varthabharthi


ಸಂಪಾದಕೀಯ

ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆ: ಪ್ರಧಾನಿ ನುಡಿದ ಹಸಿ ಸುಳ್ಳು

ವಾರ್ತಾ ಭಾರತಿ : 19 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಪೆಟ್ರೋಲ್ ಬೆಲೆಯೇರಿಕೆ ದೇಶವನ್ನು ಆತಂಕಕ್ಕೆ ತಳ್ಳಿದೆ. ಮಧ್ಯಮವರ್ಗ ಸ್ಫೋಟಿಸಲು ಸಿದ್ಧವಾಗಿರುವ ಸಿಲಿಂಡರ್‌ನಂತೆ ಭುಸುಗುಡುತ್ತಿದೆ. ಗುರುವಾರ ರಾಜಸ್ಥಾನದಲ್ಲಿ ಪೆಟ್ರೋಲ್ ಶತಕ ಭಾರಿಸಿದ ಹೊತ್ತಿನಲ್ಲಿ, ಪ್ರಧಾನಿ ಮೊದಲ ಬಾರಿಗೆ ಬೆಲೆಯೇರಿಕೆಯ ಬಗ್ಗೆೆ ತುಟಿ ಬಿಚ್ಚಿದ್ದಾರೆ. ‘‘ಬೆಲೆಯೇರಿಕೆಗೆ ಹಿಂದಿನ ಸರಕಾರಗಳೇ ಕಾರಣ. ಆಮದು ಇಂಧನದ ಮೇಲೆ ಭಾರತ ಅವಲಂಬನೆಯನ್ನು ಕಡಿಮೆಗೊಳಿಸುವ ಬಗ್ಗೆ ಹಿಂದಿನ ಸರಕಾರ ಗಮನ ಹರಿಸಿಲ್ಲ’’ ಎಂಬ ಅವರ ಸ್ಪಷ್ಟೀಕರಣ, ದೇಶವಾಸಿಗಳನ್ನು ಇನ್ನಷ್ಟು ಕೆರಳಿಸಿದೆ. ಹಿಂದಿನ ಸರಕಾರದ ನೇತೃತ್ವವನ್ನೂ ತಾನೇ ವಹಿಸಿದ್ದೆ ಎನ್ನುವುದನ್ನು ಮರೆತು ಮೋದಿ ಹೇಳಿಕೆ ನೀಡಿದ್ದಾರೆ. ಮೋದಿ ನೇತೃತ್ವದ ಸರಕಾರ ಮೊದಲ ಬಾರಿ ಅಧಿಕಾರ ಹಿಡಿದದ್ದೇ, ಯುಪಿಎ ಆಡಳಿತಾವಧಿಯ ಪೆಟ್ರೋಲ್ ಬೆಲೆ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆಯ ಕಡೆಗೆ ಬೆರಳು ತೋರಿಸಿ. ಆದರೆ ಅಧಿಕಾರ ಹಿಡಿದ ಮೋದಿಯ ಸರಕಾರಕ್ಕೆ ಪೆಟ್ರೋಲ್ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಮಾತ್ರವಲ್ಲ, ಇಂದು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಅತಿ ಕಡಿಮೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್ ದರ ಗಗನಕ್ಕೇರಿದೆ. ಈ ಹಿಂದೆ ಯುಪಿಎ ಸರಕಾರದ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದಾಗಲೂ ಭಾರತದೊಳಗೆ ಈ ಮಟ್ಟದ ಬೆಲೆಯೇರಿಕೆಯಾಗಿರಲಿಲ್ಲ.

ಆಮದು ಇಂಧನ ಮೇಲೆ ಅವಲಂಬನೆ ಕಡಿಮೆಗೊಳಿಸುವುದು ಎಂದರೆ ಏನು? ನಿಜಕ್ಕೂ ಪೆಟ್ರೋಲ್‌ಗಳ ಬಳಕೆ ಅತಿಯಾಗಿರುವುದರಿಂದ ಇಂದು ಬೆಲೆಯೇರಿಕೆಯಾಗಿದೆಯೇ? ಮೋದಿ, ದೇಶದ ಜನರನ್ನು ಮೂರ್ಖಾತಿ ಮೂರ್ಖರೆಂದು ಬಗೆದು ಇಂತಹ ಸ್ಪಷ್ಟೀಕರಣ ನೀಡಿದ್ದಾರೆ. ಈ ತೈಲ ಬೆಲೆಯೇರಿಕೆಗೆ ಸರಕಾರದ ಮಧ್ಯ ಪ್ರವೇಶವೇ ನೇರ ಕಾರಣ. ಇಲ್ಲದೇ ಇದ್ದರೆ ಇಂದು ದೇಶದ ಜನತೆ ಕಚ್ಚಾ ತೈಲ ಬೆಲೆ ಇಳಿಕೆಯ ಫಲಾನುಭವಿಗಳಾಗುತ್ತಿದ್ದರು.

