varthabharthi


ಮಾಹಿತಿ - ಮಾರ್ಗದರ್ಶನ

ನಿಮ್ಮ ಕ್ರೆಡಿಟ್ ಕಾರ್ಡ್‌ಗಳು ನಿಮಗಾಗಿ ಕೆಲಸ ಮಾಡಲು ಹೀಗೆ ಮಾಡಿ

ವಾರ್ತಾ ಭಾರತಿ : 21 Feb, 2021

ಭಾರತೀಯರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಹಣಕಾಸು ಸಮಸ್ಯೆಗಳ ಕುರಿತು ಕುಟುಂಬವನ್ನು ಹೊರತುಪಡಿಸಿ ಇತರರೊಂದಿಗೆ ಮಾತನಾಡಲು ಬಯಸುವುದಿಲ್ಲ. ರೆಸ್ಟೋರಂಟ್‌ನಲ್ಲಿ ಬಿಲ್ ಹಂಚಿಕೊಳ್ಳುವುದಾಗಲಿ ಅಥವಾ ಪ್ರವಾಸದ ಬಜೆಟ್ ನಿರ್ಧರಿಸುವುದಾಗಲಿ, ಜನರು ಹಣಕಾಸು ವಿಷಯಗಳಲ್ಲಿ ತಮ್ಮ ಆತಂಕಗಳನ್ನು ಬಹಿರಂಗವಾಗಿ ಚರ್ಚಿಸಲು ಇಚ್ಛಿಸುವುದಿಲ್ಲ. ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಹಣಕಾಸು ಸಾಕ್ಷರತೆಯಲ್ಲಿ ನಾವು ಹಿಂದುಳಿದಿರುವುದಕ್ಕೆ ಇದೂ ಒಂದು ಕಾರಣವಾಗಿದೆ ಎನ್ನುತ್ತಾರೆ ಉದ್ಯಮ ತಜ್ಞರು. ನಮ್ಮ ಹಣಕಾಸನ್ನು ಉತ್ತಮವಾಗಿ ನಿರ್ವಹಿಸುವುದು ಹೇಗೆ ಎನ್ನುವುದರ ಅರಿವಿಲ್ಲದೆ ನಾವು ಕ್ರೆಡಿಟ್ ಕಾರ್ಡ್‌ಗಳನ್ನು ಬೇಕಾಬಿಟ್ಟಿಯಾಗಿ ಬಳಸುತ್ತೇವೆ ಮತ್ತು ಸಾಲಗಳನ್ನು ಹೆಚ್ಚಿಸುತ್ತಲೇ ಹೋಗುತ್ತೇವೆ.

ಕ್ರೆಡಿಟ್ ಕಾರ್ಡ್‌ನ್ನು ಸರಿಯಾಗಿ ಬಳಸಿದರೆ ಅದು ಮಹತ್ವದ ಹಣಕಾಸು ಸಾಧನವಾಗಬಲ್ಲದು ಎನ್ನುವುದು ಹೆಚ್ಚಿನ ಭಾರತೀಯರಿಗೆ ಗೊತ್ತಿಲ್ಲ. ಸಾಮಾನ್ಯವಾಗಿ ಹಲವಾರು ಜನರು ಬೇಜವಾಬ್ದಾರಿಯಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುತ್ತಾರೆ ಮತ್ತು ಅಂತಿಮವಾಗಿ ಸಾಲದ ಹೊರೆಯನ್ನು ಮೈಮೇಲೆಳೆದುಕೊಳ್ಳುತ್ತಾರೆ. ಕ್ರೆಡಿಟ್ ಕಾರ್ಡ್‌ಗಳನ್ನು ವಿವೇಚನೆಯಿಂದ ಬಳಸಿದರೆ ಅದು ನಮಗೆ ಹಲವಾರು ರೀತಿಗಳಲ್ಲಿ ನೆರವಾಗಬಲ್ಲದು. ವಾಸ್ತವದಲ್ಲಿ ಎಲ್ಲ ವೆಚ್ಚಗಳನ್ನು ಡೆಬಿಟ್ ಕಾರ್ಡ್‌ಗಳ ಬದಲಿಗೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸುವುದು ಮತ್ತು ನಗದು ವಹಿವಾಟುಗಳನ್ನು ಕನಿಷ್ಠ ಮಟ್ಟದಲ್ಲಿ ನಡೆಸುವುದು ಹೆಚ್ಚು ಉತ್ತಮವಾಗುತ್ತದೆ.

