varthabharthi


ನಿಮ್ಮ ಅಂಕಣ

ತಮಿಳುನಾಡಿನ ಈ ಯೋಜನೆ ರಾಜ್ಯದ ಹಿತಕ್ಕೆ ಮಾರಕ

ವಾರ್ತಾ ಭಾರತಿ : 21 Feb, 2021
ರಾ.ನಂ. ಚಂದ್ರಶೇಖರ, ಸಂಚಾಲಕ, ಕನ್ನಡ ಗೆಳೆಯರ ಬಳಗ, ಬೆಂಗಳೂರು

ಮಾನ್ಯರೇ,

ಕಾವೇರಿ ನೀರಿಗಾಗಿ ಸದಾ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು, ಕರ್ನಾಟಕದ ಮೇಕೆದಾಟು ಕುಡಿಯುವ ನೀರಿನ ಯೋಜನೆಯನ್ನು ತನ್ನ ರೈತರ ಕೃಷಿಗೆ ಮಾರಕವಾಗುತ್ತದೆ ಎಂದು ವಿರೋಧಿಸಿತ್ತು. ಈಗ ಅದೇ ತಮಿಳುನಾಡು ಕರ್ನಾಟಕದಿಂದ ಹರಿದು ಹೋಗುತ್ತಿರುವ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು ಸದ್ದಿಲ್ಲದೆ ತನ್ನ ವೆಲ್ಲಾರು-ವೈಗೈ-ಗಂಡಾರುಗಳನ್ನು ಕಾವೇರಿ ನದಿಗೆ ಜೋಡಿಸುವ ಕೇಂದ್ರ ಸರಕಾರದ ರೂ. 6,941 ಕೋಟಿಯ ಯೋಜನೆಗೆ ಚಾಲನೆ ನೀಡಿದೆ. ಇದು ಕರ್ನಾಟಕದ ಕುಡಿಯುವ ನೀರು ಯೋಜನೆಗೆ ಮತ್ತು ರೈತರ ಬೆಳೆಗೆ ಅಡ್ಡಿಯಾಗಲಿದೆ. ಈ ಯೋಜನೆಯನ್ನು ಕರ್ನಾಟಕ ಸರಕಾರವಾಗಲಿ, ನಮ್ಮ ಸಂಸದರಾಗಲಿ ವಿರೋಧಿಸದಿರುವುದು ದುರದೃಷ್ಟಕರ. ಬರಲಿರುವ ತಮಿಳುನಾಡು ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ತನ್ನ ಹಿತ ರಕ್ಷಿಸಲು, ಕರ್ನಾಟಕದ ಹಿತ ಮರೆತಿದೆ.
  
ಕಾವೇರಿ ನ್ಯಾಯಾಧಿಕರಣ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿವರ್ಷ ಕರ್ನಾಟಕವು 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಇದರಲ್ಲಿ ಬಹಳಷ್ಟು ನೀರು ಸಮುದ್ರ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗಿ ವ್ಯರ್ಥವಾಗುತ್ತಿರುವ ಈ ನೀರನ್ನು ಮೇಕೆದಾಟು ಸಮೀಪ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಗೆ ಬಳಸುವ ಉದ್ದೇಶದಿಂದ ರೂಪಿತವಾದ ಯೋಜನೆಯನ್ನು ವಿರೋಧಿಸಿದ ತಮಿಳುನಾಡಿಗೆ ನೀರು ಬಳಸಿಕೊಳ್ಳಲು ಕರ್ನಾಟಕ ಸರಕಾರ ಅವಕಾಶ ನೀಡಬಾರದು. ಈಗ ಕಣ್ಣು ಮುಚ್ಚಿ ಕೂತರೆ ಭವಿಷ್ಯದಲ್ಲಿ ರಾಜ್ಯದಲ್ಲಿ ದೊರಕುವ ಹೆಚ್ಚುವರಿ ಕಾವೇರಿ ನೀರನ್ನು ಶಾಶ್ವತವಾಗಿ ಬಳಸಿಕೊಳ್ಳುವ ಅವಕಾಶವನ್ನು ಕರ್ನಾಟಕ ಕಳೆದುಕೊಳ್ಳುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)