ಕೊರೋನ ಮತ್ತು ಇತರ ಜಾಗತಿಕ ರಾಜಕೀಯ ಬೆಳವಣಿಗೆಗಳ ಕಾರಣದಿಂದ ಈ ವರ್ಷದ ಮಾರ್ಚ್ ಮೊದಲ ವಾರದಿಂದಲೇ ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇ. 50ರಷ್ಟು ಇಳಿಕೆಯಾಗಿತ್ತು. ಇದರ ಪರಿಣಾಮವಾಗಿ ದೇಶದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇ. 25ರಷ್ಟು ಇಳಿಕೆಯಾಗಬೇಕಾಗಿತ್ತು. ಯಾಕೆಂದರೆ, 2014ರ ಬಳಿಕ ತೈಲ ಬೆಲೆಯೇರಿಕೆಯ ಜವಾಬ್ದಾರಿಯಿಂದ ಸರಕಾರ ಕಳಚಿಕೊಂಡಿತ್ತು. ಅಂತರ್‌ರಾಷ್ಟ್ರೀಯ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿಗದಿಯಾಗಬೇಕು ಎಂಬ ನಿರ್ಧಾರಕ್ಕೆ ಸರಕಾರ ಬದ್ಧವಾಯಿತು ಮತ್ತು ಒಂದೆರಡು ಬಾರಿ ಕಚ್ಚಾ ತೈಲ ಬೆಲೆ ಇಳಿಕೆಯಾದಾಗ, ಕೆಲವು ಪೈಸೆಯಷ್ಟು ಪೆಟ್ರೋಲ್ ಬೆಲೆ ಇಳಿಕೆ ಮಾಡಿ, ಅದನ್ನು ತನ್ನ ಸರಕಾರದ ಸಾಧನೆಯೆಂದು ಕೊಚ್ಚಿಕೊಂಡಿತ್ತು. ಕಚ್ಚಾ ತೈಲದ ಬೆಲೆ ಏರಿಕೆಯಾದರೂ, ಇಳಿಕೆಯಾದರೂ ಅದರ ನೇರ ಲಾಭ, ನಷ್ಟವನ್ನು ಗ್ರಾಹಕರೇ ತನ್ನದಾಗಿಸಿಕೊಳ್ಳಬೇಕು ಎನ್ನುವ ನೀತಿಯ ಮೂಲಕ, ಬೆಲೆಯೇರಿಕೆಯ ಆರೋಪಗಳಿಂದ ಸರಕಾರ ಪಾರಾಯಿತು. ಕಚ್ಚಾ ತೈಲದಲ್ಲಿ ಬೆಲೆಯಿಳಿಕೆಯಾದರೆ ತನಗೆ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿ, ಬೆಲೆ ಹೆಚ್ಚಾದಾಗಲೆಲ್ಲ ಗ್ರಾಹಕ ಅದನ್ನು ಸಹಿಸಿಕೊಳ್ಳುತ್ತಿದ್ದ. ಇದು ಅವನ ಪಾಲಿಗೆ ಒಂದು ಜೂಜಾಟವಾಗಿತ್ತು. ಆದರೆ ಅದೃಷ್ಟಕ್ಕೆ, ಕಳೆದ ವರ್ಷ ಮಾರ್ಚ್ ತಿಂಗಳ ಹೊತ್ತಿನಲ್ಲಿ ಸೌದಿ ಅರೇಬಿಯ-ರಶ್ಯ ನಡುವಿನ ಬೆಲೆ ಸಮರ ತೀವ್ರಗೊಂಡು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇ. 31ರಷ್ಟು ಕುಸಿಯಿತು. 1991ರಲ್ಲಿ ಕೊಲ್ಲಿ ಸಮರದ ಬಳಿಕದ ಅತ್ಯಂತ ದೊಡ್ಡ ಕುಸಿತವಿದು. ಭಾರತ ತನ್ನ ಶೇ. 84ಕ್ಕೂ ಅಧಿಕ ಕಚ್ಚಾ ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯೇರಿಕೆಯಾಗಿದ್ದಾಗ ಅಧಿಕ ದುಡ್ಡು ಪಾವತಿಸಿದ್ದ ಭಾರತೀಯರಿಗೆ ಈ ಕುಸಿತದ ಲಾಭ ಪಡೆಯುವ ಎಲ್ಲ ಹಕ್ಕುಗಳು ಇದ್ದವು. ವಿಪರ್ಯಾಸವೆಂದರೆ, ಸರಕಾರ ಈ ದೇಶದ ಜನತೆಯ ಬೆನ್ನಿಗೆ ಚೂರಿ ಹಾಕಿತು. ಈವರೆಗೆ ಬೆಲೆ ನಿಗದಿಯಲ್ಲಿ ತನ್ನ ಪಾತ್ರವಿಲ್ಲ ಎಂದು ಬೆಲೆಯೇರಿಕೆಯನ್ನು ಸಮರ್ಥಿಸುತ್ತಾ ಬಂದ ಸರಕಾರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಯುತ್ತಿದ್ದಂತೆಯೇ, ಆಮದು ಮಾಡುವ ತೈಲದ ಮೇಲೆ ಭಾರೀಅಬಕಾರಿ ಸುಂಕವನ್ನು ವಿಧಿಸಿತು. ಗ್ರಾಹಕರ ಕಿಸೆ ಸೇರಬೇಕಾಗಿದ್ದ ಲಾಭ ಇದೀಗ ಸರಕಾರದ ಕಿಸೆ ಸೇರುತ್ತಿದೆ.