ಒಳ್ಳೆಯ ಹಣಕಾಸು ಶಿಸ್ತನ್ನು ಕಾಯ್ದುಕೊಳ್ಳಲು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಸ್ಮಾರ್ಟ್ ವಿಧಾನಗಳಿಲ್ಲಿವೆ.

►ನಿಮಗೆ ಕ್ರೆಡಿಟ್ ಕಾರ್ಡ್ ಅಗತ್ಯವೇ?

 ಕ್ರೆಡಿಟ್ ಕಾರ್ಡ್‌ನ್ನು ಪಡೆದುಕೊಳ್ಳುವ ಮುನ್ನ ನಿಜಕ್ಕೂ ಅದರ ಅಗತ್ಯವಿದೆಯೇ,ಸಾಲವಾದರೆ ಅದನ್ನು ಮರುಪಾವತಿಸುವಷ್ಟು ಆದಾಯ ಮೂಲವಿದೆಯೇ,ಉಳಿತಾಯದ ಬಗ್ಗೆ ತಿಳಿದಿದೆಯೇ ಎಂಬ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ. ಇವು ಕ್ರೆಡಿಟ್ ಕಾರ್ಡ್ ಪಡೆಯುವ ಮೊದಲು ಪ್ರತಿಯೊಬ್ಬರೂ ತಮಗೆ ತಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಎನ್ನುತ್ತಾರೆ ಹಣಕಾಸು ತಜ್ಞರು.

► ಬಜೆಟ್ ಹೊಂದಿರುವುದು ಮುಖ್ಯ

ಅಗತ್ಯಗಳು,ಉತ್ತಮ ಜೀವನಶೈಲಿ ಮತ್ತು ಉಳಿತಾಯಗಳಿಗಾಗಿ ವ್ಯಯಿಸಲು ನಿಮಗೆ ಸಾಧ್ಯವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಮಾಸಿಕ ಮುಂಗಡಪತ್ರವೊಂದನ್ನು ಸಿದ್ಧಪಡಿಸುವುದು ನೀವು ಮಾಡಬಹುದಾದ ಅತ್ಯುತ್ತಮ ಕೆಲಸವಾಗುತ್ತದೆ. ಇದು ನಿಮ್ಮ ಹಣಕಾಸನ್ನು ರೂಪಿಸಿಕೊಳ್ಳಲು ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಖರ್ಚುಗಳ ಮೇಲೆ ನಿಗಾಯಿರಿಸಲು ಸಾಧ್ಯವಾಗಿಸುತ್ತದೆ. ಇದು ನಿಮ್ಮ ವೆಚ್ಚದ ಮಿತಿಯನ್ನು ತಿಳಿದುಕೊಳ್ಳಲೂ ನಿಮಗೆ ನೆರವಾಗುತ್ತದೆ.

ನಿಮ್ಮ ಬಜೆಟ್‌ಗೆ ಪೂರಕವಾಗಿ ಕ್ರೆಡಿಟ್ ಕಾರ್ಡ್ ಬಳಸಿ: ಕ್ರೆಡಿಟ್ ಕಾರ್ಡ್‌ನ್ನು ಸರಿಯಾದ ರೀತಿಯಲ್ಲಿ ಬಳಸಿದರೆ ಅದು ನಿಮಗೆ ಗೊತ್ತಿಲ್ಲದ ಹಲವಾರು ರೀತಿಗಳಲ್ಲಿ ನಿಮಗೆ ಲಾಭವನ್ನು ನೀಡಬಲ್ಲದು. ಬಜೆಟ್ ನಿರ್ಧರಿಸಿಕೊಂಡು ನಿಮ್ಮ ಖರ್ಚುಗಳನ್ನು ಮೊದಲೇ ನಿಗದಿಗೊಳಿಸಿಕೊಳ್ಳುವುದು ಅಗತ್ಯ ಎನ್ನುತ್ತಾರೆ ತಜ್ಞರು. ಇದರಿಂದ ನೀವು ನಿಮ್ಮ ಖರೀದಿಯ ಮೇಲೆ ನಿಗದಿತ ಮೊತ್ತವನ್ನಷ್ಟೇ ವೆಚ್ಚ ಮಾಡಲು ಸಾಧ್ಯವಾಗುತ್ತದೆ.

