುದರ ಅನುಕೂಲ ಮತ್ತು ಪರಿಣಾಮವನ್ನು ಕಂಡುಕೊಂಡರು. ಪಾಶ್ಚಾತ್ಯ ವಿಮರ್ಶೆಗೂ ಸಾಹಿತ್ಯದ ಪರಿಣತಿಗೂ ಅಷ್ಟೊಂದು ಸಂಬಂಧವಿಲ್ಲದಿದ್ದುದರಿಂದ ಮತ್ತು ಅಲ್ಲಿನ ವಿಮರ್ಶೆಯು ಬದುಕಿನ, ವಿಚಾರ ವೈವಿಧ್ಯವನ್ನು ಒಳಗೊಂಡು ಎಲ್ಲ ಬಗೆಯ ಶಾಸ್ತ್ರಗಳಂತೆ ಸಾಹಿತ್ಯವೂ ಎಂಬ ಸಿದ್ಧಾಂತವನ್ನು ಒಳಗೊಂಡಿರುವುದರಿಂದ ಅಲ್ಲಿ ವಿಮರ್ಶೆ ಹೆಚ್ಚು ಪ್ರಸ್ತುತವಾಗಿರಬೇಕು. ನಮ್ಮಲ್ಲಿ ಕೆಲವು ಅಪವಾದಗಳನ್ನು ಬಿಟ್ಟರೆ ಸಾಹಿತ್ಯದ ಅದರಲ್ಲೂ ಆಂಗ್ಲ ಸಾಹಿತ್ಯದ ಕಲಿಕೆಯೇ ವಿಮರ್ಶೆಯ ಆಚಾರ್ಯಪೀಠವನ್ನುಳಿಸುತ್ತದೆಂಬ ಕಲ್ಪನೆಯಿದೆ. ನವ್ಯದ ಕಾಲದಲ್ಲಿ ಸಮಕಾಲೀನರ ಸಾಹಿತ್ಯದ ಕುರಿತು ವಿಮರ್ಶೆಗಳು ಪುಂಖಾನುಪುಂಖವಾಗಿ ಬಂದವು. ಇವು ಆಂಗ್ಲ ವಿಮರ್ಶೆಯ ಎಲ್ಲ ಸಾಧ್ಯತೆಗಳನ್ನೂ ಇಲ್ಲಿ ಬಿತ್ತಿದವು. ಪರಿಣಾಮವಾಗಿ ಸುಲಭವಾಗಿ ಅರ್ಥ ಅಥವಾ ಅನುಭವವೇದ್ಯವಾಗಬೇಕಾಗಿದ್ದ ಸಾಹಿತ್ಯವೂ ದೂರದ ಬೆಟ್ಟದಂತೆ ಬೆರಗನ್ನು ಹುಟ್ಟಿಸಿದ ನಿದರ್ಶನಗಳಿವೆ. ಜೊತೆಗೇ ಮುದ್ರಣ ಮತ್ತು ಪ್ರಕಟನೆ ಸುಲಭವಾದಂತೆಲ್ಲ ಕೃತಿಗಿಂತ ಹೆಚ್ಚಾಗಿ ಬರಹಗಾರರನ್ನು ಉದ್ಧರಿಸುವ ವಿಮರ್ಶೆಗಳೂ ಬಂದವು. ಸಾಹಿತ್ಯ ಪತ್ರಿಕೆಗಳನ್ನು ದಾಟಿ ದಿನಪತ್ರಿಕೆಗಳಲ್ಲಿ ನಿಯತಕಾಲಿಕವಾಗಿ ಸಾದರ-ಸ್ವೀಕಾರ, ಪುಸ್ತಕ ಪರಿಚಯದ ನೆಪ/ಹೆಸರಿನಲ್ಲಿ ಸಾಕಷ್ಟು ವಿಮರ್ಶಾ ಟಿಪ್ಪಣಿಗಳು ಬರಲಾರಂಭಿಸಿದವು. ಪರಿಣಾಮವಾಗಿ ಹಿಮ್ಮೇಳದಂತಿದ್ದ ವಿಮರ್ಶಾರಂಗವು ರಂಗಸ್ಥಳದಲ್ಲಿ ವಿಜೃಂಭಿಸತೊಡಗಿ ಸೃಜನಶೀಲ ಸಾಹಿತ್ಯದೊಂದಿಗೆ ಸ್ಪರ್ಧಿಸಿದ್ದು ಮಾತ್ರವಲ್ಲ ಅವನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಲು ಒತ್ತಾಯಿಸಿದವು. ‘ಅನುಸೃಷ್ಟಿ’ಯಾಗಿದ್ದ ವಿಮರ್ಶೆಯು ‘ಸೃಷ್ಟಿ’ಯಾಗತೊಡಗಿತು. ಸಮಕಾಲೀನವಾಗಿ ನಾವೆಷ್ಟೇ ಎದೆ ತಟ್ಟಿಕೊಂಡರೂ ಅದು ಮೌಲ್ಯದ ಮತ್ತು ಕಾಲದ ತಕ್ಕಡಿಯಲ್ಲಿ ಸ್ಥಿರಸ್ಥಾನವನ್ನು ಪಡೆದಿರುತ್ತದೆ. ಅದನ್ನು ಕೃತಕವಾಗಿ ತ್ರಿಶಂಕು ಸ್ವರ್ಗದಂತೆ ಸ್ಥಾಪಿಸಲಾಗುವುದಿಲ್ಲ. ನವ್ಯದ ಕಾಲದಲ್ಲಿ ಅನೇಕ ಕೃತಿಗಳು ಈ ಏರಿಳಿತವನ್ನು ಅನುಭವಿಸಿದವು. ಸಪ್ತರ್ಷಿಗಳು ಎತ್ತಿದರೂ ಸುಧರ್ಮ ಪೀಠವನ್ನು ಅಲಂಕರಿಸಲಾಗದ ಸಾಹಿತಿಗಳೂ ಸಾಹಿತ್ಯಕೃತಿಗಳೂ ಕನ್ನಡದಲ್ಲಿ ಬಂದು ಹೋದವು. ಮೈದಾಸ್ ವಿಮರ್ಶಕರ ಮೂಲಕ ಕಿರೀಟ ಧರಿಸಿದ್ದ ಅನೇಕ ಕೃತಿಗಳು ಮತ್ತು ಕೃತಿಕಾರರು ಮರೆಯಾಗಿದ್ದಾರೆ. (ಮುಂದೊಂದು ದಿನ ಮತ್ತೆ ವಿಜೃಂಭಿಸಬಾರದೆಂದಿಲ್ಲ!) ಈ ಕೃತಿ ಹೇಗಿದೆ ಅನ್ನುವುದಕ್ಕಿಂತಲೂ ಇದು ಯಾಕೆ ಶ್ರೇಷ್ಠ ಎಂಬ ಧಾಟಿಯ ತೀರ್ಪು ಅನೇಕ ವಿಮರ್ಶೆಗಳಲ್ಲಿದೆ. ಕೆಲವು ಲೇಖಕರನ್ನು ತಾವು ಓದಲಾರೆವು, ಓದುವ ಅಗತ್ಯವಿಲ್ಲ ಎಂಬ ವಿಮರ್ಶಕರೂ ಇದ್ದಾರೆ. ಓದದೇ ಅವರ ಮೌಲ್ಯಮಾಪನ ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದರೆ ಉಡಾಫೆಯ ಹೊರತು ಸಮರ್ಪಕವಾಗಿ ಉತ್ತರಿಸುವುದು ಕಷ್ಟ. (ತೇಜಸ್ವಿಯವರು ಹೇಳಿದ ‘‘ಜಾತ್ಯತೀತವಾದ ಸಮಾಜ ಒಂದರಲ್ಲಿ ಮಾಸ್ತಿಯವರ ಯಾವ ಕತೆಯೂ ಸಂಭವಿಸಲು ಸಾಧ್ಯವೇ ಇಲ್ಲವೆನ್ನುವುದನ್ನು ನಾವು ಜ್ಞಾಪಕದಲ್ಲಿಟ್ಟುಕೊಳ್ಳಬೇಕು’’ ಎಂಬ ಮಾತು ಸರಿಯೋ ತಪ್ಪೋ ಬೇರೆ; ಆದರೆ ಆ ಕುರಿತು ಮಹತ್ವದ ಚರ್ಚೆಯಾಗಲೇ ಇಲ್ಲ.)

