varthabharthi


ಸಂಪಾದಕೀಯ

ನಿರ್ಭಯಾ ನಿಧಿಗೆ ಬೇಕಿದೆ ಅಭಯ

ವಾರ್ತಾ ಭಾರತಿ : 22 Feb, 2021

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಭಾರತ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಾರಂಭಿಸಿದ್ದೇ ‘ನಿರ್ಭಯಾ ಪ್ರಕರಣ’ದ ಬಳಿಕ. ಮೊದಲ ಬಾರಿಗೆ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣವೊಂದು ವಿಶ್ವ ಮಟ್ಟದಲ್ಲಿ ಸುದ್ದಿಯಾಯಿತು. ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯೂ ಆಯಿತು. ಇದೇ ಸಂದರ್ಭದಲ್ಲಿ, ಮಹಿಳೆಯರ ಸುರಕ್ಷತೆ ಹಾಗೂ ಸುಭದ್ರತೆಯ ಸುಧಾರಣೆ ಕುರಿತ ಯೋಜನೆಗಳಿಗೆ ಆರ್ಥಿಕ ನೆರವನ್ನು ಒದಗಿಸಲು ಅಂದಿನ ಯುಪಿಎ ಸರಕಾರ ಬಜೆಟ್‌ನಲ್ಲಿ ‘ನಿರ್ಭಯಾ ನಿಧಿ’ಯೊಂದನ್ನು ಸ್ಥಾಪಿಸಿತು. ವಿಪರ್ಯಾಸವೆಂದರೆ, ನರೇಂದ್ರ ಮೋದಿ ಆಡಳಿತದ ಅವಧಿಯಲ್ಲಿ ಅತ್ಯಾಚಾರ ಪ್ರಕರಣಗಳು ಇನ್ನಷ್ಟು ಹೆಚ್ಚಿವೆ. ಮಹಿಳಾ ದೌರ್ಜನ್ಯ ಪ್ರಕರಣಗಳೂ ಹೆಚ್ಚುತ್ತಿವೆ. ಉತ್ತರ ಪ್ರದೇಶವಂತೂ ಮಹಿಳೆಯರ ಪಾಲಿಗೆ ಅತ್ಯಂತ ಅಪಾಯಕಾರಿ ರಾಜ್ಯವಾಗಿ ಪರಿವರ್ತನೆಗೊಂಡಿದೆ.

ಇಂತಹ ಸಂದರ್ಭದಲ್ಲಿ ‘ನಿರ್ಭಯಾ ನಿಧಿ’ ಎಷ್ಟರಮಟ್ಟಿಗೆ ಬಳಕೆಯಾಗುತ್ತಿದೆ ಎನ್ನುವುದನ್ನು ಅವಲೋಕಿಸುವಾಗ ನಿರಾಶೆ ನಮ್ಮನ್ನು ಕಾಡುತ್ತದೆ. ಮಹಿಳೆಯರ ವಿರುದ್ಧದ ಹಿಂಸಾಚಾರವನ್ನು ತಡೆಗಟ್ಟಲು ಕೇಂದ್ರ ಸರಕಾರ ಪ್ರಸಕ್ತ ಮಾಡುತ್ತಿರುವ ವೆಚ್ಚವು ನಿಜವಾಗಿ ಅಗತ್ಯವಿರುವುದರ ಶೇ.25ರಷ್ಟು ಕೂಡಾ ಇಲ್ಲವೆಂದು ‘ಓಕ್ಸ್‌ಫಾಮ್ ಇಂಡಿಯಾ’ ಇತ್ತೀಚೆಗೆ ಪ್ರಕಟಿಸಿರುವ ವರದಿ ತಿಳಿಸಿದೆ. ಮಹಿಳೆಯರ ವಿರುದ್ಧ ಹಿಂಸಾಚಾರಗಳ ತಡೆಗೆ ಪ್ರಸಕ್ತ ಮಾಡಲಾಗುತ್ತಿರುವ ವೆಚ್ಚದ ಶೇ.90ರಷ್ಟು ಮೊತ್ತವನ್ನು ನಿರ್ಭಯಾ ನಿಧಿಯಿಂದಲೇ ಬಳಸಿಕೊಳ್ಳಲಾಗುತ್ತಿದೆ.

ಲಾಕ್‌ಡೌನ್‌ನ ತಿಂಗಳುಗಳಲ್ಲಿ ಮಹಿಳೆಯರ ವಿರುದ್ಧ ಹಿಂಸಾಚಾರದಲ್ಲಿ ಅದರಲ್ಲೂ ವಿಶೇಷವಾಗಿ ಕೌಟುಂಬಿಕ ಹಿಂಸೆಯಲ್ಲೂ ತೀವ್ರ ಏರಿಕೆಯಾಗಿತ್ತು. ಆರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಗೃಹ ಹಿಂಸಾಚಾರದಲ್ಲಿ ಏರಿಕೆಯಾಗಿರುವುದನ್ನು 5ನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಪ್ರಕಟಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ. 2015-16 ಹಾಗೂ 2019-20ರ ನಡುವಿನ ಅವಧಿಯಲ್ಲಿ ಜಾಗತಿಕ ಲಿಂಗ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕೆಳಮಟ್ಟದಲ್ಲಿಯೇ ಉಳಿದುಕೊಂಡಿದೆ.

ಈ ಸನ್ನಿವೇಶದಲ್ಲಿ ನಿರ್ಭಯಾ ನಿಧಿಯನ್ನು ಒಂದು ಪ್ರಮುಖ ನೀತಿಯಾಗಿ ಮರುರೂಪಿಸುವುದು ಅತ್ಯಂತ ಆಗತ್ಯವಾಗಿದೆ ಹಾಗೂ ಮಹಿಳೆಯರ ವಿರುದ್ಧ ಹಿಂಸಾಚಾರವನ್ನು ಎದುರಿಸಲು ಬಜೆಟ್‌ನಲ್ಲಿ ನಿರ್ಭಯಾ ನಿಧಿಗೆ ಗಣನೀಯ ಮೊತ್ತದ ಅನುದಾನವನ್ನು ನೀಡುವುದು ಬಹುಮುಖ್ಯವಾಗಿದೆ.

 2018-19ರಿಂದ ಹಲವಾರು ಯೋಜನೆಗಳಲ್ಲಿ ವಾರ್ಷಿಕ ಬಜೆಟ್ ಅನುದಾನವು ಇಳಿಮುಖ ಪ್ರವೃತ್ತಿಯನ್ನು ಕಾಣತೊಡಗಿತು. 2021-22ನೇ ಸಾಲಿನಲ್ಲಿ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಮೂರು ನಿರ್ಭಯಾ ನಿಧಿ ಯೋಜನೆಗಳನ್ನು ಜಾರಿಗೆ ತರಲಾಯಿತು. ‘ಸಂಬಾಲ್’ (ಎಸ್‌ಎಎಂಬಿಎಎಲ್) ಸ್ಕೀಮ್ ಎಂಬ ನೂತನ ಮಾತೃಯೋಜನೆಯೊಂದಿಗೆ, ಸಖಿ ಕಾರ್ಯಕ್ರಮ, ವನಿತಾ ಹೆಲ್ಪ್‌ಲೈನ್ ಹಾಗೂ ಮಹಿಳಾ ಪೊಲೀಸ್ ಸ್ವಯಂಸೇವಿಕಾ ಯೋಜನೆಗಳು ಹಾಗೂ ಮಹಿಳಾ ಕಲ್ಯಾಣದ ಇತರ ನಾಲ್ಕು ಯೋಜನೆಗಳು ವಿಲೀನಗೊಂಡವು. 2021-22ರಲ್ಲಿ ಸಂಬಾಲ್ ಯೋಜನೆಯಡಿ ನೀಡಲಾದ ಅನುದಾನಗಳು ಹಿಂದಿನ ವರ್ಷದ ಈ ಎಲ್ಲಾ ಯೋಜನೆಗಳ ಸಂಯೋಜಿತ ಅನುದಾನದ ಶೇ.10ರಷ್ಟು ಕಡಿಮೆ ಇದ್ದವು.