ಸಕಾಲದಲ್ಲಿ ಬಿಲ್‌ಗಳನ್ನು ಪಾವತಿಸಿ: ಹಣಕಾಸು ಸ್ವಾತಂತ್ರವನ್ನು ಸಾಧಿಸಲು ಬಿಲ್‌ಗಳನ್ನು ಸಕಾಲದಲ್ಲಿ ಪಾವತಿಸುವುದು ಮುಖ್ಯವಾಗಿದೆ. ನಿಮ್ಮ ಬಿಲ್‌ಗಳನ್ನು ಮತ್ತು ಪಾವತಿಗಳ ಬಗ್ಗೆ ಸಕಾಲದಲ್ಲಿ ನೆನಪಿಸಲು ನೆರವಾಗುವ ಸಿಆರ್‌ಇಡಿ,ಪೇಟಿಎಂ,ಫೋನ್‌ಪೆ,ಗೂಗಲ್ ಪೇ ವಾಲ್ನಟ್ ಇತ್ಯಾದಿಗಳಂತಹ ಹಲವಾರು ಆ್ಯಪ್‌ಗಳು ಮತ್ತು ಕ್ರೆಡಿಟ್ ಕಾರ್ಡ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳಿವೆ. ಒಳ್ಳೆಯ ಹಣಕಾಸು ನಡವಳಿಕೆಗಳಿಗೆ ನಿಮಗೆ ಪ್ರೋತ್ಸಾಹಕಗಳೂ ಕಾದಿರುತ್ತವೆ.

 ದೊಡ್ಡ ಖರೀದಿಯೊಂದಿಗೆ ನಿಮ್ಮನ್ನು ನೀವೇ ಬಹುಮಾನಿಸಿಕೊಳ್ಳಿ: ದೊಡ್ಡ ಖರೀದಿಗಳಿಗಾಗಿ ಕ್ರೆಡಿಟ್ ಕಾರ್ಡ್‌ನ್ನು ನೀವು ಬಳಸಿದಾಗ ನಿಮ್ಮ ಬಳಿಯಿರುವ ನಗದು ಹಣ ಇತರ ವಹಿವಾಟುಗಳಿಗಾಗಿ ಲಭ್ಯವಿರುತ್ತದೆ. ನಿಮಗೆ ರಿವಾರ್ಡ್‌ಗಳು,ಮಾರಾಟ ಲಾಭಗಳು,ರಿಯಾಯಿತಿ ದರಗಳೂ ಸಿಗುತ್ತವೆ. ಅನಿರೀಕ್ಷಿತ ತುರ್ತು ಸಂದರ್ಭಗಳಲ್ಲಿ ಎಲ್ಲವನ್ನೂ ಒಮ್ಮೆಲೇ ಪಾವತಿಸಲು ನಿಮಗೆ ಸಾಧ್ಯವಾಗದಿದ್ದಾಗ ಕ್ರೆಡಿಟ್ ಕಾರ್ಡ್ ಕಾರ್ಯಸಾಧ್ಯ ಆಯ್ಕೆಯಾಗಬಹುದು.

ಒಳ್ಳೆಯ ಕ್ರೆಡಿಟ್ ಸ್ಕೋರ್ ಕಾಯ್ದುಕೊಳ್ಳುವುದು: ಕ್ರೆಡಿಟ್ ಸ್ಕೋರ್ ವ್ಯಕ್ತಿಯ ಸಾಲ ಪಡೆಯುವ ಅರ್ಹತೆಯನ್ನು ಸೂಚಿಸುವ ಸಂಖ್ಯೆಯಾಗಿದೆ. ಸಕಾಲದಲ್ಲಿ ಬಿಲ್‌ಗಳ ಪಾವತಿ ಮತ್ತು ಖರ್ಚುಗಳು ಸಾಲದ ಮಿತಿಯಲ್ಲಿಯೇ ಇರುವಂತೆ ನೋಡಿಕೊಳ್ಳುವಂತಹ ಒಳ್ಳೆಯ ಹಣಕಾಸು ಅಭ್ಯಾಸಗಳನ್ನು ಬೆಳೆಸಿಕೊಂಡರೆ ಅದು ಕ್ರಮೇಣ ನಿಮ್ಮ ಕ್ರೆಡಿಟ್ ಸ್ಕೋರ್‌ನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)