ಈಚೆಗೆ ಕೃತಿಗಿಂತ ಹೆಚ್ಚಾಗಿ ಕೃತಿಕಾರರ ಶತಮಾನೋತ್ಸವದಿಂದ ಅಮೃತ/ಚಿನ್ನ/ಬೆಳ್ಳಿಹಬ್ಬ, ಹುಟ್ಟುಹಬ್ಬದ ವರೆಗೂ ಮೈಲಿಗಲ್ಲುಗಳನ್ನು ಆಚರಿಸುವುದು, ಕಂಡುಬರುತ್ತದೆ. ಅಧ್ಯಯನವು ಒಂದು ರೀತಿಯ ಆರಾಧನಾಭಾವದಿಂದ ನಡೆಯುವಂತೆ ಕಾಣುತ್ತದೆ. ಔಪಚಾರಿಕತೆ ಹೆಚ್ಚುತ್ತಿದೆ. ಗುಣದೋಷಗಳನ್ನು ಹೇಳುವುದಕ್ಕಿಂತ ಹೆಚ್ಚಾಗಿ ಇವರು ಕನ್ನಡದ ಓದುಗರಿಗೆ (ಹಾಗೆ ಹೇಳುವಾಗ ‘ತನಗೆ’ ಎಂಬುದೇ ಸೂಚಿತ ಸಂಕೇತ!) ಯಾಕೆ ಮುಖ್ಯ ಎಂಬ ಧಾಟಿಯಲ್ಲಿ ಬರೆಯುವಾಗ ತಾನು ಯಾರ ಬಗ್ಗೆ ಬರೆಯುತ್ತೇನೋ ಅವರು ತನ್ನ ಬಗ್ಗೆ ಇಷ್ಟೇ ಧಾರಾಳತನದಿಂದ ಬರೆಯಬೇಕು ಎಂಬ ಮುನ್ಸೂಚನೆಯಿರುತ್ತದೆ. ಈಚೆಗೆ ವಿಮರ್ಶಕರು ಯಾರ ಬಗ್ಗೆ ಬರೆಯಬೇಕೆಂದು ಗುರುತು ಹಾಕಿಕೊಳ್ಳುತ್ತಾರೆಂದು ಮತ್ತು ಒಂದು ವೇಳೆ ಕೃತಿ ಗುರುತಾದರೂ ಅದನ್ನು ಬರೆದವರು ಈಗಾಗಲೇ ಸ್ಥಾಪಿತರೋ, ಆರೋಹಣಿಯೋ, ಅವರೋಹಣಿಯೋ ಅಥವಾ ಅಲಕ್ಷಿಸಬಹುದಾದವರೋ ಎಂಬುದನ್ನೂ ಗುರುತುಹಾಕಿಕೊಳ್ಳುತ್ತಾರೇನೋ ಅನ್ನಿಸುತ್ತದೆ. ವಿಮರ್ಶಕರನ್ನು ಸಾಮಾನ್ಯವಾಗಿ ಯಾವ ಸೃಜನಶೀಲ ಲೇಖಕರೂ ಎದುರುಹಾಕಿಕೊಳ್ಳುವುದಿಲ್ಲ. ಒಳ್ಳೆಯ ವಿಮರ್ಶಕರನ್ನು ಸಮಾಜ ಸದಾ ಗೌರವಿಸುತ್ತದೆ. ಆದರೆ ಪ್ರಶಸ್ತಿಗಳ ಈ ಅತ್ಯಾಧುನಿಕ ಯುಗದಲ್ಲಿ ಜನಪ್ರಿಯತೆಯನ್ನು ಪಡೆದು ಮನೆಮಾತಾಗುವ ಉದ್ದೇಶ ಎಲ್ಲರಿಗೂ ಇದೆ. ಆದ್ದರಿಂದ ಕೆಲವು ಕೃತಿಗಳಿಗೆ ಮುನ್ನುಡಿ ಮಾತ್ರವಲ್ಲ, ಹಿಂದೆ, ಮುಂದೆ, ಮೇಲೆ, ಕೆಳಗೆ, ಒಳಗೆ, ಹೊರಗೆ ಅನೇಕ ವಿಮರ್ಶಕರ ಪ್ರಕಟನಾಪೂರ್ವ ಅಭಿಪ್ರಾಯವಿರುತ್ತದೆ. ಕೆಲವರು ಪ್ರಶಸ್ತಿ, ಪುರಸ್ಕಾರ, ಪ್ರಸಿದ್ಧಿ, ಪ್ರತಿಷ್ಠೆಗಾಗಿ ಇದನ್ನು ಬಯಸುತ್ತಾರೆ. ಹೀಗೆ ಈ ಉಡುಗೊರೆ ಭಾರದಿಂದಲೇ ಕೆಲವು ಕೃತಿಗಳು ಲಿಫ್ಟಿನಲ್ಲಿ ಮೇಲ್ಮಾಳಿಗೆ ತಲುಪಿ ಇತರರಿಗಿಂತ ಮೊದಲು ಉನ್ನತ ಸ್ಥಾನವನ್ನು ಅಲಂಕರಿಸುತ್ತವೆ. ವಿಮರ್ಶಕರಿಗೆ ಪುಸ್ತಕ ಕಳುಹಿಸಿ ಎಲ್ಲಾದರೂ ಇದರ ಬಗ್ಗೆ ಬರೆಯಿರಿ ಎಂದು ಅಂಗಲಾಚುವ ಕೆಲವಾದರೂ ಲೇಖಕರು ಇದ್ದಾರೆ. ಇದನ್ನು ತಪ್ಪೆನ್ನುವ ಹಾಗಿಲ್ಲ. ಎಲ್ಲರೂ ಓಡುವ ಈ ಇಲಿ-ಸ್ಪರ್ಧೆಯಲ್ಲಿ ಅವರು ಹಿಂದುಳಿಯಬೇಕೆಂದರೆ ಹೇಗೆ ಸಾಧ್ಯ?