ಜೊತೆಗೆ, ನಿರ್ಭಯಾ ನಿಧಿಯಡಿ ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿರುವ ಎಲ್ಲಾ ಸಚಿವಾಲಯಗಳು ಹಾಗೂ ಇಲಾಖೆಗಳು ನಿಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಪ್ರಸಕ್ತ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಬಿಡುಗಡೆಯಾದ ನಿಧಿಗಳ ಪೈಕಿ ಗರಿಷ್ಠ ಮೊತ್ತವನ್ನು ಅಂದರೆ ಶೇ.79ರಷ್ಟನ್ನು ಗೃಹ ಸಚಿವಾಲಯವು ಬಳಸಿಕೊಳ್ಳುತ್ತಿದ್ದರೆ, ನ್ಯಾಯಾಂಗ ಇಲಾಖೆಗೆ ಏನೂ ದೊರೆಯುತ್ತಿಲ್ಲ.

ವಿಚಾರಣೆಗೆ ಬಾಕಿಯಿರುವ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ಪ್ರಮಾಣ 91.3 ಶೇ. ಆಗಿದ್ದರೆ, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ 22.2 ಶೇ. ಆಗಿದೆ. ನಿರ್ಭಯಾ ನಿಧಿಗೆ ಒಟ್ಟಾರೆಯಾಗಿ ಅಂದಾಜು 767 ಕೋಟಿ ರೂ.ಗಳನ್ನು ತ್ವರಿತ ನ್ಯಾಯಾಲಯಗಳ ಸ್ಥಾಪನೆ ಯೋಜನೆಗಾಗಿ ಅನುಮೋದಿಸಲಾಗಿದೆ. ಆದರೆ ಈ ಯೋಜನೆಯಡಿ ದೊರೆಯುವ ನಿಧಿಯನ್ನು ರಾಜ್ಯಗಳು ಬಳಸಿಕೊಳ್ಳುತ್ತಿಲ್ಲ ಎನ್ನುವ ಆರೋಪಗಳಿವೆ. ಆಘಾತಕಾರಿಯೆಂದರೆ ಈ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗೆ ಅನುಮೋದಿಸಲಾದ ನಿಧಿಗಳ ಒಟ್ಟು ಮೊತ್ತದ ಒಂದು ಸಣ್ಣ ಪ್ರಮಾಣವನ್ನಷ್ಟೇ ಬಿಡುಗಡೆಗೊಳಿಸಲಾಗಿದೆ. ಉದಾಹರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮಂಜೂರಾಗಿರುವ ನಿಧಿಗಳ ಅರ್ಧಾಂಶದಷ್ಟನ್ನು ಮಾತ್ರವೇ ಬಿಡುಗಡೆಗೊಳಿಸಲಾಗಿದೆ ಮತ್ತು ಬಿಡುಗಡೆಯಾದ ಮೊತ್ತದ ಕೇವಲ 27 ಶೇಕಡಾದಷ್ಟನ್ನು ಬಳಕೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಬಿಡುಗಡೆಗೊಳಿಸಿರುವ ನಿಧಿಯನ್ನು ಪಶ್ಚಿಮ ಬಂಗಾಳ, ಪುದುಚೇರಿ ಹಾಗೂ ಲಕ್ಷದ್ವೀಪಗಳು ಬಳಸಿಕೊಳ್ಳಲೇ ಇಲ್ಲ.

ಮಹಿಳಾ ಸಹಾಯವಾಣಿಯಲ್ಲಿ ನೋಂದಾಯಿತವಾದ ಒಟ್ಟು ಕರೆಗಳ ಪೈಕಿ ಶೇ.14ರಷ್ಟು ದಿಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳದ್ದಾಗಿದೆ. ಆದರೆ ಈ ಯೋಜನೆ ಜಾರಿಯಾದಾಗಿನಿಂದ ಈ ಮೂರು ರಾಜ್ಯಗಳು ನಿರ್ಭಯಾ ನಿಧಿಯನ್ನು ಬಳಸಿಕೊಂಡಿಲ್ಲ.

ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಹಿಂಸೆಗೆ ತುತ್ತಾಗುವ ಮಹಿಳೆಯರ ನೆರವಿಗೆ ಸ್ಥಾಪನೆಯಾಗಿರುವ ಸಖಿ ಕೇಂದ್ರಗಳು ಉತ್ತರ ಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸ್ಥಾಪಿಸಲಾಗಿದೆ. ಸಖಿ ಕೇಂದ್ರಗಳಲ್ಲಿ ವರದಿಯಾದ ಶೇ.50ರಷ್ಟು ಪ್ರಕರಣಗಳು ಉತ್ತರಪ್ರದೇಶದಲ್ಲೇ ಇದ್ದು, ಒಟ್ಟು ಮೊತ್ತದ ಕೇವಲ ಶೇ. 12.5 ಮಾತ್ರ ಬಳಸಿಕೊಂಡಿದೆ. ಸಖಿ ಕೇಂದ್ರಗಳಿಗೆ ಕಳೆದ ಆರು ವರ್ಷಗಳಲ್ಲಿ ಒಟ್ಟು 50.7 ಕೋಟಿ ರೂ. ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.

ದೇಶದಲ್ಲಿ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಕಡಿವಾಣ ಹಾಕಬೇಕಾದರೆ ನಿರ್ಭಯಾ ನಿಧಿಯನ್ನು ಶಿಕ್ಷಣ ಕ್ಷೇತ್ರ, ಆರೋಗ್ಯ, ನೈರ್ಮಲ್ಯ, ಸಾರ್ವಜನಿಕ ಮೂಲ ಸೌಕರ್ಯ ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತಿತರ ಕ್ಷೇತ್ರಗಳಿಗೂ ವಿಸ್ತರಿಸಬೇಕಾಗಿದೆ. ಉದಾಹರಣೆಗೆ 2021-22ರ ಸಾಲಿನ ಕೇರಳ ಬಜೆಟ್‌ನಲ್ಲಿ ಹಿಂಸಾಚಾರ ಪೀಡಿತ ಮಹಿಳೆಯರ ವೈದ್ಯಕೀಯ ಶುಶ್ರೂಷೆಗೆ, ಪೊಲೀಸ್ ಠಾಣೆಗಳಲ್ಲಿ ಲಿಂಗ ಸಮಾನತೆ ಬಗ್ಗೆ ಜಾಗೃತಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆಗಾಗಿ ಸಾಕಷ್ಟು ಅನುದಾನವನ್ನು ಘೋಷಿಸಲಾಗಿದೆ.

ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಮಾಜದ ಆಲೋಚನೆಗಳಲ್ಲೂ ಬದಲಾವಣೆಯಾಗಬೇಕಾಗಿದೆ ಹಾಗೂ ಜಾಗೃತಿ ಮೂಡಿಸಬೇಕಾಗಿದೆ. ನಿರ್ಭಯಾ ನಿಧಿ ಬಳಸಿಕೊಳ್ಳುವ ಯೋಜನೆಗಳನ್ನು ರೂಪಿಸಲು ಹಾಗೂ ಜಾರಿಗೊಳಿಸಲು ಕೇಂದ್ರ ಸಚಿವಾಲಯಗಳು ಹಾಗೂ ರಾಜ್ಯಗಳು ತರಬೇತಿಯನ್ನು ಒದಗಿಸುವ ಅಗತ್ಯವಿದೆ  . ನಿರ್ಭಯಾ ನಿಧಿಗೆ ನೀಡಲಾಗುವ ವಾರ್ಷಿಕ ಅನುದಾನದಲ್ಲಿ ಯೋಗ್ಯ ಪ್ರಮಾಣದಲ್ಲಿ ಹೆಚ್ಚಳವಾಗಬೇಕು. ಹಾಗಾದಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಬಲಪಡಿಸಬಹುದಾಗಿದೆ ಮತ್ತು ನಿರ್ಭಯಾ ನಿಧಿಯ ಉದ್ದೇಶ ಸಫಲವಾಗಬಹುದಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)