ಸರಕಾರದ ತಪ್ಪು ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕತೆ ಸಂಪೂರ್ಣ ಕುಸಿದಿದೆ. ಆದರೆ ಅದಕ್ಕಾಗಿ ಜನಸಾಮಾನ್ಯರು ದಂಡ ತೆರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೇ ತಿಂಗಳಿಂದ ಮತ್ತೆ ನಿಧಾನಕ್ಕೆ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿರುವುದರಿಂದ, ಪ್ರತಿ ದಿನವೂ ದೇಶದಲ್ಲಿ ಪೆಟ್ರೋಲ್‌ಬೆಲೆ ಏರಿಕೆಯಾಗುವಂತಹ ಸ್ಥಿತಿ ನಿರ್ಮಾಣವಾಗಿದೆ. ದೇಶದ ಆರ್ಥಿಕತೆ ನೆಲಕಚ್ಚಿ ಕೂತಿರುವ ಹೊತ್ತಿನಲ್ಲೇ ಕೊರೋನವನ್ನು ಎದುರಿಸುವುದಕ್ಕಾಗಿ ಲಾಕ್‌ಡೌನ್ ವಿಧಿಸಲಾಯಿತು. ಇದೀಗ ದೇಶಾದ್ಯಂತ ಲಾಕ್‌ಡೌನ್ ಸಡಿಲಿಕೆಯಾಗಿದೆಯಾದರೂ, ಜನರು ಆರ್ಥಿಕವಾಗಿ ಸಂಪೂರ್ಣ ನಾಶವಾಗಿದ್ದಾರೆ. ಹೊಸದಾಗಿ ಬದುಕನ್ನು ಕಟ್ಟುವಂತಹ ಸನ್ನಿವೇಶದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್‌ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಾ ಹೋದರೆ, ಜನರು ತಮ್ಮ ಬದುಕನ್ನು ಪುನರ್ ನಿರ್ಮಿಸುವುದಾದರೂ ಹೇಗೆ? ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಿಗೇ ಎಲ್ಲ ಸಾರಿಗೆ ವಾಹನಗಳೂ ಪ್ರಯಾಣ ದರವನ್ನು ವಿಪರೀತ ಏರಿಸಿವೆ. ಆಟೊರಿಕ್ಷಾಗಳ ಕನಿಷ್ಠ ದರವೂ ಹೆಚ್ಚಳವಾಗಿದೆ. ಏರುತ್ತಿರುವ ಪೆಟ್ರೋಲ್‌ಬೆಲೆಯನ್ನು ಅವರು ಸಮರ್ಥನೆಯಾಗಿ ನೀಡುತ್ತಿದ್ದಾರೆ. ಸರಕಾರವೂ ಪ್ರಯಾಣ ದರ ಏರಿಕೆಗೆ ಪೂರ್ಣ ಸಮ್ಮತಿಯನ್ನು ನೀಡಿದೆ. ಇದರಿಂದಾಗಿ ಸರಕು ಸಾಗಾಟ ವೆಚ್ಚವೂ ಹೆಚ್ಚಳವಾಗಿದೆ. ಸಾಗಾಟ ವೆಚ್ಚ ಅಧಿಕವಾದಂತೆ, ಮಾರುವ ಸರಕುಗಳ ಬೆಲೆಯೂ ಸಹಜವಾಗಿಯೇ ಹೆಚ್ಚಾಗುತ್ತದೆ. ರೈತರ ಕೃಷಿ ಪದಾರ್ಥಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಸರಕುಗಳು ನಿಧಾನಕ್ಕೆ ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿವೆ. ಬೇಡಿಕೆ ಕಡಿಮೆಯಾದಂತೆ ಸರಕುಗಳ ಬೆಲೆ ಕಡಿಮೆಯಾಗಬೇಕು. ಆದರೆ ಇಲ್ಲಿ ಎಲ್ಲವೂ ತಿರುವು ಮುರುವಾಗಿದೆ. ಲಾಕ್‌ಡೌನ್‌ನಿಂದ ಒಂದೆಡೆ ಜನರು ಸರಕುಗಳನ್ನು ಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಸರಕುಗಳು ತಮ್ಮ ಬೆಲೆಯನ್ನೂ ಹೆಚ್ಚಿಸಿಕೊಳ್ಳುತ್ತಿವೆ.