ನಮಗೆ ಪ್ರಿಯವಾದ ಸಾಹಿತಿ/ಬರಹಗಾರರ ಕೃತಿಗಳ ಕುರಿತಷ್ಟೇ ಲೇಖನಗಳನ್ನು ಬರೆಯುವ ವಿಮರ್ಶಕರಿಂದ ಕೃತಿನಿಷ್ಠೆಯನ್ನು ನಿರೀಕ್ಷಿಸುವುದಾ ದರೂ ಹೇಗೆ? ಒಮ್ಮೆ ಒಂದು ಕೃತಿಯ ಬಗ್ಗೆಯೋ ಕೃತಿಕಾರನ ಬಗ್ಗೆಯೋ ಬರೆಯುವ ಹಿಡಿತ ಬಂದರೆ ಆನಂತರ ಪಾರಿಭಾಷಿಕ ಪದವೈಭವದ ಮೂಲಕ ತಾನೇನನ್ನು ಹೇಳಿದ್ದೇನೆಂದು ಇತರರಿಗೆ ಗೊತ್ತಾಗದೆಯೂ ತಾನು ಬಹಳಷ್ಟನ್ನು ಹೇಳಿದ್ದೇನೆಂದು ಇತರರಿಗೆ ನಂಬಿಸುವ ಕಲೆಯಿರುತ್ತದೆ. ವಿಮರ್ಶೆಯ ಕುರಿತ ಟೀಕೆಯ ಮೂಲಕ ಅದನ್ನು ಹಗುರಗೊಳಿಸುವುದು ನನ್ನ ಉದ್ದೇಶವಲ್ಲ. ಆದರೆ ಕುರ್ತಕೋಟಿಯವರು ಹೇಳಿದಂತೆ ಕೊನೆಗೆ ಉಳಿಯಬೇಕಾದದ್ದು ಸಾಹಿತ್ಯವೇ ಹೊರತು ವಿಮರ್ಶೆಯಲ್ಲ. ಕುವೆಂಪು ‘ನಾನೇರುವೆತ್ತರಕೆ ನೀನೇರಬಲ್ಲೆಯಾ?’ ಎಂಬ ವಾಕ್ಯ ಮತ್ತೆಮತ್ತೆ ನೆನಪಾಗುತ್ತದೆ. ಸ್ವತಃ ವಿಮರ್ಶಕರಾಗಿದ್ದ ಗಿರಡ್ಡಿಯವರು 1981ರಲ್ಲಿ ಹೇಳಿದ ‘‘ಒಟ್ಟಿನಲ್ಲಿ ನಾಳಿನ ವಿಮರ್ಶೆಯ ಭವಿಷ್ಯ ಅಷ್ಟೇನೂ ಆಶಾದಾಯಕವಾಗಿಲ್ಲ. ಲೇಖಕರು ಸ್ವಪ್ರತಿಷ್ಠೆಗಾಗಿ, ತಮ್ಮ ಸ್ಥಾನಗಳ ಭದ್ರತೆಗಾಗಿ ವಿಮರ್ಶಕರ ಸೋಗನ್ನೂ ಹಾಕಿ ಇನ್ನುಳಿದ ಲೇಖಕರನ್ನು ಹಾಗೂ ವಿಮರ್ಶಕರನ್ನು ಹಿಡಿದು ಜಗ್ಗುವ ಹೀನಾಯ ತಂತ್ರಗಳನ್ನೆಲ್ಲ ಉಪಯೋಗಿಸತೊಡಗಿದ್ದಾರೆ. ನಮ್ಮ ಲೇಖಕರು ವಿಮರ್ಶೆಯನ್ನು ಆಟಗಾರಿಕೆಯ ಮನೋಭಾವದಿಂದ ಸ್ವೀಕರಿಸಬಹುದೆಂದು ಹುಟ್ಟಿದ್ದ ನಿರೀಕ್ಷೆಗಳು ಈಗ ಪೂರ್ತಿ ಸುಳ್ಳಾಗಿವೆ. ವಿಮರ್ಶೆ ಇಂದು ದೊಡ್ಡದೊಂದು ಬಿಕ್ಕಟ್ಟನ್ನು ಎದುರಿಸುತ್ತಿದೆ. ಸುತ್ತಲೂ ನಡೆದಿರುವ ವಿಧ್ವಂಸಕ ಕೃತ್ಯಗಳ ನಡುವೆ ಧೃತಿಗೆಡದೆ ನಿಷ್ಪಕ್ಷಪಾತಿಯಾಗಿ ನಿಂತುಕೊಂಡು ಈ ಬಿಕ್ಕಟ್ಟನ್ನು ಎದುರಿಸಬಲ್ಲ ವಿಮರ್ಶಕರು ಇಂದು ಬರಬೇಕಾಗಿದೆ.’’ ಎಂಬ ಆಶಯ ಇಂದಿಗೂ ಅಶಯವಾಗಿಯೇ ಉಳಿದಿರುವುದು ನಿಜಕ್ಕೂ ಆತಂಕಕಾರಿ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)