varthabharthi


ಸಿನಿಮಾ

ನಾಯಕನೊಬ್ಬನೇ ಆವರಿಸಿಕೊಂಡಿರುವ ಚಿತ್ರ 'ಪೊಗರು'

ವಾರ್ತಾ ಭಾರತಿ : 21 Feb, 2021
ಶಶಿಕರ ಪಾತೂರು

ಪೊಗರು ಧ್ರುವ ಸರ್ಜಾ ಅವರ ಬಹು ನಿರೀಕ್ಷೆಯ ಚಿತ್ರ. ಕರಾಬು ಹಾಡು ಹಿಟ್ ಆಗುವುದರೊಂದಿಗೆ ಪ್ರೇಕ್ಷಕರಲ್ಲಿಯೂ ಚಿತ್ರದ ಬಗ್ಗೆ ಕುತೂಹಲ ಇತ್ತು. ಆದರೆ ಅಂತಹ ನಿರೀಕ್ಷೆಗಳಿಗೆ ತೃಪ್ತಿ ನೀಡುವ ಶಕ್ತಿ ಈ ಚಿತ್ರದಲ್ಲಿಲ್ಲ ಎನ್ನುವುದನ್ನು ಮೊದಲೇ ಹೇಳಬೇಕಿದೆ.

ಚಿತ್ರದಲ್ಲಿ ನಾಯಕನ ಹೆಸರು ಶಿವ. ಆತ ಐದು ವರ್ಷದ ಹುಡುಗನಾಗಿದ್ದಾನೆ ಎಂಬಲ್ಲಿಂದಲೇ ಕತೆ ಆರಂಭವಾಗುತ್ತದೆ. ತಂದೆಯ ಕೊಲೆಯಾಗಿದೆ ಎನ್ನುವ ಸತ್ಯವನ್ನು ಅರಿಯದ ಹುಡುಗ ತಂದೆಯ ಆಗಮನದ ನಿರೀಕ್ಷೆಯಲ್ಲೇ ಬೆಳೆಯುತ್ತಾನೆ. ಆತನಿಗೆ ಸತ್ಯ ಅರಗಿಸುವ ಶಕ್ತಿಯಿಲ್ಲ ಎಂದು ಅರಿತ ತಾಯಿ ಮಗನಿಗಾಗಿ ಮತ್ತೊಂದು ಮದುವೆಯಾಗಲು ಒಪ್ಪಿಕೊಳ್ಳುತ್ತಾಳೆ. ಆದರೆ ಶಿವನಿಗೆ ಹದಿಹರೆಯದಲ್ಲಿ ಈ ಸತ್ಯ ಅನಿವಾರ್ಯವಾಗಿ ಅರಿವಾಗುತ್ತದೆ. ಆಗಲೂ ವಾಸ್ತವವನ್ನು ಒಪ್ಪಿಕೊಳ್ಳಲು ಇಷ್ಟಪಡದೆ ತಂದೆ ತಾಯಿಯನ್ನು ತೊರೆದು ಹೋಗುತ್ತಾನೆ. ಅನಾಥನಂತೆ, ಬೀದಿ ರೌಡಿಯಾಗಿ, ವಸೂಲಿ ನಡೆಸಿ ಬದುಕುತ್ತಾನೆ. ಇಂತಹ ವ್ಯಕ್ತಿಯ ಬಾಳಲ್ಲಿ ಮುಂದೇನು ನಡೆಯುತ್ತದೆ ಎನ್ನುವುದನ್ನು ಪೊಗರು ಸಿನೆಮಾದ ಮೂಲಕ ನೋಡಬಹುದು.

ಹದಿವಯಸ್ಸಿನ ಹುಡುಗನಾಗಿ ಧ್ರುವ ಸರ್ಜಾ ನೀಡಿರುವ ಇಂಟ್ರಡಕ್ಷನ್ ದೃಶ್ಯ ನಿಜಕ್ಕೂ ಚೆನ್ನಾಗಿದೆ. ದೇಹ ಇಳಿಸಿಕೊಂಡಿದ್ದರೂ ಆ ದೇಹದಲ್ಲಿಯೂ ಮೈಕಟ್ಟು ಪ್ರದರ್ಶನ, ಯೋಗದ ಪಟ್ಟುಗಳು, ಮುದ್ದು ಮುಖ, ಸಂಭಾಷಣೆಯ ರೀತಿ ಎಲ್ಲವೂ ಆಕರ್ಷಕ. ಆದರೆ ಆನಂತರ ಎರಡನೇ ಲುಕ್‌ನಲ್ಲಿ ಕಾಣಿಸಿಕೊಂಡಾಗ ಎಲ್ಲವೂ ‘ಹಾ ಕರ್ಕಶ.’! ಅದು ಸಂಭಾಷಣೆಯಿರಲಿ, ಇಳಿಬಿದ್ದ ಗಡ್ಡವಿರಲಿ ಅಥವಾ ಆತನ ಕೃತ್ಯವೂ ಸೇರಿದಂತೆ ಯಾವುದೂ ಇಷ್ಟವಾಗುವುದಿಲ್ಲ. ಆ ಪಾತ್ರವೇ ನೆಗೆಟಿವ್ ಶೇಡ್‌ನಲ್ಲಿದೆ ಎನ್ನುವುದು ನಿಜ. ಆದರೆ ಅದನ್ನು ಪ್ರೆಸೆಂಟ್ ಮಾಡಿರುವ ರೀತಿ ಕೂಡ ಇಷ್ಟವಾಗುವುದಿಲ್ಲ ಎನ್ನುವುದು ವಿಪರ್ಯಾಸ.

ನಾಯಕಿ ಗೀತಾಳನ್ನು ನಾಯಕ ಪರಿಚಯಗೊಳ್ಳುವ ದೃಶ್ಯ ಆಸಕ್ತಿಕರವಾಗಿ ಶುರುವಾಗುತ್ತದೆ. ಆದರೆ ದೃಶ್ಯ ಕೊನೆಯಾಗುವ ಹೊತ್ತಿಗೆ ಆ ಆಕರ್ಷಣೆಯೂ ಮುಗಿದುಬಿಡುತ್ತದೆ. ಗೀತಾ ಪಾತ್ರದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಆದರೂ ಏನಾದರೂ ಮ್ಯಾಜಿಕ್ ಮಾಡುತ್ತಾರೆಯೇ ಎಂದು ಕಾದರೆ ಅದೂ ಇಲ್ಲ! ನಾಯಕ, ನಾಯಕಿಯ ಜೊತೆಗಿರುವ ಪ್ರತಿಯೊಂದು ದೃಶ್ಯಗಳು ಕೂಡ ಅವರಿಬ್ಬರಿಗೆ ಕಾಂಬಿನೇಶನ್ ಸೀನ್ ಬೇಕು ಎಂದು ಸುಖಾಸುಮ್ಮನೆ ಬರೆದಿಟ್ಟ ಹಾಗಿದೆ! ವಿಚಿತ್ರ ಏನೆಂದರೆ ‘ಕರಾಬು’ ಹಾಡು ಯೂಟ್ಯೂಬ್‌ನಲ್ಲೇ ಅಧಿಕ ಬಾರಿ ನೋಡಿದ್ದರಿಂದಲೋ ಗೊತ್ತಿಲ್ಲ; ಥಿಯೇಟರಲ್ಲಿ ಆ ಅನುಭವವೇ ಸಿಗಲಿಲ್ಲ!! ನಾಯಕನ ತಾಯಿ ಮತ್ತು ಸಾಕು ತಂದೆಯ ಪಾತ್ರದಲ್ಲಿ ಪವಿತ್ರಾ ಲೋಕೇಶ್ ಮತ್ತು ರವಿಶಂಕರ್ ಉತ್ತಮ ಅಭಿನಯ ನೀಡಿದ್ದಾರೆ. ರವಿಶಂಕರ್ ಅವರ ನಟನೆಗೆ ವಿಶೇಷ ಪ್ರಶಂಸೆ ಸಲ್ಲುತ್ತದೆ.

ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ನಟಿಸಿರುವ ಚಿಕ್ಕಣ್ಣನ ಕೊಡುಗೆಯೂ ಅಪಾರ. ಚಿಕ್ಕಣ್ಣನ ತಂದೆಯಾಗಿ ಕರಿಸುಬ್ಬು, ಅನಾಥಾಶ್ರಮದ ಗುರುವಾಗಿ ರಾಘವೇಂದ್ರ ರಾಜ್ ಕುಮಾರ್, ಖಳ ಛಾಯೆಯಲ್ಲಿರುವ ಡಾಲಿ ಧನಂಜಯ್, ಅಜ್ಜಿಯಾಗಿ ಗಿರಿಜಾ ಲೋಕೇಶ್, ಪೊಲೀಸ್ ಅಧಿಕಾರಿಯಾಗಿ ಧರ್ಮಣ್ಣ, ನಾಯಕಿಯ ಭಾವೀಪತಿಯಾಗಿ ಕುರಿ ಪ್ರತಾಪ್, ತಂದೆಯಾಗಿ ಶಂಕರ್ ಅಶ್ವಥ್ ಹೀಗೆ ಜನಪ್ರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ವಿದೇಶಿ ದೇಹದಾರ್ಢ್ಯಪಟುಗಳ ಜೊತೆಗಿನ ಹೊಡೆದಾಟಗಳೇ ಹತ್ತು ನಿಮಿಷಗಳ ಕಾಲ ಇವೆ! ಆದರೆ ಚಿತ್ರಪೂರ್ತಿಯಾಗಿ ಧ್ರುವ ಸರ್ಜಾ ತುಂಬಿರುವುದರಿಂದ ನಾಯಕಿ ಸೇರಿದಂತೆ ಉಳಿದೆಲ್ಲ ಪಾತ್ರಗಳು ಕೂಡ ಅತಿಥಿ ಕಲಾವಿದರೇನೋ ಎನ್ನುವ ಸಂದೇಹ ತಂದರೆ ಅಚ್ಚರಿ ಇಲ್ಲ! ಆದರೆ ಚಿತ್ರದ ಪ್ರಮುಖ ಖಳನಾಗಿ ನಟಿಸಿರುವ ಸಂಪತ್ ಮತ್ತು ಕ್ಲೈಮ್ಯಾಕ್ಸ್‌ನಲ್ಲಿ ನಾಯಕನ ಮನಪರಿವರ್ತನೆಗೆ ಕಾರಣವಾಗುವ ಸಹೋದರಿಯ ಪಾತ್ರ ನಿಭಾಯಿಸಿರುವ ಮಯೂರಿ ನಿಜಕ್ಕೂ ಸ್ಕೋರ್ ಮಾಡಿದ್ದಾರೆ.