ಪ್ರಯಾಣ ಮಾಡಲು ನಗರದಲ್ಲಿ ಜನರೇ ಇಲ್ಲ ಎನ್ನುವಂತಹ ಸ್ಥಿತಿಯಿದ್ದರೂ, ಸಾರಿಗೆ ವಾಹನಗಳು ಪ್ರಯಾಣದರವನ್ನು ಹೆಚ್ಚಿಸಿವೆ. ಸರಕಾರ ತನ್ನ ಮಾತಿಗೆ ಬದ್ಧವಾಗದೆ, ಜನರ ಬೆನ್ನಿಗೆ ಚೂರಿ ಹಾಕಿದ ಫಲವೇ ದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಲು ಕಾರಣ. ಹಿಂದೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಹೆಚ್ಚಳವಾದಾಗ ಜನರು ಸರಕಾರವನ್ನು ದೂರದೆ, ಬಾಯಿ ಮುಚ್ಚಿ ಪೆಟ್ರೋಲ್ ತುಂಬಿಸಿಕೊಂಡಿದ್ದಾರೆ. ಇದೀಗ, ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವಾಗ, ಆ ಇಳಿಕೆಯ ಸಕಲ ಪ್ರಯೋಜನ ಜನರಿಗೇ ಸಿಗಬೇಕು. ಆದುದರಿಂದ, ಮೊದಲು ಸರಕಾರ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಸುಂಕವನ್ನು ಹಿಂದೆಗೆಯಬೇಕು. ಹಾಗೆಯೇ, ಎಲ್ಲಕ್ಕೂ ಹಿಂದಿನ ಸರಕಾರವನ್ನೇ ದೂರುವುದಾದರೆ, ಮೋದಿ ಅಧಿಕಾರಕ್ಕೇರಿದ್ದಾದರೂ ಯಾಕೆ? ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಧಾನಿ ಮೋದಿಯವರಿಗೆ ಸಾಧ್ಯವಿಲ್ಲವಾದರೆ ಎನ್‌ಡಿಎಯು ತಕ್ಷಣ ಅವರಿಂದ ರಾಜೀನಾಮೆ ಪಡೆದು ಯೋಗ್ಯರನ್ನು ಆ ಸ್ಥಾನಕ್ಕೆ ತಂದು ಕೂರಿಸಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)