ಧ್ರುವ ಸರ್ಜಾ ಪಾತ್ರ ಆರಂಭದಲ್ಲಿ ನಾಸ್ತಿಕನಂತೆ ಮಾತನಾಡುತ್ತದೆ. ನಾಸ್ತಿಕನಾಗಿ ವೈದಿಕರ ಆಚಾರಗಳನ್ನು ಜರಿಯುವ ವ್ಯಕ್ತಿಯಾಗಿ ಅರ್ಜುನ್ ಸರ್ಜಾ ಈ ಹಿಂದೆ ‘ಶ್ರೀಮಂಜುನಾಥ’ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ಕೊನೆಗೆ ಆತನಲ್ಲಾಗುವಂತಹ ಅಪಾರ ಬದಲಾವಣೆ ಇಲ್ಲಿ ಧ್ರುವಸರ್ಜಾ ಪಾತ್ರಕ್ಕಿಲ್ಲ. ಹಾಗಿದ್ದರೂ ಅಂತಹದ್ದೊಂದು ಪಾತ್ರವನ್ನು ನಿಭಾಯಿಸಿರುವ ಧ್ರುವ ಸರ್ಜಾ ಧೈರ್ಯವನ್ನು ಮೆಚ್ಚಬೇಕು! ಆರಂಭದಲ್ಲಿ ಎಲ್ಲರನ್ನು ಬೈದುಕೊಂಡು ಓಡಾಡುವಾಗ ಉಪೇಂದ್ರ ಅವರ ಶೈಲಿ ಕೂಡ ನೆನಪಾಗುತ್ತದೆ. ಆದರೆ ಹೊಡೆದಾಟ, ಡ್ಯಾನ್ಸ್, ಮೈಕಟ್ಟು ಬಿಟ್ಟರೆ ಇಡೀ ಚಿತ್ರದಲ್ಲಿ ಸಿನೆಮಾ ಪ್ರಿಯರಿಗೆ ಅಂತಹ ವಿಶೇಷಗಳೇನೂ ದೊರಕುವುದಿಲ್ಲ. ಕತೆ ನಡೆಯುವ ಜಾಗವನ್ನು ತೋರಿಸಲು ಒಂದಿಡೀ ಸೆಟ್ಟೇ ಹಾಕಲಾಗಿದ್ದರೂ, ಅಲ್ಲಿರುವ ಮಂಗಳೂರು ಎನ್ನುವ ಬೋರ್ಡ್ ನಿಂದ ಮಾತ್ರ ಊರು ತಿಳಿಯಬೇಕಾಗಿರುವುದು ಕಲಾನಿರ್ದೇಶಕರ ವೈಫಲ್ಯ ಎನ್ನಬಹುದು. ಮಂಗಳೂರಿನ ಭಾಷೆ, ಆಚಾರ ಯಾವುದೂ ಚಿತ್ರಕ್ಕೆ ಅಗತ್ಯವಿಲ್ಲ ಎನ್ನುವುದಾದರೆ ನಿರ್ದೇಶಕರು ಅದನ್ನೊಂದು ಕಾಲ್ಪನಿಕ ಊರನ್ನಾಗಿಯಾದರೂ ತೋರಿಸಬಹುದಿತ್ತು. ಒಟ್ಟಿನಲ್ಲಿ ಧ್ರುವ ಸರ್ಜಾ ಅಭಿಮಾನಿಗಳಷ್ಟೇ ಮೆಚ್ಚಬಹುದಾದ ಸಿನೆಮಾ ಇದು.

ತಾರಾಗಣ: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ
ನಿರ್ದೇಶನ: ನಂದ ಕಿಶೋರ್
ನಿರ್ಮಾಣ: ಬಿ. ಕೆ. ಗಂಗಾಧರ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)